ಕಬಕ-ವಿಟ್ಲ ರಸ್ತೆ ದುರಸ್ತಿಗಾಗ್ರಹಿಸಿ ಕಬಕದಲ್ಲಿ ಕಾಂಗ್ರೆಸ್ ಪ್ರತಿಭಟನೆ

0

  • ನಾನು ಮಂಜೂರುಗೊಳಿಸಿದ್ದ ಕಾಮಗಾರಿಗಳನ್ನು ಮತ್ತೆ ಶಾಸಕಿಯಾಗಿ ಪೂರ್ಣಗೊಳಿಸುತ್ತೇನೆ-ಶಕುಂತಳಾ ಶೆಟ್ಟಿ
  • ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಏನು ಅಭಿವೃದ್ಧಿಯಾಗಿದೆ-ರಮಾನಾಥ ರೈ
  • ಬಿಜೆಪಿಯನ್ನು ಕಿತ್ತೊಗೆಯಲು ಜನ ಸಂಕಲ್ಪ-ಡಾ.ರಾಜಾರಾಮ್ ಕೆ.ಬಿ.
  • ಬಿಜೆಪಿ ಆಡಳಿತದಿಂದ ದೇಶ ದರಿದ್ರ ಸ್ಥಿತಿಗೆ-ದಿವ್ಯಪ್ರಭಾ ಚಿಲ್ತಡ್ಕ
  • ಶಾಸಕರು, ಸಂಸದರಿಗೆ ನಮ್ಮ ಕೂಗು ಕೇಳುವುದಿಲ್ಲ-ಎಂ.ಎಸ್.ಮಹಮ್ಮದ್

ಪುತ್ತೂರು:ನಾನು ಇದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿ, ಗೆದ್ದು ಶಾಸಕಿಯಾಗಿ ಹಿಂದಿನ ಅವಧಿಯಲ್ಲಿ ಮಂಜೂರುಗೊಳಿಸಿದ್ದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ತೋರಿಸಿಕೊಡುವುದಾಗಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದ್ದಾರೆ.

