ಪ್ರಸಿದ್ಧ ದೈವನರ್ತಕ ಕಾಂಚನ ಸಂಕಪ್ಪ ನಲ್ಕೆ ಹೃದಯಾಘಾತದಿಂದ ನಿಧನ

0

ನೆಲ್ಯಾಡಿ: ರಾಷ್ಟ್ರೀಯ ಭಾವೈಕ್ಯತೆ, ತುಳುನಾಡ ರತ್ನ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ದೈವನರ್ತಕ ಬಜತ್ತೂರು ಗ್ರಾಮದ ಕುಡ್ತಡ್ಕ ಕಾಂಚನ ಸಂಕಪ್ಪ ನಲ್ಕೆ(56ವ.)ರವರು ಸೆ.29ರಂದು ರಾತ್ರಿ ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.


ಸಂಜೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸಂಕಪ್ಪ ನಲ್ಕೆ ಅವರನ್ನು ಮನೆಯವರು ಚಿಕಿತ್ಸೆಗಾಗಿ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ ಸುಮಾರು 8.30ರ ವೇಳೆಗೆ ಮೃತಪಟ್ಟಿದ್ದಾರೆ. ಕಾಂಚನ ಕುಡ್ತಡ್ಕ ತರವಾಡು ಕುಟುಂಬದ ಕಾಂತು ನಲ್ಕೆ ಹಾಗೂ ಗೋಪಿ ದಂಪತಿಯ ಪುತ್ರ ಸಂಕಪ್ಪ ನಲ್ಕೆರವರು ತನ್ನ 14ನೇ ವಯಸ್ಸಿನಲ್ಲೇ ದೈವದ ನರ್ತನ ಸೇವೆ ಆರಂಭಿಸಿದ್ದರು. ಮೂಡಬಿದಿರೆ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಸಹಿತ ದ.ಕ.ಜಿಲ್ಲೆಯ ವಿವಿಧ ಕಡೆಗಳಲ್ಲಿನ ಪ್ರಸಿದ್ಧ ದೈವಸ್ಥಾನಗಳಲ್ಲಿ ಶಿರಾಡಿ, ಕಲ್ಕುಡ, ಪಂಜುರ್ಲಿ, ಚಾಮುಂಡಿ, ಕಲ್ಲುರ್ಟಿ, ಮಂತ್ರದೇವತೆ, ಗುಳಿಗ, ಕೊರಗಜ್ಜ, ರಕ್ತೇಶ್ವರಿ, ಜುಮಾದಿ, ಮಲರಾಯ, ಬಸ್ತಿನಾಯಕ ದೈವಗಳಿಗೆ ನೇಮ ಕಟ್ಟುತ್ತಿದ್ದ ಇವರು ಶ್ರವಣಬೆಳಗೊಳದಲ್ಲಿ 25 ವರ್ಷಗಳಿಂದ ಕಲ್ಕುಡ ದೈವಕ್ಕೆ ನೇಮ ಕಟ್ಟುತ್ತಿದ್ದರು. ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರೆ ಸಂದರ್ಭ ಗ್ರಾಮ ದೈವವಾದ ಶಿರಾಡಿ ದೈವದ ನರ್ತನ ಸೇವೆ ಮಾಡುತ್ತಿದ್ದರು. ಸಂಕಪ್ಪ ನಲ್ಕೆ ಅವರ ಕಲಾಸೇವೆಗೆ ಹಲವು ಸಂಘ ಸಂಸ್ಥೆಗಳು, ದೈವಸ್ಥಾನ, ದೇವಸ್ಥಾನಗಳ ಆಡಳಿತ ಮಂಡಳಿಯವರು ಚಿನ್ನದ ಬಳೆ, ಉಂಗುರ, ನಗದು ಪುರಸ್ಕಾರ, ಸನ್ಮಾನ ಪತ್ರ ನೀಡಿ ಗೌರವಿಸಿದ್ದಾರೆ. ಮೃತರು ಪತ್ನಿ ಪ್ರೇಮಾ, ಪುತ್ರಿ ಹರ್ಷಿಣಿ, ಪುತ್ರ ದೀಕ್ಷಿತ್‌ರನ್ನು ಅಗಲಿದ್ದಾರೆ. ಮೃತರ ಮನೆಗೆ ಜಿಲ್ಲೆಯ ವಿವಿಧ ದೈವ ಚಾವಡಿಯ ಯಜಮಾನರು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದುಕೊಂಡರು.

LEAVE A REPLY

Please enter your comment!
Please enter your name here