ದಿ ಪುತ್ತೂರು ಕ್ಲಬ್‌ನಲ್ಲಿ ನೂತನ ಅತಿಥಿ ಕೊಠಡಿ, ಪ್ರವೇಶ ಮಂಟಪ ಉದ್ಘಾಟನೆ

0

ಕ್ರಿಕೆಟ್ ಮೈದಾನ, ಸುಸಜ್ಜಿತ ಆಸ್ಪತ್ರೆಗಳಾದಾಗ ಪುತ್ತೂರು ಗ್ರಾಮಾಂತರ ಜಿಲ್ಲೆಯಾಗಲಿದೆ-ಮಠಂದೂರು

ಪುತ್ತೂರು:ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ರೈಲ್ವೇ ಟ್ರ್ಯಾಕ್ ಕ್ರಾಸಿಂಗ್ ರಸ್ತೆಗಳಿಗೆ ಕಾಯಕಲ್ಪ ನೀಡಲಾಗುವುದು.ಪುತ್ತೂರು ಕ್ಲಬ್‌ಗೆ ತೆರಳುವ ರಸ್ತೆಯನ್ನು ನಗರೋತ್ಥಾನದ ರೂ.35 ಲಕ್ಷ ಹಾಗೂ ನಗರ ಸಭೆಯ ರೂ.5 ಲಕ್ಷ ಸೇರಿದಂತೆ ಒಟ್ಟು 40 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಳಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮರೀಲ್‌ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ಅ.28ರಂದು ನಡೆದ ನೂತನ ಅತಿಥಿ ಕೊಠಡಿ ಮತ್ತು ಪ್ರವೇಶ ಮಂಟಪವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ಕ್ಲಬ್‌ಗೆ ತೆರಳುವ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ನಿರ್ಮಿಸಿ ಕ್ಲಬ್‌ನ್ನು ಆಸ್ವಾದಿಸುವ ಅವಕಾಶ ನೀಡಲಾಗುವುದು. ಸ್ವಚ್ಚತೆಯಲ್ಲಿ ಈಗ ಮೂರನೇ ಸ್ಥಾನದಲ್ಲಿರುವ ನಗರ ಸಭೆಯು ಮುತುವರ್ಜಿಯಿಂದ ಕೆಲಸ ನಿರ್ವಹಿಸುತ್ತಿದ್ದು ಪ್ರಥಮ ಸ್ಥಾನ ಪಡೆಯಲಾಗುವುದು.ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್ ಪಾಸ್ ಕಾಮಗಾರಿಗಳು ಪ್ರಗತಿಯಲ್ಲಿದೆ.ರೂ.1 ಕೋಟಿಯಲ್ಲಿ ಅಭಿವೃದ್ಧಿಯಾಗಲಿರುವ, ಹಾರಾಡಿಯಿಂದ ರೈಲು ನಿಲ್ದಾಣ ರಸ್ತೆಗೆ ಕೆಲವೇ ದಿನಗಳಲ್ಲಿ ಸಂಸದರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಹೇಳಿದ ಶಾಸಕರು, ಸರಕಾರ ಹಾಗೂ ನಗರ ಸಭೆ ವಿಶೇಷ ಅನುದಾನದಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಕ್ರಿಕೆಟ್ ಮೈದಾನ, ಸುಸಜ್ಜಿತ ಆಸ್ಪತ್ರೆಗಳು ನಿರ್ಮಾಣವಾದಾಗ ಪುತ್ತೂರು ಗ್ರಾಮಾಂತರ ಜಿಲ್ಲೆ ಆಗಲಿದೆ.ಇದಕ್ಕೆ ಡಿಪಿಆರ್ ಸಿದ್ಧವಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿಗೆ ಹೊಸ ಹೊಸ ಯೋಜನೆ-ಜೀವಂಧರ್ ಜೈನ್: ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ನಗರದ ಅಭಿವೃದ್ಧಿಗೆ ನಗರ ಸಭೆಯಿಂದ ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು ರೂ.2 ಕೋಟಿ ವೆಚ್ಚದಲ್ಲಿ ಬಿರುಮಲೆ ಬೆಟ್ಟ ಪ್ರವಾಸಿ ತಾಣವಾಗಿ ಅಭಿವೃದ್ಧಿ, ಬಾಲವನದ ಅಭಿವೃದ್ಧಿ ಪಡಿಸಲಾಗುವುದು.ಈಗಾಗಲೇ ಏಳು ಪಾರ್ಕ್‌ಗಳು ಅಭಿವೃದ್ಧಿಗೊಂಡು ಉದ್ಘಾಟನೆಯಾಗಿವೆ.ನಗರದ ಮೂಲಭೂತ ಸೌಲಭ್ಯಕ್ಕಾಗಿ ವಿಶೇಷವಾದ ಯೋಜನೆ ಹಾಕಿಕೊಳ್ಳಲು ನಗರ ಸಭೆಯು ಬದ್ಧವಾಗಿದೆ ಎಂದರು

ಇನ್ನಷ್ಟು ಅಭಿವೃದ್ಧಿಯಾಗಲಿ-ಶಕುಂತಳಾ ಶೆಟ್ಟಿ: ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪುತ್ತೂರು ಕ್ಲಬ್‌ನ ಪ್ರಾರಂಭದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ.ಹಂತ ಹಂತವಾಗಿ ಅಭಿವೃದ್ಧಿಯಾಗಿರುವ ಕ್ಲಬ್ ಸಾರ್ವಜನಿಕರನ್ನು ಆಕರ್ಷಿಸುವಂತೆ ಮಾಡಿದೆ.ಇನ್ನಷ್ಟು ಆಕರ್ಷಿಸುವಂತೆ ಅಭಿವೃದ್ಧಿ ಹೊಂದುವಂತಾಗಲಿ ಎಂದು ಆಶಿಸಿದರು.

ಸಾಮಾಜಿಕ ಸಂಬಂಧ ವೃದ್ಧಿಗೆ ಸಹಕಾರಿ-ಗಿರೀಶ್ ನಂದನ್: ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಆಧುನಿಕ ತಂತ್ರಜ್ಞಾನಗಳ ಕಾಲ ಘಟ್ಟದಲ್ಲಿ ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಎಲ್ಲರೂ ಒಟ್ಟು ಸೇರಿ ಬೆರೆಯಲು ಮಾನವೀಯ, ಸಾಮಾಜಿಕ ಸಂಬಂಧಗಳು ವೃದ್ಧಿಯಾಗಲು ಕ್ಲಬ್ ಸಹಕಾರಿಯಾಗಲಿದೆ.ಈ ಭಾಗದಲ್ಲಿ ಕ್ಲಬ್ ಸುವ್ಯವಸ್ಥಿತವಾಗಿ ನಿರ್ವಹಣೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನಷ್ಟು ಉನ್ನತೀಕರಣಗೊಳ್ಳಲಿ-ನಿಸರ್ಗಪ್ರಿಯ: ತಹಶೀಲ್ದಾರ್ ನಿಸರ್ಗಪ್ರಿಯ ಜೆ. ಮಾತನಾಡಿ, ಶಾಂತಿಯುತ ಪ್ರದೇಶದಲ್ಲಿ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವ ಕ್ಲಬ್ ಪುತ್ತೂರಿನ ನಾಗರಿಕರಿಗೆ ಕುಟುಂಬಸ್ಥರೊಂದಿಗೆ ಬೆರೆಯಲು ಉತ್ತಮ ಕೇಂದ್ರವಾಗಿದೆ.ಈ ಕ್ಲಬ್ ಇನ್ನಷ್ಟು ಉನ್ನತೀಕರಣಗೊಳ್ಳಲಿ ಎಂದರು.

