ಕಾಣಿಯೂರಿನಲ್ಲಿ ಹಿಂದೂ-ಮುಸ್ಲಿಂ ಒಗ್ಗಟ್ಟಿದ್ದೇವೆ ಮಾಧ್ಯಮಗಳಲ್ಲಿ ಬರುವ ರೀತಿ ಏನೂ ಆಗಿಲ್ಲ- ಮುಸ್ಲಿಂ ವರ್ತಕರ ಹೇಳಿಕೆ

0

ಕಾಣಿಯೂರು: ಕಾಣಿಯೂರಿನಲ್ಲಿ ಹಿಂದೂ-ಮುಸ್ಲಿಂ ಒಗ್ಗಟ್ಟಿದ್ದೇವೆ. ಮಾಧ್ಯಮಗಳಲ್ಲಿ ಬರುವ ರೀತಿ ಏನೂ ಆಗಿಲ್ಲ ಎಂದು ಕಾಣಿಯೂರಿನ ಮುಸ್ಲಿಂ ವರ್ತಕರು ಹೇಳಿಕೆ ನೀಡಿದ್ದಾರೆ.

ಕಾಣಿಯೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರಮುಖರು ಯು.ಪಿ.ಮಾದರಿ ಹಲ್ಲೆ, ಜನಾಂಗೀಯ ಹಲ್ಲೆ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಕಡಬ ತಾಲೂಕು ಅಧ್ಯಕ್ಷ ಅಬ್ದುಲ್‌ ಜಲೀಲ್‌ ಬೈತಡ್ಕ ಮಾತನಾಡಿ, ಹಿಂದೂ ಮುಸ್ಲಿಂ ಕಾಣಿಯೂರಿನಲ್ಲಿ ಬದುಕಲಿಕ್ಕೆ ಕಷ್ಟ ಎಂಬ ವದಂತಿ ಸತ್ಯಕ್ಕೆ ದೂರವಾದ ವಿಚಾರ. ಯಾಕೆಂದರೆ ನಾವೆಲ್ಲರೂ ಒಟ್ಟಾಗಿ ಸೌಹಾರ್ಧತೆಯಿಂದ ಜೀವಿಸುತ್ತಿದ್ದೇವೆ.

ಮೊನ್ನೆ ವ್ಯಾಪಾರಿಗಳಿಂದ ನಡೆದ ಅತ್ಯಾಚಾರ ಯತ್ನ ಹಾಗೂ ವ್ಯಾಪಾರಿಗಳಿಗೆ ಹಲ್ಲೆ ಪ್ರಕರಣ ಈ ಎರಡೂ ಘಟನೆಯನ್ನು ಖಂಡಿಸುತ್ತೇವೆ, ಹಲ್ಲೆ ಘಟನೆಗೆ ಈಗಾಗಲೇ 6 ಜನರನ್ನು ಬಂಧಿಸಿದ್ದಾರೆ. ಪೋಲಿಸ್ ಇಲಾಖೆ ಮೇಲೆ ನಂಬಿಕೆ ಇದೆ ಅವರಿಗೆ ಬೇಕಾದ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಇನ್ನು ಇಂತಹ ಖಂಡನೆ ಮರುಕಳಿಸಬಾರದು ಎಲ್ಲಾ ಜಾತಿ ಧರ್ಮದವರು ವ್ಯಾಪಾರವನ್ನು ನಡೆಸುತ್ತಾ ಅಣ್ಣ, ತಮ್ಮಂದಿರ ಹಾಗೆ ಅನೋನ್ಯವಾಗಿದ್ದೇವೆ ಎಂದರು.

ನಾನು ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದು, ನಾನು ಅದೇ ರಸ್ತೆಯಲ್ಲಿ ಸುಮಾರು 4-5 ತಿಂಗಳುಗಳಿಂದ ಹೋಗುತ್ತಾ ಕೆಲಸ ಮಾಡುತ್ತಿದ್ದೇನೆ. ನಮ್ಮ ಕೆಲಸದವರು ಬಿ.ಸಿ ರೋಡ್ ನವರು, ನಮಗೆ ಯಾವುದೇ ತೊಂದರೆ ಆಗಿಲ್ಲ. ಕಾಣಿಯೂರಿನ ಜನರಿಂದ ಮತ್ತು ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರಿಂದ ಪ್ರೋತ್ಸಾಹ ಹೊರತು ಯಾವುದೇ ತೊಂದರೆ ಆಗಿಲ್ಲ ಎಂದರು.

