ಕಾಂಗ್ರೆಸ್ ಕಛೇರಿಯ ಆಯುಧ ಪೂಜೆಗೆ ಶ್ರೀಕೃಷ್ಣ ಉಪಾಧ್ಯಾಯ! : ಸಂಘ ಪರಿವಾರದ ನಾಯಕನ ಪೂಜೆಗೆ ವಿರೋಧ

0

  • ಎಂ.ಬಿ.ವಿಶ್ವನಾಥ ರೈ ಕ್ಷಮಾಪಣಾ ಪತ್ರ ವೈರಲ್

 

ಶ್ರೀಕೃಷ್ಣ ಉಪಾಧ್ಯಾಯರನ್ನು ಕಾಂಗ್ರೆಸ್ ಕಚೇರಿಗೆ ಕರೆಸಿ ಪೂಜೆ ಮಾಡಿಸಿರುವುದು ಸರಿಯಲ್ಲ
ಶ್ರೀಕೃಷ್ಣ ಉಪಾಧ್ಯಾಯರು ಮೂರು ವರ್ಷಗಳಿಂದ ಬರುತ್ತಿದ್ದಾರೆ.ಆದರೆ ಅವರು ಕಮ್ಯುನಲ್ ಮಾತನಾಡಿರುವುದು ಮೊನ್ನೆ.ಈ ವಿಚಾರ ತಿಳಿದ ಬಳಿಕವೂ ಅವರನ್ನು ಕಾಂಗ್ರೆಸ್ ಕಚೇರಿಗೆ ಕರೆಸಿ ಆಯುಧ ಪೂಜೆ ನಡೆಸಿರುವುದು ಸರಿಯಲ್ಲ.ಅದು ತಪ್ಪೆ.ಅವರನ್ನು ಕರೆಸಿ ರುವವರಿಗೆ ಈ ಕುರಿತು ಪೂರ್ವಾಲೋಚನೆ ಬೇಕಿತ್ತು.ಬ್ಲಾಕ್ ಅಧ್ಯಕ್ಷರ ಅರಿವಿಗೆ ಬಾರದೆ ಈ ಘಟನೆ ನಡೆದಿದೆ.ಆದರೂ ವಿಚಾರ ಅವರ ಗಮನಕ್ಕೆ ಬಂದ ಕೂಡಲೇ ಅಧ್ಯಕ್ಷನ ನೆಲೆಯಲ್ಲಿ ಕ್ಷಮೆ ಯಾಚಿಸುವ ಮೂಲಕ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ.ತಪ್ಪು ಮಾಡಿದವರು ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು.ಇದರಿಂದ ಯಾರಿಗೆ ನೋವಾಗಿದೆಯೋ ಅವರಿಗೆ ವಿಚಾರ ಮನವರಿಕೆ ಮಾಡಿ ಸಮಾಧಾನ ಪಡಿಸುವ ಕೆಲಸ ಮಾಡಬೇಕು.ಇನ್ನೊಂದು ಧರ್ಮದ ವಿರುದ್ಧ ಮಾತನಾಡುವುದು ಸಂವಿಧಾನ ಮತ್ತು ರಾಷ್ಟ್ರ ವಿರೋ„.ಮತಗಳ ಧ್ರುವೀಕರಣಕ್ಕಾಗಿ ಒಂದು ಧರ್ಮದ ಬಗ್ಗೆ ನಿಂದಿಸಿ ಮಾತನಾಡುವವರು ಹಿಂದೂ, ಮುಸ್ಲಿಂ, ಕ್ರೈಸ್ತ ಯಾವುದೇ ಧರ್ಮದವರೇ ಆಗಿದ್ದರೂ ಅದನ್ನು ಕಾಂಗ್ರೆಸ್ ವಿರೋ„ಸುತ್ತದೆ.ಎಲ್ಲರೂ ಪರಸ್ಪರ ಸೌಹಾರ್ದತೆಯಿಂದಿದ್ದು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಯಬೇಕು ಎನ್ನುವುದು ಜಾತ್ಯಾತೀತ ಕಾಂಗ್ರೆಸ್ ಪಕ್ಷದ ಆಶಯವಾಗಿದೆ- ಅಮಳ ರಾಮಚಂದ್ರ ವಕ್ತಾರ, ಕೆಪಿಸಿಸಿ

ಬ್ಲಾಕ್ ಅಧ್ಯಕ್ಷನ ಜವಾಬ್ದಾರಿ ನೆಲೆಯಲ್ಲಿ ಈಗಾಗಲೇ ಕ್ಷಮೆಯಾಚಿಸಿದ್ದೇನೆ