ಜನತೆ ಸದುಪಯೋಗಪಡಿಸಿಕೊಳ್ಳಬೇಕು-ಮಧು ಎಸ್.ಮನೋಹರ್: ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ಮಾತನಾಡಿ, ಹಲವು ವೈಶಿಷ್ಠ್ಯತೆಗಳೊಂದಿಗೆ ನಿರ್ಮಾಣಗೊಂಡಿರುವ ಕ್ಲಬ್‌ನ್ನು ಪುತ್ತೂರಿನ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪುತ್ತೂರಿಗೆ ಕ್ರಿಕೆಟ್ ಸ್ಟೇಡಿಯಂ ಬೇಕು-ಚಿಕ್ಕಪ್ಪ ನಾಯ್ಕ್: ಕ್ಲಬ್‌ನ ಹಿರಿಯ ಸದಸ್ಯ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಮಾತನಾಡಿ, ಕ್ಲಬ್ ದಿನೇ ದಿನೇ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿ,ಪುತ್ತೂರಿಗೆ ಅಗತ್ಯವಾದ ಕ್ರಿಕೆಟ್ ಸ್ಟೇಡಿಯಂನ್ನು ನಿರ್ಮಿಸಿಕೊಂಡುವಂತೆ ಅವರು ಶಾಸಕರಲ್ಲಿ ಮನವಿ ಮಾಡಿದರು.‌

4 ಲಕ್ಸುರಿ ಕಾಟೇಜ್,ಸಿಂಥೆಟಿಕ್ ಟೆನ್ನಿಸ್ ಕೋರ್ಟ್-ಡಾ.ದೀಪಕ್ ರೈ: ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕ್ಲಬ್‌ನ ಅಧ್ಯಕ್ಷ ಡಾ.ದೀಪಕ್ ರೈ ಮಾತನಾಡಿ, ಕ್ಲಬ್ ಅಭಿವೃದ್ಧಿಯಲ್ಲಿ ಸದಸ್ಯರೆಲ್ಲರೂ ತಂಡವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.ಕ್ಲಬ್‌ನಲ್ಲಿ 4 ಲಕ್ಸೂರಿ ಕಾಟೇಜ್ ನಿರ್ಮಿಸಲಾಗುತ್ತಿದ್ದು ಮುಂದಿನ ವಾರದಲ್ಲಿ ಅಡಿಪಾಯ ಹಾಕಲಾಗುವುದು ಹಾಗೂ ಸಿಂಥೆಟಿಕ್ ಟೆನ್ನೀಸ್ ಕೋರ್ಟ್ ನಿರ್ಮಿಸಲಾಗುತ್ತಿದ್ದು ಇವುಗಳನ್ನು 2023ರಲ್ಲಿ ಪೂರ್ಣಗೊಳಿಸಲಾಗುವುದು.8 ವರ್ಷದಲ್ಲಿ ಅಭಿವೃದ್ಧಿ ಹೊಂದುತ್ತಾ ಸಾಗಿದ್ದು ಜಿಲ್ಲೆಯಲ್ಲಿ ಪುತ್ತೂರು ಕ್ಲಬ್ ಪ್ರಥಮ ಸ್ಥಾನ ಪಡೆಯುವಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರಲ್ಲದೆ, ಸದಸ್ಯರು ತಮ್ಮ ಮನೆಯ ಕಾರ್ಯಕ್ರಮಗಳನ್ನು ಕುಟುಂಬಸ್ಥರೊಂದಿಗೆ ಸೇರಿಕೊಂಡು ಕ್ಲಬ್‌ನಲ್ಲಿಯೇ ಆಯೋಜಿಸಿಕೊಳ್ಳುವಂತೆ ತಿಳಿಸಿದರು.ಪುತ್ತೂರು ಕ್ಲಬ್‌ನ ಕೋಶಾಽಕಾರಿ ಕೆ.ಪಿ.ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ‘ಸಹಕಾರಿ ರತ್ನ’ ಪ್ರಶಸ್ತಿ ಪುರಸ್ಕೃತರಾಗಿರುವ ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಆದರ್ಶ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ರಾಷ್ಟ್ರೀಯ ಚಾಂಪಿಯನ್‌ಶಿಪ್ ಬೈಕ್ ರ‍್ಯಾಲಿಯಲ್ಲಿ ಎರಡು ಬಾರಿ ನ್ಯಾಷನಲ್ ಚಾಂಪಿಯನ್ ಪಡೆದುಕೊಂಡಿರುವ ಹಾಗೂ ಪುತ್ತೂರಿನಲ್ಲಿಯೂ ನ್ಯಾಷನಲ್ ಚಾಂಪಿಯನ್‌ಶಿಪ್ ಬೈಕ್ ರ‍್ಯಾಲಿಯನ್ನು ಆಯೋಜಿಸಿರುವ ಏಸ್ ಮೋಟಾರ್‌ನ ಮ್ಹಾಲಕ ಆಕಾಶ್ ಐತಾಳ್, ವಾಸ್ತುಶಿಲ್ಪಿ ಸುಪ್ರೀತ್ ಆಳ್ವ ಮಂಗಳೂರುರವರನ್ನು ಸನ್ಮಾನಿಸಲಾಯಿತು.ಕ್ಲಬ್‌ನ ಅಭಿವೃದ್ಧಿ ಕೆಲಸಗಳಲ್ಲಿ ಸಹಕರಿಸಿದ ಸೌರಭ್, ಪ್ರಸಾದ್ ಹಾಗೂ ಮನೋಜ್‌ರವರನ್ನು ಗೌರವಿಸಲಾಯಿತು.

