ನೆಲ್ಯಾಡಿ: ಹರಿಯುವ ನೀರಿಗೆ ರಸಾಯನಿಕ ಪದಾರ್ಥ ಸೇರಿಕೊಂಡ ಪರಿಣಾಮ ಮೀನು ಸೇರಿದಂತೆ ನೂರಾರು ಜಲಚರಗಳು ಸತ್ತುಹೋಗಿರುವ ಘಟನೆ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಅ.11ರಂದು ನಡೆದಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ಯಾರೋ ಟ್ಯಾಂಕರ್‌ನಿಂದ ಹರಿಯುವ ತೋಡಿನ ನೀರಿಗೆ ರಸಾಯನಿಕ ಪದಾರ್ಥ ಹರಿಯಬಿಟ್ಟಿದ್ದು ಇದರಿಂದ ನೀರು ಕಪ್ಪು ಬಣ್ಣವಾಗಿದೆ. ನೀರಿನ ಮೇಲೆ ಎಣ್ಣೆಯ ಅಂಶ ಸಹ ಕಾಣಿಸಿಕೊಂಡಿದೆ. ಈ ತೋಡು ಗುಂಡ್ಯ ಹೊಳೆಗೆ ಸೇರುತ್ತಿದ್ದು ತೋಡಿನ ಉದ್ದಕ್ಕೂ ನೂರಾರು ಮೀನುಗಳು, ಕಪ್ಪೆ ಸೇರಿದಂತೆ ಇತರೇ ಜಲಚರಗಳು ಸತ್ತು ನೀರಿನಲ್ಲಿ ತೇಳುತ್ತಿವೆ. ಸ್ಥಳೀಯರು ಈ ತೋಡಿನ ನೀರನ್ನು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಉಪಯೋಗಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಟ್ಯಾಂಕರ್‌ನಿಂದ ತೋಡಿಗೆ ರಸಾಯನಿಕ ಹರಿಯಬಿಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದಾರೆ.