ನೃತ್ಯೋಪಾಸನಾ ಕಲಾ ಕೇಂದ್ರ ಬಗ್ಗೆ…
2004ರಲ್ಲಿ ಪುತ್ತೂರಿನ ಮುಕ್ರಂಪಾಡಿಯಲ್ಲಿ ಆರಂಭವಾದ ನೃತ್ಯೋಪಾಸನಾ ಕಲಾ ಕೇಂದ್ರ ಈಗ 18 ವರ್ಷ ಪೂರೈಸುತ್ತಿದೆ. ಈ ಕೇಂದ್ರದಿಂದ ಈವರೆಗೆ ಸುಮಾರು ಒಂದು ಸಾವಿರಕ್ಕೂ ಅ„ಕ ಮಂದಿ ವಿದ್ಯಾರ್ಥಿಗಳು ಭರತನಾಟ್ಯ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಿಗೆ ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಕಲಾಕೇಂದ್ರ ಕಳೆದ 16 ವರ್ಷಗಳಿಂದ ನಿರಂತರವಾಗಿ ಶೇ.100 ಫಲಿತಾಂಶ ದಾಖಲಿಸುತ್ತಿದೆ. ಈ ಕಲಾಕೇಂದ್ರದ ವಿದ್ಯಾರ್ಥಿಗಳು ವಿಶ್ವವಿಖ್ಯಾತ ಮೈಸೂರು ದಸರಾ, ಆಳ್ವಾಸ್ ನುಡಿಸಿರಿ, ಧರ್ಮಸ್ಥಳ ಲಕ್ಷದೀಪ, ಸುಬ್ರಹ್ಮಣ್ಯ ಷಷ್ಠಿ, ಕೊಲ್ಲೂರು ದೇವಾಲಯ, ವೇಣೂರು ಮಹಾಮಸ್ತಕಾಭಿಷೇಕ, ಗಡಿನಾಡು ಕೇರಳ, ಶಿವಮೊಗ್ಗ ಸಾಗರದ ತುಮರಿ ಸೇರಿದಂತೆ ನಾಡಿನ ಹಲವಾರು ಕಡೆ ನೃತ್ಯ ಕಾರ್ಯಕ್ರಮ, ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದಾರೆ. ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯ, ವಿಟ್ಲ ಹಾಗೂ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಈ ಕಲಾಕೇಂದ್ರದ ನೃತ್ಯ ತರಗತಿ ನಡೆಯುತ್ತಿದೆ.
ಪುತ್ತೂರು: ನೃತ್ಯೋಪಾಸನಾ ಕಲಾ ಕೇಂದ್ರ ಪುತ್ತೂರು ಇದರ ʼವರ್ಷ ಸಂಭ್ರಮ-18ʼ ಕಾರ್ಯಕ್ರಮ ಅ.30ರಂದು ಪುತ್ತೂರು ಬೈಪಾಸ್ ಬಳಿಯ ಜೈನ ಭವನದಲ್ಲಿ ನಡೆಯಲಿದೆ. ಸಂಜೆ 4 ಗಂಟೆಯಿಂದ ಪುತ್ತೂರು, ಉಪ್ಪಿನಂಗಡಿ ಕಲಾ ತಂಡಗಳಿಂದ ನೃತ್ಯೋಪಾಸನಾ ಕಾರ್ಯಕ್ರಮ ನಡೆಯಲಿದೆ. ನಾಟ್ಯನಿಕೇತನ ಕೊಲ್ಯ, ಮಂಗಳೂರು ಇದರ ನೃತ್ಯಗುರು, ಕರ್ನಾಟಕ ಕಲಾಶ್ರೀ ಪುರಸ್ಕೃತ ರಾಜಶ್ರೀ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 6ರಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅತಿಥಿಯಾಗಿ ಭಾಗವಹಿಸುವರು.
ಮೂಡುಬಿದಿರೆ ವೋಲ್ಟ್ ಆ್ಯಂಪ್ ಸೌಂಡ್ಸ್ ಆ್ಯಂಡ್ ಲೈಟಿಂಗ್ಸ್‍ನ ಮುಚ್ಚೂರು ರಾಮಚಂದ್ರ ಭಟ್ ಅವರಿಗೆ ಈ ಬಾರಿಯ ನೃತ್ಯೋಪಾಸನಾ ಗೌರವ ಪುರಸ್ಕಾರ ಪ್ರದಾನ ಮಾಡಲಾಗುವುದು. ಆರ್ಥಿಕವಾಗಿ ಹಿಂದುಳಿದ ಕಲಾಸಕ್ತ ವಿದ್ಯಾರ್ಥಿಗಳ ದತ್ತು ಸ್ವೀಕರಿಸುವ ನೃತ್ಯ ಪೋಷಣೆ ಕಾರ್ಯಕ್ರಮ, ಭರತನಾಟ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವೂ ನೆರವೇರಲಿದೆ. ನೃತ್ಯೋಪಾಸನಾ ಕಾರ್ಯಕ್ರಮದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್ ನಟುವಾಂಗ, ಹಾಡುಗಾರಿಕೆಯಲ್ಲಿ ವಸಂತ ಕುಮಾರ್ ಗೋಸಾಡ ಹಾಗೂ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಗೀತೇಶ್ ನೀಲೇಶ್ವರ ಮೃದಂಗದಲ್ಲಿ, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ ಕಾಞಂಗಾಡ್ ಸಹಕರಿಸಲಿದ್ದಾರೆ ಎಂದು ನೃತ್ಯೋಪಾಸನಾ ಪ್ರಕಟಣೆ ತಿಳಿಸಿದೆ.