ಈ ಬಾರಿ ಈಶ್ವರಮಂಗಲದಲ್ಲೂ ನಡೆಯಲಿದೆ ಅದ್ದೂರಿ ಕಂಬಳ….!

0

‘ಈಶ್ವರಮಂಗಲ ಕಂಬಳ’ ಕರೆಯ ಉದ್ಘಾಟನೆ 

ಕೋಣಗಳ ಸಾಂಕೇತಿಕ ಓಟ

ಈಶ್ವರಮಂಗಲ: ಈಶ್ವರಮಂಗಲದಲ್ಲಿ ಈ ವರ್ಷದಿಂದ ‘ಈಶ್ವರಮಂಗಲ ಕಂಬಳ’ ಆಯೋಜನೆಗೆ ಸಿದ್ದತೆಗಳನ್ನು ನಡೆಸಲಾಗಿದೆ. ಇದಕ್ಕಾಗಿ ಈಶ್ವರಮಂಗಲ ಮರಕಡ ಗಿರೀಶ್ ರೈಯವರ ಜಾಗದಲ್ಲಿ ನಿರ್ಮಿಸಲಾಗಿರುವ ಕಂಬಳ ಕರೆಯು ಅ.24ರಂದು ಉದ್ಘಾಟನೆಗೊಂಡಿತು.

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ ದೀಪ ಬೆಳಗಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಕಂಬಳದ ಕರೆಯನ್ನು ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ 10 ಜೋಡಿ ಕೋಣಗಳೊಂದಿಗೆ, ಕೋಣಗಳ ಮ್ಹಾಲಕರು ಅತಿಥಿಗಳು ಹಾಗೂ ಸಾರ್ವಜನಿಕರೊಂದಿಗೆ ಮೆರವಣಿಗೆ ನಡೆಸಲಾಯಿತು. ಕಂಬಳ ಕರೆಯ ಬಳಿಯಿಂದ ಹೊರಟ ಮೆರವಣಿಗೆಯು ಈಶ್ವರಮಂಗಲ ಜಂಕ್ಷನ್ ತನಕ ಬಂದು ಕಂಬಳ ಕರೆಗೆ ಹಿಂತಿರುಗಿ, ಕೋಣಗಳನ್ನು ಕಂಬಳ ಕರೆಗೆ ಇಳಿಸಲಾಯಿತು. ಸಿಂಗಾರಿ ಮೇಳ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ನಂತರ ಕೋಣಗಳ ಸಾಂಕೇತಿಕ ಓಟ ಪ್ರದರ್ಶನಗಳು ನಡೆಯಿತು.

ಈಶ್ವರಮಂಗಲ ಮರಕ್ಕಡ ಗಿರೀಶ್ ರೈ ಸಹೋದರರ ಸಾರಥ್ಯದಲ್ಲಿ ಉಮೇಶ್ ಸುವರ್ಣ ಮಯ್ಯಾಳ ಮತ್ತು ಲಿಂಗಪ್ಪ ಪೂಜಾರಿ ಮಯ್ಯಾಳ ಇವರ ಮುಂದಾಳತ್ವದಲ್ಲಿ ಈಶ್ವರಮಂಗಲ ಮರಕ್ಕಡದಲ್ಲಿ ಕಂಬಳ ಕೋಣಗಳ ತರಬೇತಿ ಕರೆ ನಿರ್ಮಾಣಗೊಂಡಿದೆ. ಈ ಕರೆಯು 200 ಮೀಟರ್ ಉದ್ದವಿದೆ. ಇಲ್ಲಿ ಕಂಬಳಕ್ಕೆ ಕೋಣಗಳನ್ನು ಓಡಿಸಲು ತರಬೇತಿಗೆ ಅವಕಾಶವಿದೆ. ಮುಂದಿನ ಡಿಸೆಂಬರ್‌ನಲ್ಲಿ ಪ್ರಥಮವಾಗಿ ಕಂಬಳವನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಅತೀ ಉದ್ದದ ಕರೆ: ಈಶ್ವರಮಂಗಲದಲ್ಲಿ ನಿರ್ಮಾಣಗೊಂಡಿರುವ ಕಂಬಳದ ಕರೆಯು 200 ಮೀಟರ್ ಉದ್ದವಿದ್ದು ಕಂಬಳದ ಕರೆಗಳಲ್ಲಿಯೇ ಅತೀ ಉದ್ದದ ಕರೆಯಾಗಿದೆ. ಕರ್ನಾಟಕ ಹಾಗೂ ಕೇರಳಗಳಲ್ಲಿ ನಡೆಯುವ ಕಂಬಳಗಳಲ್ಲಿಯೇ ಇದು ಅತೀ ಉದ್ದದ ಕರೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

