ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ: ಗೋ ಪೂಜೆ ಗೋ ಸಮರ್ಪಣೆ ಮಾಡಿದವರಿಗೆ, ಗೋಗ್ರಾಸ ನೀಡಿದವರಿಗೆ ಸನ್ಮಾನ ಕಾರ್ಯಕ್ರಮ

0

ಸಾರ್ವಜನಿಕವಾಗಿ ಗೋವಿನ ಮಹತ್ವ ತಿಳಿಸುವಲ್ಲಿ ದೇವಳ ಮುಂದಿದೆ – ಸಂಜೀವ ಮಠಂದೂರು
ದೇವಸ್ಥಾನಕ್ಕೆ ಬಂದವರು ಗೋ ಶಾಲೆಗೂ ಬರುವಂತೆ ಮಾಡಬೇಕು – ಡಾ. ಎಂ.ಕೆ.ಪ್ರಸಾದ್
ಸದ್ಯದಲ್ಲೇ ಶಿಲ್ಪಾದಾರದಲ್ಲಿನ ಗೋ ಶಾಲೆ – ಕೇಶವಪ್ರಸಾದ್ ಮುಳಿಯ
ಸ್ವದೇಶಿ ಗೋ ತಳಿಯನ್ನು ಉಳಿಸುವ ಕಾರ್ಯ – ಮುರಳಿಕೃಷ್ಣ ಹಸಂತಡ್ಕ
ದೇವಳದ ಗೋವುಗಳಿಗೆ ನನ್ನ ಸೇವೆ ನಿರಂತರ- ಡಾ. ಪ್ರಸನ್ನ ಹೆಬ್ಬಾರ್
8 ದಿನದೊಳಗೆ ಗೋ ಶಾಲೆ – ಪಿ.ಜಿ.ಜಗನ್ನಿವಾಸ ರಾವ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ ಮತ್ತು ಗೋ ಪೂಜೆ ಕಾರ್ಯಕ್ರಮ ಅ.26ರಂದು ನಡೆಯಿತು. ಬೆಳಿಗ್ಗೆ ಗಣಪತಿ ಹೋಮ ಸಂಜೆ ಗೋ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಗೋ ಪೂಜೆ ನಡೆಯಿತು. ಗೋವುಗಳನ್ನು ಶೃಂಗರಿಸಿ. ಗಂಧ ಪ್ರಸಾದವನ್ನು ಹಚ್ಚಿ, ಅದಕ್ಕೆ ದೋಸೆ, ಅವಲಕ್ಕಿ, ಬಾಳೆ ಹಣ್ಣುಗಳನ್ನು ನೀಡಲಾಯಿತು. ಗೋ ಪೂಜೆ ಸಭಾ ಕಾರ್ಯಕ್ರಮದಲ್ಲಿ ಗೋ ಸಮರ್ಪಣೆ ಮಾಡಿದ ದಾನಿಗಳಿಗೆ, ಗೋ ಗ್ರಾಸ ನೀಡಿದವರನ್ನು ಸನ್ಮಾನಿಸಲಾಯಿತು. ಗೋ ಶಾಲೆಯ ನಿರ್ಮಾಣದ ಮುಂದಾಲುತ್ವ ವಹಿಸಿಕೊಂಡವರಿಗೆ ಮತ್ತು ಗೋವಿನ ನಿತ್ಯ ಆರೈಕೆ ಮಾಡುತ್ತಿರುವವರನ್ನು ಗೌರವಿಸಲಾಯಿತು.

