ಅ.28, 29: ರಾಮಕುಂಜದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ-ಪೂರ್ವಭಾವಿ ಸಭೆ

0

ರಾಮಕುಂಜ: ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಅ.28 ಹಾಗೂ 29ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಆತಿಥ್ಯದಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಸೆ.30ರಂದು ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಮಾತನಾಡಿ, ಪ್ರತಿಭಾ ಕಾರಂಜಿ ಸ್ಪರ್ಧೆಗೆ ತಾಲೂಕಿನ ವಿವಿಧ ಶಾಲೆಗಳಿಂದ ಬರುವ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಒತ್ತುಕೊಡಬೇಕು. ಈ ನಿಟ್ಟಿನಲ್ಲಿ ಸಿಆರ್‌ಪಿಗಳು, ಶಾಲಾ ಮುಖ್ಯಶಿಕ್ಷಕರುಗಳು ಗಮನಹರಿಸಬೇಕು. ಪ್ರತಿಭಾ ಕಾರಂಜಿಯಂದು ಕರ್ತವ್ಯಕ್ಕೆ ನಿಯೋಜಿಸಿದ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು. ಸುತ್ತೋಲೆಯನನ್ನು ಎಲ್ಲರೂ ಪಾಲನೆ ಮಾಡಬೇಕು. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರಾಮಕುಂಜದ ವಿದ್ಯಾಸಂಸ್ಥೆಯ ಅಡಳಿತ ಮಂಡಳಿಗೆ ಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು. ಹೊರ ತಾಲೂಕಿನಿಂದ ತೀರ್ಪುಗಾರರನ್ನು ಕೇಳಿಕೊಳ್ಳಲಾಗುವುದು. ಆದರೂ ತಾಲೂಕಿನ ಪ್ರತಿಭಾವಂತ ಶಿಕ್ಷಕರನ್ನು ಮೀಸಲಾಗಿ ಇಟ್ಟುಕೊಳ್ಳಬೇಕೆಂದು ಲೋಕೇಶ್ ಎಸ್.ಆರ್.ಅವರು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಪರವೀಕ್ಷಣಾಧಿಕಾರಿ ಸುಂದರ ಗೌಡ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿ ಕೆ.ಸೇಸಪ್ಪ ರೈ, ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲರವರು ಮಾತನಾಡಿದರು. ಪ್ರತಿಭಾ ಕಾರಂಜಿಯ ನೋಡೆಲ್ ಅಧಿಕಾರಿ ರತ್ನಾಕುಮಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ ಅವರು ಸ್ಪರ್ಧೆಗೆ ಸಂಬಂಧಿಸಿದ ಕೆಲವೊಂದು ನಿಯಮಗಳ ಬಗ್ಗೆ ತಿಳಿಸಿದರು. ಕ್ಲಸ್ಟರ್ ಎಜುಕೇಶನ್ ಅಧಿಕಾರಿ ಅಮೃತಕಲಾ, ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಶೇಖರ, ಪುತ್ತೂರು ತಾಲೂಕು ಮುಖ್ಯಗುರುಗಳ ಸಂಘದ ಅಧ್ಯಕ್ಷ ನಾರಾಯಣ ಕೆ., ಪುತ್ತೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕ ಪ್ರವೀಣ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ವಂದಿಸಿದರು. ಹಿರಿಯ ಶಿಕ್ಷಕ ವೆಂಕಟೇಶ್ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಕ್ಲಸ್ಟರ್‌ಗಳ ಸಿಆರ್‌ಪಿಗಳು, ರಾಮಕುಂಜ ವಿದ್ಯಾಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here