ಕೊಳ್ತಿಗೆ-ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಮಹಿಳಾ ಘಟಕದ ಮಹಾಸಭೆ, ಗುರುವಂದನೆ, ಕುಣಿತ ಭಜನೆ

0

ಕೊಳ್ತಿಗೆ: ಕೊಳ್ತಿಗೆ-ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ಗುರುವಂದನೆ ಮತ್ತು ಕುಣಿತ ಭಜನೆ ಸಂಘದ ಅಧ್ಯಕ್ಷ ಎಸ್. ಪದ್ಮನಾಭ ಸರಸ್ವತಿ ಮೂಲೆರವರ ಅಧ್ಯಕ್ಷತೆಯಲ್ಲಿ ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಭಜನೆ ತರಬೇತುದಾರ ಸದಾನಂದ ಆಚಾರ್ಯ ಕಾಣಿಯೂರು ಬೆಳಿಗ್ಗೆ ಕುಣಿತ ಭಜನೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ-ಪೆರ್ಲಂಪಾಡಿ ಸಂಘದಿಂದ ಪ್ರಾಯೋಜಿಸಲ್ಪಟ್ಟ ಶ್ರೀಮಹಮ್ಮಾಯಿ ಕುಣಿತ ಭಜನೆ ತಂಡದ ಸದಸ್ಯರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮ : ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ ಮಾತನಾಡಿ ಸಂಘಟನೆ ಇಂತಹ ಗ್ರಾಮ ಸಮಿತಿಗಳಿಂದ ಮಾತ್ರ ಸಾಧ್ಯ, ಎಸ್‌ಟಿಗೆ ಬೇರೆ ಬೇರೆ ಜಾತಿಗಳನ್ನು ಸೇರಿಸುತ್ತಿರುವುದರಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ಮುಂದಕ್ಕೆ ತ್ರಾಸದಾಯಕವಾಗಬಹುದು, ಮಕ್ಕಳನ್ನು ನಾವು ಗಾಜಿನಂತೆ ಕಾಪಾಡಿಕೊಳ್ಳಬೇಕು ಏಕೆಂದರೆ ಮಕ್ಕಳನ್ನು ಪಳಗಿಸುವುದು ಇಂದಿನ ವಾತಾವರಣದಲ್ಲಿ ಅತ್ಯಂತ ಕಷ್ಟ ಮತ್ತು ಮಕ್ಕಳನ್ನು ಮೋಬೈಲ್‌ನಿಂದ ದೂರವಿರಿಸುವಂತೆ ಪೋಷಕರಲ್ಲಿ ವಿನಂತಿಸಿದರು. ಭಜನೆ ಬೌದ್ದಿಕ ಬೆಳವಣಿಗೆಗೆ ಸಹಕಾರಿ ಮತ್ತು ಸಂಘಟಣೆ ಇತರರಿಂದ ತೊಂದರೆಯಾದಾಗ ರಕ್ಷಣೆಗಾಗಿ ಬೇಕು ಎಂದರು.

ನೋಟರಿ ವಕೀಲ ಹಾಗೂ ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಮಂಜುನಾಥ ಎನ್.ಎಸ್ ಮಾತನಾಡಿ ಸಂಘಟನೆಯಲ್ಲಿ ದುಡಿಯುವವರ ಕೈ ಮನಸ್ಸು ಶುದ್ಧವಾಗಿರಬೇಕು. ಆಗ ಸಂಘಟಣೆ ಬಲಿಷ್ಟವಾಗುತ್ತದೆ, ಭಜನೆಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಸದಸ್ಯರನ್ನು ಸಂಘಟಣೆಯಲ್ಲಿ ತೊಡಗಿಸಿಕೊಳ್ಳಲು ಭಜನೆ ಸಹಕಾರಿಯಾಗಿದೆ ಮಾತೃ ಸಂಘದಿಂದ ಗ್ರಾಮ ಸಮಿತಿಗೆ ಸಂಪೂರ್ಣ ಸಹಕಾರವಿದೆ ಎಂದರು.

ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ವೇದಿಕೆಯ ಸಂಚಾಲಕ ಎಂ. ಶ್ರೀಧರ ನಾಯ್ಕ ಮುಂಡೋವುಮೂಲೆ ಮಾತನಾಡಿ ಸಮುದಾಯದ ಹಿರಿಯ ಸದಸ್ಯರಿಗೆ ಸರಕಾರದಿಂದ ಯಾವುದೇ ಸಬ್ಸಿಡಿ ಸೌಲಭ್ಯ ಪಡೆಯಲು 60 ವರ್ಷ ವಯಸ್ಸಿನ ಮಿತಿ ಹೇರಿಕೆ ಮಾಡಿರುತ್ತಾರೆ ಇದರಿಂದ ಸೌಲಭ್ಯ ಪಡೆಯಲು ಅಸಾಧ್ಯವಾಗಿದೆ ಹಾಗಾದರೆ 60 ವರ್ಷ ಮೇಲ್ಪಟ್ಟವರು ಕೃಷಿಕರಲ್ಲವೆ ಅವರಿಗೂ ಸೌಲಭ್ಯ ದೊರೆಯುವಂತೆ ಆಗಬೇಕು. ನಮ್ಮ ಸಮುದಾಯದ ಜನರಿಗೆ ಭೂ ಪರಿವರ್ತನೆ ನಿಷೇದ ಮಾಡಿರುವುದರಿಂದ ಮನೆ ರಚನೆಗೆ ಯಾವುದೇ ಬ್ಯಾಂಕಿನಿಂದ ಸಾಲ ಪಡೆಯಲು ಅಸಾಧ್ಯವಾಗಿದೆ ಮತ್ತು ಸಮುದಾಯದ ಜನರು ತಮ್ಮ ಕುಟುಂಬದ ವ್ಯಾಜ್ಯಗಳನ್ನು ನ್ಯಾಯಾಲಯಕ್ಕೆ ಮತ್ತು ಪೋಲಿಸ್ ಠಾಣೆಗಳಿಗೆ ದೂರು ನೀಡದೆ ವ್ಯಾಜ್ಯಗಳನ್ನು ಸೌಹರ್ದತೆಯಿಂದ ಕುಳಿತು ಹಿರಿಯರ ಸಮ್ಮುಖದಲ್ಲಿ ಮಾತನಾಡಿ ಪರಿಹರಿಸಿಕೊಳ್ಳಬೇಕು ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ, ನಮ್ಮಲ್ಲಿರುವ ಆದಾರ್ ಕಾರ್ಡ್, ಪಾನ್ ಕಾರ್ಡ್ ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಲ್ಲಿ ಪಹಣಿ ಪತ್ರಗಳಲ್ಲಿ ಹೆಸರು ಮತ್ತು ಮೊಬೈಲ್ ಸಂಖ್ಯೆ ಜೋಡಿಸಿದ್ದರೆ ನಮಗೆ ಯಾವೂದೇ ಬ್ಯಾಂಕಿನಿಂದ ಶೀಘ್ರವಾಗಿ ಸಾಲ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಗ್ರಾಮ ಸಮಿತಿಯ ಗೌರವ ಸಲಹೆಗಾರ ಮತ್ತು ಸ್ಥಾಪಕಾಧ್ಯಕ್ಷ ವೆಂಕಪ್ಪ ನಾಯ್ಕ ಕಣ್ಣಕಜೆ ಮತ್ತು ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗವೇಣಿ ಕೆ. ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಗ್ರಾಮ ಸಮಿತಿಯ ಅಧ್ಯಕ್ಷ ಎಸ್. ಪದ್ಮನಾಭ ಸರಸ್ವತಿ ಮೂಲೆರವರು ಸದಸ್ಯರ ಸಂಪೂರ್ಣ ಸಹಕಾರದಿಂದ ಗ್ರಾಮ ಸಮಿತಿಯು ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಗುರುಗಳು ನೀಡಿದ ತರಭೇತಿಯಿಂದ ಮರಾಟಿ ಸಂಘವನ್ನು ಭಜನೆಯ ಮೂಲಕ ಸಾರ್ವಜನಿಕವಾಗಿ ಗುರುತಿಸುವಂತಾಗಿದೆ. ಭಜನೆ ತರಬೇತುದಾರ ಸದಾನಂದ ಆಚಾರ್ಯ ಕಾಣಿಯೂರುರವರು ಕೇವಲ ಭಜನೆ, ಕುಣಿತ ಭಜನೆ ಅಲ್ಲದೇ ಮಕ್ಕಳಿಗೆ ಪ್ರತಿಭಾ ಕಾರಂಜಿಗೆ ಡ್ಯಾನ್ಸ್, ಕೋಲಾಟ, ನಾಟಕ ತರಬೇತಿಗಳನ್ನು ನೀಡುತ್ತಿದ್ದಾರೆ ಎಂದರು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರತಿಭಾವಂತ ಮಕ್ಕಳಿಗೆ ಅಲ್ಲದೆ ಎಲ್ಲಾ ಮಕ್ಕಳಿಗೆ ಮಾರ್ಗದರ್ಶಕವಾಗಲಿ ಎಂಬುದು ನಮ್ಮ ಕನಸು. ಮಾತೃ ಸಂಘದವರು ಎಲ್ಲಾ ಗ್ರಾಮಗಳಲ್ಲಿ ಅಥವಾ ಪಟ್ಟಣಗಳಲ್ಲಿ ಪ್ರತಿಭಾವಂತ ಮಕ್ಕಳನ್ನು, ಕಲಾವಿದರನ್ನು, ಕೃಷಿಕರನ್ನು ಮತ್ತು ಉತ್ತಮ ಪ್ರತಿಭೆಗಳನ್ನು ತಮ್ಮ ಮುಂದಿನ ಸಭೆಗಳಲ್ಲಿ ಗುರುತಿಸುವಂತೆ ವಿನಂತಿ ಮಾಡಿಕೊಂಡರು. ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯೆ ಲತಾ ಸದಾನಂದ ಕೋರಿಕ್ಕಾರು ಮತ್ತು ಕೊಳ್ತಿಗೆ ಮರಾಟಿ ಮಹಿಳಾ ಘಟಕದ ಅಧ್ಯಕ್ಷ ಭವಾನಿಶಂಕರಿ ಆಟೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುರುವಂದನೆ : ಗ್ರಾಮ ಸಮಿತಿಯ ವತಿಯಿಂದ ಭಜನೆ ತರಬೇತುದಾರರಾದ ಸದಾನಂದ ಆಚಾರ್ಯ ಕಾಣಿಯೂರು ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು. ಗುರುವಂದನೆ ಸ್ವಿಕರಿಸಿ ಸದಾನಂದ ಆಚಾರ್ಯ ಕಾಣಿಯೂರುರವರು ಭಜನೆ ತಂಡದ ಸದಸ್ಯರು ಭಜನೆಯನ್ನು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಕಲಿಯುತ್ತಿದ್ದಾರೆ, ನಿಮ್ಮ ಭಜನಾ ತಂಡವು ಕೊಳ್ತಿಗೆ ಎಂಬ ಹೆಸರನ್ನು ಭೂಪಟದಲ್ಲಿ ಗುರುತಿಸುವಂತೆ ಮಾಡಲಿ ಎಂದು ಶುಭ ಹಾರೈಸಿದರು.

ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ, ವಿನುತಾ ಮಾಲೆತ್ತೋಡಿ, ಪರಮೇಶ್ವರಿ ಕೆರೆಮೂಲೆ, ಅನುಶ್ರೀ ದಡೆಗುಂಡಿ, ಅಂಕಿತ ಪುಲ್ಲಾಜೆ, ವಿವೇಕ್ ಬಟ್ರಹಿತ್ಲು, ಕೀರ್ತನ್ ಎಂ.ಎಸ್ ಮಾಲೆತ್ತೋಡಿ ಮತ್ತು ಮನ್ವಿತಾ ಗೋಳಿತ್ತಡ್ಕರವರನ್ನು ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸೀತಾರಾಮ ಸರಸ್ವತಿಮೂಲೆ, ಮಹೇಶ್ ಕುಮಾರ್ ಮಾಲೆತ್ತೋಡಿ, ಜತೆ ಕಾರ್ಯದರ್ಶಿ ಸಂತೋಷ್, ಸದಾನಂದ ಕೋರಿಕ್ಕಾರು, ವಸಂತ ಕೆರೆಮೂಲೆ, ವೀಣಾ ಕೆರೆಮೂಲೆ, ಮಮತಾ ಮಾಲೆತ್ತೋಡಿ, ಬೇಬಿ ಮಾಲೆತ್ತೋಡಿ ಅತಿಥಿಗಳಿಗೆ ಪುಷ್ಪಗುಚ್ಚ ನೀಡಿ ಸಹಕರಿಸಿದರು. ಪೂರ್ಣಿಮಾ ಕೆಮ್ಮತಕಾನ ಮತ್ತು ವಿದ್ಯಾಶ್ರೀ ಕೆರೆಮೂಲೆ ಪ್ರಾರ್ಥಿಸಿದರು. ಸದಾನಂದ ಕೋರಿಕ್ಕಾರು ಗುರುಗಳ ಪರಿಚಯ ಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ಭವಿತ್ ಕುಮಾರ್ ಮಾಲೆತ್ತೋಡಿ ಸ್ವಾಗತಿಸಿದರು. ಸಮಿತಿ ಸದಸ್ಯರಾದ ಮೋಹನ ಭಟ್ರಹಿತ್ಲು ವರದಿ ವಾಚಿಸಿದರು. ಸಂಘದ ಖಜಾಂಜಿ ಜಗನ್ನಾಥ ಮಾಲೆತ್ತೋಡಿ ಲೆಕ್ಕ ಪತ್ರ ಮಂಡನೆ ಮಾಡಿದರು. ವಸಂತ ಕೆರೆಮೂಲೆ ಭಜನೆ ತಂಡದ ಕಾರ್ಯಚಟುವಟಿಕೆ ಮತ್ತು ಲೆಕ್ಕ ಪತ್ರದ ವಿವರವನ್ನು ವಾಚಿಸಿದರು. ಜನಾರ್ಧನ ಪುತ್ರೋಡಿಮೂಲೆ ವಂದಿಸಿ ಸುಬ್ಬಯ್ಯ ಕೆಮ್ಮತಕಾನ ಕಾರ್ಯಕ್ರಮ ನಿರೂಪಿದರು.

LEAVE A REPLY

Please enter your comment!
Please enter your name here