ಬೆಂಗಳೂರಿನ ಸಿಬಿಐ ಮತ್ತು ಜಾರಿ ನಿರ್ದೆಶನಾಲಯದ 48ನೇ ವಿಶೇಷ ನ್ಯಾಯಾಲಯದ ತೀರ್ಪು
ಅ.18ರಂದು ಆರೋಪಿಗೆ ಶಿಕ್ಷೆಯ ಪ್ರಮಾಣ ಪ್ರಕಟ
ಬೆಂಗಳೂರು: ಅಕ್ರಮ ಹಣ ತಡೆ ಕಾಯ್ದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2015ರಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಆರೋಪಿ, ಅರಣ್ಯ ಇಲಾಖೆಯ ಅಸಿಸ್ಟೆಂಟ್ ಮ್ಯಾನೇಜರ್ ಹಾಸನದ ಶಾಂತಕುಮಾರ್ ಅವರ ಅಪರಾಧ ಸಾಬೀತಾಗಿದ್ದು, ಅಕ್ರಮ ಹಣ ತಡೆ ಕಾಯ್ದೆಯನ್ವಯ ದೋಷಿ ಎಂದು ಬೆಂಗಳೂರಿನ ಸಿಬಿಐ ಮತ್ತು ಜಾರಿ ನಿರ್ದೆಶನಾಲಯದ 48ನೇ ವಿಶೇಷ ನ್ಯಾಯಾಲಯವು ಅ.17ರಂದು ತೀರ್ಪು ನೀಡಿದೆ.
ಹಾಸನದಲ್ಲಿ ಅರಣ್ಯ ಇಲಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯಲ್ಲಿದ್ದ ಶಾಂತಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2015ರಲ್ಲಿ ಲೋಕಾಯುಕ್ತ ಅಧಿಕಾರಿಗಳು ಶಾಂತಕುಮಾರ್ ಕಚೇರಿಗೆ ದಾಳಿ ನಡೆಸಿದ್ದರು. ಈ ವೇಳೆ ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆಯು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತದ ಜೊತೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಪ್ರಕರಣ ದಾಖಲಿಸಿಕೊಂಡಿದ್ದರು. ಅಕ್ರಮ ಹಣ ಗಳಿಕೆಯ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟನ್ನು ಕೂಡ ಸಲ್ಲಿಕೆ ಮಾಡಿತ್ತು.
2015ರಲ್ಲಿ ಸಲ್ಲಿಕೆಯಾಗಿದ್ದ ಆರೋಪಿಯ ವಿರುದ್ಧದ ದೋಷಾರೋಪಣಾ ಪತ್ರ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ವಾದವನ್ನು ಪರಿಗಣಿಸಿದ ಬೆಂಗಳೂರಿನ ಸಿಬಿಐ ಮತ್ತು ಜಾರಿ ನಿರ್ದೆಶನಾಲಯದ 48ನೇ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಇ.ಚಂದ್ರಕಲಾ ಅವರು ಆರೋಪಿಯು ಅಕ್ರಮ ಹಣ ತಡೆ ಕಾಯ್ದೆಯಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಅವಧಿಯನ್ನು ಅ.18ರಂದು ನ್ಯಾಯಾಲಯವು ಪ್ರಕಟಿಸಲಿದೆ.
ಜಾರಿ ನಿರ್ದೇಶನಾಲಯದ ಪರವಾಗಿ ಕೇಂದ್ರ ಸರಕಾರದ ಹಿರಿಯ ವಕೀಲರು ಮತ್ತು ವಿಶೇಷ ಅಭಿಯೋಜಕರಾದ ರಾಜೇಶ್ ರೈ ಕಲ್ಲಂಗಳರವರು ವಾದಿಸಿದ್ದರು.