ಮಾತಿನಿಂದಲೇ ಸಂಘರ್ಷ ಸೃಷ್ಠಿ: ಮಾಣಿಲ ಶ್ರೀ
ವಿಟ್ಲ: ಹಿತ ಮಿತದ ಮಾತು ನಮ್ಮದಾಗಿರಬೇಕು. ದೇಶದಲ್ಲಿ ಸಂಘರ್ಷ ಉಂಟಾಗಿರುವುದು ಮಾತಿನಿಂದಲೇ. ಮನುಷ್ಯನಲ್ಲಿರುವ ಸ್ವಾರ್ಥ ಮಿತಿಯಲ್ಲಿರಬೇಕು. ಮಧುಕರಿಯಲ್ಲಿ ಬಂದ ಬಿಕ್ಷೆಯನ್ನು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬಳಸಲಾಗುವುದು. ಪ್ರೀತಿಗಿಂತ ದೊಡ್ಡ ಶಕ್ತಿ ಬೇರೊಂದಿಲ್ಲ. ಪ್ರೀತಿ ನಿಜವಾದ ಸಂಪತ್ತು. ಅದನ್ನು ಗಳಿಸುವ ಪ್ರಯತ್ನ ನಮ್ಮದಾಗಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶರನ್ನವರಾತ್ರಿಯ ಅಂಗವಾಗಿ ಮಧುಕರಿ ಸೇವೆಯ ಬಳಿಕ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬದುಕಿದಷ್ಟು ಕಾಲ ಒಳ್ಳೆಯದನ್ನೇ ಮಾಡೋಣ. ನಮ್ಮಲಿರುವ ಧ್ವೇಷ ಭಾವವನ್ನು ದೂರ ಮಾಡೋಣ. ಎಲ್ಲರನ್ನು ನಮ್ಮವರೆಂದು ಪ್ರೀತಿಸುವ ಮನಸ್ಸು ನಮ್ಮದಾಗಲಿ. ದೇವರ ನಾಮಸ್ಮರಣೆ ನಿರಂತರವಾಗಿರಬೇಕು. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದರು
ಭಜನೆಯ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಶ್ರೀ ಗಳಿಂದ ಆಗುತ್ತಿದೆ:
ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈರವರು ಮಾತನಾಡಿ ಭಜನೆಯ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಣಿಲ ಶ್ರೀ ಗಳಿಂದ ಆಗುತ್ತಿದೆ. ಮಹಿಳೆಯರಿಗೆ ಸಂಸ್ಕಾರ ಕಲಿಸುವ ಕೆಲಸ ಕ್ಷೇತ್ರದಿಂದ ಆಗುತ್ತಿರುವುದು ಅಭಿನಂದನೀಯ. ಶ್ರೀಗಳ ಕಠಿಣ ಪರಿಶ್ರಮದ ಫಲವಾಗಿ ಮಾಣಿಲ ಎಂಬ ಈ ಕುಗ್ರಾಮ ಒಂದು ಸುಸಂಸ್ಕೃತ ಪ್ರದೇಶವಾಗಿ ಬದಲಾಗಿದೆ. ಧಾರ್ಮಿಕತೆಯ ಬಗ್ಗೆ ತಿಳಿಹೇಳುವ ಕೆಲಸ ಕ್ಷೇತ್ರದಿಂದ ನಿರಂತರವಾಗಿ ನಡೆಯುತ್ತಿರುವುದು ಸಂತಸದ ವಿಚಾರ. ಸಮಾಜದ ಏಳಿಗೆಗಾಗಿ ಸದಾ ತನ್ನನ್ನು ತಾನು ತೊಡಗಿಸಿಕೊಂಡಿರುವ ಶ್ರೀಗಳ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದವರು ಹೇಳಿದರು.
ಅಹಂಕಾರ ಬಿಟ್ಟವರಿಗೆ ಅಲಂಕಾರ ಬೇಕಾಗುವುದಿಲ್ಲ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಮಾತನಾಡಿ ಅಹಂಕಾರ ಬಿಟ್ಟವರಿಗೆ ಅಲಂಕಾರ ಬೇಕಾಗುವುದಿಲ್ಲ. ತ್ಯಾಗದಿಂದ ಸುಖ ನಿರಂತರವಾಗಿರುತ್ತದೆ. ಅಪೇಕ್ಷೆ ಇಲ್ಲದೆ ಜನರ ಸೇವೆಯನ್ನು ಮಾಡಬೇಕು. ಭಕ್ತಿ ತೋರಿಕೆಗೆ ಇರಬಾರದು ಎಂದು ತಿಳಿಸಿದರು.
