ಕಾಣಿಯೂರು:ಬೆಡ್‌ಶೀಟ್ ಮಾರಾಟಕ್ಕೆಂದು ಕಾರಲ್ಲಿ ಬಂದವರಿಂದ ಮಹಿಳೆಯ ಮಾನಭಂಗ ಯತ್ನ ಆರೋಪ-ಕಡಬ ಠಾಣೆಯಲ್ಲಿ ಪ್ರಕರಣ; ಕಾರನ್ನು ತಡೆದ ಗುಂಪಿನಿಂದ ಹಲ್ಲೆ-ಕಾರು ಚಾಲಕನ ದೂರು: ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

0

ಕಾಣಿಯೂರು:ಬೆಡ್ ಶೀಟ್ ಮಾರಾಟಕ್ಕೆಂದು ಬಂದ ವ್ಯಕ್ತಿಗಳೀರ್ವರು ದೋಳ್ಪಾಡಿ ಗ್ರಾಮದ ಮನೆಯೊಂದರಲ್ಲಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನ ಮಾಡಿರುವ ಆರೋಪದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಮತ್ತು ಕಾಣಿಯೂರು ಬೆದ್ರಾಜೆಯಲ್ಲಿ ಗುಂಪೊಂದು ತಮ್ಮ ಕಾರನ್ನು ತಡೆದು ಹಲ್ಲೆ ಮಾಡಿರುವುದಾಗಿ ಆರೋಪಿಸಿ ನೀಡಿರುವ ದೂರಿನ ಮೇರೆಗೆ ಬೆಳ್ಳಾರೆ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಬೆಡ್‌ಶೀಟ್ ಮಾರಾಟಕ್ಕೆಂದು ಬಂದಿದ್ದ ಇಬ್ಬರು ಆರೋಪಿಗಳು ತನ್ನ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಿ ಪರಿಶಿಷ್ಠ ಜಾತಿಯ ಮಹಿಳೆಯೋರ್ವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ‘ಕೂಲಿ ಕೆಲಸ ಮಾಡಿಕೊಂಡಿರುವ ನಾನು ಅ.20ರಂದು ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿರುವ ಸಮಯ ಸುಮಾರು ಮಧ್ಯಾಹ್ನ 12.30 ಗಂಟೆಗೆ ನೀಲಿ ಬಣ್ಣದ ಕಾರಿನಲ್ಲಿ ಬಂದ ಇಬ್ಬರು ಬೆಡ್‌ಶೀಟ್ ಮಾರಾಟ ಮಾಡುವರೇ ಮನೆಯ ಬಾಗಿಲಿನ ಬಳಿ ಬಂದು, ಬೆಡ್‌ಶೀಟ್ ಬೇಕಾ ಎಂದು ಕೇಳಿದರು.