ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಸುಲೋಚನಾ ಕೆ.ರವರು ಸೆ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ 1962ರ ಸೆಪ್ಟೆಂಬರ್ 25ರಂದು ರಾಮ ಮತ್ತು ಕಮಲಾ ದಂಪತಿಯ ಪುತ್ರಿಯಾಗಿ ಜನಿಸಿದ ಸುಲೋಚನಾರವರು ಹೋಲಿ ಫ್ಯಾಮಿಲಿ ಶಾಲೆ ಮತ್ತು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಬಳಿಕ ಮಡಿಕೇರಿಯಲ್ಲಿ ಟಿಸಿಎಚ್ ತರಬೇತಿ ಪಡೆದಿದ್ದರು. ತನ್ನ 19ನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಸುಲೋಚನಾರವರು 1985ರ ಸೆಪ್ಟೆಂಬರ್ 14ರಂದು ಪುತ್ತೂರು ತಾಲೂಕು ಪೆರಾಬೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರ್ಪಡೆಗೊಂಡು ಸರಕಾರಿ ಸೇವೆ ಆರಂಭಿಸಿದ್ದರು. ಬಳಿಕ ಬಂಟ್ವಾಳ ತಾಲೂಕಿನ ಬಿಳಿಯೂರು ಶಾಲೆ ಮತ್ತು ಕರ್ವೇಲು ಶಾಲೆಯಲ್ಲಿ ಬಳಿಕ ಪುತ್ತೂರು ತಾಲೂಕಿನ ರಾಮಕುಂಜ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದರು. 2006ರಿಂದ 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಇವರು ಇದೀಗ ನಿವೃತ್ತರಾಗುತ್ತಿದ್ದಾರೆ. ಪ್ರಸ್ತುತ ಸುಲೋಚನಾರವರು 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ಪತಿ ಕುಂಬ್ಳೆ ಶ್ರೀಧರ ರಾವ್, ಪುತ್ರರಾದ ಕನ್ನಡಪ್ರಭ ಪತ್ರಿಕೆಯ ಉಪಸಂಪಾದಕ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್, ದೇವಿಪ್ರಸಾದ್ ಮತ್ತು ಸೊಸೆಯಂದಿರು ಹಾಗೂ ಮೊಮ್ಮಗಳೊಂದಿಗೆ ವಾಸವಿದ್ದಾರೆ.