ಪುಸ್ತಕಗಳ ರಚನೆಯಲ್ಲಿ ಎಚ್ಚರಿಕೆ ಅವಶ್ಯ: ಡಾ. ಕೆ. ಕಮಲಾಕ್ಷ

0

ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಗೋಷ್ಠಿಗಳು

ಪುತ್ತೂರು: ಪುಸ್ತಕಗಳು ಓದುಗರ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲೇಖಕರು ಪುಸ್ತಕವನ್ನು ಎಚ್ಚರಿಕೆಯಿಂದ ರಚಿಸಬೇಕಾದ ಅವಶ್ಯಕತೆಯಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಯಲ್ಲಿ ನಾಲ್ಕು ನೂತನ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಬರವಣಿಗೆ ಕ್ರೀಯೆ ಹಲವಾರು ಹಂತಗಳನ್ನು ಒಳಗೊಂಡಿದ್ದು, ಇವುಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಾಗ ಉತ್ತಮ ಕೃತಿಯನ್ನು ರಚಿಸಲು ಸಾಧ್ಯ ಎಂದು ಹೇಳಿದರು.

ರಮೇಶ್ ಉಳಯ ಅವರು ’ಮಕ್ಕಳ ಸಾಹಿತ್ಯ- ಹೊಸ ಕಾಲದ ಗದ್ಯ’ ವಿಷಯ ಮಂಡಿಸಿ, ಹಿಂದಿನ ಜಾನಪದ ಗದ್ಯ ಪದ್ಯ ಹಾಗೂ ಇತ್ತೀಚಿನ ದಿನಗಳಲ್ಲಿರುವ ಮಕ್ಕಳ ಅಭಿರುಚಿಗಳ ಮಾಹಿತಿ ನೀಡಿದರು.

ರಾಧೇಶ್ ತೋಳ್ಪಾಡಿ ಅವರು ’ಮಕ್ಕಳ ಕಾವ್ಯದಲ್ಲಿ ಇತ್ತೀಚಿನ ಒಲವುಗಳು’ ವಿಚಾರ ಮಂಡನೆ ಮಾಡಿ ಕಾಲದಿಂದ ಕಾಲಕ್ಕೆ ಮಕ್ಕಳ ಸಾಹಿತ್ಯದಲ್ಲಿ ಆಗಿರುವ ಬದಲಾವಣೆಗಳನ್ನು ಉಲ್ಲೇಖಿಸಿದರು. ತಿತುಮಲೇಶ್ ಅವರು ಬರೆದಿರುವ 10 ಕವನ ಸಂಕಲಗಳಿಂದ ಕೆಲ ಮಕ್ಕಳ ಸಾಹಿತ್ಯದ ಗೀತೆಗಳ ವಾಚನ ಮಾಡಿದರು.

ಡಾ. ಕೆ. ಕಮಲಾಕ್ಷ ಅವರು ಮಿತ್ತೂರು ವಿಶ್ವನಾಥ ಕುಲಾಲ್ ಬರೆದ ಕವನ ಸಂಕಲನ ನಾಲ್ಕಾಣೆ ನಾಣ್ಯ, ಮಲ್ಲೇಶಯ್ಯ ಹೆಚ್.ಎಂ. ಅವರ ಭರವಸೆಯೇ ಬಾಳಿನ ಬೆಳಕು, ಛಲ ಬಿಡದ ಹುಡುಗಿ, ಮನಸ್ಸಿದ್ದೆಡೆ ಮಾರ್ಗ ನಾಟಕಗಳು, ಶಾಂತ ಕುಂಟಿನಿ ಅವರು ಬರೆದ ಕವನ ಸಂಕಲನ ಬಿಡುಗಡೆ ಮಾಡಿದರು.

ಸಮಾವೇಶದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಎಚ್.ಜಿ., ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಉಪಸ್ಥಿತರಿದ್ದರು.

