- ಆಯುಷ್ಮಾನ್ ಆರೋಗ್ಯ ಕಾರ್ಡು ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ದೊರೆಯುವಂಗಾಲಿ: ಗ್ರಾಮಸ್ಥರ ಆಗ್ರಹ
ಪುತ್ತೂರು: ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರದ ವತಿಯಿಂದ ನೀಡಲ್ಪಡುವ ಆಯುಷ್ಮಾನ್ ಆರೋಗ್ಯ ಕಾರ್ಡುಗಳ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಆಗ್ರಹಿಸಿದ್ದಾರೆ.
ಒಳಮೊಗ್ರು ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆಯಿತು. ಸಹಕಾರಿ ಇಲಾಖೆಯ ಸಹಕಾರಿ ನಿಬಂಧಕಿ ತ್ರಿವೇಣಿ ರಾವ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದರು. ಅಯುಷ್ಮಾನ್ ಆರೋಗ್ಯ ಕಾರ್ಡು ಸೌಲಭ್ಯಗಳ ಬಗ್ಗೆ ಮಾತನಾಡಿದ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭವ್ಯ ರವರು ಆಯುಷ್ಮಾನ್ ಕಾರ್ಡುದಾರರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭಧಲ್ಲಿ ಮಾತನಾಡಿದ ಗ್ರಾಮಸ್ಥರಾದ ಸಂತೋಷ್‌ಭಂಡಾರಿ ಚಿಲ್ಮೆತ್ತಾರು ಆಯುಷ್ಮಾನ್ ಕಾರ್ಡಿನಿಂದ ಚಿಕಿತ್ಸೆ ಪಡೆಯಬೇಕಾದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯ ಎಂಬ ಆದೇಶವಿದ್ದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ . ಈ ಹಿಂದೆ ಯಶಸ್ವಿನಿ ಕಾರ್ಡು ಮಾದರಿಯಲ್ಲೇ ಆಯುಷ್ಮಾನ್ ಕಾರ್ಡು ಮೂಲಕ ಸೌಲಭ್ಯ ದೊರೆಯಲಿ ಎಂದು ಹೇಳಿದರು. ರಕ್ಷಿತ್ ರೈ ಮುಗೇರು ಮಾತನಾಡಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗದೇ ಇದ್ದರೆ ಅಥವಾ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಯವರು ಅನುಮೋದನೆ ಮಾಡದೇ ಇದ್ದಲ್ಲಿ ಚಿಕಿತ್ಸೆ ದೊರೆಯುವುದಿಲ್ಲ ಇದರಿಂದ ಸಾರ್ವಜನಿಕರಿಗೆ ಕಾರ್ಡು ಇದ್ದೂ ಏನು ಪ್ರಯೋಜನವಾಗಲಿದೆ ಎಂದು ಪ್ರಶ್ನಿಸಿದರು.
ಹರೀಶ್ ಬಿಜತ್ರೆ ಮಾತನಾಡಿ ಆಯುಷ್ಮಾನ್ ಕಾರ್ಡು ಸೌಲಭ್ಯಗಳ ಬಗ್ಗೆ ಡಾ. ಭವ್ಯ ಅವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಗ್ರಾಮಸ್ಥರಿಗೆ ಕಾರ್ಡು ಬಗ್ಗೆ ಇರುವ ಗೊಂದಲವನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಕಾರ್ಡಿನಿಂದ ತುಂಬಾ ಪ್ರಯೋಜನವಿದೆ ಎಂದು ಹೇಳಿದರು. ಬಳಿಕ ಮಾತನಾಡಿದ ನಿತೀಶ್‌ಕುಮಾರ್ ಶಾಂತಿವನ ಆಯುಷ್ಮಾನ್ ಕಾರ್ಡು ಯೋಜನೆ ಉತ್ತಮ ಯೋಜನೆಯಾಗಿದೆ. ಆದರೆ ಇದರ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯುವಂತಾಗಬೇಕು ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಬೇಕಿದೆ ಎಂದು ಹೇಳಿದರು. ಹೆಚ್ಚಿನ ಜನರಿಗೆ ಆಯುಷ್ಮಾನ್ ಕಾರ್ಡು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯ ಕೊರತೆ ಇದೆ ಇದನ್ನು ನಿವಾರಣೆ ಮಾಡುವ ಕೆಲಸವೂ ಆರೋಗ್ಯ ಇಲಾಖೆಯಿಂದ ಅಗಬೇಕು ಎಂದು ಹೇಳಿದರು. ಕುಂಬ್ರದಲ್ಲಿ ೧೦೮ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ರಾಜೇಶ್ ರೈ ಪರ್ಪುಂಜ ಆಗ್ರಹಿಸಿದರು. ವಿದ್ಯುತ್ ಬಿಲ್ ಗಳಲ್ಲಿ ಗೊಂದಲ ಇದೆ ಏನೆಲ್ಲಾ ಶುಲ್ಕ ಹಾಕುತ್ತಾರೆ ಬಿಲ್ಲುಗಳಲ್ಲಿ ಎಂಬುದರ ಬಗ್ಗೆ ಶಿವರಾಮ ಶೆಟ್ಟಿಯವರು ಮೆಸ್ಕಾಂ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ತಿಂಗಳ ಬಿಲ್ ಸರಿಯಾಗಿ ಕಟ್ಟಿದರೂ ಬೇರೆ ಬೇರೆ ಹೆಸರುಗಳಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಡುಪ್ರಾಣಿಗಳ ಕಾಟ ಅಧಿಕವಾಗಿದೆ ಬೆಳೆ ನಾಶ ಮಾಡುತ್ತಿದೆ ಎಂದು ಸಂತೋಷ್ ಭಂಡಾರಿ ಚಿಲ್ಮೆತ್ತಾರು ಹೇಳಿದರು.
ಕೆಲವೊಂದು ಕಾಡುಪ್ರಾಣಿಗಳಿಂದ ಬೆಳೆ ನಾಶವಾದರೆ ಸರಕಾರ ಪರಿಹಾರ ನೀಡುತ್ತಾರೆ ಎಂದು ವಲಯಾರಣ್ಯಾಧಿಕಾರಿ ಪ್ರಕಾಶ್ ಹೇಳಿದರು. ಕಾಡುಪ್ರಾಣಿಗಳು ಹೆಚ್ಚಾಗಿರಲು ಅರಣ್ಯ ಇಲಾಖೆಯೇ ಕಾರಣ. ಕಾಡು ಹೆಚ್ಚಾಗಿದೆ, ಕಾಡುಪ್ರಾಣಿಗಳೂ ಹೆಚ್ಚಾಗಿದೆ ಇದಕ್ಕಾಗಿ ಅರಣ್ಯ ಇಲಾಖೆಗೆ ಅಭಿನಂದನೆಯನ್ನು ಸಲ್ಲಿಸಿದ ಕೆಲವು ಗ್ರಾಮಸ್ಥರು ನಾಡಿನಲ್ಲಿ ಮನುಷ್ಯರು ಮಾತ್ರವಲ್ಲ ಪ್ರಾಣಿಗಳಿಗೂ ಬದುಕಲಿ ಅವಕಾಶ ಇದೆ ಎಂದು ಸಭೆಯ ಗಮನಕ್ಕೆ ತಂದರು.ಉಳಿದಂತೆ ಗ್ರಾಮದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸಿರಾಜುದ್ದೀನ್, ಲತೀಫ್ ಕುಂಬ್ರ, ವಿನೋದ್ ಶೆಟ್ಟಿ, ಅಶ್ರಫ್ ಉಜಿರೋಡಿ, ಶೀನಪ್ಪ ನಾಯ್ಕ, ಬಿ ಸಿ ಚಿತ್ರಾ, ಶಾರದಾ, ರೇಖಾಕುಮಾರಿ, ಪ್ರದೀಫ್ ಎಸ್, ಮಹೇಶ್ ರೈ ಕೇರಿ, ನಳಿನಾಕ್ಷಿ, ನಿಮಿತಾ, ವನಿತಾ ಕುಮಾರಿ ಉಪಸ್ಥಿತರಿದ್ದರು.
ಪಿಡಿಒ ಅವಿನಾಶ್ ವರದಿ ಮಂಡಿಸಿದರು. ಕಾರ್ಯದರ್ಶಿ ಜಯಂತಿ ಸಿಬಂದಿಗಳಾದ ಜಯಂತಿ, ಗುಲಾಬಿ, ಜಾನಕಿ, ಕೇಶವ ಉಪಸ್ಥಿತರಿದ್ದರು.