ಕಬಕ-ವಿಟ್ಲ ರಸ್ತೆ ದುರಸ್ತಿಗೆ ಆಗ್ರಹಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮತ್ತು ಕಬಕ ವಲಯ ಕಾಂಗ್ರೆಸ್‌ನ ಆಶ್ರಯದಲ್ಲಿ ಅ.18ರಂದು ಸಂಜೆ ಕಬಕದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಳೆದ ಅವಧಿಯಲ್ಲಿ ನಾನು ಮೆಡಿಕಲ್ ಕಾಲೇಜಿಗೆ 40 ಎಕ್ರೆ ಜಮೀನು ನೀಡಿದ್ದರೂ ಈಗಿನ ಶಾಸಕರು ಮೆಡಿಕಲ್ ಕಾಲೇಜು ಮಾಡುವ ಬದಲು ಮೀನು ವ್ಯಾಪಾರಕ್ಕೆ ಮುಂದಾಗಿದ್ದರು.ಇದಕ್ಕೆ ಎಲ್ಲಾ ವೈದ್ಯರುಗಳ ವಿರೋಧದಿಂದಾಗಿ ಕೈ ಬಿಟ್ಟಿದ್ದು ಜಾಗ ಉಳಿದಿದೆ. ಶಾಸಕಿಯಾಗಿ ನನ್ನ ಪ್ರಥಮ ಅವಧಿಯಲ್ಲಿ ದ.ಕ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಪುತ್ತೂರಿಗೆ ಮಿನಿ ವಿಧಾನ ಸೌಧ ಮಂಜೂರುಗೊಳಿಸಿರುವುದಲ್ಲದೆ ನಂತರದ ನನ್ನ ಅವಧಿಯಲ್ಲಿಯೇ ಅದು ಪೂರ್ಣಗೊಂಡಿದೆ. ಕಳೆದ ಅವಧಿಯಲ್ಲಿ ನಾನು ಮಹಿಳಾ ಪದವಿ ಕಾಲೇಜಿಗೆ ರೂ.7 ಕೋಟಿ ಮಂಜೂರುಗೊಳಿಸಿದ್ದು ಅದಕ್ಕೆ ಇನ್ನೂ ಕಲ್ಲು ಹಾಕುವ ಕೆಲಸವಾಗಿಲ್ಲ.ಕ್ರೀಡಾಂಗಣಕ್ಕೆ ರೂ.14 ಕೋಟಿ ಮಂಜೂರಾಗಿದ್ದು ಅದರಲ್ಲಿ ರೂ.3 ಕೋಟಿ ಬಿಡುಗಡೆಯಾಗಿ ಮೂರು ವರ್ಷಗಳಿಂದ ಕೊಳೆಯುತ್ತಿದೆ.ಮಕ್ಕಳಿಗೆ ಸಿಂಥೆಟಿಕ್ ಟ್ರಾಕ್ ಒದಗಿಸುವ ಯೋಗ್ಯತೆ ಇವರಿಗಿಲ್ಲ ಎಂದು ಹೇಳಿದ ಶಕುಂತಳಾ ಶೆಟ್ಟಿಯವರು, ನಾನು ಮತ್ತೆ ಶಾಸಕಿಯಾಗಿ ಈ ಹಿಂದೆ ನಾನು ಮಂಜೂರುಗೊಳಿಸಿದ್ದ ಮಹಿಳಾ ಪದವಿ ಕಾಲೇಜು, ತಾಲೂಕು ಕ್ರೀಡಾಂಗಣ, ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರಲ್ಲದೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಆಡಳಿತಕ್ಕೆ ಬಂದು ಜನ ಸಾಮಾನ್ಯರಿಗೆ ಬದುಕು ನೀಡುವ ಕೆಲಸವಾಗಲಿದೆ ಎಂದರು.

ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಏನು ಅಭಿವೃದ್ಧಿಯಾಗಿದೆ-ರಮಾನಾಥ ರೈ:

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಜೆಪಿಯವರು ಆಡಳಿತಕ್ಕೆ ಬಂದ ಬಳಿಕ ಯಾವುದು ಅಭಿವೃದ್ಧಿಯಾಗಿದೆ ಎಂಬುದನ್ನು ಪ್ರಶ್ನಿಸುವಂತಾಗಿದೆ.ಪ್ರಮುಖ ಅಭಿವೃದ್ಧಿ ಕೆಲಸಗಳು ಕಾಣುತ್ತಿಲ್ಲ.ಶಾಲಾ ಕೊಠಡಿ ಮಾಡಿಲ್ಲ. ಸಣ್ಣಪುಟ್ಟ ರಸ್ತೆಗಳನ್ನು ಮಾತ್ರ ಮಾಡುತ್ತಾರೆ.ಕಮಿಷನ್ ನುಂಗುವ ಉದ್ದೇಶಕ್ಕೆ ಕಾಮಗಾರಿಗಳನ್ನು ಕೆಆರ್‌ಡಿಸಿಎಲ್‌ಗೆ ನೀಡುತ್ತಾರೆ.ಅಲ್ಲಿ ಶಾಸಕರೇ ಗುತ್ತಿಗೆದಾರರನ್ನು ಕರೆದುಕೊಂಡು ಹೋಗಿ ಪರ್ಸಂಟೇಜ್ ಪಡೆದು ಟೆಂಡರ್ ಮಾಡದೇ ನೇರವಾಗಿ ಗುತ್ತಿಗೆ ನೀಡಲಾಗುತ್ತದೆ.ಇದರಿಂದ ಸುಲಭವಾಗಿ ತಿನ್ನಲು ಸಹಕಾರಿಯಾಗುತ್ತದೆ. ಯಾವ ಯೋಜನೆಯಿಂದ ಆಗಿದೆ ಎಂಬ ಮಾಹಿತಿಯಿರುವುದಿಲ್ಲ ಎಂದರು. ಕಬಕ-ವಿಟ್ಲ ರಸ್ತೆಯನ್ನು ಕೂಡಲೇ ಸರ್ವಋತು ರಸ್ತೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ ಅವರು, ಸಿದ್ದರಾಮಯ್ಯರ ಸರಕಾರ, ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಶೇ.99 ರಷ್ಟು ಪೂರ್ಣಗೊಳಿಸಿದೆ. ಆದರೆ ಬಿಜೆಪಿಯವರು ಪ್ರಣಾಳಿಕೆಯಲ್ಲಿ ನೀಡಿದ ಶೇ.10ರಷ್ಟು ಮಾತ್ರ ಮಾಡಿ ಉಳಿದ ಆಶ್ವಾಸನೆಗಳು ಬಾಕಿಯಿದೆ ಎಂದು ಹೇಳಿದರು.

