ವೇದಗಳ ಕಾಲದಿಂದಲೂ ಅತ್ಯಂತ ಶ್ರೇಷ್ಟತೆ ಪಡೆದಿರುವ ಕಪಿಲೆ ಹಸು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರಿಂದ ಸಮರ್ಪಣೆ

0

ಪುತ್ತೂರು: ಭಾರತೀಯ ದೇಶಿ ಗೋವಿನ ಪಂಚಗವ್ಯಕ್ಕೆ ವಿಶೇಷ ಶಕ್ತಿ ಹಾಗೂ ಮಹತ್ವವಿದೆ. ಆದರೆ ಇವತ್ತು ದೇಶಿತಳಿ ಅವನತಿಯತ್ತ ಸಾಗುವ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ನಿತ್ಯ ಹಾಲಿನ ಅಭಿಷೇಕಕ್ಕಾಗಿ ದೇಶಿ ತಳಿಗಾಗಿ ಗೋ ಶಾಲೆಯೊಂದನ್ನು ದೇವಳದ ಆಡಳಿತ ಸಮಿತಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದೆ. ಇದಕ್ಕೆ ಪೂರಕವಾಗಿ ಇದೀಗ ಗೀರ್ ಸಹಿತ ಹಲವು ಊರಿನ ಹಸುಗಳನ್ನು ಭಕ್ತರು ಸಮರ್ಪಣೆ ಮಾಡಿದ್ದು, ಅ.20ರಂದು ವೇದಗಳ ಕಾಲದಂದಿಲೂ ಅತ್ಯಂತ ಶ್ರೇಷ್ಟತೆ ಪಡೆದಿರುವ ಕಪಿಲೆ ಹಸು ಮತ್ತು ಕರುವನ್ನು ಆಲಂಕಾರು ಬೀರಂತಡ್ಕ ಕುಟುಂಬದಿಂದ ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು.

ಆಲಂಕಾರು ಬೀರಂತಡ್ಕ ಆಶಾ ಈಶ್ವರ ಭಟ್ ಅವರು ಕಪಿಲೆ ಹಸು ಮತ್ತು ಕರುವನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಕೇಶವಪ್ರಸಾದ್ ಮುಳಿಯ ಕಪಿಲೆ ಹಸುವಿಗೆ ಹೂವಿನ ಹಾರ ಹಾಕಿ ದೇವಸ್ಥಾನಕ್ಕೆ ಬರಮಾಡಿಕೊಂಡರು. ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥಿಸಿ ಹಸುವನ್ನು ಸಮರ್ಪಣೆ ಮಾಡಿದ ಈಶ್ವರ ಭಟ್ ಅವರಿಗೆ ಶಾಲು ಹೊದೆಸಿ ಗೌರವಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್ ಸಹಿತ ರೋಟರಿ ಜಿಲ್ಲಾ ಗರ್ವನರ್ ಪ್ರಶಾಂತ್ ಕಾರಂತ್, ದೇವಳದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ವೆಂಕಟ್ರಮಣ ಗೌಡ ಕಳುವಾಜೆ ಮತ್ತಿತರರು ಉಪಸ್ಥಿತರಿದ್ದರು. ಇತ್ತೀಚೆಗೆ ತಾಳ್ತಜೆ ಚಂದ್ರಶೇಖರ್ ಅವರಿಂದ ಗಬ್ಬದ ಘೀರ್ ತಳಿಯ ಹಸು ಮತ್ತು ಸಂತೋಷ್ ಬೋನಂತಾಯ ಅವರು ಹಸು ಮತ್ತು ಕರುವನ್ನು ದೇವಳಕ್ಕೆ ಸಮರ್ಪಣೆ ಮಾಡಿದ್ದರು.

ಪುರಾತನವಾದ ಭಾರತೀಯ ಗೋವಂಶದ ಗೀರ್, ರಾಟಿ, ಸಾಹಿವಾಲ್, ಮಲೆನಾಡು ಗಿಡ್ಡ, ಪುಂಗನೂರು ಹೀಗೆ 31ಜಾತಿಯ ಹಸುಗಳು ಇವತ್ತು ಅಪರೂಪಕ್ಕೆಂಬಂತೆ ಕಾಣ ಸಿಗುತ್ತಿವೆ. ಇಂಥಹ ಅಪರೂಪವಾಗುತ್ತಿರುವ ಭಾರತೀಯ ಗೋ ತಳಿಯ ಪರಿಚಯಿಸುವ ಮತ್ತು ದೇಶಿ ಗೋವಿನ ಹಾಲಿನಿಂದಲೇ ಶಿವ ದೇವರ ನಿತ್ಯ ಅಭಿಷೇಕ ಆಗಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ. ಈಗಾಗಲೇ ಸಂತೋಷ್ ಬೋನಂತಾಯ ಅವರು ಸಮರ್ಪಣೆ ಮಾಡಿದ ಹಸುವಿನ ಹಾಲನ್ನು ಅ.20ರಂದು ಬೆಳಿಗ್ಗೆ ದೇವರ ಅಭಿಷೇಕಕ್ಕೆ ಬಳಸಲಾಗಿದೆ. ಮುಂದೆ ಕಪಿಲ ಹಸುವಿನ ಹಾಲನ್ನು ಬಳಸಲಾಗುತ್ತದೆ. ಇದರ ಜೊತೆಗೆ ಚಂದ್ರಶೇಖರ್ ತಾಳ್ತಜೆ ಅವರು ಸಮರ್ಪಣೆ ಮಾಡಿದ ಗಬ್ಬದ ಘೀರ್ ತಳಿಯು ಗೋ ಶಾಲೆಯಲ್ಲಿದೆ.

ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here