ಶ್ರೀಕೃಷ್ಣ ಉಪಾಧ್ಯಾಯರ ಪೂರ್ವಾಪರ ವಿಚಾರವನ್ನು ತಿಳಿದುಕೊಳ್ಳದೆ ಅವರನ್ನು ಕಾಂಗ್ರೆಸ್ ಕಚೇರಿಗೆ ಕರೆಸಿ ಆಯುಧ ಪೂಜೆ ಮಾಡಿಸಿರುವುದು ತಿಳಿಯದೆ ಆಗಿರುವ ಪ್ರಮಾದ.ಈ ವಿಚಾರ ತಪ್ಪು ಎನ್ನುವುದು ನನ್ನ ಗಮನಕ್ಕೆ ಬಂದ ಕೂಡಲೇ, ಜಾತ್ಯಾತೀತ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯ ನೆಲೆಯಲ್ಲಿ ಈಗಾಗಲೇ ಕ್ಷಮೆಯಾಚಿಸಿದ್ದೇನೆ ಮತ್ತು ಸಂಬಂ„ಸಿದವರಿಗೆ ವಿಚಾರದ ಕುರಿತು ಮನವರಿಕೆ ಮಾಡಿಕೊಟ್ಟಿದ್ದು ವಿವಾದ ತಣ್ಣಗಾಗಿದೆ.ಅ.10ರಂದು ನಡೆಯಲಿರುವ ಬ್ಲಾಕ್ ಕಾಂಗ್ರೆಸ್ ಮೀಟಿಂಗ್‍ನಲ್ಲಿಯೂ ಈ ವಿಚಾರದ ಕುರಿತು ಚರ್ಚಿಸಿ ತೀರ್ಮಾನಕೈಗೊಳ್ಳುತ್ತೇವೆ- ಎಂ.ಬಿ.ವಿಶ್ವನಾಥ ರೈ, ಅಧ್ಯಕ್ಷರು, ಪುತ್ತೂರು ಬ್ಲಾಕ್ ಕಾಂಗ್ರೆಸ್

ಕೋಮು ಉದ್ವಿಗ್ನತೆಗೆ ಪ್ರಯತ್ನಿಸಿರುವ ವ್ಯಕ್ತಿಯನ್ನು ಪೂಜೆಗೆ ಕರೆಸಿರುವುದು ಅಕ್ಷಮ್ಯ ಅಪರಾಧ
ಕಾಂಗ್ರೆಸ್ ಕಚೇರಿಯ ಆಯುಧ ಪೂಜೆಯನ್ನು ಕೋಮುವಾದಿ ಮನಸ್ಥಿತಿಯ ಅರ್ಚಕರೊಬ್ಬರಲ್ಲಿ ನಡೆಸಿರುವ ವಿವಾದದ ಬಗ್ಗೆ ಈಗಾಗಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಆದ ಎಡವಟ್ಟಿನ ಬಗ್ಗೆ ಸ್ಪಷ್ಟನೆ ನೀಡಿ ನೊಂದ ಕಾರ್ಯಕರ್ತರಲ್ಲಿ ಕ್ಷಮಾಪನೆ ಕೇಳಿರುತ್ತಾರೆ.ಇನ್ನು ಮುಂದೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುವ ಭರವಸೆಯನ್ನೂ ನೀಡಿರುತ್ತಾರೆ.ಇಸ್ಲಾಂ ಧರ್ಮವನ್ನು ಸಾರ್ವಜನಿಕವಾಗಿ ನಿಂದಿಸಿ ಪುತ್ತೂರಿನಲ್ಲಿ ಕೋಮು ಉದ್ವಿಗ್ನತೆ ಉಂಟುಮಾಡಲು ಪ್ರಯತ್ನಿಸಿರುವ ವ್ಯಕ್ತಿಯನ್ನು ಕಾಂಗ್ರೆಸ್‍ನ ಆಯುಧ ಪೂಜೆಯ ಪೌರೋಹಿತ್ಯ ವಹಿಸಲು ಕರೆದಿರುವುದು ಅಕ್ಷಮ್ಯ ಅಪರಾಧ,ಪಕ್ಷದಲ್ಲಿನ ಒಬ್ಬ ವ್ಯಕ್ತಿಯಿಂದ ಆಗಿರುವ ಈ ಎಡವಟ್ಟು ಏನೇ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ.ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬಹುದಾಗಿದ್ದ ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸಿ, ಪ್ರಚೋದಿಸಿ, ವ್ಯೆರಲ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡಿರುವುದು ಸರಿಯಲ್ಲ.ಇದನ್ನು ಮಾಡಿರುವುದು ಯಾರೆಂದು ಎಲ್ಲರಿಗೂ ಗೊತ್ತಿದೆ, ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಕರಣವನ್ನು ಎತ್ತಿ ಹಾಕಿ, ವೈರಲ್ ಮಾಡಿ ಅದಕ್ಕೆ ವ್ಯಾಪಕ ಪ್ರಚಾರ ಸಿಗುವಂತೆ ಮಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳ ಕೃತ್ಯವನ್ನು ನಾವು ಈಗಾಗಲೇ ಪಕ್ಷದ ವರಿಷ್ಠ ನಾಯಕರ ಗಮನಕ್ಕೆ ತಂದಿರುತ್ತೇವೆ.
ಕಳೆದ ಒಂದು ವರ್ಷದಿಂದ ಪುತ್ತೂರು ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಪಕ್ಷ ಸಂಘಟನೆ ಕೆಲಸ ಕಾರ್ಯವನ್ನು ಪಕ್ಷದ ರಾಜ್ಯದ ನಾಯಕರೆಲ್ಲರೂ ಪ್ರಶಂಸಿಸಿದ್ದಾರೆ.ಪುತ್ತೂರು ಬ್ಲಾಕ್ ಒಂದರಿಂದಲೇ 16 ಬಸ್‍ಗಳಲ್ಲಿ ಭಾರತ್ ಜೋಡೋ ಕಾರ್ಯಕ್ರಮದಲ್ಲಿ 700ಕ್ಕೂ ಅ„ಕ ಕಾರ್ಯಕರ್ತರು ಭಾಗವಹಿಸಿರುವುದು ಇದೇ ಪ್ರಥಮ.ಬ್ಲಾಕ್, ವಲಯ, ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ.ಈ ರೀತಿ ಪಕ್ಷದ ಸಂಘಟನೆ ನಡೆಯುತ್ತಿರುವಾಗ ಇದನ್ನು ಸಹಿಸಿಕೊಳ್ಳಲಾಗದ ಭಿನ್ನ ಮತೀಯ ಆತ್ಮಗಳು ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿವೆ.ಈ ಪೂಜೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ,ನಾನು ಕೂಡಾ ಭಾಗಿಯಾಗಿದ್ದೆವು.ಆದರೆ ಬರಿ ಮೈಯಲ್ಲಿ ಪೂಜೆ ಮಾಡುತ್ತಿರುವ ವ್ಯಕ್ತಿ ಶ್ರೀಕೃಷ್ಣ ಉಪಾಧ್ಯಾಯ ಅಂತ ನಮ್ಮ ಅರಿವಿಗೇ ಬಂದಿರಲಿಲ್ಲ.