ಪುತ್ತೂರು:ಸುರತ್ಕಲ್ ಎನ್ಐಟಿಕೆ ಸಮೀಪದಲ್ಲಿರುವ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಟೋಲ್ ಸಮೀಪ ಟೋಲ್ ಗೇಟ್ ಹೋರಾಟ ಸಮಿತಿ ವತಿಯಿಂದ ಅ.18ರಂದು ಬೃಹತ್ ಪ್ರತಿಭಟನೆ ನಡೆದಿದ್ದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.
ಪೊಲೀಸ್ ಬ್ಯಾರಿಕೇಡ್ಗಳನ್ನು ತಳ್ಳಿ ಟೋಲ್ ಗೇಟ್ಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ವಿನಯ ಕುಮಾರ್ ಸೊರಕೆ, ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಮಾಜಿ ಶಾಸಕರಾದ ಐವನ್ ಡಿಸೋಜ,ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಪ್ರಮುಖರಾದ ಮಿಥುನ್ ರೈ, ಶಶಿಧರ್ ಹೆಗ್ಡೆ, ಪ್ರತಿಭಾ ಕುಳಾಯಿ, ಬಿ.ಕೆ.ಇಮ್ತಿಯಾಝ್ ಸೇರಿದಂತೆ ಪ್ರತಿಭಟನಾಕಾರರನ್ನೆಲ್ಲ ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ವಾಹನದಲ್ಲಿ ಕರೆದೊಯ್ದರು. ಪ್ರತಿಭಟನಾಕಾರರನ್ನು ಬಂಧಿಸಿ ಪಾಂಡೇಶ್ವರ ಠಾಣೆಗೆ ಕರೆದೊಯ್ಯಲಾಯಿತು.ನಂತರ ಅವರನ್ನು ಸುರತ್ಕಲ್ ಬಂಟರ ಭವನಕ್ಕೆ ಸ್ಥಳಾಂತರಿಸಲಾಯಿತು.ಸ್ಥಳದಲ್ಲಿ 6 ಕೆಎಸ್ಆರ್ಪಿ ತುಕಡಿ, 5 ಸಿಎಆರ್, 250 ಸಿವಿಲ್, 4 ಮಂದಿ ಪೊಲೀಸ್ ಎಸಿಪಿ, 15 ಇನ್ಸ್ಪೆಕ್ಟರ್ ಸೇರಿದಂತೆ 450ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.ಇದಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.