150 ವಿದ್ಯಾರ್ಥಿಗಳಿಗೆ ಬ್ಯಾಗ್, ಶಬ್ದಕೋಶ, ಅಡುಗೆ ಸಿಬ್ಬಂದಿ, ಪೋಷಕರಿಗೆ ವಸ್ತ್ರ, ಬೆಡ್‌ಶೀಟ್ ವಿತರಣೆ
ತಾಯಿಯ ಹೆಸರಲ್ಲಿ ದಾನ,ಧರ್ಮ ಮಾಡುವುದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ: ಶ್ಯಾಮ್‌ಸುಂದರ್ ರೈ
ಪುತ್ತೂರು: ತನ್ನ ಎಲ್ಲಾ ಸುಖ,ಸಂತೋಷಗಳನ್ನು ತ್ಯಾಗ ಮಾಡಿ ಮಕ್ಕಳ ಬೆಳವಣಿಗೆಗಾಗಿ ಶ್ರಮಿಸುವ ತಾಯಿ ಓರ್ವ ತ್ಯಾಗಮಯಿ, ಆದರ್ಶಮಯಿಯಾಗಿದ್ದಾಳೆ. ಆ ತಾಯಿಯ ಹೆಸರಲ್ಲಿ ಮಾಡುವ ದಾನ, ಧರ್ಮಕ್ಕಿಂತ ಶ್ರೇಷ್ಠವಾದದ್ದು, ಪುಣ್ಯದ ಕೆಲಸ ಬೇರೊಂದಿಲ್ಲ, ತಂದೆ, ತಾಯಿಯ ಸ್ಮರಣೆ ಮಾಡಿದರೆ ಪುಣ್ಯ ಬರುತ್ತದೆ ಅದನ್ನು ಪುತ್ತೂರಿನ ಮುತ್ತು ಮಹೇಶ್ ಗೌಡ ದಂಡಿನಮಜಲುರವರು ಮಾಡಿದ್ದಾರೆ ಎಂದು ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೆರೆಮೂಲೆಯವರು ಹೇಳಿದರು.
ಅವರು ಸ್ವಾಮಿ ವಿವೇಕಾನಂದ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ದಿವಂಗತ ನೀಲಮ್ಮ ದುಗ್ಗಪ್ಪ ಗೌಡ ದಂಡಿನಮನೆ ಇವರ 50 ನೇ ವರ್ಷದ ಪುಣ್ಯ ಸ್ಮರಣಾ ದಿನದ ಅಂಗವಾಗಿ ಸ.ಹಿ.ಪ್ರಾ.ಶಾಲೆ ಪೆರ್ಲಂಪಾಡಿ ಮತ್ತು ಷಣ್ಮುಖದೇವ ಪ್ರೌಢ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್ ಮತ್ತು ಶಬ್ದಕೋಶ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಅ.17 ರಂದು ಪೆರ್ಲಂಪಾಡಿ ಶಾಲಾ ದಿ.ಕೆಮ್ಮಾರ ಬಾಲಕೃಷ್ಣ ಗೌಡ ವೇದಿಕೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಹೇಶ್ ಗೌಡರವರು ಬೆಂಗಳೂರಿನಲ್ಲಿ ಓರ್ವ ಉದ್ಯಮಿಯಾಗಿದ್ದು ತಾನು ಗಳಿಸಿದ್ದರಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಪೆರ್ಲಂಪಾಡಿ ಸರಕಾರಿ ಶಾಲೆ ಮತ್ತು ಷಣ್ಮುಖದೇವ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಡಿಕ್ಷನರಿಯನ್ನು ನೀಡಿದ್ದು ಇದರು ಉತ್ತಮ ಕೆಲಸವಾಗಿದೆ ಎಂದ ಶ್ಯಾಮ್‌ಸುಂದರ್ ರೈಯವರು, ಮಹೇಶ್ ಗೌಡರಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ತನ್ನೂರಿಗೆ ಮಾಡುವ ಸೇವೆಗಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ: ಕಾವು ಹೇಮನಾಥ ಶೆಟ್ಟಿ