ಈತ ಪುತ್ತೂರಿನ ಪಬ್ಲಿಕ್ ಫಿಗರ್ ಏನೂ ಅಲ್ಲ,ಅವರ ಪರಿಚಯ ಹೆಚ್ಚಿನವರಿಗೆ ಗೊತ್ತಿಲ್ಲ, ಅವರು ಇಸ್ಲಾಂ ಧರ್ಮವನ್ನು ನಿಂದಿಸಿ ಭಾಷಣ ಮಾಡಿರುವ ವಿಡಿಯೋ ಶಕುಂತಲಾ ಶೆಟ್ಟಿ ನೋಡಿರುವುದಿಲ್ಲ, ಶಕುಂತಲಾ ಟಿ ಶೆಟ್ಟಿಯವರಿಗೆ ವಾಟ್ಸಪ್, ಫೇಸ್ ಬುಕ್ ನಿರ್ವಹಣೆ ಮಾಡಲು ತಿಳಿದಿಲ್ಲ,ಆದರೆ ರಾಜಕೀಯ ಪ್ರಬುದ್ಧತೆ ಹಾಗೂ ಅದರ ಸೂಕ್ಷ್ಮತೆ ಗೊತ್ತಿಲ್ಲದ ಓರ್ವ ವ್ಯಕ್ತಿಯಿಂದ ಆದ ಈ ಎಡವಟ್ಟನ್ನೂ ಶಕುಂತಲಾ ಶೆಟ್ಟಿಯವರ ತಲೆಗೆ ಕಟ್ಟಿ ಅವರನ್ನು ಅಪರಾ„ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಕೆಲವು ವ್ಯಕ್ತಿಗಳಿಂದ ಆಗುತ್ತಿದೆ ಎಂಬುದು ಹೆಚ್ಚಿನ ಎಲ್ಲಾ ಕಾರ್ಯಕರ್ತರಿಗೆ ಮನವರಿಕೆ ಆಗುತ್ತಿದೆ,
ಬ್ಲಾಕ್ ಅಧ್ಯಕ್ಷರ ಹೇಳಿಕೆಯಂತೆ ಇನ್ನು ಮುಂದೆ ಯಾವತ್ತೂ ಈ ರೀತಿ ನಡೆಯದಂತೆ ನೋಡಿಕೊಳ್ಳಲಾಗುವುದು.
ಪುತ್ತೂರಿನಲ್ಲಿ ನೂರಾರು ಸಂಖ್ಯೆಯ ಅರ್ಚಕರಿದ್ದಾರೆ.ಈ ಎಲ್ಲಾ ಅರ್ಚಕರು ಅತ್ಯಂತ ಗೌರವಾನ್ವಿತ ವ್ಯಕ್ತಿಗಳಾಗಿದ್ದಾರೆ.ಸರ್ವ ಧರ್ಮಗಳನ್ನೂ ಸಮಭಾವದಿಂದ ನೋಡುವ ಪಕ್ಷಾತೀತ ನಡವಳಿಕೆಯವರಾಗಿದ್ದಾರೆ.ಅವರೆಲ್ಲರನ್ನೂ ನಾವು ಅತ್ಯಂತ ಗೌರವದಿಂದ ಕಾಣುತ್ತೇವೆ.ಆದರೆ ಈ ಶ್ರೀಕೃಷ್ಣ ಉಪಾಧ್ಯಾಯ ಎನ್ನುವ ಅರ್ಚಕ ಸಾರ್ವಜನಿಕ ವೇದಿಕೆಯಲ್ಲಿ ಮುಸ್ಲಿಂ ಧರ್ಮವನ್ನು ನಿಂದಿಸುತ್ತಾರೆ.ಕಾಂಗ್ರೆಸ್ ಪಕ್ಷವನ್ನು ಹೀಯಾಳಿಸುತ್ತಾರೆ.ಪಕ್ಷದ ಕಛೇರಿಗೆ ಪುರೋಹಿತನಾಗಿ ಬಂದು ಕಾಂಗ್ರೆಸ್ ಪಕ್ಷ ಸಧೃಢವಾಗಿ ಬೆಳೆಯಲಿ ಎಂದು ಪ್ರಾರ್ಥಿಸುತ್ತಾರೆ.ಸಾರ್ವಜನಿಕ ವೇದಿಕೆಯಲ್ಲಿ ಸರ್ವ ಧರ್ಮಗಳನ್ನೂ ಗೌರವಿಸುವ ಜಾತ್ಯಾತೀತ ಸಿದ್ಧಾಂತವನ್ನು ನಿಂದಿಸಿ ಅಪ್ಪಟ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಬೆಳೆಯಲಿ ಎಂದು ಹಾರೈಸುವುದು ಅವರ ಎಡಬಿಡಂಗಿತನಕ್ಕೆ ಸಾಕ್ಷಿಯಾಗಿದೆ.ಇಂತಹ ವ್ಯಕ್ತಿಗಳು ನಾವು ಅತ್ಯಂತ ಗೌರವದಿಂದ ಕಾಣುವ ಇಡೀ ಅರ್ಚಕ ಕುಲಕ್ಕೆ ಕಳಂಕವಾಗಿದ್ದಾರೆ.-ಎಚ್.ಮಹಮ್ಮದ್ ಆಲಿ ಅಧ್ಯಕ್ಷರು, ನಗರ ಕಾಂಗ್ರೆಸ್ ಪುತ್ತೂರು.