ಬಿಜೆಪಿಯನ್ನು ಕಿತ್ತೊಗೆಯಲು ಜನ ಸಂಕಲ್ಪ-ಡಾ.ರಾಜಾರಾಮ್ ಕೆ.ಬಿ.:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ ಮಾತನಾಡಿ, ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕ್ ಹಣ ತಂದು ಹಂಚುತ್ತೇವೆ, ಚಿನ್ನದ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯವರು ಕನಿಷ್ಠ ರಸ್ತೆ ಗುಂಡಿ ಮುಚ್ಚುವ ಕೆಲಸವಾದರೂ ಮಾಡಲಿ.ಕೆಸರು ಮಯವಾಗಿರುವುದೇ ಇವರ ಚಿನ್ನದ ರಸ್ತೆ.ಇದು ಬಿಜೆಪಿಯವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಬಿಜೆಪಿಯವರು ಜಾತಿ, ಧರ್ಮದ ಆಧಾರದಲ್ಲಿ ಒಡೆದು ದೇಶವನ್ನು ವಿಭಜನೆ ಮಾಡಲು ಮುಂದಾಗಿದ್ದಾರೆ.ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಪ್ರತಿಯಾಗಿ ಬಿಜೆಪಿಯವರು ಜನ ಸಂಕಲ್ಪ ಯಾತ್ರೆ ಆರಂಭಿಸಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ಜನತೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಆಡಳಿತದಿಂದ ದೇಶ ದರಿದ್ರ ಸ್ಥಿತಿಗೆ-ದಿವ್ಯಪ್ರಭಾ ಚಿಲ್ತಡ್ಕ:

ಭಾರತ್ ಜೋಡೋ ಯಾತ್ರೆ ಸಂಯೋಜಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ಪ್ರತಿಭಟನೆಗಳು ನಡೆಯುತ್ತಲೇ ಇದೆ.ಹಿಂದೆ ದರ ಏರಿಕೆಯಾದಾಗ ಗ್ಯಾಸ್ ಸಿಲಿಂಡರ್‌ನೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಶೋಭಾ ಕರಂದ್ಲಾಜೆ, ಸ್ಮತಿ ಇರಾನಿ ಈಗ ಏಲ್ಲಿ ಹೋಗಿದ್ದೀರಿ ಎಂದು ಪ್ರತಿ ಮನೆಯವರು ಅವರಿಬ್ಬರಲ್ಲಿ ಪ್ರಶ್ನಿಸಬೇಕು. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ, ಮಾರಾಟ ಮಾಡುತ್ತಿದ್ದಾರೆ.ಇನ್ನು ನಮ್ಮನ್ನೂ ಮಾರಾಟ ಮಾಡುತ್ತಾರೋ ಎಂಬ ಆತಂಕ ಕಾಡುತ್ತಿದೆ.ಬಿಜೆಪಿ ಆಡಳಿತದಿಂದಾಗಿ ಇಂದು ದೇಶ ದರಿದ್ರ ಸ್ಥಿತಿಗೆ ಬಂದಿದೆ.15 ದಿನದಲ್ಲಿ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದು ಇದು 40ಶೇ.ಡೀಲ್ ಮಾಡಲಿಕ್ಕಾಗಿಯಾ ಎಂದು ಪ್ರಶ್ನಿಸಿದರು.

