ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಡಾ.ನಝೀರ್ ಅಹಮದ್ ಕ್ಲಿನಿಕ್‌ನಲ್ಲಿ ಮಾಹಿತಿ, ತಪಾಸಣಾ ಶಿಬಿರ

0

ಆರೋಗ್ಯ ವಿಷಯದಲ್ಲಿ ನಮ್ಮಲ್ಲಿ ಜಾಗೃತಿ ಅಗತ್ಯ-ಡಾ.ನಝೀರ್ ಅಹಮ್ಮದ್

ಪುತ್ತೂರು: ಜನರು ಆಧುನಿಕತೆಯ ಜೀವನಶೈಲಿಗೆ ಮಾರು ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಆಹಾರವನ್ನು ತೆಗೆದುಕೊಳ್ಳುವುದು, ಯಾವುದು ಆಹಾರ ಒಳ್ಳೆಯದು, ಯಾವ ಆಹಾರವನ್ನು ಯಾವುದರಿಂದ ಮಾಡಲಾಗುತ್ತದೆ ಎಂಬುದರ ಬಗ್ಗೆ ಅರಿವಿಲ್ಲದಿರುವುದರಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಆದ್ದರಿಂದ ಪ್ರತಿಯೋರ್ವನು ಆರೋಗ್ಯ ವಿಷಯದಲ್ಲಿ ಜಾಗೃತಿ ಹೊಂದುವುದು ಅತ್ಯಗತ್ಯವಾಗಿದೆ ಎಂದು ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್‌ನ ವೈದ್ಯ ಡಾ.ನಝೀರ್ ಅಹಮದ್‌ರವರು ಹೇಳಿದರು.

ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಕಲ್ಲಾರೆ ಕೃಷ್ಣಾ ಆರ್ಕೇಡ್‌ನಲ್ಲಿನ ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್‌ನಲ್ಲಿ ಸೆ.29 ರಂದು ಆಚರಿಸಲ್ಪಡುವ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ‘ಹೃದಯದ ಆರೋಗ್ಯದಲ್ಲಿ ಆಹಾರದ ಪಾತ್ರ’ ಈ ಕುರಿತು ನಡೆದ ಮಾಹಿತಿ ಮತ್ತು ತಪಾಸಣಾ ಶಿಬಿರದಲ್ಲಿ ಅವರು ಫಲಾನುಭವಿಗಳನ್ನು ಉದ್ಧೇಶಿಸಿ ಮಾತನಾಡಿದರು. ಶುಗರ್, ಬಿಪಿ, ಹೃದಯಾಘಾತ, ಕೊಲೆಸ್ಟರಲ್, ಫ್ಯಾಟಿ ಲಿವರ್, ಸ್ಟ್ರೋಕ್ ಮುಂತಾದ ಕಾಯಿಲೆಗಳು ನಮ್ಮ ಈ ಏಷ್ಯಾದಲ್ಲಿ ಬಹಳಷ್ಟು ಕಾಣ ಸಿಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪ್ರಾಯದ ಯುವಕರು ಸಹಿತ ಹೃದಯಾಘಾತಕ್ಕೊಳಪಟ್ಟು ಜೀವವನ್ನು ಕಳೆದುಕೊಂಡದ್ದನ್ನು ನಾವು ನೋಡಿದ್ದೇವೆ. ಇದಕ್ಕೆ ಕಾರಣ ನಮ್ಮ ದೇಹಕ್ಕೆ ತೆಗೆದುಕೊಳ್ಳುವ ಆಹಾರ, ವ್ಯಾಯಾಮದ ಇಲ್ಲದಿರುವಿಕೆಯಾಗಿದೆ. ನಮ್ಮ ಹಿರಿಯರು ತುಂಬಾ ವರುಷ ಬದುಕಿರೋದು ಅವರ ಜೀವನಶೈಲಿ, ಅವರು ತೆಗೆದುಕೊಳ್ಳುವ ಆಹಾರ ಮತ್ತು ಚಟುವಟಿಕೆಗಳಿಂದ ಕೂಡಿದ ವ್ಯಾಯಾಮ ಆಗಿದೆ ಎಂದ ಅವರು ಸಮಾರಂಭಗಳಲ್ಲಿ ಹೋಗುವಾಗ ಒಳ್ಳೆಯ ಆಹಾರವನ್ನು ಹಿತಮಿತವಾಗಿ ಸೇವಿಸಿ, ರುಚಿಕರವಿದೆ ಎಂದು ಎಲ್ಲವನ್ನೂ ಸೇವಿಸುವುದಲ್ಲ. ಪ್ರತಿಯೊಂದು ಆಹಾರದಲ್ಲೂ ಸಕ್ಕರೆ ಅಂಶವು ಬೆರೆತಿದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಸಿಹಿ ಅಂದ್ರೆ ಸಕ್ಕರೆ, ಬೆಲ್ಲ ಮಾತ್ರ ಅಲ್ಲ. ಯಾವ ಆಹಾರದಲ್ಲಿ ಸಕ್ಕರೆ ಅಂಶದ ಪ್ರಮಾಣ ಕಡಿಮೆ ಇದೆಯೋ ಅಂತಹ ಆಹಾರದ ಬಗ್ಗೆ ತಿಳಿದುಕೊಳ್ಳಿ ಎಂದು ಅವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಇದರ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪ್ರೊ|ಝೇವಿಯರ್ ಡಿ’ಸೋಜ,‌ ರೋಟರಿ ಕ್ಲಬ್‌ ಸದಸ್ಯ ಅಬ್ದುಲ್ ಖಾದರ್ ಸುರಯ್ಯ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ರೋಟರ‍್ಯಾಕ್ಟ್ ಪುತ್ತೂರು ಅಧ್ಯಕ್ಷ ಪತ್ರಕರ್ತ ಗಣೇಶ್ ಎನ್.ಕಲ್ಲರ್ಪೆರವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ ಸ್ವಾಗತಿಸಿ, ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ವಂದಿಸಿದರು. ಗ್ಲೆನ್‌ಮಾರ್ಕ್, ಟೊರೆಂಟ್ ಫಾರ್ಮಾ, ಸನ್‌ಫಾರ್ಮಾ, ಲಾಲ್ ಫ್ಯಾಥ್ ಲ್ಯಾಬ್ ಸಂಸ್ಥೆ ಹಾಗೂ ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್‌ನ ಸಿಬ್ಬಂದಿ ವರ್ಗ ಸಹಕರಿಸಿದರು.

30 ಫಲಾನುಭವಿಗಳು..

ಒಟ್ಟು 30 ಮಂದಿ ಫಲಾನುಭವಿಗಳಿಗೆ HBA1C, ಯೂರಿಕ್ ಆಸಿಡ್, ಬ್ಲಡ್ ಶುಗರ್ ಟೆಸ್ಟ್ ಅನ್ನು ಉಚಿತವಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಶೇ.50ರ ರಿಯಾಯಿತಿಯಲ್ಲಿ ಇಸಿಜಿ, ಕೊಲೆಸ್ಟರಾಲ್ ಟೆಸ್ಟ್ ಮಾಡಲಾಯಿತು. ಶಿಬಿರವು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ದಿನದ 24 ಗಂಟೆಯಲ್ಲಿ 16 ಗಂಟೆ ಅಥವಾ ಅದಕ್ಕಿಂತ ಹೆಚ್ಚು ನಿಯಮಿತವಾಗಿ ಉಪವಾಸ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಡಾ.ನಝೀರ್ ಅಹಮ್ಮದ್‌ರವರು ಹೇಳಿದರು.

LEAVE A REPLY

Please enter your comment!
Please enter your name here