ನಾನು, ಎಷ್ಟು ಹಣ ಎಂದು ಕೇಳಿದಾಗ ಆರೋಪಿತರು ಬೆಡ್‌ಶೀಟ್ ರೇಟ್ ಹೇಳದೇ ನೀವು ತಗೋಳ್ಳಿ ಕಡಿಮೆ ರೇಟ್ ಮಾಡಿ ಕೊಡೋಣ ಎಂದು ಹೇಳಿದರು. ನಾವು ಕೂಲಿ ಕೆಲಸ ಮಾಡುವವರು. ನಮ್ಮಲ್ಲಿ ಹೆಚ್ಚಿನ ಹಣ ಇರುವುದಿಲ್ಲ.ನೀವು ರೇಟ್ ಹೇಳಿದರೆ ನಾನು ಬೆಡ್‌ಶೀಟ್ ನೋಡುತ್ತೇನೆ ಎಂದು ನಾನು ಹೇಳಿದರೂ ಆರೋಪಿತರು ಬೆಡ್‌ಶೀಟ್ ರೇಟ್ ಹೇಳದೇ ಸ್ವಲ್ಪ ಸಮಯ ನನ್ನೊಂದಿಗೆ ಚರ್ಚಿಸಿ, ನಿಮ್ಮಲ್ಲಿ ಹಣವಿಲ್ಲದಿದ್ದರೆ ಪರವಾಗಿಲ್ಲ ನಾವು ಈಗ ಕೊಟ್ಟು ಹೋಗಿರುತ್ತೇವೆ ನಂತರ ಇನ್ನೊಮ್ಮೆ ಬಂದಾಗ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.ನಾನು ಬೇಡ ಎಂದು ಹೇಳಿದಾಗ ಅವರಲ್ಲೊಬ್ಬ ಕೂದಲು ಕಡಿಮೆ ಇರುವವನು ನಿಮ್ಮಲ್ಲಿ ಹಣವಿಲ್ಲದಿದ್ದರೆ ನೀವು ನನ್ನೊಂದಿಗೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ನಮ್ಮೊಂದಿಗೆ ಮಲಗಿದರೆ ನಿಮಗೆ ಬೇಕಾದರೆ ನಾವು ಹಣವನ್ನು ಸಹ ಕೊಟ್ಟು ಹೋಗುತ್ತೇವೆ ಎಂದು ಹೇಳಿದಾಗ, ನಾವು ಆ ರೀತಿ ಜನರಲ್ಲ ನೀವು ಮನೆಯಿಂದ ಹೋಗಿ ಎಂದು ನಾನು ಹೇಳಿದಾಗ ಆರೋಪಿತನು ನನ್ನ ಕೈಹಿಡಿದು ಎಳೆದು ಬಳಿಕ ಮನೆಯೊಳಗೆ ಬಂದು ಮೈ ಕೈ ಮುಟ್ಟಿ ಮಾನಭಂಗಕ್ಕೆ ಪ್ರಯತ್ನಿಸಿದ. ನಾನು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿತರು ಅಲ್ಲಿಂದ ಪರಾರಿಯಾಗಿರುತ್ತಾರೆ’ ಎಂದು ದೋಳ್ಪಾಡಿ ಗ್ರಾಮದ ಕಾಯರ್‌ಮನೆ ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ರಫೀಕ್ ಮತ್ತು ರಮೀಜುದ್ದೀನ್ ಎಂಬವರ ವಿರುದ್ಧ ಕಡಬ ಠಾಣೆಯಲ್ಲಿ ಕಲಂ 448, 354, ಜೊತೆಗೆ 34 IPC ಮತ್ತು ಕಲಂ:3(2)(Va) SC and ST amendment Act 2015 ರಡಿ ಪ್ರಕರಣ ದಾಖಲಾಗಿದೆ.