9 ತಂಡಗಳು ಭಾಗಿ: ಕಂಬಳ ಕರೆಯ ಉದ್ಘಾಟನೆಯಲ್ಲಿ ಒಟ್ಟು ಒಂಬತ್ತು ತಂಡಗಳು ಭಾಗವಹಿಸಿದ್ದವು. ದೇಲಂಪಾಡಿ ಮಯ್ಯಾಳ ಉಮೇಶ್ ಸುವರ್ಣ, ದೇಲಂಪಾಡಿ ಮಯ್ಯಾಳ ಲಿಂಗಪ್ಪ ಪೂಜಾರಿ, ತಿಂಗಳಾಡಿ ಬಾಳಾಯ ಲೋಹಿತ್ ಬಂಗೇರ, ಮುಳ್ಳೇರಿಯಾ ಯಡಪಾಡಿ ದಿ. ನಾರಾಯಣ ಶೆಟ್ಟಿ ಪರವಾಗಿ ಚಂದ್ರಹಾಸ ಶೆಟ್ಟಿ, ಈಶ್ವರಮಂಗಲ ತಲೆಬೈಲು ಅಬ್ದುಲ್ ಖಾದರ್, ಈಶ್ವರಮಂಗಲ ಇ.ಪಿ ಹಮೀದ್, ಮುಳ್ಳೇರಿಯಾ ಕಾರ್ಲೇ ಕಟ್ಟದಮನೆ ಬಾಲಕೃಷ್ಣ ಶೆಟ್ಟಿ, ಉರುಂಬಿ ಪೆರ್ಲಂಪಾಡಿ ಮೋಹನ ಪೂಜಾರಿಯವರ ತಂಡಗಳು ಭಾಗವಹಿಸಿದ್ದವು. ಭಾಗವಹಿಸಿದ ತಂಡಗಳಿಗೆ ಸೀಯಾಳ, ಎಣ್ಣೆ, ಶಾಲು, ತಾಂಬೂಲ ನೀಡಿ ಗೌರವಿಸಲಾಯಿತು.

60 ವರ್ಷದ ಹಿಂದೆ ನಡೆಯುತ್ತಿದ್ದ ಕಂಬಳ: ಈಶ್ವರಮಂಗಲದ ಕಂಬಳಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಸುಮಾರು 60 ವರ್ಷಗಳ ಹಿಂದೆ ಈಶ್ವರಮಂಗಲದಲ್ಲಿ ಅದ್ದೂರಿಯಾಗಿ ಕಂಬಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಇದೀಗ ಮತ್ತೆ ಕಂಬಳ ಆಯೋಜಿಸುವ ಮೂಲಕ ಇತಿಹಾಸ ಮರುಕಳಿಸಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ತಿಳಿಸಿದರು.

ಕಂಬಳ ಆಯೋಜನೆಗೆ ಮೆಚ್ಚುಗೆ: ನಗರ ಪ್ರದೇಶಲ್ಲಿ ನಡೆಯುತ್ತಿರುವ ಕಂಬಳಗಳನ್ನು ಇಂದು ಈಶ್ವರಮಂಗಲದಂತಹ ಹಳ್ಳಿ ಪ್ರದೇಶದಲ್ಲಿ ಮತ್ತೆ ಆಯೋಜಿಸುವ ಮೂಲಕ ಗತ ಇತಿಹಾಸವನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಕಂಬಳ ಆಯೋಜನೆಯ ಬಗ್ಗೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಆಳ್ವ, ಬಡಗನ್ನೂರು ಗ್ರಾ.ಪಂ ಸದಸ್ಯ ರವಿರಾಜ ರೈ ಸಜಂಕಾಡಿ, ಸುರೇಶ್‌ ಆಳ್ವ ಸಾಂತ್ಯ ಅರಿಯಡ್ಕ ನೆಟ್ಟಣಿಗೆ ಮುಡ್ನೂರು, ನೆಟ್ಟಣಿಗೆಮುಡ್ನೂರು ಗ್ರಾ.ಪಂ ಸದಸ್ಯ ಚಂದ್ರಹಾಸ ಚಿಮಣಿಗುಡ್ಡೆ, ಬೆಂಗಳೂರು ವಕೀಲ ಶ್ಯಾಂ ಕೌಂಡನ್ಯ, ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ಲ ರಹಿಮಾನ್ ಹಾಜಿ ಮೇನಾಲ, ಸಿಆರ್‌ಪಿಎಫ್ ಯೋಧ ರಾಧಾಕೃಷ್ಣ ರೈ ಅರಳಿಕಟ್ಟೆ, ನಿವೃತ್ತ ಶಿಕ್ಷಕರಾದ ಆನಂದ ರೈ ಸಾಂತ್ಯ, ಅಚ್ಚುತ ಮನಿಯಾಣಿ, ಸತ್ಯನಾರಾಯಣ ಭಟ್ ರಾಗಾಳಿ, ಸಂಜೀವ ರೈ ಉಪಸ್ಥಿತರಿದ್ದರು, ಕಂಬಳ ಕೋಣಗಳ ಮಾಲಕರು ಮತ್ತು ಸದಸ್ಯರುಗಳಾದ ರಾಮ್‌ದಾಸ್ ತಲೆಬೈಲು, ರಮೇಶ್ ಪೂಜಾರಿ ಮಯ್ಯಾಳ, ಪ್ರವೀಣ್ ಮಯ್ಯಾಳ, ಅನೀಲ್ ಅಡೂರು, ತನ್ವಿತ್ ಪೆರ್ಲಂಪಾಡಿ, ಅಬ್ದುಲ್ ಖಾದರ್ ತಲೆಬೈಲು, ಅಬ್ದುಲ್ ರಹಿಮಾನ್ ತಲೆಬೈಲು, ಸಿರಾಜ್ ಈಶ್ವರಮಂಗಲ, ಖಾದರ್ ಈಶ್ವರಮಂಗಲ, ವಿನಯ ಮಯ್ಯಾಳ, ಸುನೀಲ್ ರಾವ್ ಈಶ್ವರಮಂಗಲ, ಪ್ರದೀಪ್ ಕುಮಾರ್ ಕುಂಟಾಪು, ಮಾಧವ ಕುದ್ರೋಳಿ, ರವಿ ಕುತ್ಯಾಳ, ನಿಶಾಂತ್ ತಲೆಬೈಲು, ಚೇತನ್ ತಲೆಬೈಲು, ಕೌಶಿಕ್ ಮಯ್ಯಾಳ, ಗುರುಪ್ರಸಾದ್ ಮೆಣಸಿನಕಾನ, ಜಯಚಂದ್ರ ಸೆರಾಜೆ, ಧನ್‌ರಾಜ್ ನಾಟೆಕಲ್ಲು, ಸುರೇಶ್ ಮಯ್ಯಾಳ, ಮುಸ್ತಾಫ ಮೇನಾಲ, ಶ್ರೀಷ ಮರಕಡ ಸಹಕರಿಸಿದರು. ರವೀಂದ್ರ ರೈ ಮಲ್ಲಾವರ ನಿರೂಪಿಸಿ, ಶಿಕ್ಷಕ ಸುಕೇಶ್ ರೈ ವಂದಿಸಿದರು.

LEAVE A REPLY

Please enter your comment!
Please enter your name here