ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ವರ್ಗಾವಣೆ; ಜಿಪಂ ಸಿಇಒ ಡಾ|ಕುಮಾರ್‌ಗೆ ಪ್ರಭಾರ

0

ಮಂಗಳೂರು:ಕಳೆದ ಎರಡು ವರ್ಷಗಳಿಂದ ದ.ಕ. ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ರಾಜೇಂದ್ರ ಕೆ.ವಿ.ಅವರನ್ನು ಮೈಸೂರಿಗೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.ದ .ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಾಗಿರುವ ಡಾ|ಕುಮಾರ್ ಅವರಿಗೆ ದ.ಕ.ಜಿಲ್ಲಾಧಿಕಾರಿ ಹುದ್ದೆಯ ಪ್ರಭಾರ ವಹಿಸಲಾಗಿದೆ.

2013ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು ಈ ಹಿಂದೆ ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿ ಉತ್ತಮ ಆಡಳಿತ ನೀಡಿದ್ದ ಡಾ.ರಾಜೇಂದ್ರ ಕೆ.ವಿ.ಅವರು 2020 ಜುಲೈ 30ರಿಂದ ದ.ಕ.ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದ.ಕ.ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದ ಡಾ.ರಾಜೇಂದ್ರ ಕೆ.ವಿ.ಅವರು ಕೋವಿಡ್ ಮಹಾಮಾರಿ ನಿಯಂತ್ರಣ, ಲಾಕ್‌ಡೌನ್ ಮತ್ತು ಮಳೆಹಾನಿಯ ಸಂದರ್ಭ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ‍್ಯಕ್ರಮ ಯಶಸ್ವಿಯಾಗಿ ನಡೆಸುವ ಮೂಲಕ ಗ್ರಾಮೀಣ ಪ್ರದೇಶದ ನಾಗರಿಕರ ಸಮಸ್ಯೆ, ಬೇಡಿಕೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸುತ್ತಿದ್ದ ಇವರು ತನ್ನ ಕೆಲಸ ಕಾರ್ಯಗಳ ಮೂಲಕ ಓರ್ವ ಉತ್ತಮ ಅಧಿಕಾರಿಯಾಗಿ ಜನಮನ್ನಣೆಗೆ ಪಾತ್ರರಾಗಿದ್ದರು.

ಡಾ|ಕುಮಾರ್ ಪ್ರಭಾರ ಡಿಸಿ: ಡಾ.ರಾಜೇಂದ್ರ ಕೆ.ವಿ.ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿ ಸರಕಾರ ವರ್ಗಾವಣೆಗೊಳಿಸಿರುವುದರಿಂದ ದ.ಕ.ಜಿಲ್ಲಾ ಪಂಚಾಯತ್ ಸಿಇಒ ಡಾ|ಕುಮಾರ್ ಅವರು ಪ್ರಭಾರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಡಾ|ಕುಮಾರ್ ಅವರು ಈ ಹಿಂದೆ ದ.ಕ.ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಜಿಪಂ ಸಿಇಒ ಜೊತೆಗೆ ದ.ಕ.ಜಿಲ್ಲಾಧಿಕಾರಿ ಹುದ್ದೆಯ ಪ್ರಭಾರ ವಹಿಸಿ ಸರಕಾರ ಆದೇಶ ಹೊರಡಿಸಿದೆ.

ಸುದ್ದಿ ಆಂದೋಲನಕ್ಕೆ ಬೆಂಬಲ

ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನಕ್ಕೆ ಬೆಂಬಲ ನೀಡಿದ್ದ ಡಾ.ರಾಜೇಂದ್ರ ಕೆ.ವಿ.ಅವರು ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಆಂದೋಲನ ಸೇರಿದಂತೆ ಸುದ್ದಿಯ ಇತರ ಜನಪರ ಕಾರ್ಯಕ್ರಮಗಳಿಗೂ ಬೆಂಬಲ, ಪ್ರೋತ್ಸಾಹ ನೀಡಿದ್ದರು.

LEAVE A REPLY

Please enter your comment!
Please enter your name here