ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡವರ ನಿರ್ಲಕ್ಷ್ಯ -ಗ್ರಾಮಸ್ಥರ ಆರೋಪ

0

ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ 5 ಸಾವಿರ ರೂ. ಬಹುಮಾನ ನೀಡಿದ ರಾಮಕೃಷ್ಣ ಭಟ್ ಮೇರ್ಲ

ಕೆಯ್ಯೂರು ಗ್ರಾಮಸಭೆ

ಪುತ್ತೂರು: ತಿಂಗಳಾಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ, ಆಸ್ಪತ್ರೆಗೆ ಬರುವ ಬಡ ರೋಗಿಗಳನ್ನು ಸರಿಯಾಗಿ ವಿಚಾರಿಸುತ್ತಿಲ್ಲ ಅಲ್ಲದೆ ಸರಿಯಾದ ಔಷಧಿಗಳನ್ನು ಕೂಡ ನೀಡುತ್ತಿಲ್ಲ, ಇಲ್ಲಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಬಡವರ ಕಡಗಣನೆ ಮಾಡುತ್ತಿದ್ದಾರೆ ಎಂದು ಕೆಯ್ಯೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ನೇರ ಆರೋಪ ಮಾಡಿದರು. ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಭವನದಲ್ಲಿ ಅ.11 ರಂದು ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾರವರು ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ್ದರು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯರವರು ಇಲಾಖಾ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಕಿಟ್ಟ ಅಜಿಲ ಕಣಿಯಾರುರವರು ನೀವು ಕೇವಲ ಆಭಾ ಕಾರ್ಡ್ ಬಗ್ಗೆ ಮಾತ್ರ ಮಾಹಿತಿ ನೀಡಿದ್ದೀರಿ, ಅದು ಬಿಟ್ಟು ತಿಂಗಳಾಡಿ ಆರೋಗ್ಯ ಕೇಂದ್ರದಿಂದ ಸಾರ್ವಜನಿಕರಿಗೆ ಯಾವುದೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು, ಆರೋಗ್ಯ ಕೇಂದ್ರದಲ್ಲಿ ಬಡವರ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಔಷಧಿಗೆ ಬರುವ ಬಡವರನ್ನು ಸರಿಯಾಗಿ ವಿಚಾರಿಸುತ್ತಿಲ್ಲ ಅಲ್ಲದೆ ಅವರಿಗೆ ಸರಿಯಾದ ಔಷಧಿಯನ್ನು ಕೂಡ ನೀಡುತ್ತಿಲ್ಲ, ಆರೋಗ್ಯ ಕಾರ್ಯಕರ್ತೆಯರೂ ಕೂಡ ಸರಿಯಾದ ಸ್ಪಂದನೆ ನೀಡುತ್ತಿಲ್ಲ, ಈ ಬಗ್ಗೆ ವೈದ್ಯಾಧಿಕಾರಿಯಾದ ನೀವು ಜವಬ್ದಾರಿ ವಹಿಸಿಕೊಳ್ಳಬೇಕು, ಬಡವರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಡಾ.ಭವ್ಯರವರು ನಾವು ಯಾರನ್ನೂ ನಿರ್ಲಕ್ಷ್ಯ ಮಾಡುತ್ತಿಲ್ಲ. ಎಲ್ಲರಿಗೂ ಸರಿಯಾದ ರೀತಿಯಲ್ಲಿ ಔಷಧಿಯನ್ನು ನೀಡುತ್ತಿದ್ದೇವೆ. ಇನ್ನು ಮುಂದೆಕ್ಕೆ ಈ ರೀತಿಯ ತಪ್ಪು ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದೆ

