ಪುತ್ತೂರು: ಪ್ರತಿಷ್ಠಿತ ಧಾರ್ಮಿಕ ಉಲಮಾ ಒಕ್ಕೂಟವಾದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ದಕ್ಷಿಣ ಕರ್ನಾಟಕದ ಹಿರಿಯ ವಿದ್ವಾಂಸ ತೋಡಾರು ಉಸ್ತಾದ್ ಎಂದೇ ಚಿರಪರಿಚಿತರಾಗಿರುವ ಪುತ್ತೂರು ಸಾಲ್ಮರ ನಿವಾಸಿ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು ಆಯ್ಕೆಯಾಗಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ತೋಡಾರು ಮಸೀದಿ ಮತ್ತು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನಲ್ಲಿ ಮುದರ್ರಿಸ್ ಆಗಿದ್ದರು. ಜಂಇಯ್ಯತುಲ್ ಮುದರ್ರಿಸೀನ್ ಕೇಂದ್ರ ಸಮಿತಿ ಕೋಶಾಧಿಕಾರಿ, ಸಮಸ್ತ ಕರ್ನಾಟಕ ಮುಶಾವರದ ಉಪಾಧ್ಯಕ್ಷ, ಫೈಝೀಸ್ ಕರ್ನಾಟಕ ರಾಜ್ಯಾಧ್ಯಕ್ಷ ಸಹಿತ ಹಲವು ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸುತ್ತಿರುವ ಉಸ್ಮಾನುಲ್ ಫೈಝಿ ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾವಿನಲ್ಲಿ ಜನನ:
ಸಿತಾರ್ ಮುಹಮ್ಮದ್-ಬೀಫಾತಿಮ ದಂಪತಿಯ ಹಿರಿಯ ಪುತ್ರನಾಗಿ ದ.ಕ. ಜಿಲ್ಲೆಯ ಮಾಡನ್ನೂರು ಕಾವುನಲ್ಲಿ ಜನಿಸಿದರು. 1985ರಲ್ಲಿ ಪಟ್ಟಿಕ್ಕಾಡ್ ಜಾಮಿಯಾದಿಂದ ಫೈಝಿ ಪದವಿ ಪಡೆದು ಕಳೆದ 38 ವರ್ಷಗಳಿಂದ ನಿರಂತರವಾಗಿ ಪಳ್ಳಿ ದರ್ಸ್ ನಡೆಸುತ್ತಿದ್ದಾರೆ. ಕಾಸರಗೋಡು ತಳಂಗರ ಹಿರಿಯ ಜುಮಾಅತ್ ಮಸೀದಿ, ಕಾಞಂಗಾಡ್ ಬಲ್ಲ ಕಡಪುರಂ, ಪರಪ್ಪ, ದ.ಕ. ಜಿಲ್ಲೆಯ ಈಶ್ವರಮಂಗಲ, ಪರ್ಲಡ್ಕ, ಕೆಐಸಿ ಕುಂಬ್ರ, ತೋಡಾರು, ಶಂಸುಲ್ ಉಲಮಾ ಅರಬಿಕ್ ಕಾಲೇಜು ಮತ್ತಿತರ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ದ.ಕ ಜಿಲ್ಲೆಯಲ್ಲೇ ಸುದೀರ್ಘ ಕಾಲ ದರ್ಸ್ ನಡೆಸಿದ ಪಂಡಿತರಲ್ಲಿ ಒಬ್ಬರಾಗಿರುವ ಉಸ್ಮಾನುಲ್ ಫೈಝಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ತೊಟ್ಟಿ ಮಾಹಿನ್ ಮುಸ್ಲಿಯಾರ್‌ರ ಪ್ರಧಾನ ಶಿಷ್ಯರಾಗಿದ್ದಾರೆ.
ಸಾಮಾಜಿಕ ಕಾರ್ಯಕ್ರಮದಲ್ಲಿ ಸಕ್ರೀಯ:
ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಬಹುಜತುಲ್ ಉಲಮಾದ ಪ್ರಥಮ ಅಧ್ಯಕ್ಷರಾಗಿ, ಜಾಮಿಯಾ ನೂರಿಯಾದ ಕರ್ನಾಟಕದ ಜೂನಿಯರ್ ಸಂಸ್ಥೆಯಾದ ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ವಿವಿಧ ಸಂಸ್ಥೆಗಳಿಂದ ನೂರಾರು ಶಿಷ್ಯರನ್ನು ಹೊಂದಿದ್ದು, ಉಸ್ವತುಲ್ ಉಲಮಾ ಹೆಸರಿನ ವಿದ್ಯಾರ್ಥಿ ಸಂಘಟನೆಯು ರಾಜ್ಯಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದೆ.
ಪ್ರಥಮ ಅವಧಿಯ ಅಧ್ಯಕ್ಷರಾಗಿದ್ದರು:
ಕೇರಳದಲ್ಲಿ ಎಸ್ಕೆಎಸೆಸ್ಸೆಫ್ ಆರಂಭವಾದ ಮೂರೇ ದಿನದೊಳಗೆ ಕರ್ನಾಟಕದಲ್ಲೂ ಎಸ್ಕೆಎಸೆಸ್ಸೆಫ್ ಸಂಘಟನೆಯನ್ನು ಆರಂಭಿಸಿರುವ ಉಸ್ಮಾನುಲ್ ಫೈಝೀ ಎಸ್ಕೆಎಸೆಸ್ಸೆಫ್, ಎಸ್‌ವೈಎಸ್ ಪುತ್ತೂರು ತಾಲೂಕು ಮತ್ತು ದ.ಕ. ಜಿಲ್ಲಾ ಸಮಿತಿಯ ಸಂಸ್ಥಾಪಕ ಮತ್ತು ಪ್ರಥಮ ಅವಧಿಯ ಅಧ್ಯಕ್ಷರಾಗಿದ್ದರು. ಇವರ ಸಹೋದರರಾದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಅವರು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಮದ್ರಸ ಶಿಕ್ಷಣಾಧಿಕಾರಿ ಮತ್ತು ಇನ್ನೋರ್ವ ಸಹೋದರ ಕೆ.ಎಂ.ಹಂಝ ಅವರು ಪುತ್ತೂರಿನಲ್ಲಿ ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರ ಕೆಎಂ ಕನ್ಸ್ಟ್ರಕ್ಷನ್ ಮಾಲಕರಾಗಿದ್ದಾರೆ.