ಪುತ್ತೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಆಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕಿ ಪ್ರತಿಭಾ ಕುಳಾಯಿಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕೇಸಿಗೆ ಒಳಗಾಗಿ ತಲೆ ಮರೆಸಿಕೊಂಡಿರುವ ಪುತ್ತೂರಿನ ಕಹಳೆ ನ್ಯೂಸ್ ಸಂಸ್ಥೆಯ ಸಂಪಾದಕ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳೂರು ನ್ಯಾಯಾಲಯಕ್ಕೆ ವಕೀಲ ಶಂಭು ಶರ್ಮರವರ ಮೂಲಕ ಅ.25ರಂದು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಕುಳಾಯಿ ಫೌಂಡೇಶನ್ ಟ್ರಸ್ಟ್ ಮುಖ್ಯಸ್ಥೆಯೂ ಆಗಿರುವ ಪ್ರತಿಭಾ ಕುಳಾಯಿ ನೀಡಿದ ದೂರಿನಂತೆ ಐಪಿಸಿ 354, 509, ಐ.ಟಿ. ಕಾಯ್ದೆ 67 ಮತ್ತು ಮಹಿಳಾ ದೌರ್ಜನ್ಯ ತಡೆ ಕಾಯ್ದೆಯಡಿ ಶ್ಯಾಮ್ ಸುದರ್ಶನ್ ವಿರುದ್ಧ ಕೇಸ್ ದಾಖಲಾಗಿದೆ. ಬಳಿಕ ಶ್ಯಾಮ್ ಸುದರ್ಶನ್ ತಲೆ ಮರೆಸಿಕೊಂಡಿದ್ದಾರೆ.
ಸುರತ್ಕಲ್ ನಲ್ಲಿರುವ ಅಕ್ರಮ ಟೋಲ್ ಗೇಟ್ ತೆರವು ಮಾಡುವಂತೆ ಆಗ್ರಹಿಸಿ ಸಮಾನ ಮನಸ್ಕರ ನೇತೃತ್ವದಲ್ಲಿ ಅ.18ರಂದು ನಡೆದಿದ್ದ ಪ್ರತಿಭಟನೆಯ ವೇಳೆ ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವುದನ್ನು ವಿರೋಧಿಸಿ ಪ್ರತಿಭಾ ಕುಳಾಯಿ ಅವರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ್ದ ಭಾವಚಿತ್ರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿ ಶ್ಯಾಮ್ ಸುದರ್ಶನ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದ್ದು ತಲೆಮರೆಸಿಕೊಂಡ ಶ್ಯಾಮ್ ಸುದರ್ಶನ್ ಭಟ್ ಪತ್ತೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರ ನೇತೃತ್ವದಲ್ಲಿ ಸಿಸಿಬಿ, ಸೆನ್ ಮತ್ತು ಮಹಿಳಾ ಪೊಲೀಸ್ ಘಟಕದ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇದೀಗ ಶ್ಯಾಮ್ ಸುದರ್ಶನ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಅ.25ರಂದೂ ಮಂಗಳೂರು ಸಿಸಿಬಿ ಅಧಿಕಾರಿಗಳ ತಂಡ ಶ್ಯಾಮ್ ಅವರಿಗಾಗಿ ಪುತ್ತೂರಿನ ವಿವಿದೆಡೆ ಶೋಧ ನಡೆಸಿದೆ.ಅವರ ಬೊಳುವಾರಿನ ಮನೆಗೂ ಭೇಟಿ ನೀಡಿ ಪರಿಶೀಲಿಸಿದೆ.