ಗ್ರಾಮದ ಕಣಿಯಾರುಮಲೆ ರಕ್ಷಿತಾರಣ್ಯದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು ಕೃಷಿ ಹಾನಿ ಮತ್ತು ಜೀವ ಭಯ ಉಂಟಾಗಿದೆ ಎಂದು ಕಿಟ್ಟ ಅಜಿಲ ಕಣಿಯಾರು ತಿಳಿಸಿದರು. ಹಿಂಡುಹಿಂಡಾಗಿ ಕಾಡುಕೋಣಗಳು ಕಾಡಿನಿಂದ ಕೃಷಿತೋಟಗಳಿಗೆ, ರಸ್ತೆ ಬದಿಗೆ ಬರುತ್ತಿದ್ದು ಕೃಷಿ ಹಾನಿ ಮಾಡುವುದಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೂ ಭಯ ಉಂಟಾಗಿದೆ ಈ ಬಗ್ಗೆ ಅರಣ್ಯ ಇಲಾಖೆಯವರು ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.

ಫ್ಲೆಕ್ಸ್, ಬ್ಯಾನರ್‌ಗಳಿಗೆ ಷರತ್ತು ವಿಧಿಸಿ

ಗ್ರಾಮದ ಸೌಂದರ್ಯವನ್ನು ಹಾಳು ಮಾಡುವಲ್ಲಿ ಪ್ಲಕ್ಸ್, ಬ್ಯಾನರ್‌ಗಳು ಕೂಡ ಪಾತ್ರ ವಹಿಸುತ್ತವೆ. ಗ್ರಾಮದಲ್ಲಿ ಪ್ಲಕ್ಸ್, ಬ್ಯಾನರ್‌ಗಳ ಹಾವಳಿ ಜಾಸ್ತಿಯಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದ ರಾಮಕೃಷ್ಣ ಭಟ್ ಮೇರ್ಲರವರು, ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳುವಾಗಲೇ ಬ್ಯಾನರ್, ಫ್ಲೆಕ್ಸ್‌ಗಳಿಗೆ ಹಾಕುವ ದಿನಾಂಕ ಮತ್ತು ತೆಗೆಯುವ ದಿನಾಂಕವನ್ನು ನಮೂದಿಸಬೇಕು, ತೆಗೆಯುವ ದಿನಾಂಕದಂದು ವಾರೀಸುದಾರರು ಅವುಗಳನ್ನು ತೆಗೆಯದಿದ್ದರೆ ನೇರವಾಗಿ ಪಂಚಾಯತ್ ತೆಗೆಯಬೇಕು ಎಂದು ತಿಳಿಸಿದರು. ಫ್ಲೆಕ್ಸ್,ಬ್ಯಾನರ್‌ಗಳ ವಿಷಯದಲ್ಲಿ ಪಂಚಾಯತ್ ಷರತ್ತುಗಳನ್ನು ವಿಧಿಸುವುದು ಸೂಕ್ತ ಎಂದು ಅವರು ತಿಳಿಸಿದರು.

ಕೆಯ್ಯೂರಿನಲ್ಲಿ ಸಾರ್ವಜನಿಕ ಶೌಚಾಲಯ ಬೇಕು

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕೆಯ್ಯೂರು ಪೇಟೆಯಲ್ಲಿ ಮೂತ್ರ ಮಾಡಬೇಕೆಂದರೆ ಒಂದು ಶೌಚಾಲಯ ಇಲ್ಲ ಇದರಿಂದ ತೊಂದರೆಯಾಗುತ್ತಿದೆ ಆದ್ದರಿಂದ ಪೇಟೆಯಲ್ಲಿ ಒಂದು ಸಾರ್ವಜನಿಕ ಶೌಚಾಲಯ ಬೇಕು ಎಂದು ಶೂನ್ಯ ವೇಳೆಯಲ್ಲಿ ಗ್ರಾಮಸ್ಥ ಶೇಷಪ್ಪರವರು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಗ್ರಾಮಸ್ಥರು ಚಪ್ಪಾಳೆಯ ಮೂಲಕ ಸಹಮತ ಸೂಚಿಸಿ ಕೆಯ್ಯೂರು ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಬಸ್ಸುತಂಗುದಾಣಕ್ಕೆ ತಾಗಿಕೊಂಡು ಅನಧಿಕೃತ ಕಟ್ಟಡ

