ನೆಟ್ಟಣ: ರೈಲ್ವೇ ನಿಲ್ದಾಣದಲ್ಲಿ ಅವ್ಯವಸ್ಥೆ ಆರೋಪ
ಕಡಬ: ನೆಟ್ಟಣದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಮೇಲ್ಸೇತುವೆ ಸಹಿತ ವಿವಿಧ ರೀತಿಯ ಅವ್ಯವಸ್ಥೆಗಳ ಬಗ್ಗೆ ನಾಗರಿಕರು ಪ್ರತಿಭಟನೆಗೆ ಮುಂದಾದ ಘಟನೆ ಶನಿವಾರ ನಡೆದಿದೆ. ಅಲ್ಲದೆ ರೈಲು ನಿಲ್ದಾಣಕ್ಕೆ ಅಧಿಕೃತ ಭೇಟಿಗೆ ಸಿದ್ಧತೆ ನಡೆಸಿದ್ದ ರೈಲ್ವೇ ಅಧಿಕಾರಿಗಳು ದಿಢೀರ್ ಭೇಟಿ ರದ್ದು ಮಾಡಿದ ಘಟನೆಯೂ ನಡೆದಿದೆ.
ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಮೂಲಭೂತ ಕೊರತೆಗಳಿಂದಾಗಿ ಆಗಾಗ ಅಹಿತಕರ ಘಟನೆಗಳು ಸಂಭವಿಸುತ್ತಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸೌಲಭ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು ಹಾಸನ-ಮಂಗಳೂರು ಸರಕು ಸಾಗಣೆ ಕಾರ್ಪೊರೇಶನ್ ಗೆ ತಕ್ಕಷ್ಟೇ ಕರ್ತವ್ಯ ಮತ್ತು ಸೌಲಭ್ಯ ನಿರ್ವಹಿಸುತ್ತಿದ್ದಾರೆ ಎಂದು ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣ ಬಳಕೆದಾರರ ವೇದಿಕೆ ಆರೋಪಿಸಿದೆ.
ಸುಬ್ರಹ್ಮಣ್ಯ ರೈಲು ನಿಲ್ದಾಣಕ್ಕೆ ಶನಿವಾರ ದೆಹಲಿಯ ರೈಲ್ವೇ ಸುರಕ್ಷತಾ ಅಧಿಕಾರಿಗಳು ಭೇಟಿ ನೀಡಲಿದ್ದರು. ಇತ್ತೀಚೆಗೆ ಇಲ್ಲಿನ ನಿಲ್ದಾಣದಲ್ಲಿ ರೈಲಿನಿಂದ ಇಳಿದು ಹಳಿ ದಾಟುವ ವೇಳೆ ವ್ಯಕ್ತಿಯೊಬ್ಬರಿಗೆ ರೈಲು ಎಂಜಿನ್ ಬಡಿದು ಕಾಲು ಮುರಿತಕ್ಕೊಳಗಾಗಿದ್ದರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ರೈಲ್ವೇ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಆದರೆ ಅಧಿಕಾರಿಗಳು ನೆಟ್ಟಣಕ್ಕೆ ಬಾರದೇ ಸಕಲೇಶಪುರ ದಿಂದ ಹಿಂದಿರುಗಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ರೈಲ್ವೇ ಅವಘಡಕ್ಕೊಳಗಾಗಿರುವ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಹಾಗೂ ಸ್ಥಗಿತಗೊಂಡಿದ್ದ ಮೇಲ್ಸೇತುವೆ ಕಾಮಗಾರಿ ಕೂಡಲೇ ಆರಂಭಿಸಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸ್ಟೇಷನ್ ಮಾಸ್ಟರ್ ಮೂಲಕ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲಾಯಿತು. ನೀತಿ ತಂಡ ನೆಟ್ಟಣದ ಅಧ್ಯಕ್ಷ ಪ್ರಸಾದ್ ಕೆ.ಜಿ., ಸಾಮಾಜಿಕ ಕಾರ್ಯಕರ್ತರಾದ ರದೀಶ್, ಸಜಿತ್, ಜಾಫರ್, ಕಿಶೋರ್, ರಮೇಶ್, ಪ್ರದೀಶ್, ಧನಂಜಯ ಮೆರುಂಜಿ, ಗೋವಿಂದ, ರೋಹಿತ್ ಅಂತಿಬೆಟ್ಟು, ರೈಲ್ವೆ ನಿವೃತ್ತ ಅಧಿಕಾರಿ ಪೂವಪ್ಪ ಗೌಡ ಐತ್ತೂರು, ಗಾಯಾಳು ನಾಗಣ್ಣ ಗೌಡರ ಪತ್ನಿ ಮೋಹಿನಿ, ಸಹೋದರರಾದ ಆನಂದ, ಸತೀಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.