ಕಟ್ಟಡ ಕಾರ್ಮಿಕರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್‌ಪಾಸ್ ವಿತರಣೆ

0

ಪುತ್ತೂರು:ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ 45 ಕಿ.ಮೀ ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಪ್ರಯಾಣಿಸಲು ನೀಡುವ ಉಚಿತ ಬಸ್ ಪಾಸ್‌ನ್ನು ಅ.21ರಂದು ಮುಕ್ರಂಪಾಡಿಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಸ್ ಪಾಸ್ ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಕೊಡುವ ಕೆಲಸ ಕಾರ್ಮಿಕ ಇಲಾಖೆ ಮೂಲಕ ಮಾಡಿದೆ. ರಾಜ್ಯದಲ್ಲಿ ಒಂದು ಲಕ್ಷ ಮಂದಿಗೆ ಬಸ್ ಪಾಸ್ ವಿತರಿಸಿರುವುದು ಅತೀ ಕಡಿಮೆಯಾಗಿದೆ. ತಾಲೂಕಿನಲ್ಲಿ ಹತ್ತು ಸಾವಿರ ನೋಂದಾಯಿತರಿದ್ದಾರೆ. ಎಂಟು ಸಾವಿರ ಸಕ್ರೀಯ ಕಾರ್ಮಿಕರಿದ್ದಾರೆ. ಎಲ್ಲರಿಗೂ ದೊರೆಯಬೇಕು. ಇದಕ್ಕಾಗಿ ಸಚಿವರ ಜೊತೆ ಮಾತನಾಡಿ ಜನಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳುಲು ಸಹಕರಿಸಲಾಗುವುದು. ಸರಕಾರದ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಾರ್ಮಿಕರು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಕೇಂದ್ರದ 45 ಕಿ.ಮೀ ವ್ಯಾಪ್ತಿಯಲ್ಲಿ ಅದರ ಪ್ರಯೋಜನ ಪಡೆದುಕೊಳ್ಳಬಹುದು. ಒಂದು ಲಕ್ಷ ವಿತರಿಸಿರುವ ಬಸ್ ಪಾಸ್ ನ್ನು ಎರಡು ಲಕ್ಷ ಮಂದಿಗೆ ವಿತರಿಸಲು ಪ್ರಯತ್ನಿಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿದ್ದ ಜೀವಂಧರ್ ಜೈನ್ ಮಾತನಾಡಿ, ಮೂವತ್ತು ಲಕ್ಷ ಕಾರ್ಮಿಕರ ನೋಂದಾವಣೆಯಾಗಿದ್ದು ದ.ಕ ಜಿಲ್ಲೆಗೆ ಒಂದು ಲಕ್ಷ ಬಸ್ ಪಾಸ್‌ನ ಆವಶ್ಯಕತೆ ಇದೆ. ಇದರ ಕುರಿತು ಶಾಸಕರು ಸಚಿವರಲ್ಲಿ ಒತ್ತಡ ಹಾಕಿ ಹೆಚ್ಚುವರಿ ಬಸ್ ಪಾಸ್ ವಿತರಿಸಬೇಕು ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಮಾತನಾಡಿ, ಒಂದು ಲಕ್ಷ ಕಾರ್ಮಿಕರಿಗೆ ಮೊದಲ ಹಂತಗಳಲ್ಲಿ ಉಚಿತ ಬಸ್ ಪಾಸ್ ವಿತರಿಸಲಾಗುವುದು. ಮುಂದೆ ಎಲ್ಲಾ ಕಾರ್ಮಿಕರಿಗೂ ಬರಲಿದೆ. ಕಾರ್ಮಿಕರು ಕೆಲಸ ನಿರ್ವಹಿಸುತ್ತಿರು ಕೇಂದ್ರದಿಂದ 45 ಕಿ.ಮೀ ವ್ಯಾಪ್ತಿಯಲ್ಲಿ ಓಡಾಡಲು ಅವಕಾಶವಿದ್ದು ಆವಶ್ಯಕತೆಯಿರುವ ಕೇಂದ್ರ ಅಯ್ಕೆ ಮಾಡಬಹುದು. ಒಂದು ಬಾರಿ ನಿಗದಿಗೊಳಿಸಿದ ಕೇಂದ್ರ ಮೂರು ತಿಂಗಳಿನ ಬಳಿಕ ಬದಲಾಯಿಸಲು ಅವಕಾಶವಿರುತ್ತದೆ ಎಂದರು.
ಜನಸೇವಾ ಕೇಂದ್ರದಲ್ಲಿ ಲಭ್ಯ
ಮೇದಿನಿ ಹಾಗೂ ಬನ್ನೂರು ಜನಸೇವಾ ಕೇಂದ್ರ ಮೂಲಕ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಕಾರ್ಯಕ್ರಮದಲ್ಲಿ ಬಸ್‌ಪಾಸ್ ವಿತರಿಸಲಾಗುತ್ತಿದೆ. ಜನ ಸೇವಾ ಕೇಂದ್ರದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಕಟ್ಟಡ ಕಾರ್ಮಿಕರು ತಾವು ಅರ್ಜಿ ಸಲ್ಲಿಸಿದ ಜನಸೇವಾ ಕೇಂದ್ರದ ಮೂಲಕ ಬಸ್‌ಪಾಸ್‌ನ್ನು ಪಡೆದುಕೊಳ್ಳಬಹುದು. ನಿಗಮದಿಂದ ಜನಸೇವಾ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತಿದ್ದು ಅಲ್ಲಿಂದಲೇ ಪಡೆದುಕೊಳ್ಳಬಹುದು ಎಂದು ವಿಭಾಗೀಯ ಸಂಚಲಣಾಧಿಕಾರಿ ಮುರಳೀಧರ ಆಚಾರ್ಯ ತಿಳಿಸಿದರು.
1033 ಮಂದಿಗೆ ಬಸ್‌ಪಾಸ್
ಪುತ್ತೂರು ವಿಭಾಗದಲ್ಲಿ ಒಟ್ಟು 1033 ಮಂದಿ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ವಿತರಿಸಲಾಗಿದೆ. ಪುತ್ತೂರು/ಕಡಬದಲ್ಲಿ 647, ಸುಳ್ಯ 71, ಬಂಟ್ವಾಳ 236, ಬೆಳ್ತಂಗಡಿ 79 ಮಂದಿ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿದೆ.
ಕಾರ್ಯಕ್ರಮವನ್ನು ಚೇತನಾ ಪ್ರಾರ್ಥಿಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿದರು. ವಿಭಾಗೀಯ ಸಂಚಲಣಾಧಿಕಾರಿ ಮುರಳೀಧರ ಆಚಾರ್ಯ ಫಲಾನುಭವಿ ಕಾರ್ಮಿಕರ ಪಟ್ಟಿ ಓದಿದರು. ಕುಶಲ ಕರ್ಮಿ ಮಾಧವ ಶೆಣೈ ಕಾರ್ಯಕ್ರಮ ನಿರೂಪಿಸಿ, ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ವಂದಿಸಿದರು. ಮಂಜುನಾಥ ಶೆಟ್ಟಿ, ವೆಂಕಟ್ರಮಣ ಭಟ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here