ಪುತ್ತೂರು:ಸಂಘ ಪರಿವಾರದಲ್ಲಿ ಸಕ್ರಿಯವಾಗಿರುವ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯರವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಆಯುಧ ಪೂಜೆಗೆ ಕರೆಸಿರುವುದು ವಿವಾದಕ್ಕೆ ಕಾರಣವಾಗಿದೆ.
ದರ್ಬೆಯಲ್ಲಿ ನಡೆದಿದ್ದ ಹಿಂದೂ ಸಂಘಟನೆಗಳ ಪ್ರತಿಭಟನೆಯಲ್ಲಿ ಭಾಷಣ ಮಾಡುವ ವೇಳೆ ಹಿಂದೂಗಳಿಗಷ್ಟೇ ಅಲ್ಲ…ಇಡೀ ಭೂಮಿಗೇ ಇಸ್ಲಾಂ ಕಂಟಕ… ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿ ಸುದ್ದಿಯಾಗಿದ್ದ ಶ್ರೀಕೃಷ್ಣ ಉಪಾಧ್ಯಾಯರವರಲ್ಲಿ, ಜಾತ್ಯಾತೀತ ತತ್ವದ ಕಾಂಗ್ರೆಸ್ ಪಕ್ಷದವರು ಆಯುಧ ಪೂಜೆ ಮಾಡಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.ನಾಯಕರು ಮತ್ತು ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಈ ಹೊಸ ವಿವಾದ ಅ.10ರಂದು ನಡೆಯಲಿರುವ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ವೇದಿಕೆ ಒದಗಿಸಿದೆ.ಈ ಮಧ್ಯೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರ ಹೆಸರಿನಲ್ಲಿ ವೈರಲ್ ಆಗುತ್ತಿರುವ ಕ್ಷಮಾಪಣಾ ಪತ್ರ ಚರ್ಚೆ ಹುಟ್ಟು ಹಾಕಿದೆ.
ವಿವಾದಕ್ಕೆ ಕಾರಣವಾದ ಉಪಾಧ್ಯಾಯರ ಆಯುಧ ಪೂಜೆ: ಸಂಘ ಪರಿವಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮತ್ತು ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಯುವ ವಾಗ್ಮಿ, ಸುಳ್ಯ ಮೂಲದವರಾಗಿದ್ದು ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿರುವ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯರವರನ್ನು ಕರೆಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಯುಧ ಪೂಜೆ ಮಾಡಿಸಿರುವುದು ಹೊಸ ವಿವಾದ ಉಂಟಾಗಲು ಕಾರಣವಾಗಿದೆ.ಶ್ರೀಕೃಷ್ಣ ಉಪಾಧ್ಯಾಯರವರು ಸಂಘ ಪರಿವಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರು.ಇತ್ತೀಚೆಗಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಭೆಗಳಲ್ಲಿ ಮುಂಚೂಣಿಯ ಭಾಷಣಗಾರರಾಗಿಯೂ ಗುರುತಿಸಿಕೊಂಡವರು.