ಕುಂಬ್ರ-ಬೆಳ್ಳಾರೆ ರಾಜ್ಯ ಹೆದ್ದಾರಿಯ ಮೇರ್ಲ ಎಂಬಲ್ಲಿರುವ ಬಸ್ಸು ತಂಗುದಾಣಕ್ಕೆ ತಾಗಿಕೊಂಡು ಅನಧಿಕೃತ ಕಟ್ಟಡವೊಂದನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ತೊಂದರೆಯಾಗುತ್ತಿದೆ ಇದನ್ನು ತೆರವು ಮಾಡಬೇಕು ಎಂದು ಹರಿಶ್ಚಂದ್ರ ಆಚಾರ್ಯರವರು ಆಗ್ರಹಿಸಿದರು.

ತೆಂಡೂಲ್ಕರ್‌ಗೆ ಧನ್ಯವಾದ ಹೇಳಿದ ಗ್ರಾಪಂ ಸದಸ್ಯ

ಬೇಡಿಕೆಯನ್ನು ಈಡೇರಿಸಿದ್ದ ಕುಂಬ್ರ ಮೆಸ್ಕಾಂನ ಜೆಇಯಾಗಿದ್ದ ನಿತ್ಯಾನಂದ ತೆಂಡೂಲ್ಕರ್‌ರವರಿಗೆ ಗ್ರಾಪಂ ಸದಸ್ಯ ಬಟ್ಯಪ್ಪ ರೈಯವರು ಧನ್ಯವಾದ ತಿಳಿಸಿದರು. ಅದರಂತೆ ಎಟ್ಯಡ್ಕ ಶಾಲಾ ಬಳಿ ವಿದ್ಯುತ್ ವಯರ್ ನೇತಾಡುತ್ತಿದೆ ಹಾಗೂ ದೇರ್ಲ ಹೊಸಮನೆ ಎಂಬಲ್ಲಿ ಎಚ್‌ಟಿ ಲೈನ್ ಜೋತು ಬಿದ್ದಿದೆ ಇದನ್ನು ಸರಿಪಡಿಸಬೇಕಾಗಿದೆ ಎಂದು ಅವರು ಕೇಳಿಕೊಂಡರು. ಕೆಯ್ಯೂರು ಸೊಸೈಟಿ ಬಳಿ ರಸ್ತೆಗೆ ಅಡ್ಡವಾಗಿ ವಯರ್ ಜೋತಾಡುತ್ತಿದ್ದು ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಆದ್ದರಿಂದ ಇದನ್ನು ಸರಿಪಡಿಸುವಂತೆ ಹರಿಶ್ಚಂದ್ರ ಆಚಾರ್ಯರವರು ಕೇಳಿಕೊಂಡರು.

ಇತರ ಬೇಡಿಕೆಗಳು

ಕೆಯ್ಯೂರು ಕೆಪಿಎಸ್ ಎದುರು ರಸ್ತೆಗೆ ಬ್ಯಾರಿಕೇಡ್ ಅಳವಡಿಸುವಂತೆ ಹಾಗೂ ಶಾಲೆಗೆ ಹೋಗುವ ರಸ್ತೆಗೆ ಕಾಂಕ್ರಿಟೀಕರಣ ಮಾಡಿಸಿಕೊಡುವಂತೆ ಶಾಲಾ ಮುಖ್ಯಗುರು ಬಾಬುರವರು ಕೇಳಿಕೊಂಡರು. ತೆಗ್ಗು ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಈ ಬಗ್ಗೆ ಶಿಕ್ಷಣ ಅಧಿಕಾರಿಗಳು ಗಮನ ಹರಿಸುವಂತೆ ಅಬ್ದುಲ್ ಖಾದರ್ ಮೇರ್ಲ ವಿನಂತಿಸಿಕೊಂಡರು. ನೂಜಿ-ಮೇರ್ಲ ರಸ್ತೆಯಲ್ಲಿ ತ್ಯಾಜ್ಯ,ಕಸ ತಂದು ಹಾಕುತ್ತಿದ್ದಾರೆ ಈ ಬಗ್ಗೆ ಗಮನಹರಿಸುವಂತೆ ರಿತೇಶ್‌ರವರು ಕೇಳಿಕೊಂಡರು.

ಮಾರ್ಗದರ್ಶಿ ಅಧಿಕಾರಿ ಶ್ರೀಲತಾರವರು ಇಲಾಖಾ ಮಾಹಿತಿಯೊಂದಿಗೆ ಸಂದರ್ಭೋಚಿತವಾಗಿ ಮಾತನಾಡಿದರು. ಉಪಾಧ್ಯಕ್ಷೆ ಗಿರಿಜಾರವರು ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಹೇಳಿ ಸಹಕಾರ ಕೋರಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ಶರತ್ ಕುಮಾರ್ ಮಾಡಾವು, ವಿಜಯ ಕುಮಾರ್ ಸಣಂಗಳ, ತಾರಾನಾಥ ಕಂಪ, ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಸುಮಿತ್ರಾ ಪಲ್ಲತ್ತಡ್ಕ, ಮೀನಾಕ್ಷಿ ವಿ.ರೈ, ಸುಭಾಷಿಣಿ ಕೆ, ನೆಬಿಸಾ, ಮಮತಾ ರೈ, ಅಮಿತಾ ಎಚ್ ರೈ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವರದಿ ವಾಚಿಸಿ, ಗ್ರಾಪಂ ಮಾಹಿತಿ ನೀಡಿ ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್ ಎಂ, ಧರ್ಮಣ್ಣ, ಮಾಲತಿ ರೈ ಬಿ, ಜ್ಯೋತಿ ಎಸ್ ಸಹಕರಿಸಿದ್ದರು.

ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿಗೆ 5 ಸಾವಿರ ರೂ.ನಗದು ಬಹುಮಾನ ನೀಡಿದ ಭಟ್

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕೆಯ್ಯೂರು ಕೆಪಿಎಸ್‌ನ ಪ್ರೌಢ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ 5 ಸಾವಿರ ರೂ.ನಗದು ಬಹುಮಾನ ನೀಡುವ ಮೂಲಕ ವಕೀಲ, ಕೃಷಿಕ ರಾಮಕೃಷ್ಣ ಭಟ್ ಮೇರ್ಲರವರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. 2019 ರ ಗ್ರಾಮಸಭೆಯಲ್ಲಿ ರಾಮಕೃಷ್ಣ ಭಟ್‌ರವರು ಒಂದು ಮಾತನ್ನು ಆಡಿದ್ದರು ಕೆಯ್ಯೂರು ಕೆಪಿಎಸ್ ಪ್ರೌಢ ಶಾಲಾ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಯಾರು ಪಡೆಯುತ್ತಾರೋ ಅವರಿಗೆ ನಗದು ಬಹುಮಾನ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೆಯ್ಯೂರು ಗ್ರಾಪಂ ಸದಸ್ಯೆ ಮೀನಾಕ್ಷಿ ವಿ.ರೈಯವರ ಪುತ್ರಿ ನಿಶ್ಮಿತಾ ರೈಯವರು 608 ಅಂಕಗಳನ್ನು ಪಡೆದುಕೊಂಡಿದ್ದರು. ಭಟ್‌ರವರು ಹೇಳಿದ ಮಾತಿನಂತೆ ಗ್ರಾಮಸಭೆಯಲ್ಲಿ ರೂ.5 ಸಾವಿರದ ಚೆಕ್ ಅನ್ನು ವಿದ್ಯಾರ್ಥಿನಿಯ ತಾಯಿ ಮೀನಾಕ್ಷಿ ವಿ.ರೈಯವರಿಗೆ ನೀಡುವ ಮೂಲಕ ಗಮನ ಸೆಳೆದರು.

LEAVE A REPLY

Please enter your comment!
Please enter your name here