ಕಲ್ಲೇಗ ಟೈಗರ್ಸ್ ನಿಂದ 5ನೇ ವರ್ಷದ ಪಿಲಿಗೊಬ್ಬು ಸಂಭ್ರಮ-65 ಹುಲಿಗಳ ಅಬ್ಬರ…!

ಯುವ ಶಕ್ತಿ ದೇಶದ ಆಸ್ತಿ-ದಿವ್ಯಪ್ರಭಾ ಗೌಡ

ಪುತ್ತೂರು: ಯುವ ಶಕ್ತಿ ದೇಶದ ಶಕ್ತಿ ಮತ್ತು ಆಸ್ತಿಯಾಗಿದ್ದು ಕಲ್ಲೇಗ ಟೈಗರ್ಸ್ ನಲ್ಲಿ ಅಂತಹ ಯುವಕ ಶಕ್ತಿ ಇದೆ. ಇಂತಹ ಯುವ ಶಕ್ತಿಗಳು ಮಾಡುವ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು ಕಾಲದ ಅವಶ್ಯಕತೆಯಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಹೇಳಿದರು.

ನೆಹರೂನಗರ ಕಲ್ಲೇಗ ದೈವಸ್ಥಾನದ ವಠಾರದಲ್ಲಿ ಅ.೧ರಂದು ನಡೆದ ಕಲ್ಲೇಗ ಟೈಗರ್‍ಸ್ ಇದರ ೫ನೇ ವರ್ಷದ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಕ್ತಿ, ಶ್ರದ್ಧೆ, ಮತ್ತು ಧಾರ್ಮಿಕ ಮನೋಭಾವನೆ ಇಟ್ಟುಕೊಂಡು ನಡೆಯುವ ಇಂತಹ ಕಾರ್ಯಕ್ರಮಗಳು ಮುಂದಕ್ಕೂ ಯಶಸ್ವಿಯಾಗಿ ನಡೆಯಬೇಕಾಗಿದ್ದು ಸಮಾಜಮುಖಿಯಾದ, ದೇಶದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ, ದೇಶದ ಅಭಿವೃದ್ಧಿಗೆ ಶ್ರಮಿಸುವ ಕಾರ್ಯ ಮಾಡಿದ್ರೆ ಸದಾ ನಾನು ನಿಮ್ಮ ಜೊತೆಗಿದ್ದೇನೆ, ನಿಮ್ಮ ಮುಖಾಂತರ ಪುತ್ತೂರಿನ ಹೆಸರು ದೇಶದಲ್ಲಿ ಪಸರಿಸುವಂತಾಗಲಿ ಎಂದು ಅವರು ಹಾರೈಸಿದರು.

ಹುಲಿ ವೇಷ ಹಾಕುವುದು ಸುಲಭದ ಕೆಲಸವಲ್ಲ-ಬೋಳಾರ್
ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ ಹುಲಿ ವೇಷ ಹಾಕುವುದು ದೈವ ಭಕ್ತಿಯ ಭಾಗವಾಗಿದ್ದು ಅಂತವರಿಗೆ ದೇವರ ಸಂಪೂರ್ಣ ಆಶೀರ್ವಾದವಿರುತ್ತದೆ. ಹುಲಿ ವೇಷಕ್ಕೆ ತನ್ನದೇ ಆದ ಇತಿಹಾಸವಿದ್ದು ನಂಬಿಕೆಯ ಭಾಗವೂ ಆಗಿದೆ ಎಂದು ಹೇಳಿದರು. ಹುಲಿ ವೇಷ ಹಾಕುವುದು ಸುಲಭದ ಕೆಲಸವಲ್ಲ, ಕಳೆದ ಐದು ವರ್ಷಗಳಿಂದ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವ ಕಲ್ಲೇಗ ಟೈಗರ್‍ಸ್ ತಂಡದವರ ಶ್ರಮ ಮೆಚ್ಚುವಂತಹದ್ದು ಎಂದು ಅವರು ಹೇಳಿದರು. ತನ್ನ ಭಾಷಣದ ಮಧ್ಯೆ ಅರವಿಂದ್ ಬೋಳಾರ್ ಅವರ ಕಾಮಿಡಿ ಡೈಲಾಗ್‌ಗಳು ಸೇರಿದ್ದವರನ್ನು ಮನರಂಜಿಸಿತು.

