ಸಾವಯವಉತ್ಪನ್ನ ಗಳಿಗೆ ಗ್ರಾಮೀಣ ಮಾರುಕಟ್ಟೆಅಭಿವೃದ್ದಿಗೆ ಪೂರಕ-ಗಣೇಶ್ ನಿಡ್ವಣ್ಣಾಯ
ಸವಣೂರು : ಸಾವಯವ ಹಣ್ಣು-ತರಕಾರಿಗಳಿಗೆ ಗ್ರಾಮೀಣ ಭಾಗದಲ್ಲಿ ಮಾರುಕಟ್ಟೆ ದೊರೆಯುತ್ತಿರುವುದು ಅಭಿವೃದ್ದಿಗೆ ಪೂರಕ.ಆರೋಗ್ಯಯುಕ್ತ ಜೀವನಕ್ಕಾಗಿ ಸಾವಯವ ಉತ್ಪನ್ನಗಳನ್ನು ಬಳಸಬೇಕು.ರಾಸಾಯನಿಕ ಹಾಗೂ ವಿಷಯುಕ್ತ ತರಕಾರಿ-ಹಣ್ಣುಗಳ ಸೇವನೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಹೇಳಿದರು.
ಅವರು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅ.10ರಂದು ಕೌಶಲ್ಯಾಭಿವೃದ್ದಿ ,ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ,ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದೀನ್ ದಯಾಳ್ ಅಂತ್ಯೋದಯ ಯೋಜನೆ ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ದಕ್ಷಿಣ ಕನ್ನಡ ಜಿ.ಪಂ.ಕಡಬ ತಾ.ಪಂ., ಸವಣೂರು ಗ್ರಾಮ ಪಂಚಾಯತ್, ಶ್ರೀರಾಮ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟದ ಸಹಯೋಗದೊಂದಿಗೆ ನಡೆದ ಸಂಜೀವಿನಿ ಗ್ರಾಮೀಣ ರೈತ ಸಂತೆ -ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಮಾತನಾಡಿ,ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ,ಆರೋಗ್ಯವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಯೋಜನೆಯನ್ನು ಜಾರಿಗೆ ತಂದಿದೆ.ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರ ಸ್ವಉದ್ಯೋಗಕ್ಕೆ ಸರಕಾರ ಒತ್ತು ನೀಡುತ್ತಿದೆ ಎಂದರು.
ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಮಾತನಾಡಿ, ಗ್ರಾಮೀಣ ಸಂತೆಯ ಮೂಲಕ ಸಣ್ಣ ಮಟ್ಟಿನ ತರಕಾರಿ ಕೃಷಿಕನಿಗೂ ಮಾರುಕಟ್ಟೆ ದೊರೆತಂತಾಗುತ್ತದೆ.ಅಲ್ಲದೇ ಬೆಳೆಗಾರನೇ ನೇರವಾಗಿ ಮಾರಾಟ ಮಾಡುವ ಮೂಲಕ ಹೆಚ್ಚು ಲಾಭಗಳಿಸಬಹುದು.ಆರ್ಥಿಕವಾಗಿಯೂ ನೇರ ಮಾರುಕಟ್ಟೆ ವ್ಯವಸ್ಥೆ ಉತ್ತಮ ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಮಾತನಾಡಿ,ಮಹಿಳೆಯರ ಸಬಲೀಕರಣದಿಂದ ದೇಶ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ.ಇದಕ್ಕೆ ಪೂರಕವಾಗಿ ಸಂಜೀವಿನಿ ಒಕ್ಕೂಟವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.ಗ್ರಾಮೀಣ ರೈತ ಸಂತೆ ನಿರಂತರವಾಗಿ ನಡೆಯಲಿ ಎಂದರು.
ವೇದಿಕೆಯಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ.ಉದ್ಯಮ ಶೀಲತೆ ಉತ್ತೇಜನ ತಾಲೂಕು ಸಂಪನ್ಮೂಲ ವ್ಯಕ್ತಿ ಲೂಸಿ ವಿಕ್ಟರ್ ,ಶ್ರೀರಾಮ ಸಂಜೀವಿನಿ ಒಕ್ಕೂಟ ಸವಣೂರು ಇದರ ಉಪಾಧ್ಯಕ್ಷೆ ಪುಷ್ಪಾವತಿ ಕೇಕುಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್‌ರೈ ಕೆಡೆಂಜಿ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ ,ನಿರ್ದೇಶಕ ಚೇತನ್‌ಕುಮಾರ್ ಕೋಡಿಬೈಲು, ಸವಣೂರು ಗ್ರಾ.ಪಂ. ಸದಸ್ಯರಾದ ಅಬ್ದುಲ್‌ರಝಾಕ್, ಸತೀಶ್ ಅಂಗಡಿಮೂಲೆ, ಚಂದ್ರಾವತಿ ಸುಣ್ಣಾಜೆ, ತೀರ್ಥರಾಮ ಕೆಡೆಂಜಿ, ಭರತ್‌ರೈ, ವಿನೋದಾ ರೈ ,ಬಾಬು ಎನ್.,ತಾರನಾಥ ಸುವರ್ಣ ಹಾಗೂ ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ದಯಾನಂದ ಎಂ,ಶಾರದಾ ಎಂ.,ಜಯಶ್ರೀ, ಯತೀಶ್ ಕುಮಾರ್ ಮೊದಲಾದವರಿದ್ದರು.
ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಮನ್ಮಥ ಎ. ಸ್ವಾಗತಿಸಿ ,ಸವಣೂರು ಸಂಜೀವಿನಿ ಒಕ್ಕೂಟದ ಎಂಬಿಕೆ ಗೀತಾ ವಂದಿಸಿದರು. ಗ್ರಾ.ಪಂ. ಸದಸ್ಯ ಗಿರಿಶಂಕರ ಸುಲಾಯ ಕಾರ್ಯಕ್ರಮ ನಿರ್ವಹಿಸಿದರು.
ಪ್ರತೀ ಸೋಮವಾರಗ್ರಾಮೀಣರೈತ ಸಂತೆ
ಸವಣೂರಿನಲ್ಲಿ ಪ್ರತೀ ಸೋಮವಾರ ಸಂಜೀವಿನಿ ಗ್ರಾಮೀಣ ಸಂತೆ ನಡೆಯಲಿದೆ.ಅ.10ರಂದು ನಡೆದ ಸಂಜೀವಿನಿ ಸಂತೆ ಗ್ರಾಹಕರನ್ನು ಸೆಳೆಯಿತು. ಗ್ರಾಮೀಣ ಭಾಗದ ಮಹಿಳೆಯರು ಸಿದ್ಧಪಡಿಸಿದ ಗೃಹೋತ್ಪನ್ನಗಳ ಖರೀದಿಗೆ ಉತ್ಸುಕತೆ ತೋರಿದರು. ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕುದ್ಮಾರು ಗ್ರಾಮಗಳ ಸಂಜೀವಿನಿ ಸ್ವಸಹಾಯ ಸಂಘಗಳ 30ಕ್ಕೂ ಹೆಚ್ಚು ಸದಸ್ಯರು ವಿವಿಧ ಬಗೆಯ ಉತ್ಪನ್ನಗಳನ್ನು ಮಾರಾಟ ಮಾಡಿದರು.ಸಿಹಿ ತಿನಿಸುಗಳು,ವಿವಿಧ ಬಗೆಯ ಸೊಪ್ಪು-ತರಕಾರಿಗಳು,ಫಿನಾಯಿಲ್ ಸೇರಿದಂತೆ ವಿವಿಧ ಉತ್ಪನ್ನಗಳು ಮಾರಾಟಗೊಂಡವು.ರೋಟರಿ ಸಮುದಾಯ ದಳ ಸವಣೂರುಇದರ ವತಿಯಿಂದಲೂ ವಿವಿಧ ವಸ್ತುಗಳನ್ನು ಮಾರಾಟ ಮಾಡಲಾಯಿತು.