ಸಾರ್ವಜನಿಕವಾಗಿ ಗೋವಿನ ಮಹತ್ವ ತಿಳಿಸುವಲ್ಲಿ ದೇವಳ ಮುಂದಿದೆ:
ಗೋವು ಪೂಜೆಯಲ್ಲಿ ಪಾಲ್ಗೊಂಡ ಶಾಸಕ ಸಂಜೀವ ಮಠಂದೂರು ಗ್ರೋ ಗ್ರಾಸ ಧನಸಹಾಯ ದೇಣಿಗೆ ಸಮರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಗೋವು ಮತ್ತು ನಾವು ನಮ್ಮ ಸಂಸ್ಕೃತಿ, ಹಳ್ಳಿಯ ಕೃಷಿಕನಿಗೆ ಗೋವು ಇಲ್ಲದೆ ಬದುಕಿಲ್ಲ. ನಮ್ಮ ದೇಶ ಕೃಷಿ ಸಂಪತ್ತು ಭರಿತ ದೇಶವಾಗಬೇಕಾದರೆ ಗೋವಿನ ಪಾತ್ರ ಮಹತ್ವ. ಹಾಗಾಗಿ ವರ್ಷಕ್ಕೊಮ್ಮೆ ನಾವು ಗೋ ಪೂಜೆಯ ದಿನ ಗೋವನ್ನು ಸ್ಮರಿಸುತ್ತೇವೆ. ಆದರೆ ರೈತ ನಿತ್ಯ ಗೋವಿಗೆ ನಮಸ್ಕಾರ ಮಾಡುತ್ತಾನೆ ಎಂದ ಅವರು ರಾಜ್ಯ ಸರಕಾರ ಎರಡು ವರ್ಷದ ಹಿಂದೆ ಗೋ ಹತ್ಯೆ ನಿಷೇಧ ಜಾರಿಗೆ ತಂದಿತ್ತಾದರೂ ಇದೀಗ ಬಿಗಿಯಾದ ಕಾನೂನು ಬಂದಿದ್ದರಿಂದ ಶೇ.90ರಷ್ಟು ಗೋ ದರೋಡೆ, ಕಳ್ಳತನ ನಿಂತು ಹೋಗಿದೆ. ಕಡಬದ ಕೊಲದಲ್ಲಿ ನೂರು ಎಕ್ರೆಯಲ್ಲಿ ಗೋ ಶಾಲೆಯನ್ನು ಸರಕಾರವೇ ನಡೆಸುತ್ತದೆ. ಗೋ ಸಾಕಣಿಕೆಗೆ ಕಷ್ಟ ಆದವರು ಅಲ್ಲಿ ಗೋವನ್ನು ಕೊಡಬಹುದು. ಇವತ್ತು ಪಠ್ಯಪುಸ್ತಕದಲ್ಲಿ ಬೇರೆ ಬೇರೆ ವಿಚಾರಕ್ಕೆ ಒತ್ತು ನೀಡುವ ಮೂಲಕ ಸಂಸ್ಕೃತಿಯ ಕಡೆಗಣನೆ ಆಗುತ್ತಿರುವ ಸಂದರ್ಭ ಮತ್ತೊಮ್ಮೆ ಸಾರ್ವಜನಿಕವಾಗಿ ಗೋವಿನ ಮಹತ್ವ ತಿಳಿಯಪಡಿಸುವ ಕೆಲಸ ದೇವಸ್ಥಾನದ ಮೂಲಕ ನಡೆಯುತ್ತಿದೆ. ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಬೇರೆ ಬೇರೆ ಕಾರ್ಯ ಮಾಡಲು ತುಡಿತ ಇದೆ. ಈ ನಿಟ್ಟಿನಲ್ಲಿ ಮುಂದೆ ಮಂತ್ರಿಗಳಾದ ಶಶಿಕಲಾ ಜೊಲ್ಲೆ ಅವರು ಪುತ್ತೂರು ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದರು.
ದೇವಸ್ಥಾನಕ್ಕೆ ಬಂದವರು ಗೋ ಶಾಲೆಗೂ ಬರುವಂತೆ ಮಾಡಬೇಕು:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರು ಮಾತನಾಡಿ ದೇವಸ್ಥಾನದ ಪರಿಸರ ವಿಶಾಲವಾಗಿರಬೇಕು. ಮರಗಿಡಗಳು ಇರಬೇಕು. ಇದರ ಜೊತೆಗೆ ಗೋ ಶಾಲೆಯಲ್ಲಿರುವ ಗೋವುಗಳಿಗೆ ಉತ್ತಮ ಆಹಾರ ಸಿಗಲು ಭಕ್ತರ ಸಹಕಾರವು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಬರುವವರು ಗೋ ಶಾಲೆಗೂ ಬರುವಂತೆ ಮಾಡಬೇಕೆಂದರು.