ಬಿಜೆಪಿ ಸರಕಾರ ಮತ್ತು ನಾಯಕರ ವಿರುದ್ಧವೂ ಹರಿಹಾಯ್ದು ಸುದ್ದಿಯಾಗಿದ್ದವರು.ಇತ್ತೀಚೆಗೆ ದರ್ಬೆಯಲ್ಲಿ ನಡೆದಿದ್ದ ಹಿಂದೂ ಸಂಘಟನೆಗಳ ಪ್ರತಿಭಟನೆಯಲ್ಲಿ ರೋಷಾವೇಶದ ಭಾಷಣ ಮಾಡಿ ¾ಇಸ್ಲಾಂ ಇಡೀ ಭೂಮಿಗೇ ಕಂಟಕ..¿ ಎಂದು ಹೇಳಿಕೆ ನೀಡಿ ವಿವಾದದ ಕಿಚ್ಚು ಹಚ್ಚಿದ್ದವರು.ಇಂತಹ ಶ್ರೀಕೃಷ್ಣ ಉಪಾಧ್ಯಾಯರವರನ್ನು ಕಾಂಗ್ರೆಸ್ ಕಛೇರಿಗೆ ಕರೆಸಿ ಆಯುಧ ಪೂಜೆ ನಡೆಸಿರುವುದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪೂಜೆ ನಡೆದಿಲ್ಲ. ಪ್ರತ್ಯೇಕವಾಗಿ ಆಯುಧ ಪೂಜಾ ಸಮಿತಿ ರಚಿಸಿ ಪೂಜೆ ಮಾಡಲಾಗಿದೆ ಎಂದು ನಾಯಕರು ಸ್ಪಷ್ಟನೆ ನೀಡಿದರೂ ಕಾರ್ಯಕರ್ತರು ತಣ್ಣಗಾಗಿಲ್ಲ.ಅಲ್ಲದೆ, ಕಾಂಗ್ರೆಸ್ ಕಛೇರಿಯಲ್ಲಿ ಪೂಜೆ ನಡೆಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ, ಜಾತ್ಯಾತೀತವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಪೂಜೆ ನಡೆಸುವುದು ತಪ್ಪಲ್ಲ.ಆದರೆ, ಇಸ್ಲಾಂ ವಿರೋ„ ಎಂದು ಬಹಿರಂಗವಾಗಿ ಘೋಷಿಸಿಕೊಂಡವರಲ್ಲಿ ಪೂಜೆ ಮಾಡಿಸಿರುವುದು ಸರಿ ಅಲ್ಲ ಎಂದು ಕೆಲವು ಮುಸ್ಲಿಂ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಿಮ್ಮ ಅಭಿಪ್ರಾಯ ಸರಿ ಇದೆ, ಉಪಾಧ್ಯಾಯರನ್ನು ಪೂಜೆಗೆ ಕರೆಸಿದ್ದು ಸರಿಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮುಸ್ಲಿಂ ಮುಖಂಡರನ್ನು ಸಮಾಧಾನಿಸಿದ್ದಾರೆ.ಇನ್ನೊಂದೆಡೆ ವಿಶ್ವನಾಥ ರೈಯವರ ಹೆಸರಿನ ¾ಕ್ಷಮಾಪಣಾ ಪತ್ರ¿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ, ಪರ ವಿರೋಧ ವಾಗ್ವಾದಕ್ಕೆ ¾ಆಯುಧ ಪೂಜೆ¿ ಕಾರಣವಾಗುತ್ತಿದೆ.ಆದರೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಶ್ರೀಕೃಷ್ಣ ಉಪಾಧ್ಯಾಯರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.ಪೂಜೆಗೆ ಸಂಬಂ„ಸಿ ಉಂಟಾಗಿರುವ ವಿವಾದ ತಣ್ಣಗಾಗಿಸುವ ಪ್ರಯತ್ನ ನಾಯಕರಿಂದ ನಡೆಯುತ್ತಿದೆ.
ವಿಶ್ವನಾಥ ರೈ ಹೆಸರಿನ ಕ್ಷಮಾಪಣಾ ಪತ್ರ ವೈರಲ್: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರ ಹೆಸರಿನಲ್ಲಿ ಬರೆದಿರುವ ಕ್ಷಮಾಪಣಾ ಪತ್ರ ಭಾರೀ ಸದ್ದು ಮಾಡಿದೆ.