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ನಾನು ಕಲಿತ ಶಾಲೆ, ತನ್ನೂರು ಎಂಬ ನೆಲೆಯಲ್ಲಿ ಮಹೇಶ್ ಗೌಡರವರು ತನ್ನೂರಿಗೆ ಸೇವೆ ಮಾಡಲು ಹೊರಟಿದ್ದಾರೆ ಇದು ಉತ್ತಮ ಕಾರ್ಯವಾಗಿದೆ. ತನ್ನೂರಿಗೆ ಸೇವೆ ಮಾಡುವ ಭಾಗ್ಯ ಮಹೇಶ್ ಗೌಡರಿಗೆ ಸಿಕ್ಕಿದ್ದು ಇದಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ ಎಂದರು. ಸಮಾಜದಲ್ಲಿ ಬೇಕಾದಷ್ಟು ಶ್ರೀಮಂತರು ಇದ್ದಾರೆ, ಶ್ರೀಮಂತರು ಸಮಾಜಕ್ಕೆ ಸಹಾಯ, ಸೇವೆ ಮಾಡಬೇಕು ಎಂಬ ನಿಯಮ ಕಾನೂನುಗಳಿಲ್ಲ ಆದರೆ ಎಲ್ಲಾ ಶ್ರೀಮಂತರಿಗೆ ಸಮಾಜ ಸೇವೆ ಮಾಡುವ ಯೋಗ,ಭಾಗ್ಯ ಸಿಗೋದಿಲ್ಲ ಆದರೆ ತಾನು ಗಳಿಸಿದ್ದರಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಮನಾಥ ಶೆಟ್ಟಿ ಹೇಳಿದರು. ಮಹೇಶ್ ಗೌಡರವರು ತನ್ನ ತಾಯಿಯ ಹೆಸರಿನಲ್ಲಿ ಮಾಡುತ್ತಿರುವ ಸೇವಾ ಮನೋಭಾವದ ಬಗ್ಗೆ ಮಾತನಾಡಿದ ಶೆಟ್ಟಿಯವರು, ಪೆರ್ಲಂಪಾಡಿ ಶಾಲೆಯನ್ನು ಮಹೇಶ್ ಗೌಡರವರು ಯಾಕೆ ದತ್ತು ತೆಗೆದುಕೊಳ್ಳಬಾರದು ಎಂಬ ವಿಷಯವನ್ನು ಮುಂದಿಟ್ಟರು, ಮುಂದಿನ ದಿನಗಳಲ್ಲಿ ತನ್ನೂರಿಗೆ ತನ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸೇವೆಯನ್ನು ಮಾಡುವಲ್ಲಿ ದೇವರು ಅವರಿಗೆ ಶಕ್ತಿಯನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.
ರಾಷ್ಟ್ರಮಟ್ಟದಲ್ಲಿ ರಾಜಕೀಯ ಪಕ್ಷ ಕಟ್ಟಿದವರು
ಪುತ್ತೂರಿನ ಮುತ್ತು ಮಹೇಶ್ ಗೌಡರವರು ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ ಸೇರಿದಂತೆ ರಾಜಕೀಯ ಕ್ಷೇತ್ರದಲ್ಲೂ ಬಹಳಷ್ಟು ಸಾಧನೆ ಮಾಡಿದವರು. ಪ್ರಜ್ಞಾವಂತ ಜನತಾ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಕಟ್ಟಿ ಬೆಳೆಸಿದರು. ಇದರ ಸಂಸ್ಥಾಪಕ ಅಧ್ಯಕ್ಷರಾಗಿ ರಾಜಕೀಯ ರಂಗದಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಕಾವು ಹೇಮನಾಥ ಶೆಟ್ಟಿಯವರು ಈ ಸಂದರ್ಭದಲ್ಲಿ ಹೇಳಿದರು.
ಇದೊಂದು ದೇವತಾ ಕಾರ್ಯವಾಗಿದೆ: ಶ್ರೀಧರ ಪೂಜಾರಿ
ಪೆರ್ಲಂಪಾಡಿ ಹಾಲು ಉತ್ಪಾದರಕ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಪೂಜಾರಿಯವರು ಮಾತನಾಡಿ, ಪೆರ್ಲಂಪಾಡಿ ಸರಕಾರಿ ಶಾಲೆ ಮತ್ತು ಷಣ್ಮುಖದೇವಾ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ಶಬ್ದಕೋಶ ವಿತರಣೆ ಮಾಡಿರುವ ಈ ಕೆಲಸ ದೇವತಾ ಕಾರ್ಯವಾಗಿದೆ. ಮಕ್ಕಳಿಗೆ ಮಾಡುವ ದಾನವೂ ದೇವರಿಗೆ ಮಾಡುವ ದಾನದಷ್ಟೇ ಶ್ರೇಷ್ಠವಾಗಿದೆ ಎಂದ ಅವರು, ಪೆರ್ಲಂಪಾಡಿ ಶಾಲೆಗೆ ಭೋಜನ ಶಾಲೆಯ ಅವಶ್ಯಕತೆ ಇದ್ದು ಈ ಬಗ್ಗೆ ಮಹೇಶ್ ಗೌಡರಿಂದ ತಮ್ಮ ತಾಯಿಯ ನೆನಪಲ್ಲಿ ಏನಾದರೂ ಸಹಾಯ ಮಾಡುವಂತೆ ಕೇಳಿಕೊಂಡು ಶುಭ ಹಾರೈಸಿದರು.