ಸದ್ಯದಲ್ಲೇ ಶಿಲ್ಪಾದಾರದಲ್ಲಿನ ಗೋ ಶಾಲೆ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ದೇವಳದ ಅಭಿವೃದ್ಧಿ ಕುರಿತು ಹಲವು ಯೋಜನೆ ಹಾಕಿಕೊಂಡಿದ್ದೇವೆ. ಆದರೆ ನಾವು ಯಾವುದೇ ಪ್ರಸ್ತಾವನೆಯನ್ನು ಇಲಾಖೆಗೆ ಕಳುಹಿಸಿದಾಗ ಅಲ್ಲಿ ಅದಕ್ಕೊಂದಷ್ಟು ಎನ್ವಾಕರಿಗಳು ಹೆಚ್ಚಾಗಿದೆ. ಇಲ್ಲಿ ಕಾಮಗಾರಿ ನಡೆಸಲು ಅದರ ಶೇ.50ರಷ್ಟು ಹಣ ಸಂಗ್ರಹಣೆ ಮಾಡಿರಬೇಕು. ಅದಕ್ಕಿಂತ ಮುಂಚೆ ಅಪ್ರೂವಲ್‌ಗೆ ಹೋಗುವಂತಿಲ್ಲ. ಅಪ್ರೂವಲ್ ಸಿಗದೆ ಹಣ ಸಂಗ್ರಹಿಸುವಂತಿಲ್ಲ. ಒಂದು ವೇಳೆ ಅಪ್ರೂವಲ್ ಆಗದಿದ್ದರೆ ದೇಣಿಗೆ ಕೊಟ್ಟವರು ಕೆಲಸದ ಕುರಿತು ಪ್ರಶ್ನಿಸುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಶಾಸಕರು ಸಮಸ್ಯೆಗೆ ಪರಿಹಾರ ನೀಡಬೇಕು ಎಂದ ಅವರು ಇಂತಹ ಸಮಸ್ಯೆ ಬಂದ ಹಿನ್ನೆಲೆಯಲ್ಲಿ ಇದೀಗ ತಾತ್ಕಾಲಿಕ ಗೋ ಶಾಲೆ ಸದ್ಯಕ್ಕೆ ಮಾಡಿದ್ದೇವೆ. ಮುಂದೆ ಶೀಘ್ರದಲ್ಲಿ ಗದ್ದೆಯ ಪೈರು ಕಟಾವು ಅದ ಬಳಿಕ ಇಲ್ಲಿ ಖಾಯಂ ಆಗಿರುವ ಶಿಲ್ಪಾ ಪ್ರಕಾರದ ಗೋ ಶಾಲೆ ನಕ್ಷೆ ಸಿದ್ದಗೊಂಡಿದೆ. ಈಗಾಗಲೇ ತಾತ್ಕಾಲಿಕ ಗೋ ಶಾಲೆ ಘೋಷಣೆ ಮಾಡಿದ ತಕ್ಷಣದಿಂದ ಹಲವಾರು ಭಕ್ತರು ದೇವಸ್ಥಾನಕ್ಕೆ ಗೋವನ್ನು ಸಮರ್ಪಣೆ ಮಾಡಿದ್ದಾರೆ. ಈ ನಡುವೆ ಸದ್ಯದ ಪರಿಸ್ಥಿತಿಯಲ್ಲಿ ಗೋ ಸಮರ್ಪಣೆಯನ್ನು ನಿಲ್ಲಿಸಿ ಮುಂದೆ ಖಾಯಂ ಗೋ ಶಾಲೆ ಆದ ತಕ್ಷಣ ಸಮರ್ಪಣೆ ಕಾರ್ಯಕ್ರಮ ಮುಂದುವರಿಸಲಿದ್ದೇವೆ ಎಂದರು.