ಶಾಸಕರು, ಸಂಸದರಿಗೆ ನಮ್ಮ ಕೂಗು ಕೇಳುವುದಿಲ್ಲ-ಎಂ.ಎಸ್.ಮಹಮ್ಮದ್:

ಜಿ.ಪಂ.ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಕಣ್ಣು ಕಾಣದ, ಕಿವಿ ಕೇಳದ, ಮರ್ಯಾದೆ ಇಲ್ಲದ ಸರಕಾರ ಇಂದು ಆಡಳಿತದಲ್ಲಿದ್ದು ಶಾಸಕರು, ಸಂಸದರಿಗೆ ನಮ್ಮ ಕೂಗು ಕೇಳುವುದಿಲ್ಲ.ಬಿಜೆಪಿ ಆಡಳಿತದಿಂದ ಅಭಿವೃದ್ಧಿ, ಜನಪರ ಕಾರ್ಯಗಳು ಯಾವುದೂ ಆಗುತ್ತಿಲ್ಲ.ಗ್ರಾ.ಪಂ ಆಡಳಿತಕ್ಕೆ ಕತ್ತರಿ ಹಾಕುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.ಭ್ರಷ್ಟ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರಕಾರವನ್ನು ಆಡಳಿತಕ್ಕೆ ತರಬೇಕು ಎಂದರಲ್ಲದೆ, ಹಣ ಎಣಿಕೆ ಮಾಡುವ ಎರಡು ಯಂತ್ರಗಳು ನನ್ನ ಬಳಿಯಿದೆ ಎಂದಿದ್ದ ಈಶ್ವರಪ್ಪನವರನ್ನು ಮತ್ತೆ ಸಚಿವರನ್ನಾಗಿ ಮಾಡದಂತೆ ನಾವೆಲ್ಲ ಪ್ರಾರ್ಥಿಸಬೇಕು ಎಂದರು.