ಮಾತೆ ಎನ್ನುವ ಶಬ್ದಕ್ಕೆ ಗೌರವ ಕೊಡುವ ಕೆಲಸ ಆಗಿದೆ: ಕುಂಟಿಕಾನ ಲಕ್ಷ್ಮಣ ಗೌಡ
ಸಭಾಧ್ಯಕ್ಷತೆ ವಹಿಸಿದ್ದ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯ ಅಧ್ಯಕ್ಷ ಕೆ.ಆರ್.ಲಕ್ಷ್ಮಣ ಗೌಡ ಕುಂಟಿಕಾನರವರು ಮಾತನಾಡಿ, ಸಾಮಾಜಿಕ, ಧಾರ್ಮಿಕ, ಸಾರ್ವಜನಿಕ,ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಹೇಶ್ ಗೌಡರವರು ತನ್ನೂರಿನ ಶಾಲಾ ಮಕ್ಕಳಿಗೆ, ಅಂಗನವಾಡಿ ಸಹಾಯಕಿಯರಿಗೆ,ಅಡುಗೆ ಸಿಬ್ಬಂದಿಗಳಿಗೆ ತನ್ನ ತಾಯಿಯ ಹೆಸರಿನಲ್ಲಿ ದಾನ ಮಾಡುವ ಕೆಲಸವನ್ನು ಮಾಡಿದ್ದಾರೆ ಆ ಮೂಲಕ ಮಾತೆ ಎನ್ನುವ ಶಬ್ದಕ್ಕೆ ಗೌರವ ಕೊಡುವ ಕೆಲಸ ಮಹೇಶ್ ಗೌಡರಿಂದ ಆಗಿದೆ. ಇದೊಂದು ಸಮಾಜಕ್ಕೆ ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಗೌರವಾರ್ಪಣೆ
ದಿ.ನೀಲಮ್ಮ ದುಗ್ಗಪ್ಪ ಗೌಡರವರ ಭಾವಚಿತ್ರಕ್ಕೆ ಅತಿಥಿಗಳಿಂದ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ದಿ.ನೀಲಮ್ಮ ದುಗ್ಗಪ್ಪ ಗೌಡ ದಂಡಿನಮನೆ ಕುಟುಂಬಸ್ಥರಿಗೆ ವಿಶೇಷ ಗೌರವಾರ್ಪಣೆ ಈ ಸಂದರ್ಭದಲ್ಲಿ ನಡೆಯಿತು. ದುಗ್ಗಪ್ಪ ಗೌಡರವರ ಸಹೋದರ, ಸಹೋದರಿಯರಿಗೆ ಅವರು ಕುಟುಂಬಸ್ಥರಿಗೆ ಹಾಗೂ ನೀಲಮ್ಮರವರ ಕುಟುಂಬಸ್ಥರಿಗೆ, ಮಹೇಶ್ ಗೌಡರವರ ಸಹೋದರ, ಸಹೋದರಿಯರಿಗೆ ಈ ಸಂದರ್ಭದಲ್ಲಿ ಶಾಲು,ಸ್ಮರಣಿಕೆ,ಹಾರ ಹಾಗೂ ನೀಲಮ್ಮ ದುಗ್ಗಪ್ಪ ಗೌಡರ ಫೋಟೋ ನೀಡಿ ಗೌರವಿಸಲಾಯಿತು.
ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢಶಾಲಾ ಸಂಚಾಲಕ ಗಣೇಶ್ ಭಟ್ ಮಾಪಲಮಜಲು, ಪೆರ್ಲಂಪಾಡಿ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಪೆರ್ಲಂಪಾಡಿ ಸ.ಹಿ.ಪ್ರಾ.ಶಾಲಾ ಮುಖ್ಯಗುರು ಲೀಲಾವತಿ, ಶ್ರೀ ಷಣ್ಮುಖದೇವ ಪ್ರೌಢಶಾಲಾ ಮುಖ್ಯಗುರು ಕೃಷ್ಣವೇಣಿಯವರುಗಳು ಸಂದರ್ಭೋಚಿತವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಮಹೇಶ್ ಗೌಡರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಹೇಶ್ ಗೌಡರವರ ಸಹೋದರ ಕೈಗಾರಿಕಾ ಉದ್ಯಮಿ ಸುರೇಶ್ ಗೌಡರವರು ಅತಿಥಿಗಳಿಗೆ ಶಾಲು,ಸ್ಮರಣಿಕೆ,ಹಾರ ಹಾಕಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸತ್ಯಾನಂದ ಬರಡಿಮಜಲು ವಂದಿಸಿದರು. ಸತೀಶ್ ಪಾಂಬಾರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ದಿ.ನೀಲಮ್ಮ ದುಗ್ಗಪ್ಪ ಗೌಡರವರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
150 ವಿದ್ಯಾರ್ಥಿಗಳಿಗೆ ಬ್ಯಾಗ್, ಶಬ್ದಕೋಶ ವಿತರಣೆ
ಮಹೇಶ್ ಗೌಡರವರು ತನ್ನ ತಾಯಿಯ ನೆನಪಲ್ಲಿ ಪೆರ್ಲಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಷಣ್ಮುಖದೇವ ಪ್ರೌಢ ಶಾಲೆಯ ಒಟ್ಟು 150 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಶಬ್ದಕೋಶ (ಡಿಕ್ಷನರಿ)ವನ್ನು ವಿತರಿಸಲಾಯಿತು.
ವಸ್ತ್ರ, ಬೆಡ್‌ಶೀಟ್ ವಿತರಣೆ
ಶಾಲಾ ಅಡುಗೆ ಸಿಬ್ಬಂದಿಗಳಿಗೆ, ಅಂಗನವಾಡಿ ಸಹಾಯಕಿಯರಿಗೆ, ಮಕ್ಕಳ ಪೋಷಕರಿಗೆ ವಸ್ತ್ರ ವಿತರಣೆ ಮಾಡಲಾಯಿತು ಹಾಗೂ ಬಡವರಿಗೆ ಬೆಡ್‌ಶೀಟ್ ವಿತರಣೆ ಮಾಡಲಾಯಿತು.
“ ನಮ್ಮ ದಂಡಿನಮಜಲು ಮನೆಯ ಜಾಗಕ್ಕೆ ಒಂದು ವಿಶೇಷತೆ ಇದ್ದು ಇದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ದಂಡು ಕಟ್ಟಿದ ಜಾಗವಾಗಿದೆ. ತಾಯಿಯ ಹೆಸರಿನಲ್ಲಿ ಪ್ರತಿವರ್ಷ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಯಾವುದೇ ಜಾತಿ,ಮತದ ಭೇದ ಭಾವ ಇಲ್ಲದೆ ಹಿಂದೂ,ಮುಸ್ಲೀಂ,ಕ್ರೈಸ್ತ ಧರ್ಮದವರಿಗೆ ಧಾರ್ಮಿಕ ಯಾತ್ರೆಗಳನ್ನು ಮಾಡುತ್ತಿದ್ದೇನೆ. ಮಹಿಳೆಯರಿಗೆ ಬಾಗಿನ ಕೊಡುವ ಕೆಲಸ, ಹಿರಿಯರಿಗೆ ಪುಣ್ಯ ಕ್ಷೇತ್ರಗಳ ದರ್ಶನ ಹಾಗೇ ಶಾಲಾ ವಿದ್ಯಾರ್ಥಿಗಳಿಗೆ ತನ್ನಿಂದ ಸಾಧ್ಯವಾಗುವ ಸಹಾಯವನ್ನು ಮಾಡುತ್ತಿದ್ದೇನೆ. ಊರಿನ ಹಾಗೂ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ತಾಯಿಯ ಹೆಸರಿನಲ್ಲಿ ಗಂಟೆಮಿಷನ್ ನೀಡಿದ್ದೇನೆ. ಹೆತ್ತವರನ್ನು ಸ್ಮರಿಸುವ ಮೂಲಕ ಅವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ,ಸಹಕಾರ ಇರಲಿ.”
– ಮಹೇಶ್ ಗೌಡ, ದಂಡಿನಮನೆ, ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