ಸ್ವದೇಶಿ ಗೋ ತಳಿಯನ್ನು ಉಳಿಸುವ ಕಾರ್ಯ:
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ನಮಗೆ ಗೋವಿನ ಸಂಬಂಧ ಅನಿವಾರ್ಯವಾಗಿದೆ. ಅದೂ ಅಲ್ಲದೆ ಸ್ವದೇಶಿ ಗೋ ತಳಿಯನ್ನು ಉಳಿಸುವ ಜವಾಬ್ದಾರಿಯೂ ಇದೆ. ಹಾಗಾಗಿ ಇಂತಹ ಗೋ ಶಾಲೆಯ ಅಗತ್ಯತೆ ಇದೆ ಎಂದರು.

ದೇವಳದ ಗೋವುಗಳಿಗೆ ನನ್ನ ಸೇವೆ ನಿರಂತರ:
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್ ಅವರು ಮಾತನಾಡಿ ದೇವಸ್ಥಾನದಲ್ಲಿರುವ ಗೋವುಗಳಿಗೆ ನನ್ನ ಸೇವೆ ನಿರಂತರ ಇದೆ. ಏನೆ ಆಗಲಿ ಎಷ್ಟೇ ಸಮಯಕ್ಕಾದರೂ ಬಂದು ಆರೈಕೆ ಮಾಡುವುದು ನನ್ನ ಕರ್ತವ್ಯ. ಈಗಾಗಲೇ ಗೋ ಶಾಲೆಗೆ ಅನೇಕ ಸ್ವದೇಶಿ ತಳಿಗಳು ಬಂದಿವೆ. ಇವಕ್ಕೆಲ್ಲ ಈಗಾಗಲೇ ವ್ಯಾಕ್ಸಿನ್ ಮಾಡಲಾಗಿದೆ. ಇದರ ಜೊತೆಗೆ ಸರಕಾರವು ಗೋ ಶಾಲೆಗೆ ಪ್ರೋತ್ಸಾಹ ನೀಡಿದೆ. ಕೊಲ ಫಾರ್ಮ್‌ನಲ್ಲಿ ಮಲ್ನಾಡು ಗಿಡ್ಡ ತಳಿಗಳನ್ನೇ ಉಳಿಸಿಕೊಂಡಿದ್ದೇವೆ. ರೂ. 11ಸಾವಿರದ ಪುಣ್ಯ ಕೋಟಿ ದತ್ತು ಯೋಜನೆಯು ಇದೆ ಎಂದರು.


8 ದಿನದೊಳಗೆ ಗೋ ಶಾಲೆ:
ದೇವಳದ ವಾಸ್ತು ಇಂಜಿನಿಯರ್ ಆಗಿರುವ ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್‌ರವರು ಮಾತನಾಡಿ ದೇವಳದಲ್ಲಿ ತಾತ್ಕಾಲಿಕ ಗೋ ಶಾಲೆ ಆಗಬೇಕೆಂಬ ಸಂಕಲ್ಪ ಬಂದಾಗ ಯಾವುದೇ ಸ್ಥಳದಲ್ಲೇ ನಕ್ಷೆ ಮಾಡಿ ಪ್ರಧಾನ ವಾಸ್ತು ಶಿಲ್ಪಿ ಮುನಿಯಂಗಳ ಪ್ರಸಾದ್ ಅವರಲ್ಲಿ ಕೇಳಿಕೊಂಡು ಗೋ ಶಾಲೆ ನಿರ್ಮಾಣದ ಕಾರ್ಯ ಆರಂಭಿಸಿದ್ದೆವು. ಇದಕ್ಕೆ ಪೂರಕವಾಗಿ ದೇವಳದ ಅಧ್ಯಕ್ಷರು ಹಲವು ಯೋಜನೆ ಹಾಕಿಕೊಂಡಿದ್ದಾರೆ. ಅವೆಲ್ಲ ಯಶಸ್ವಿಯಾಗಲಿ ಎಂದರು.