ಕಾಣಿಯೂರಿನ ಅಡಿಕೆ ವ್ಯಾಪಾರಿ ಸಮೀರ್ ಮಾತನಾಡಿ, ನಾವೂ ಕಾಣಿಯೂರಿನಲ್ಲಿ ವ್ಯಾಪಾರ ಮಾಡುವುದು ಬಹಳ ವರ್ಷವಾಯಿತು. ನಮಗೆ ಕಾಣಿಯೂರಿನ ಪಂಚಾಯತ್ ಅಧ್ಯಕ್ಷರಾಗಲಿ ಉಪಾಧ್ಯಕ್ಷರಾಗಲಿ ಅಲ್ಲದೇ ಊರಿನವರಿಂದ ಇಷ್ಟರವರೆಗೆ ಯಾವುದೇ ತೊಂದರೆ ಆಗಿಲ್ಲ. ನಾವುಗಳು ಬಹಳ ವರ್ಷಗಳಿಂದ ಅನ್ಯೋನ್ಯತೆಯಿಂದ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಹಿಂದೂ ಮುಸ್ಲಿಂ ಎಂಬ ಬೇದಭಾವ ಇಲ್ಲ. ಅದಕ್ಕೆ ನಾವು ಆಸ್ಪದ ಕೊಡುವುದೂ ಇಲ್ಲ. ಸೋಷಿಯಲ್ ಮಿಡಿಯಾದಲ್ಲಿ ಬಂದತಹ ಉತ್ತರಪ್ರದೇಶ ಮಾದರಿಯ ಹಾಗೆ ಕಾಣಿಯೂರಿನಲ್ಲಿ ನಡೆಯುತ್ತಾ ಇದೆ ಎನ್ನುವುದು ಸದ್ಯಕ್ಕೆ ದೂರವಾದ ಮಾತು. ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಾರವಾಗಲೀ, ವಾಹನಗಳ ಬಾಡಿಗೆ, ಮೀನಿನ ಮಾರ್ಕೆಟ್, ಪಂಚಾಯತ್ ಕೆಲಸದ ಗುತ್ತಿಗೆದಾರರಿಗಾಗಲಿ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಇಲ್ಲಿ ನಮ್ಮ ವರ್ತಕ ಸಂಘದ ಅಧ್ಯಕ್ಷರಾಗಿ, ಆಟೋ ಚಾಲಕ ಸಂಘದ ಗೌರವಾಧ್ಯಕ್ಷರಾಗಿ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ ಕ್ಲಬ್ ನ ಮಜೀದ್ ಬೆದ್ರಾಜೆ ಮಾತನಾಡಿ, ಕಾಣಿಯೂರಿನಲ್ಲಿ ಎಲ್ಲಾ ಜಾತಿ ಧರ್ಮದವರು ಸೇರಿ ಅಂಬ್ಯುಲೆನ್ಸ್ ಹಾಕಿದ್ದೇವೆ. ಅದರ ಪ್ರಯೋಜನ ಎಲ್ಲರಿಗೂ ಸಿಗುತ್ತಿದೆ. ಮೊನ್ನೆಯ ಕಾಣಿಯೂರಿನಲ್ಲಿ ಹಲ್ಲೆಗೊಳಗಾದವರನ್ನು ಅದೇ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸೇರಿಸಿದ್ದೇವೆ. ಕಾಣಿಯೂರಿನಲ್ಲಿ ಒಗ್ಗಟ್ಟಿನ ವಾತಾವರಣವಿದೆ. ಹೊರ ಊರಿನವರು ನಮ್ಮ ಒಗ್ಗಟ್ಟನ್ನು ಮುರಿಯಲು ನೋಡಬೇಡಿ, ಕಾಣಿಯೂರನ್ನು ಏನೋ ಎಂಬಂತೆ ಬಿಂಬಿಸಬೇಡಿ. ನಾವು ಎಲ್ಲಾ ಜಾತಿ ಧರ್ಮದವರು ಸೇರಿ ಕಾಣಿಯೂರಿಗೆ ಅತೀ ಅಗತ್ಯವಿರುವ ಅಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ್ದೇವೆ. ಹೊರಗೆ ಕಾಣುವ ರೀತಿ ಕಾಣಿಯೂರು ಇಲ್ಲ ಎಂದರು.

