ಶೀಘ್ರದಲ್ಲೇ ನಾಮಕರಣ, ಕೋಟಿ ಚೆನ್ನಯರ ಪ್ರತಿಮೆ ಅನಾವರಣ -ಸಂಜೀವ ಮಠಂದೂರು

0

ಪುತ್ತೂರು:‘ತುಳುನಾಡು’ ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವೀರಪುರುಷರಾಗಿರುವ ಕೋಟಿ ಚೆನ್ನಯರು ಜಿಲ್ಲೆಯಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ.ಅವರ ಹೆಸರನ್ನು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಇರಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.ಶೀಘ್ರದಲ್ಲೇ ನಾಮಕರಣ ಸಮಾರಂಭದೊಂದಿಗೆ ಅವಳಿವೀರರ ಪ್ರತಿಮೆ ಮತ್ತು ಇತಿಹಾಸದ ಮಾಹಿತಿಯ ಫಲಕ ಅನಾವರಣ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಸಾರಿಗೆ ಸಚಿವ ಶ್ರೀರಾಮುಲು, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗುವುದು.ಈ ಸಂದರ್ಭದಲ್ಲಿ ಬಸ್ ನಿಲ್ದಾಣದಕ್ಕೆ ನಾಮಫಲಕ ಅಳವಡಿಕೆ, ಅವಳಿ ವೀರರ ಪ್ರತಿಮೆ ಅನಾವರಣ ಮತ್ತು ಕೋಟಿ ಚೆನ್ನಯರ ಸಂಕ್ಷಿಪ್ತ ಇತಿಹಾಸವಿರುವ ಫಲಕ ಅನಾವರಣ ನಡೆಯಲಿದೆ ಎಂದು ಮಠಂದೂರು ಹೇಳಿದರು.

ಕೋಟಿ ಚೆನ್ನಯರು ಪಡುಮಲೆ, ಗೆಜ್ಜೆಗಿರಿ ಭಾಗದಲ್ಲಿ ನೆಲೆ ನಿಂತು ಅಲ್ಲಿಂದ ಈ ನಾಡಿಗೆ ಸಂದೇಶ ನೀಡುವ ಸಂಗತಿ ಮಾಡಿದ್ದಾರೆ.ಅಂತಹ ದೈವಾಂಶ ಪುರುಷರನ್ನು ಇವತ್ತಿನ ಪೀಳಿಗೆಯು ಸ್ಮರಿಸಬೇಕೆಂದು ಹೇಳಿ ಬಿಲ್ಲವ ಸಮಾಜ, ನಾರಾಯಣ ಗುರು ಸಮಿತಿ, ಯುವವಾಹಿನಿ, ಗೆಜ್ಜೆಗಿರಿ ಪ್ರತಿಷ್ಠಾನ, ಪಡುಮಲೆ ಕೋಟಿ ಚೆನ್ನಯ ಪ್ರತಿಷ್ಠಾನದವರು ಸೇರಿ ಸರ್ವಾನುಮತದ ಬೇಡಿಕೆಯಾಗಿ,ಪುತ್ತೂರಿನಲ್ಲಿ ಕೋಟಿ ಚೆನ್ನಯರ ಹೆಸರನ್ನು ಶಾಶ್ವತವನ್ನಾಗಿರಿಸಬೇಕೆಂದು ಮನವಿ ಮಾಡಿದ್ದರು.ಈ ವಿಷಯವನ್ನು ನಾನು ನಗರಸಭೆ ಆಡಳಿತದ ಗಮನಕ್ಕೆ ತಂದಿದ್ದೆ. ನಗರಸಭಾಧ್ಯಕ್ಷ ಜೀವಂಧರ್ ಜೈನ್ ಅವರ ಮುತುವರ್ಜಿಯಿಂದಾಗಿ ನಗರಸಭೆ ಈ ಸಂಬಂಧ ಕೌನ್ಸಿಲ್ ಮೀಟಿಂಗ್‌ನಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದರು.ಅದನ್ನು ನಾನು ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಮತ್ತು ಎಂ.ಡಿ.ಯವರ ಗಮನಕ್ಕೆ ತಂದೆ.ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ನಿರ್ಣಯ ಕೈಗೊಂಡು ಸಾರಿಗೆ ಇಲಾಖೆಗೆ ಕಳುಹಿಸಲಾಯಿತು.ಸಾರಿಗೆ ಸಚಿವರಾದ ಶ್ರೀರಾಮುಲು ಅವರು ನನ್ನ ಮನವಿಗೆ ಸ್ಪಂದಿಸಿ ಇಲಾಖೆಯಿಂದ ಅನುಮತಿ ಕೊಡಿಸಿದ್ದಾರೆ.ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರ ಪ್ರಯತ್ನವೂ ಇದರಲ್ಲಿದೆ.ಇವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದ ಶಾಸಕರು, ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕೋಟಿ ಚೆನ್ನಯರ ಹೆಸರು ಇಡಬೇಕೆಂಬ ಬೇಡಿಕೆಯಿದೆ.ಅದು ಕೂಡ ಆದಷ್ಟು ಬೇಗ ಈಡೇರಲಿ ಎಂದು ಆಗ್ರಹಿಸುತ್ತಿದ್ದೇನೆ ಎಂದರು.