ಭಾರತ್ ಜೋಡೋ ಸಂಯೋಜಕರಾದ ಚಂದ್ರಹಾಸ ರೈ, ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ಕೆ. ಪಿ. ಸಿ. ಸಿ ವಕ್ತಾರ ಅಮಲ ರಾಮಚಂದ್ರ ಭಟ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಗೌಡ ಹನಿಯೂರು, ಜಗನ್ನಾಥ ಶೆಟ್ಟಿ ಕೋಡಿಂಬಾಡಿ, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಕೋಡಿಂಬಾಡಿ ಗ್ರಾ.ಪಂ ಮಾಜಿ ಸದಸ್ಯ ಮೋನಪ್ಪ ಗೌಡ ಕೋಡಿಂಬಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ, ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎ.ಎಂ ಪ್ರವೀಣ್ ಚಂದ್ರ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಬನ್ನೂರು ಗ್ರಾ.ಪಂ ಮಾಜಿ ಸದಸ್ಯ ಶೀನಪ್ಪ ಪೂಜಾರಿ ಪಡ್ನೂರು, ರಶೀದ್ ಮುರ, ಆದಂ ಕೆದುವಡ್ಕ, ಇಂಟಕ್ ಅಧ್ಯಕ್ಷ ಜಯಪ್ರಕಾಶ ಬದಿನಾರು, ಕಬಕ ಗ್ರಾ.ಪಂ ಸದಸ್ಯ ಶಾಬಾ ಕಬಕ, ನೆಕ್ಕಿಲಾಡಿ ಗ್ರಾ.ಪಂ ಮಾಜಿ ಸದಸ್ಯೆ ಅನಿ ಮಿನೇಜಸ್, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಪಕ್ಷದ ಪ್ರಮುಖರಾದ ಸೋಮಶೇಖರ ಶೆಟ್ಟಿ ಅಳಕೆಮಜಲು, ಶ್ರೀನಿವಾಸ ಶೆಟ್ಟಿ ಕೊಲ್ಯ, ಅನ್ವರ್ ಕಬಕ, ಅಬ್ದುಲ್ ಕರೀಂ ಕುದ್ದಪುದವು, ವಿ. ಕೆ. ಎಂ. ಅಶ್ರಫ್, ಜಗದೀಶ ಶೆಟ್ಟಿ ಮುಳಿಯ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಹಮ್ಮದ್ ಕಬಕ ಕಾರ್ಸ್, ಅಬ್ದುಲ್ ರಹಿಮಾನ್ ಯುನಿಕ್, ರಾಲ್ ಡಿಸೋಜ ಪೆರುವಾಯಿ, ಸುನಿಲ್ ನೆಲ್ಸನ್ ಪಿಂಟೊ ಪೆರ್ನೆ, ಮಹಮ್ಮದ್ ಫಾರೂಕ್ ಪೆರ್ನೆ, ಶ್ರೀಧರ ಶೆಟ್ಟಿ ಪುಣಚ, ರಾಯಲ್ ಶರೀಫ್ ಬುಳೇರಿಕಟ್ಟೆ, ಹಸೇನಾರ್ ನೆಲ್ಲಿಗುಡ್ಡೆ, ಅಬ್ದುಲ್ ರಹಿಮಾನ್ ಕಂಬಳಬೆಟ್ಟು, ಚಿರಾಗ್ ರೈ, ಇಸ್ಮಾಯಿಲ್ ಬ್ರೈಟ್ ಕಬಕ, ಅಬ್ದುಲ್ ರಹಿಮಾನ್ ಕುರುಂಬಳ, ಎಂ. ಕೆ. ಮೂಸಾ, ರಶೀದ್ ವಿಟ್ಲ, ಶೀಲಾವತಿ ಶೆಟ್ಟಿ, ಶಿವಪ್ರಸಾದ್ ರೈ ಮಠಂತಬೆಟ್ಟು, ದಾಮೋದರ ಶೆಟ್ಟಿ ಮಠಂತಬೆಟ್ಟು, ಸಿರಾಜ್ ಪುಣಚ, ಅಭಿಷೇಕ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಇಸಾಖ್ ನೆಕ್ಕಿಲಾಡಿ, ಕಲಾವಿದ ಕೃಷ್ಣಪ್ಪ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಬಕ ವಲಯ ಅಧ್ಯಕ್ಷ ದಾಮೋದರ ಮುರ ಸ್ವಾಗತಿಸಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಡಾ. ರಾಜಾರಾಮ ಕೆ. ಬಿ. ಪ್ರಸ್ತಾಪನೆಗೈದರು. ಶರೀಫ್ ವಂದಿಸಿದರು. ಬಾತೀಶ್ ಅಳಿಕೆಮಜಲು ಕಾರ್ಯಕ್ರಮ ನಿರೂಪಿಸಿದರು.‌

ಪ್ರತಿಭಟನೆಯ ಬಳಿಕ ಕಬಕ ಜಂಕ್ಷನ್ ನಿಂದ ನೀರಪಳಿಕೆ ವರೆಗೆ ಪಾದಯಾತ್ರೆಯ ಮೂಲಕ ಸಾಗಿ ನೀರಪಳಿಕೆಯಲ್ಲಿ ರಸ್ತೆಯಲ್ಲಿ ಕುಳಿತು ರಸ್ತೆ ದುಸ್ಥಿತಿಯ ಬಗ್ಗೆ ಪ್ರತಿಭಟಿಸಿದರು.

LEAVE A REPLY

Please enter your comment!
Please enter your name here