ಕಾರ್ಯಕ್ರಮ ಸಂತೋಷ ನೀಡಿದೆ-ವಜ್ರಧೀರ್ ಜೈನ್
ವಿಕ್ರಾಂತ್ ರೋಣ ಸಿನಿಮಾದ ಖಳನಾಯಕ ವಜ್ರಧೀರ್ ಜೈನ್ ಮಾತನಾಡಿ ಕಲ್ಲೇಗ ಟೈಗರ್‍ಸ್‌ನವರು ಹಮ್ಮಿಕೊಂಡಿರುವ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ನೀಡಿದೆ. ಮುಂದಿನ ವರ್ಷಗಳಲ್ಲೂ ಇದೇ ರೀತಿಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಅವರು ಹಾರೈಸಿದರು.

ಹುಲಿವೇಷಕ್ಕೆ ಪ್ರೋತ್ಸಾಹ ಅಗತ್ಯ-ವಸಂತ್ ಕುಮಾರ್
ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವಸಂತ್ ಕುಮಾರ್ ಕೆದಿಲಾಯ ಮಾತನಾಡಿ ಧಾರ್ಮಿಕ ನಂಬಿಕೆಯೊಂದಿಗೆ ಆಚರಿಸಲಾಗುವ ಹುಲಿವೇಷಕ್ಕೆ ಪ್ರೋತ್ಸಾಹ ಸಹಕಾರ ನೀಡಬೇಕಾಗಿದ್ದು ನಾಡಿನ ಸಂಸ್ಕೃತಿ ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ದೈವ, ದೇವರುಗಳ ಅನುಗ್ರಹದಿಂದ ಕಾರ್ಯಕ್ರಮ ಚೆನ್ನಾಗಿ ನಡೆಯಲಿ ಎಂದು ಅವರು ಆಶಿಸಿದರು.

ಖ್ಯಾತ ನ್ಯಾಯವಾದಿ ಮಹೇಶ್ ಕಜೆ, ಪದ್ಮಶ್ರೀ ಸೋಲಾರ್ ಸಂಸ್ಥೆಯ ಮಾಲಕ ಸೀತರಾಮ ರೈ ಕೆದಂಬಾಡಿಗುತ್ತು, ಬಿಜೆಪಿ ದ.ಕ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಕಾಮಧೇನು ಗ್ರೂಪ್ಸ್‌ನ ಆಡಳಿತ ನಿರ್ದೇಶಕರಾದ ಮಾಧವ ಗೌಡ, ಅಜಿತ್ ಕುಮಾರ್ ಜೈನ್, ಜಯಕರ್ನಾಟಕ ಸಂಘಟನೆಯ ರಾಮದಾಸ್, ಸೈನಿಕ ವಿಜಯ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ್, ಝೀ ಕನ್ನಡ ಡಾನ್ಸ್ ರಿಯಾಲಿಟಿ ಶೋ ರನ್ನರ್ಸ್ ಪಡೆದ ಮಹೇಶ್, ಡಾ.ಗೌರಿ ಶ್ಯಾಮ್ ಸುದರ್ಶನ್, ಯುವ ಕಾಂಗ್ರೆಸ್ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ವಿಕ್ಕಿ ಶೆಟ್ಟಿ ಮಾಣಿ, ಉದ್ಯಮಿ ಗೌರವ್ ಶೆಟ್ಟಿ ನೆಲ್ಲಿಕಟ್ಟೆ, ಸಂಪ್ಯ ಪೊಲೀಸ್ ಠಾಣಾ ಹೆಡ್‌ಕಾನ್‌ಸ್ಟೇಬಲ್ ಪ್ರವೀಣ್ ಉಪಸ್ಥಿತರಿದ್ದರು.

ಸುಮಾರು ೬೫ ಹುಲಿಗಳ ಅಬ್ಬರ ನೋಡುಗರ ಗಮನ ಸೆಳೆಯಿತು. ಸಾವಿರಾರು ಮಂದಿ ಪಿಲಿಗೊಬ್ಬು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿ.ಜೆ ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು. ಕಲ್ಲೇಗ ಟೈಗರ್‍ಸ್ ಬಳಗದ ಯುವಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.