ಕಾರು ತಡೆದ ಗುಂಪಿನಿಂದ ಹಲ್ಲೆ ಆರೋಪಿಯಿಂದ ಬೆಳ್ಳಾರೆ ಠಾಣೆಗೆ ದೂರು: ಮಂಗಳೂರು ಅಡ್ಡೂರು ಅಬ್ದುಲ್ ಲತೀಫ್ ಎಂಬವರ ಮಗ ರಮೀಜುದ್ದೀನ್(29ವ.)ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರೊಂದನ್ನು ನೀಡಿ, ಗುಂಪೊಂದು ತಮ್ಮ ಕಾರನ್ನು ನಿಲ್ಲಿಸಿ ಹಲ್ಲೆ ನಡೆಸಿ, ಕಾರಿಗೆ ಹಾನಿ ಮಾಡಿರುವುದಾಗಿ ಆರೋಪಿಸಿದ್ದಾರೆ.

‘ತಾನು ಸಂಬಂಧಿಕ ಮಹಮ್ಮದ್ ರಫೀಕ್ ಎಂಬವರೊಂದಿಗೆ ಬೆಡ್ ಶೀಟ್ ಮಾರಾಟಕ್ಕೆಂದು ಅ.20ರಂದು ಕಡಬ ತಾಲೂಕು ಎಡಮಂಗಲ ಹಾಗೂ ದೋಲ್ಪಾಡಿ ಗ್ರಾಮ ಪರಿಸರದಲ್ಲಿ ಕಾರಲ್ಲಿ (ಕೆ.ಎ51 ಎಂ.ಏ 2319) ಬಂದು ಮಾರಾಟ ಮಾಡುತ್ತಿರುವ ವೇಳೆ ಮನೆಯೊಂದರಲ್ಲಿದ್ದ ಹೆಂಗಸರ ಜೊತೆ ಬೆಡ್ ಶೀಟ್ ಮಾರಾಟದ ವಿಚಾರದಲ್ಲಿ ತಕರಾರು ಉಂಟಾಗಿ ಅಲ್ಲಿಂದ ವಾಪಸ್ಸು ಕಾಣಿಯೂರು ಕಡೆಗೆ ಬರುತ್ತಾ, ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿಗೆ ಮಧ್ಯಾಹ್ನ 2 ಗಂಟೆಗೆ ತಲುಪಿದಾಗ ಅಲ್ಲಿ ಗುಂಪು ಸೇರಿದವರು ಪಿಕಪ್ ವಾಹನವೊಂದನ್ನು ರಸ್ತೆಗೆ ಅಡ್ಡವಾಗಿಟ್ಟು ನಾನು ಚಲಾಯಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತನ್ನನ್ನು ಹಾಗೂ ಜೊತೆಯಲ್ಲಿದ್ದ ಮಹಮ್ಮದ್ ರಫೀಕ್‌ರವರನ್ನು ಕಾರಿನಿಂದ ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೆಲವರ ಕೈಯಲ್ಲಿದ್ದ ದೊಣ್ಣೆ ಹಾಗೂ ಕಬ್ಬಿಣದ ರಾಡಿನಿಂದ,ಕೈಯಿಂದ ಹೊಡೆದು ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ ರಕ್ತಗಾಯಗಳನ್ನುಂಟು ಮಾಡಿದ್ದಾರೆ.ಕಾರನ್ನು ಹುಡಿ ಮಾಡಿ ಜಖಂಗೊಳಿಸಿ ಸುಮಾರು 1.5 ಲಕ್ಷಗಳಷ್ಟು ನಷ್ಟ ಹಾಗು ಕಾರಿನಲ್ಲಿದ್ದ ಬೆಡ್ ಶೀಟ್‌ಗಳನ್ನೂ ಬಿಸಾಡಿ ರೂ.25೦೦೦ ನಷ್ಟವನ್ನುಂಟು ಮಾಡಿರುತ್ತಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ಅವರು ನೀಡಿರುವ ದೂರಿನ ಮೇರೆಗೆ ಕಲಂ 143, 144, 341, 504, 323, 324, 427, ಜೊತೆಗೆ 149, IPC ರಡಿಯಲ್ಲಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಗೆ ಸಂಬಂಧಿಸಿ, ಕಂಬಳಿ ಮಾರಾಟಕ್ಕೆಂದು ಕಾರಲ್ಲಿ ಬಂದಿದ್ದ ಈರ್ವರು ಮಹಿಳೆಯೋರ್ವರ ಕತ್ತಿನಲ್ಲಿದ್ದ ಸರವನ್ನು ಎಗರಿಸಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಅವರ ಕಾರು ಅಪಘಾತಕ್ಕೀಡಾಗಿ ಆರೋಪಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ಆರಂಭದಲ್ಲಿ ವ್ಯಾಪಕವಾಗಿ ಸುದ್ದಿಯಾಗಿತ್ತು.

 

ಚಾರ್ವಾಕ: ಕಾರಿನಲ್ಲಿ ಬಂದ ಅಪರಿಚಿತರಿಂದ ಮಹಿಳೆಯ ಸರ ಅಪಹರಣ

LEAVE A REPLY

Please enter your comment!
Please enter your name here