ಉಪ್ಪಿನಂಗಡಿ: ಅಕ್ರಮ ಮದ್ಯ ಮಾರಾಟದ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿತ ಆರೋಪಿಯನ್ನು ಇಲಾಖಾ ಜೀಪಿನಲ್ಲಿ ಮಾಲು ಸಹಿತ ಪೊಲೀಸ್ ಠಾಣೆಗೆ ಕರೆ ತರುತ್ತಿದ್ದ ವೇಳೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಜೀಪಿನ ಚಕ್ರ ಕಳಚಿದ ಘಟನೆ ಶುಕ್ರವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ನೆಲ್ಯಾಡಿ ಹೊರಠಾಣಾ ವ್ಯಾಪ್ತಿಯ ಉದನೆ ಎಂಬಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯ ವಶದಲ್ಲಿದ್ದ ತಲಾ 180 ಮಿ.ಲೀ. ನ 5 ಬಾಟ್ಲಿ ಮದ್ಯ ಪತ್ತೆ ಹಚ್ಚಿ ಆರೋಪಿಯನ್ನು ಪೊಲೀಸ್ ಜೀಪಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆ ತರುತ್ತಿದ್ದರು. ಇನ್ನೇನು ಪೊಲೀಸ್ ಠಾಣೆ ತಲುಪಿದೆವು ಎನ್ನುವಷ್ಠರಲ್ಲಿ ಜೀಪಿನ ಮುಂಭಾಗದ ಚಕ್ರ ಜೀಪಿನಿಂದ ಕಳಚಲ್ಪಟ್ಟು ಜೀಪು ನಿಯಂತ್ರಣ ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ.
ಹೆದ್ದಾರಿಯಲ್ಲೇ ಈ ಘಟನೆ ಸಂಭವಿಸಿದ್ದರೆ: ಅಕ್ರಮ ಮದ್ಯ ಮಾರಾಟದ ಆರೋಪಿಯನ್ನು ಮೂವರು ಪೊಲೀಸರು ಕರೆತರುತ್ತಿದ್ದ ಜೀಪು ಹಳೆಯದ್ದಾಗಿದ್ದು, ಉದನೆಯಿಂದ ಉಪ್ಪಿನಂಗಡಿಗೆ ಕರೆತರುವ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣದ ವೇಳೆ ಜೀಪಿನ ಚಕ್ರವೇನಾದರೂ ಕಳಚಿಕೊಂಡಿದ್ದರೆ ಆರೋಪಿಯ ಸಹಿತ ಪೊಲೀಸರ ಜೀವಕ್ಕೂ ಅಪಾಯ ಉಂಟಾಗುತ್ತಿತ್ತು. ಬಹುತೇಕ ಅರಣ್ಯದಿಂದಾವೃತವಾದ ಅಪಾಯದ ಪ್ರದೇಶವನ್ನೇ ಹೊಂದಿರುವ ನೆಲ್ಯಾಡಿ ಹೊರಠಾಣಾ ಪೊಲೀಸರಿಗೆ ಸಾಮರ್ಥ್ಯರಹಿತ ವಾಹನಗಳನ್ನು ಬಳಸಲು ನೀಡಿರುವುದು ಇಲಾಖೆಯ ನಿರ್ಲಕ್ಷ್ಯದ ನಡೆಯಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.