ಸ್ವಚ್ಛವಾಹಿನಿ ವಾಹನದ ಅನಧಿಕೃತ ಬಳಕೆ: ಪಿಡಿಓ ವಿರುದ್ಧ ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷರಿಂದ ದೂರು

0

ಪುತ್ತೂರು: ‘ಸ್ವಚ್ಛ ವಾಹಿನಿ’ ವಾಹನವನ್ನು ಅನಧಿಕೃತವಾಗಿ ಬಳಕೆ ಮಾಡಿ ಸರಕಾರಿ ಸೊತ್ತನ್ನು ದುರ್ಬಳಕೆ ಮಾಡಿಕೊಂಡಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋಡಿಂಬಾಡಿ ಗ್ರಾಮ‌ ಪಂಚಾಯತ್ ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರ ಅವರು ಶಾಸಕ ಸಂಜೀವ ಮಠಂದೂರು ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿಯವರಿಗೆ ದೂರು ನೀಡಿದ್ದಾರೆ.
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ಸಂಗ್ರಹಣೆಗಾಗಿ ಇರುವ ‘ಸ್ವಚ್ಛ ವಾಹಿನಿ’ ವಾಹನವನ್ನು ಪಿಡಿಓ ರೋಹಿತಾಶ್ವರವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧ್ಯಕ್ಷನಾದ ನನ್ನ ಗಮನಕ್ಕೆ ತಾರದೆ ತ್ಯಾಜ್ಯ ಸಂಗ್ರಹಣೆಗೆ ಚಾಲನೆ ನೀಡಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣವಾಗಿಲ್ಲ. ಘಟಕ ನಿರ್ಮಾಣ ಆದ ಬಳಿಕ ಸ್ವಚ್ಛವಾಹಿನಿ ವಾಹನವನ್ನು ಬಳಸಬೇಕಿತ್ತು. ಆದರೆ, ಪಿಡಿಓರವರು ಯಾವುದೇ ಅನುಮತಿ ಪಡೆಯದೆ, ತ್ಯಾಜ್ಯ ಸಂಗ್ರಹ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಮೊದಲೇ ಸರಕಾರಿ ಸೊತ್ತನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾ.ಪಂ.ಸದಸ್ಯ ಜಯಪ್ರಕಾಶ್ ಬದಿನಾರು ಅವರು ಪಿಡಿಓ ಜತೆ ಸೇರಿ ಅವರ ವಾರ್ಡಲ್ಲಿ ಒಣಕಸ ಸಂಗ್ರಹಕ್ಕೆ ಚಾಲನೆ ಮಾಡಲಾಗಿದೆ ಎಂದು ಬಿಟ್ಟಿ ಪ್ರಚಾರ ಪಡೆದುಕೊಳ್ಳಲಾಗಿದೆ. ಆದ್ದರಿಂದ ಕಾನೂನು ಬಾಹಿರವಾಗಿ ಗ್ರಾ.ಪಂ.ಸದಸ್ಯರಿಗೆ ವಾಹನ ಚಲಾಯಿಸಲು ಅವಕಾಶ ಕಲ್ಪಿಸಿದ್ದಲ್ಲದೆ ನಿಯಮ ಉಲ್ಲಂಘಿಸಿರುವ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here