ಹಿರಿಯ ಅಡಿಕೆ ವ್ಯಾಪಾರಿ ಮಹಮ್ಮದ್ ಇಕ್ಬಾಲ್ ಮಾತನಾಡಿ, ನಾನು 40 ವರ್ಷಗಳಿಂದ ಕಾಣಿಯೂರಿನಲ್ಲಿ ಅಡಿಕೆ ವ್ಯಾಪಾರ ಮಾಡುತ್ತಾ ಬಂದಿದ್ದೇನೆ, ನಾನು ಕಾಣಿಯೂರು ಮಠ, ಹಲವು ಕುಟುಂಬದೊಂದಿಗೆ ಆತ್ಮೀಯರಾಗಿದ್ದೇವೆ ಎಂದರು.

ಅಟೋ ಚಾಲಕ ಆಸ್ಪದ್ ಮಾತನಾಡಿ, ನಾನು ಕಾಣಿಯೂರಿನಲ್ಲಿ 7 ವರ್ಷಗಳಿಂದ ಆಟೋ ಚಾಲಕನಾಗಿ ದುಡಿಯುತ್ತಿದ್ದು, ಚಾರ್ವಾಕ, ದೋಳ್ಪಾಡಿ ಹಾಗೂ ಕಾಣಿಯೂರಿನ ವಿವಿಧ ಕಡೆಗಳಿಗೆ ಹೋಗುತ್ತಿದ್ದು ನನಗೆ ಯಾವುದೇ ರೀತಿಯ ತೊಂದರೆ ಇವತ್ತಿನವರೆಗೆ ಆಗಿಲ್ಲ. ಮೊನ್ನೆ ಹಲ್ಲೆ ನಡೆದಾಗ ಗಾಯಗೊಂಡವರನ್ನು ನಾನು ಮತ್ತೊಬ್ಬ ಹಿಂದೂ ಸಹೋದರ ಸೇರಿ ಅಂಬುಲೆನ್ಸ್‌ನಲ್ಲಿ ಕಡಬಕ್ಕೆ ಕರೆದುಕೊಂಡು ಹೋಗಿರುತ್ತೇವೆ. ನಮ್ಮನ್ನು ಆಸ್ಪತ್ರೆಗೆ ಕಳುಹಿಸಿದ್ದು ಪಂಚಾಯತ್ ಉಪಾಧ್ಯಕ್ಷ ಗಣೇಶ್ ಉದನಡ್ಕ ಎಂದು ಹೇಳಿದರು.

ಜಾತ್ರೆಯಲ್ಲಿ ತೊಟ್ಟಿಲು ಹಾಕುವ ವ್ಯಾಪಾರಿ ಹಾಗೂ ಸ್ಕೇಲ್ ವ್ಯಾಪಾರಿ ಹನೀಫ್ ಮಾತನಾಡಿ, ಕಾಣಿಯೂರು ಜಾತ್ರೆಯಲ್ಲಿ ಈ ಹಿಂದೆ ಒಂದು ಘಟನೆ ನಡೆದಾಗ ನಾನು ಓಡಿ ಹೋಗಿಲ್ಲ. ಅದನ್ನು ನನಗೆ ಬಗೆಹರಿಸಿಕೊಟ್ಟಿದ್ದು ಗಣೇಶ್ ಅವರೇ, ಆ ಪ್ರೀತಿ ವಿಶ್ವಾಸ ಇವತ್ತಿನವರೆಗೆ ನಮ್ಮಲ್ಲಿ ಹಾಗೇ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸತ್ತಾರ್ ಕಾಣಿಯೂರು, ಫೈಸಲ್ ಬಾಂತೈ, ಶಾಫಿ ಕೋಳಿ ಅಂಗಡಿ, ಶಾಫಿ ಬೈತಡ್ಕ, ನಜೀರ್ ಕಾಯ್ಮಣ, ಅಬ್ದುಲ್ಲ ಬೈತಡ್ಕ, ಹ್ಯಾರಿಸ್ ಕಲ್ಪಡ ಮತ್ತಿತ್ತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here