ರೂ.13 ಕೋಟಿ ವೆಚ್ಚದಲ್ಲಿ ಕಬಕ-ವಿಟ್ಲ ರಸ್ತೆ ಕಾಮಗಾರಿ: ಪುತ್ತೂರು,ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಕಬಕ-ವಿಟ್ಲ ಮತ್ತು ಮಂಚಿ ತನಕ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ಕಾಮಗಾರಿ ರೂ.13 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಈ ಹಿಂದೆ ಆ ರಸ್ತೆ ತೀರಾ ಹದೆಗೆಟ್ಟಿತ್ತು.ಆಗ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿತ್ತು.ಟೆಂಡರ್ ಪಡೆದ ಶರೀಫ್ ಕನ್‌ಸ್ಟ್ರಕ್ಷನ್ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು.ಆದರೆ ಅವರು ಕೋರ್ಟ್‌ಗೆ ಹೋದುದರಿಂದ ರಸ್ತೆ ದುರಸ್ತಿ ಕಾರ್ಯ ನಿಂತು ಹೋಗಿತ್ತು.ಇದೀಗ ಮತ್ತೆ ಆ ರಸ್ತೆಗೆ ರೂ.13‌ ಕೋಟಿ ವೆಚ್ಚದಲ್ಲಿ ಅಗಲೀಕರಣ ಮತ್ತು ಡಾಮರೀಕರಣಕ್ಕೆ ಟೆಂಡರ್ ಕರೆಯಲಾಗಿದೆ.ಒಂದು ವಾರದಲ್ಲಿ ಟೆಂಡರ್ ಅಪ್ರೂವಲ್ ಆದ ತಕ್ಷಣ ರಸ್ತೆ ಕಾಮಗಾರಿ ನಡೆಯಲಿದೆ.ಉದಯ ಶೆಟ್ಟಿ ಎಂಬ ಗುತ್ತಿಗೆದಾರರು ಕಾಮಗಾರಿ ವಹಿಸಿಕೊಂಡಿದ್ದಾರೆ.ಕಬಕದಿಂದ ವಿಟ್ಲದ ಮೂಲಕ ಮಂಚಿಯವರೆಗೆ ರಸ್ತೆಯನ್ನು ಹಾಲಿ 5.5 ಮೀಟರ್‌ನಿಂದ 7.5 ಮೀಟರ್‌ಗೆ ಅಗಲೀಕರಣ ಮಾಡಿ ಮರುಡಾಮರೀಕರಣ ಮಾಡಲಾಗುತ್ತದೆ.13 ಕೋಟಿ ರೂ.ವೆಚ್ಚದ ಈ ಯೋಜನೆಯಲ್ಲಿ 7 ಕಿ.ಮೀ. ರಸ್ತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ ಎಂದು ಶಾಸಕರು ತಿಳಿಸಿದರು.ಜೊತೆಗೆ ಪುತ್ತೂರು ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆಗಳ ದುರಸ್ತಿ ಕಾರ್ಯ ಶೀಘ್ರ ನಡೆಯಲಿದೆ ಎಂದವರು ಮಾಹಿತಿ ನೀಡಿದರು.

ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಖಂಡನೀಯ:

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಮಿತ್ರ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆಯೊಡ್ಡಿರುವುದು ಅತ್ಯಂತ ಖಂಡನೀಯ.ಜನರಿಂದಲೇ ಆಯ್ಕೆಯಾಗಿರುವ ಒಬ್ಬ ಜನಪ್ರತಿನಿಽಯ ಮೇಲೆ ಆಗಿರುವ ಈ ಘಟನೆ ನಾಗರಿಕ ಸಮಾಜಕ್ಕೆ ಒಂದು ಕಪ್ಪು ಚುಕ್ಕೆಯಿದ್ದಂತೆ.ಸಂಬಂಧಪಟ್ಟವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.ನಗರಸಭೆ ಅಧ್ಯಕ್ಷ ಕೆ.ಜೀವಂಧರ ಜೈನ್, ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್.ಸಿ.ನಾರಾಯಣ್, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಜಯರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ, ಹಿಂದುಳಿದ ಮೋರ್ಚಾದ ಪುತ್ತೂರು ಮಂಡಲ ಅಧ್ಯಕ್ಷ ಸುನಿಲ್ ದಡ್ಡು, ಕಾರ್ಯದರ್ಶಿ ಹರಿಪ್ರಸಾದ್ ಯಾದವ್,ಗೆಜ್ಜೆಗಿರಿ ಮೂಲಸ್ಥಾನ ಕ್ಷೇತ್ರದ ಗೌರವಾಧ್ಯಕ್ಷರಾಗಿರುವ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ ನಡುಬೈಲ್, ಶಶಿಧರ ಕಿನ್ನಿಮಜಲ್, ಚಂದ್ರಕಾಂತ್ ಶಾಂತಿವನ, ನಾರಾಯಣ ಪೂಜಾರಿ ಕುರಿಕ್ಕಾರ, ಬಾಬು ಪೂಜಾರಿ ಇದ್ಪಾಡಿ, ಜಯರಾಮ ಪೂಜಾರಿ ಒತ್ತೆಮುಂಡೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here