¾ನನ್ನ ಆತ್ಮೀಯ ಕಾಂಗ್ರೆಸ್ ಕುಟುಂಬದ ಸಹೋದರ ಸಹೋದರಿಯರೇ, ದಿನಾಂಕ 03.10.2022ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಯ ಬಗ್ಗೆ ಒಂದೆರಡು ಮಾತುಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಬಯಸುತ್ತೇನೆ.ಆತ್ಮೀಯರೇ, ಕಾಂಗ್ರೆಸ್ ಕಛೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಆಯುಧ ಪೂಜೆ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಇದುವರೆಗೆ ಯಾವುದೇ ರೀತಿಯ ಗೊಂದಲಗಳು ಉಂಟಾಗಿರಲಿಲ್ಲ.ದುರಾದೃಷ್ಟವಶಾತ್ ಈ ವರ್ಷ ಒಂದಷ್ಟು ತಪ್ಪು, ಒಂದಷ್ಟು ಗೊಂದಲ ಅನಪೇಕ್ಷಿತವಾಗಿ ನಡೆದು ಹೋಗಿದೆ.ಕಾರ್ಯಕ್ರಮ ಸಂಘಟಸುವ ಜವಾಬ್ದಾರಿಯನ್ನು ಹೊಂದಿದ್ದ ಕೆಲವರ ಅಚಾತುರ್ಯದಿಂದ ಈ ತಪ್ಪು ನಡೆದಿದ್ದರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೆಲೆಯಲ್ಲಿ ಆಗಿ ಹೋದ ಈ ತಪ್ಪಿನ ಹೊಣೆಯನ್ನು ಒಪ್ಪಿಕೊಂಡು, ಶುದ್ಧ ಮನಸ್ಸಿನಿಂದ ಒಪ್ಪಿಕೊಂಡು ನಿರ್ವಂಚನೆಯಿಂದ ತಮ್ಮೆಲ್ಲರ ಕ್ಷಮೆಯನ್ನು ಯಾಚಿಸುತ್ತೇನೆ.
ಪಕ್ಷದ ಜವಾಬ್ದಾರಿಯನ್ನು ಹೊಂದಿದ ಕೆಲವರು ಆಯುಧ ಪೂಜಾ ಸಮಿತಿ ಎಂಬ ಸಮಿತಿಯನ್ನು ತಮ್ಮೊಳಗೆ ರಚಿಸಿಕೊಂಡಿದ್ದು ಆಯುಧ ಪೂಜೆ ನಡೆಸಲು ನನ್ನ ಒಪ್ಪಿಗೆಯನ್ನು ಕೇಳಿಕೊಂಡಿದ್ದರು.ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಬೆಂಬಲಿಸುವ ನನ್ನ ಎಂದಿನ ಮನಸ್ಥಿತಿಯಂತೆ ಈ ಕಾರ್ಯಕ್ರಮ ನಡೆಸಲು ನಾನು ಒಪ್ಪಿಗೆ ನೀಡಿದ್ದೆ ಮತ್ತು ಇದು ನಮ್ಮದೇ ಕಾರ್ಯಕ್ರಮ ಎಂಬ ಭಾವನೆಯಿಂದ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತೇನೆ.
ಆ ದಿನದ ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಶ್ರೀ ಕೃಷ್ಣ ಉಪಾಧ್ಯಾಯ ಎಂಬ ಕೋಮುವಾದಿ ವ್ಯಕ್ತಿ ಪುರೋಹಿತನಾಗಿ ಆಗಮಿಸುತ್ತಾನೆ ಎಂಬುದು ನನಗೆ ಅರಿವಿರಲಿಲ್ಲ ಮತ್ತು ಇಂತಹವರೇ ಪುರೋಹಿತರಾಗಿ ಬರುತ್ತಾರೆ ಎಂಬ ಮಾಹಿತಿಯನ್ನೂ ಆಯುಧ ಪೂಜಾ ಸಮಿತಿಯವರು ನನಗೆ ನೀಡಿರಲಿಲ್ಲ.ಶ್ರೀಕೃಷ್ಣ ಉಪಾಧ್ಯಾಯ ಎಂಬ ಒಬ್ಬ ಕೋಮು ಪ್ರಚೋದಕ ಭಾಷಣಕಾರನನ್ನು ಕಾಂಗ್ರೆಸ್ ಕಛೇರಿಗೆ ಪೌರೋಹಿತ್ಯಕ್ಕಾಗಿ ಆಹ್ವಾನಿಸಿರುವುದು ಖಂಡಿತವಾಗಿಯೂ ತಪ್ಪು.ಈ ತಪ್ಪಿಗೆ ಕ್ಷಮೆಯೇ ಇಲ್ಲ.ಆದರೆ ಈ ವಿಚಾರದಲ್ಲಿ ನನ್ನ ಕಡೆಯಿಂದ ಯಾವುದೇ ರೀತಿಯ ವ್ಯವಸ್ಥೆ ಆಗಿರದಿದ್ದರೂ ಈ ಘಟನೆಯ ಸಂಪೂರ್ಣ ಹೊಣೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೆಲೆಯಲ್ಲಿ ಸಂಪೂರ್ಣವಾಗಿ ಹೊತ್ತುಕೊಂಡು ತಮ್ಮೆಲ್ಲರ ಕ್ಷಮೆಯನ್ನು ಯಾಚಿಸುತ್ತೇನೆ.ಮುಂದಿನ ದಿನಗಳಲ್ಲಿ ಇಂತಹಾ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸುತ್ತೇನೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಜಾತ್ಯಾತೀತ ನಿಲುವನ್ನು ಮನಸಾರೆ ಒಪ್ಪಿ ಪುತ್ತೂರು ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ಈ ಹುದ್ದೆಯ ಘನತೆ ಗೌರವಗಳಿಗೆ ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ಇನ್ನು ಮುಂದೆಯೂ ನಡೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಬದ್ಧತೆಯನ್ನು ಹೊಂದಿದ್ದೇನೆ.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಏಳ್ಳಷ್ಟೂ ಲೋಪ ಬಾರದ ಹಾಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷವನ್ನು ಇನ್ನಷ್ಟು ಸಂಘಟಿಸಲು ಕಟಿಬದ್ಧನಾಗಿ ಇನ್ನು ಮುಂದೆಯೂ ಕಾರ್ಯ ನಿರ್ವಹಿಸುತ್ತೇನೆ ಎಂಬ ವಾಗ್ದಾನವನ್ನು ಈ ಸಂದರ್ಭದಲ್ಲಿ ತಮಗೆ ನೀಡುತ್ತಿದ್ದೇನೆ.
ಆಗಿ ಹೋದ ತಪ್ಪಿಗೆ ಕ್ಷಮೆ ಇರಲಿ.ಪಕ್ಷ ಸಂಘಟನೆಯ ಕಾರ್ಯದಲ್ಲಿ ತಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಕಾರವನ್ನು ಮತ್ತೊಮ್ಮೆ ಯಾಚಿಸುತ್ತೇನೆ.
ಇತಿ ವಂದನೆಗಳೊಂದಿಗೆ,
ಎಂ.ಬಿ.ವಿಶ್ವನಾಥ ರೈ
ಅಧ್ಯಕ್ಷರು, ಪುತ್ತೂರು ಬ್ಲಾಕ್ ಕಾಂಗ್ರೆಸ್¿ ಎಂಬ ಪತ್ರ ವೈರಲ್ ಆಗಿದ್ದು ಕಾಂಗ್ರೆಸ್ ಪಕ್ಷದೊಳಗೆ ಮಾತ್ರವಲ್ಲದೆ ಹೊರಗಡೆಯೂ ಚರ್ಚೆಗೆ ಗ್ರಾಸ ಒದಗಿಸಿದೆ.ಈ ವಿವಾದದ ಕುರಿತು ಪ್ರತಿಕ್ರಿಯೆಗಾಗಿ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಡಿ.ಶೆಟ್ಟಿಯವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here