ದಾರಂದಕುಕ್ಕುವಿನ ವಿವಾದಿತ ಬಸ್ ತಂಗುದಾಣ ಉದ್ಘಾಟನೆ

0

ಕಾಮಗಾರಿಗೆ ಅಡ್ಡಿಪಡಿಸಿದವರನ್ನು ಮೆಟ್ಟಿನಿಂತ ವಿಜಯದ ದಿನ-ಸಂಜೀವ ಮಠಂದೂರು

ಪುತ್ತೂರು:ದಾರಂದಕುಕ್ಕುವಿನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಬಸ್ ತಂಗುದಾಣ ಕೊನೆಗೂ ಉದ್ಘಾಟನೆಗೊಂಡಿತು. ಈ ಹಿಂದೆ ನಿಗದಿಪಡಿಸಿದ ಸ್ಥಳದಲ್ಲಿಯೇ ಬಸ್ ತಂಗುದಾಣ ನಿರ್ಮಾಣವಾಗಿದ್ದು ಅ.5ರಂದು ಸಂಜೆ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

ವೀರ ಮಾರುತಿ ಫ್ರೆಂಡ್ಸ್ ದಾರಂದಕುಕ್ಕು ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಜಯದಶಮಿಯ ದಿನದಂದೇ ಬಸ್ ನಿಲ್ದಾಣದ ಉದ್ಘಾಟನೆಯಾಗುತ್ತಿದ್ದು, ದಾರಂದಕುಕ್ಕುನಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯುಂಟು ಮಾಡಿದವರನ್ನು ಮೆಟ್ಟಿನಿಂತು ಮತ್ತೆ ಕಟ್ಟುವೆವು ಸಂದೇಶ ನೀಡಿದ ದಿನವಾಗಿದೆ. ಪ್ರಜಾಪ್ರಭುತ್ವದಲ್ಲಿ ಒಂದಾಗಿರುವ ಪತ್ರಿಕಾ ರಂಗವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳಬಹುದು ಎಂಬುದಕ್ಕೆ ಈ ಬಸ್ ನಿಲ್ದಾಣವೇ ಉದಾಹರಣೆ. ತನ್ನ ಸ್ವಾರ್ಥಕ್ಕಾಗಿ ಬಸ್ ನಿಲ್ದಾಣದ ಕಾಮಗಾರಿಗೆ ಅಡೆ ತಡೆಯುಂಟು ಮಾಡಿದ್ದಾರೆ. ಆದರೆ ಇಲ್ಲಿ ಒಬ್ಬ ದುಷ್ಟನನ್ನು ನಿಗ್ರಹ ಮಾಡಲು ಸಾವಿರ ಜನ ಒಟ್ಟು ಸೇರಿದ್ದು ದುಷ್ಟ ಕೆಲಸಕ್ಕೆ ಯಾರೂ ಇಳಿಯಬಾರದು ಎಂದು ಸ್ಪಷ್ಟ ಸಂದೇಶ ಇಲ್ಲಿನ ಜನತೆ ನೀಡಿದ್ದಾರೆ. ಸಾರ್ವಜನಿಕ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸುವಾಗ ಒಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಮೊದಲಾದ ಅಧಿಕಾರಿಗಳ ಮೂಲಕ ತಡೆಒಡ್ಡುವ ಪ್ರಯತ್ನ ನಡೆದಿದೆ. ವಾಸ್ತವ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಎಂದು ಶಾಸಕರು ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಮಾತನಾಡಿ, ಸ್ಥಳದ ಹೆಸರಿನಂತೆ ಹೆಬ್ಬಾಗಿಲ ಮಧ್ಯೆ ನಿಂತು ದುಷ್ಡರನ್ನು ಮೆಟ್ಟಿ ವಿಜಯದಶಮಿಯ ಸಂಭ್ರಮಾಚರಣೆ ನಡೆಸಲಾಗಿದೆ. ಇಲ್ಲಿನ ದುಷ್ಟ ಶಕ್ತಿಗಳ ಸಂಹಾರ ಆಗಿದೆ ಎಂದರು.

ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಮಾತನಾಡಿ, ಅಭಿವೃದ್ಧಿಯಲ್ಲಿ ಶಾಸಕ ಸಂಜೀವ ಮಠಂದೂರು ಜಿಲ್ಲೆಯಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದಾರೆ. ಅವರ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಏಕ ಮಾತನಾಡಿ, ಈ ಭಾಗದ ಗ್ರಾಮಸ್ಥರ ಬೇಡಿಕೆ, ಅಭಿಪ್ರಾಯದಂತೆ ಕಾಮಗಾರಿ ನಡೆಸಲಾಗಿದೆ. ಒಂದೇ ತಿಂಗಳಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುವ ಮೂಲಕ ದಾರಂದಕುಕ್ಕುವಿನಲ್ಲಿ ಇತಿಹಾಸ ನಿರ್ಮಾಣವಾಗಿದೆ. ಬಸ್ ನಿಲ್ದಾಣಕ್ಕೆ ಮುಂದೆ ಪಂಚಾಯತ್‌ನಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದರು.

ಪೂಡಾದ ಅಧ್ಯಕ್ಷ ಅಶೋಕ್ ಶೆಣೈ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ, ಸುಭಾಸ್‌ಚಂದ್ರ ರೈ ಕುಂಬ್ರುಗಗುತ್ತು, ಕಾಯರ್ತೋಡಿ ಅಜಿತ್ ಪ್ರಸಾದ್ ರೈ, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಬು ಗೌಡ ಏಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸಿ, ನೇತೃತ್ವ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಹಾಗೂ ಗುತ್ತಿಗೆದಾರ ಅತುಲ್ ರೈಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸುಮಂಗಳಾ ಶೆಣೈ ಪ್ರಾರ್ಥಿಸಿದರು. ಚಿದಾನಂದ ಸ್ವಾಗತಿಸಿದರು. ನಾಗೇಶ್ ಟಿ.ಎಸ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿದರು. ತಿಮ್ಮಪ್ಪ ಗೌಡ ಪುಳುವಾರು, ರಮಣಿ ಡಿ ಗಾಣಿಗ, ಕೇಶವ ಗೌಡ ಕೊಲ್ಯ, ಪ್ರಕಾಶ್ ಪಂಜಿಗ, ರಾಘವೇಂದ್ರ ಅಂದ್ರಟ್ಟ, ತಿಮ್ಮಪ್ಪ ಎಂ, ಜಯಾನಂದ, ಜಗದೀಶ್ ಬೀರಿಗ, ಪ್ರಶಾಂತ್ ಕೆಮ್ಮಾಯಿ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಪ್ರಶಾಂತ್ ವಂದಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಹುಲಿ ಕುಣಿತ ಪ್ರದರ್ಶನ ನಡೆಯಿತು.

ಬಸ್ ತಂಗುದಾಣ ಉದ್ಘಾಟನೆ ಕಾರ‍್ಯಕ್ರಮದಲ್ಲಿ ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ಬನ್ನೂರು, ಕೋಡಿಂಬಾಡಿ ಭಾಗದ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಬಸ್ ತಂಗುದಾಣದ ನಿರ್ಮಾಣವು ನಮಗೆ ಎರಡನೇ ಅಯೋಧ್ಯೆ ನಿರ್ಮಾಣದಂತಾಗಿದೆ ಎಂದು ಸೇರಿದ್ದ ಜನರಾಡಿಕೊಳ್ಳುತ್ತಿದ್ದರು.

LEAVE A REPLY

Please enter your comment!
Please enter your name here