ಬೆಂಗಳೂರು:ರಾಜ್ಯ ವ್ಯಾಪಿ ವಾಹನ ಸವಾರರು ಸೀಟ್‌ಬೆಲ್ಟ್ ಧರಿಸದೆ ಇದ್ದ ಪ್ರಕರಣ ಬೆಳಕಿಗೆ ಬಂದರೆ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ ರೂ.ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಈ ಹೊಸ ಆದೇಶ ಹೊರಡಿಸಿದ್ದಾರೆ. ಸೀಟ್‌ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೆ ಇನ್ನುಮುಂದೆ 1 ಸಾವಿರ ರೂ. ದಂಡ ಪಾವತಿಸಬೇಕಾಗಿದೆ. ಈ ಹಿಂದೆ, ಸೀಟ್‌ಬೆಲ್ಟ್ ಧರಿಸದೇ ವಾಹನ ಓಡಿಸುವುದು ಪತ್ತೆಯಾದರೆ 500 ರೂ. ದಂಡ ವಿಧಿಸಲಾಗುತ್ತಿದ್ದು ಪರಿಷ್ಕೃತ ಆದೇಶದಲ್ಲಿ ದಂಡವನ್ನು ದುಪ್ಪಟ್ಟು ಮಾಡಲಾಗಿದೆ. ಮೈಸೂರು ನಗರ, ಹುಬ್ಬಳ್ಳಿ, ಧಾರವಾಡ ನಗರ, ಮಂಗಳೂರು ನಗರ, ಬೆಳಗಾವಿ ಮತ್ತು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ಆದೇಶವನ್ನು ಹೊರಡಿಸಲಾಗಿದೆ.
ನ.1 ರಿಂದ ಜಾರಿಗೆ ಬರುವಂತೆ ಹೊಸದಿಲ್ಲಿ, ಮುಂಬೈನಲ್ಲಿ ವಾಹನ ಚಾಲನೆ ವೇಳೆಯಲ್ಲಿ ಸೀಟ್‌ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ.