ಬೆಂಗಳೂರು:ಮಹಾರಾಷ್ಟ್ರದಲ್ಲಿ ಕೊರೋನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ನ ಉಪತಳಿಗಳು ಪತ್ತೆಯಾಗಿರುವುದರಿಂದ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.
ಅಮೇರಿಕಾದಲ್ಲಿ ಬಿಕ್ಯೂ.1, ಮಹಾರಾಷ್ಟ್ರದಲ್ಲಿ ಬಿಎ 2.75 ಹಾಗೂ ಬಿಜೆ.1 ಉಪತಳಿಗಳು ಪತ್ತೆಯಾಗಿವೆ. ದೀಪಾವಳಿ, ಕನ್ನಡ ರಾಜ್ಯೋತ್ಸವ ಸೇರಿ ವಿವಿಧ ಉತ್ಸವಗಳು ನಡೆಯುವುದರಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ನಿಯಮಗಳನ್ನು ಈ ಅವಧಿಯಲ್ಲಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಜ್ವರ, ಕೆಮ್ಮು, ಶೀತ, ಗಂಟಲು ನೋವು, ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.ರೋಗ ಗುಣಮುಖವಾಗುವವರೆಗೂ ಸ್ವಯಂ ಪ್ರೇರಿತವಾಗಿ ಮನೆಯಲ್ಲಿಯೇ ಇರಬೇಕು. ಹೊರಗಡೆ ಹೋಗುವಾಗ ಮುಖಗವಸು ಧರಿಸಬೇಕು ಎಂದು ಸೂಚಿಸಲಾಗಿದೆ.
ಈಗಾಗಲೇ ಎರಡು ಡೋಸ್ ಲಸಿಕೆ ಪಡೆದವರು ಇನ್ನೊಂದು ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರೋಗ ಲಕ್ಷಣ ಹೊಂದಿರುವವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.