ಗೋಷ್ಠಿಯನ್ನು ಡಾ. ಪೀಟರ್ ವಿಲ್ಸನ್ ನಿರೂಪಿಸಿದರು. ಪುತ್ತೂರು ಉಮೇಶ್ ನಾಯಕ್ ಸ್ವಾಗತಿಸಿ, ಕುಸುಮ್‌ರಾಜ್ ವಂದಿಸಿದರು. ಶ್ರುತಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ಯುವ ಸಮಾವೇಶ:

ಬೆಳಗ್ಗೆ ’ನನ್ನ ಮೆಚ್ಚಿನ ಸಾಹಿತ್ಯ’ ವಿಚಾರದಲ್ಲಿ ಯುವ ಸಮಾವೇಶ ನಡೆಯಿತು. ಸಾಹಿತಿ ಅನಘಾ ಎ. ಮಾತನಾಡಿ, ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಓದುವವರ ಅಭಿರುಚಿ ಹಿಂದಿಗೂ, ಈಗಿನ ಕಾಲಕ್ಕೂ ಬದಲಾಗಿದೆ. ಇಂದಿನ ದಿನಗಳಲ್ಲಿ ಯುವಜನತೆ ತಾವು ಅಭಿರುಚಿ ಹೊಂದಿರುವ, ವಾಸ್ತವತೆ ಹೊಂದಿರುವ ವಿಚಾರಗಳನ್ನು ಓದುತ್ತಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಧನ್ಯಶ್ರೀ, ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೇಘಾ ಡಿ., ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಖತೋಜತಿಲ್ ದಿಲ್ಶಾನಾ ತಮ್ಮ ಅಭಿಪ್ರಾಯ ಮಂಡಣೆ ಮಾಡಿದರು.

ಸಮಾವೇಶದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಎಚ್.ಜಿ., ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿದ್ದರು.

ಉಪನ್ಯಾಸಕ ಗಿರೀಶ್ ಭಟ್ ನಿರೂಪಿಸಿದರು. ಚಂದ್ರಕಾಂತ ಗೋರೆ ಸ್ವಾಗತಿಸಿ, ಸೌಂದರ್ಯಲಕ್ಷ್ಮೀ ವಂದಿಸಿದರು. ಜಯಂತಿ ಪಿ. ಕಾರ್ಯಕ್ರಮ ನಿರ್ವಹಿಸಿದರು.

ಚಿಂತನ, ಉದಯರಾಗ:

ಬೆಳಗ್ಗೆ ಚಿಂತನ ಕಾರ್ಯಕ್ರಮ ನಡೆದಿದ್ದು, ಚಿಂತಕ ಹಾಗೂ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಆತ್ಮವಿಶ್ವಾಸದ ಕುರಿತು ಮಾತನಾಡಿ, ವಿದ್ಯಾರ್ಥಿಗಳು ತಮ್ಮೊಳಗಿನ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ಯಶಸ್ಸು ಸಾಧಿಸಲು ಸಾಧ್ಯ. ಅದೇ ರೀತಿ ಆತ್ಮವಿಶ್ವಾಸವನ್ನು ಸಮಾಜ ಹಾಗೂ ರಾಷ್ಟ್ರಕ್ಕಾಗಿ ಜೀವನ ಮುಡಿಪಾಗಿಡಬೇಕು ಎಂದರು.

ಉದಯರಾಗ ಭಾವಗೀತೆ ಗಾಯನ ಕಾರ್ಯಕ್ರಮದಲ್ಲಿ ಕಾರುಣಾಳು ಬಾ ಬೆಳಕೆ, ದೀಪವು ನಿನ್ನದೆ ಗಾಳಿಯೂ ನಿನ್ನದೆ, ಕಾಣದ ಕಡಲಿಗೆ ಹಂಬಲಿಸಿದೆ ಮನ, ಲೋಕದ ಕಣ್ಣಿಗೆ ರಾಧೆಯೂ ಕೂಡ ಮೊದಲಾದ ಗೀತೆಗಳನ್ನು ಹಾಡಿದರು. ಉಪನ್ಯಾಸಕಿ ಸುಚೇತರತ್ನ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here