ತನ್ವಿ ಶೆಣೈ ಪ್ರಾರ್ಥಿಸಿದರು. ಕ್ಲಬ್‌ನ ಅಧ್ಯಕ್ಷ ಡಾ.ದೀಪಕ್ ರೈ ಸ್ವಾಗತಿಸಿದರು. ಸದಸ್ಯರಾದ ಪ್ರಭಾಕರ ಮುಗೇರು, ಮನೋಜ್ ಪೇರಾಲು, ಬೂಡಿಯಾರು ರಾಧಾಕೃಷ್ಣ ರೈ, ಶಿವರಾಮ ಆಳ್ವ, ರೂಪೇಶ್ ಶೇಟ್, ಆಸ್ಕರ್ ಆನಂದ್, ಚಂದ್ರಶೇಖರ ಅತಿಥಿಗಳನ್ನು ಹೂ ಗುಚ್ಚ ನೀಡಿ ಸ್ವಾಗತಿಸಿದರು.ಕ್ಲಬ್‌ನ ಉಪಾಧ್ಯಕ್ಷರಾದ ದೀಪಕ್ ಕೆ.ಪಿ., ಸಚ್ಚಿದಾನಂದ, ಪ್ರಶಾಂತ್ ಶೆಣೈ ಸನ್ಮಾನಿತರ ಪರಿಚಯ ಮಾಡಿದರು.ಕ್ಸೇವಿಯರ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಿಶ್ವಾಸ್ ಶೆಣೈ ವಂದಿಸಿದರು.

ಪುತ್ತೂರಿನ ಅಭಿವೃದ್ಧಿಗೂ ಕೊಡುಗೆ ನೀಡಿ

ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಪುತ್ತೂರು ಕ್ಲಬ್‌ನಲ್ಲಿ ಹೊಸ ಮೆರುಗು, ಚೈತನ್ಯವನ್ನು ಪುತ್ತೂರಿನ ಜನತೆಗೆ ಪರಿಚಯಿಸಿದ್ದಾರೆ.ಮನರಂಜನೆ, ಕ್ರೀಡೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕ್ಲಬ್ ಪೂರೈಸಿದೆ.ಆಧುನಿಕ ಸಮಾಜದ ಬೇಡಿಕೆಗಳನ್ನು ಈಡೇರಿಸಿರುವುದಲ್ಲದೆ ಕೋವಿಡ್ ಸಂದರ್ಭದಲ್ಲಿಯೂ ಕ್ಲಬ್‌ನ ಅಭಿವೃದ್ಧಿಗೆ ಕೊರತೆ ಉಂಟಾಗಿಲ್ಲ. ನಿರಂತರವಾಗಿ ಹೊಸತನಗಳೊಂದಿಗೆ ಮಾದರಿ ಕ್ಲಬ್ ಆಗಿ ನಿರ್ಮಾಣಗೊಂಡಿದೆ.ಸದಸ್ಯರು ಕ್ಲಬ್‌ನ ಅಭಿವೃದ್ಧಿಗೆ ಕೊಡುಗೆ ನೀಡಿರುವಂತೆಯೇ ಪುತ್ತೂರಿನ ಅಭಿವೃದ್ಧಿಗೂ ಕೊಡುಗೆ ನೀಡುವಂತೆ ಶಾಸಕ ಸಂಜೀವ ಮಠಂದೂರು ವಿನಂತಿಸಿದರು.

LEAVE A REPLY

Please enter your comment!
Please enter your name here