ಅಪೇಕ್ಷೆ ರಹಿತ ಸೇವೆ ಭಗವಂತನಿಗೆ ಪ್ರೀಯ. ಒಳ್ಳೆಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಅದರಲ್ಲಿ ಯಶಸ್ಸು ಹೆಚ್ಚು. ಪ್ರೀತಿ ವಿಶ್ವಾಸದೊಂದಿಗೆ ಸಾಗುವ ಮನಸ್ಸು ನಮ್ಮದಾಗಬೇಕು. ತ್ಯಾಗದಿಂದ ಹೆಚ್ಚು ಸಂತೋಷ ಸಿಗಲು ಸಾಧ್ಯ ಎಂದರು.
ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಹಾಗೂ ಅನಿತಾ ಸುರೇಂದ್ರ ಕುಮಾರ್ ದಂಪತಿಗಳನ್ನು ಕ್ಷೇತ್ರದ ವತಿಯಿಂದ ಸ್ವಾಮಿಜೀಯವರು ಸನ್ಮಾನಿಸಿದರು. ಧರ್ಮಸ್ಥಳ ಕ್ಷೇತ್ರದ ವತಿಯಿಂದ ಮಾಣಿಲ ಶ್ರೀಗಳನ್ನು ಗೌರವಿಸಲಾಯಿತು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಶಿರಡಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಲೆಕ್ಕಪತ್ರ ಮತ್ತು ಹಣಕಾಸು ಅಧಿಕಾರಿ ಲಂಕೆ ಸಾಹೇಬ್ ರಾವ್ ಪಾಂಡುರಂಗ್, ಪುಣೆ ಉದ್ಯಮಿ ರಂಜೀತ್ ಕಚಾರು ಗೊರೆಗಾವ್, ಜಗದೀಶ್ ಅಧಿಕಾರಿ, ಸುದರ್ಶನ ಜೈನ್, ಉದ್ಯಮಿ ಮಾದವ ಮಾವೆ, ದಯಾನಂದ ಶೆಟ್ಟಿ, ಉಡುಪಿ ಕೊಡವೂರು ಶ್ರೀ ಸಾಯಿಬಾಬಾ ನಿತ್ಯಾನಂದ ಮಂದಿರದ ದಿವಾಕರ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೀತಾಪುರುಷೋತ್ತಮ, ರೇಶ್ಮ, ವಸಂತಿ ಪ್ರಾರ್ಥಿಸಿದರು. ಟ್ರಸ್ಟಿ ತಾರನಾಥ ಕೊಟ್ಟಾರಿ ಪರಂಗಿಪೇಟೆ ಸ್ವಾಗತಿಸಿ, ಪ್ರಾಸ್ತಾವಿಕಮಾತುಗಳನ್ನಾಡಿದರು. ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಧಾರ್ಮಿಕ ಕಾರ್ಯಕ್ರಮ:
ಅ.6ರಂದು ಬೆಳಗ್ಗೆ ಗಣಪತಿಹೋಮ, ಪಂಚಾಮೃತಾಭಿಷೇಕ, ಶ್ರೀ ಕುಂಬೇಶ್ವರೀ ಪೂಜೆ, ಕ್ಷೀರಾಭಿಷೇಕ, ಬಳಿಕ ದತ್ತಯಾಗ, ಧನ್ವಂತರಿ ಹೋಮ, ಚಂಡಿಕಾಯಾಗ, ಶ್ರೀಗಳಿಂದ ಮಧುಕರಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾಸಾಹಿತ್ಯ ಸಂಭ್ರಮ ನಡೆಯಿತು. ಸಾಯಂಕಾಲ ಭಜನಾ ಸಂಕೀರ್ತನೆ ನಡೆಯಿತು. ಸಾಯಂಕಾಲ 5 ಗಂಟೆಯಿಂದ ನೃತ್ಯವೈವಿಧ್ಯ ನಡೆಯಿತು. ಸಾಯಂಕಾಲ ದೀಪಾರಾಧನೆ, ದುರ್ಗಾನಮಸ್ಕಾರ ಪೂಜೆ, ಲಲಿತಸಹಸ್ರನಾಮಾರ್ಚನೆ, ಅಷ್ಟಾವದಾನ ಸೇವೆ ನಡೆದು ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಾಣಿಲ ಶ್ರೀ ಮಹಾಲಕ್ಷ್ಮೀ ಕೃಪಾಪೂಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀಧಾಮ ಕ್ಷೇತ್ರ ಮಹಾತ್ಮೆ ನಡೆಯಿತು.