‘ಜಲಸಿರಿ ಕಾಮಗಾರಿ ಮಾರ್ಚ್‌ನೊಳಗೆ ಮುಗಿಸಿ’- ಪ್ರಗತಿ ಪರಿಶೀಲನೆ ಸಭೆ ನಡೆಸಿ ಶಾಸಕ ಮಠಂದೂರು ಸೂಚನೆ

0

ಪುತ್ತೂರು:ನಗರಸಭೆ ವ್ಯಾಪ್ತಿಯಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆಯ ಕಾಮಗಾರಿಯನ್ನು ಮುಂದಿನ ಮಾರ್ಚ್ ತಿಂಗಳೊಳಗೆ ಮುಗಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಕೆಯುಐಡಿಎಫ್‌ ಸಿ ಜಲಸಿರಿ ಯೋಜನಾ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.

ಪುತ್ತೂರು ನಗರಸಭೆ ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ ಸಿ)ದ ಜಂಟಿ ಸಹಯೋಗದಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆಯ ಕಾಮಗಾರಿ ಕುರಿತು ನಗರಸಭೆ ಕಚೇರಿ ಮೀಟಿಂಗ್ ಹಾಲ್‌ನಲ್ಲಿ ಅ.13ರಂದು ನಡೆದ ಜಲಸಿರಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯುಲ್ಲಿ ಅವರು ಮಾತನಾಡಿದರು.ಈಗಾಗಲೇ ಕಳೆದ ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು.ಆದರೆ ಕೋವಿಡ್ ಹಿನ್ನೆಲೆಯಲ್ಲಿ ಒಂದು ವರ್ಷ ಹೆಚ್ಚುವರಿ ಸಮಯ ಕೇಳಿದಂತೆ ಮುಂದಿನ ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದ ಶಾಸಕರು,ಕಾಮಗಾರಿಗಳಿಗೆ ವೇಗ ಕೊಡುವಂತೆ ಸೂಚನೆ ನೀಡಿದರು.

ಉಪ್ಪಿನಂಗಡಿ ರಸ್ತೆ ಕಾಮಗಾರಿ ಜೊತೆ ಪೈಪ್ ಅಳವಡಿಕೆ: ಪುತ್ತೂರು-ಉಪ್ಪಿನಂಗಡಿ ಮುಖ್ಯ ರಸ್ತೆಯ ಅಗಲೀಕರಣದ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ನೆಕ್ಕಿಲಾಡಿಯಿಂದ ಪುತ್ತೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಹಾಲಿ ಮುಖ್ಯ ಕೊಳವೆಗಳನ್ನು ರಸ್ತೆಯಿಂದ ಬದಲಾಯಿಸಬೇಕಾಗಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ವಿದ್ಯುತ್ ಕಂಬಗಳ ಬದಲಾವಣೆ ಜೊತೆಗೆ ಪೈಪ್ ಬದಲಾವಣೆ ಮಾಡುವಂತೆ ಮೆಸ್ಕಾಂ ಮತ್ತು ಜಲಸಿರಿ ವಿಭಾಗಕ್ಕೆ ಶಾಸಕರು ತಿಳಿಸಿದರು.

ಹೆಚ್ಚುವರಿ ವಿದ್ಯುತ್: ಜಲಸಿರಿ ಯೋಜನೆಯಲ್ಲಿ ಅಲ್ಲಲ್ಲಿ ನಿರ್ಮಿಸಲಾಗಿರುವ ಓವರ್ ಟ್ಯಾಂಕ್, ಚಾಕ್‌ವೆಲ್ ಮತ್ತು ಟ್ರೀಟ್‌ಮೆಂಟ್ ಪ್ಲಾಂಟ್‌ಗಳಿಗೆ ಹೆಚ್ಚುವರಿ ವಿದ್ಯುತ್ ಒದಗಿಸುವಂತೆ ಶಾಸಕರು ಮೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು.ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್ ಮನೋಹರ್, ಜಲಸಿರಿ ಕಾರ್ಯಪಾಲಕ ಇಂಜಿನಿಯರ್ ನರೇಶ್ ಶೆಣೈ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದೇಶ್, ಪ್ರಾಜೆಕ್ಟ್ ಡೈರೆಕ್ಟರ್ ಮಂಜುನಾಥಯ್ಯ, ಟಿಜಿಸ್‌ನ ಟೀಮ್‌ಲೀಡರ್ ಮಾಂತೇಶ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಾದ ರಾಜರಾಮ್, ಎನ್.ಸಿಕ್ವೇರ, ಪ್ರಮೋದ್, ನಗರಸಭೆ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here