ಸನ್ಮಾನ:
ಗೋ ಶಾಲೆಗೆ ಸ್ವದೇಶಿ ತಳಿಯನ್ನು ಸಮರ್ಪಣೆ ಮಾಡಿದ ದಾನಿಗಳನ್ನು ಮತ್ತು ಗೋ ಗ್ರಾಸ ನೀಡಿದವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗೋ ಶಾಲೆ ನಿರ್ಮಾಣದ ಜವಾಬ್ದಾರಿ ವಹಿಸಿದವರನ್ನು ಮತ್ತು ಸಹಕಾರ ನೀಡಿದವರನ್ನು ಮತ್ತು ಗೋವಿನ ನಿತ್ಯ ಆರೈಕೆ ಮಾಡುತ್ತಿರುವ ದೇವಳದ ನಿತ್ಯ ಚಾಕ್ರಿಯವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗೋವಿನ ಆರೋಗ್ಯ ಚಿಕಿತ್ಸಕರಾದ ಡಾ. ಪ್ರಸನ್ನ ಹೆಬ್ಬಾರ್ ಅವರನ್ನು ದೇವಳದ ಬಸವನ ಸೇವೆ ಮಾಡುತ್ತಿರುವ ವಿಭಾಗದಿಂದ ಸನ್ಮಾನಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಶೇಖರ್ ನಾರಾವಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ನಿತ್ಯ ಕರಸೇವಕರಾದ ವಸಂತ ಕುಮಾರ್, ಕಿರಣ್ ಶಂಕರ್ ಮಲ್ಯ, ಕೃಷ್ಣ ಮಚ್ಚಿಮಲೆ ಅತಿಥಿಗಳನ್ನು ಗೌರವಿಸಿದರು. ವೇ ಮೂ ವಿ.ಎಸ್ ಭಟ್ ಪ್ರಾರ್ಥಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ಸುಧಾ ಎಸ್ ರಾವ್ ವಂದಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ| ಹೆಚ್.ಜಿ.ಶ್ರೀಧರ್, ಪ್ರೊ. ವಿ.ಜಿ.ಭಟ್, ಮುಳಿಯ ಜ್ಯುವೆಲ್ಸ್‌ನ ಸುಲೋಚನಾ, ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ಗೋ ಶಾಲೆಯ ನಿರ್ಮಾಣದ ಇಂಜಿನಿಯರ್ ರಾಮಚಂದ್ರ ಘಾಟೆ ಸಹಿತ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದೇವರ ನಿತ್ಯ ಬಳಕಗೆ ಬೇಕಾದಷ್ಟು ಹಾಲು ಸಿಗಲಿದೆ
ಸರಕಾರದಿಂದ ಗೋ ಧಾಮ ಯೋಜನೆ ಸಾಕಾರಾದ ಆದಾಗ ದೊಡ್ಡ ಮಟ್ಟದಲ್ಲಿ ಗೋ ಶಾಲೆ ಆಗಲಿದೆ. ಸದ್ಯ ದೇವಸ್ಥಾನದ ನಿತ್ಯ ಬಳಕೆಗೆ ಬೇಕಾಗುವಷ್ಟು ಹಾಲಿನ ಅವಶ್ಯಕತೆಗೆ ತಕ್ಕಂತೆ ಹಾಲಿನ ಬಳಕೆಗಾಗಿ ಗೋ ಶಾಲೆ ಮಾಡಲಾಗಿದೆ. ಸ್ವದೇಶಿ ತಳಿಗಳನ್ನು ಉಳಿಸಿಕೊಂಡು ದೇವರ ಅಭಿಷೇಕಕ್ಕೆ, ಇತರ ಇತರ ಕಾರ್ಯಕ್ರಮಕ್ಕೆ ಬೇಕಾದಷ್ಟು ಹಾಲು ಈಗ ಸಿಗಲಿದೆ.
ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

LEAVE A REPLY

Please enter your comment!
Please enter your name here