‘ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿ ಸಿಕ್ಕಿಬಿದ್ದರೆ ಜೀವನದುದ್ದಕ್ಕೂ ನೋವು ಅನುಭವಿಸುವಿರಿ’; ಫಿಲೋಮಿನಾದಲ್ಲಿ ನಡೆದ ಸೈಬರ್ ಕ್ರೈಮ್ ಕಾರ್ಯಾಗಾರದಲ್ಲಿ ಪಿಎಸ್‌ಐ ಶಶಿಕಾಂತ್ ರಾಥೋಡ್

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ವ್ಯಾಟ್ಸಪ್, ಟ್ವಿಟರ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವಾಗ ತಾಳ್ಮೆ ಹಾಗೂ ಎಚ್ಚರ ಇರಲಿ. ಸಾಮಾಜಿಕ ಜಾಲತಾಣವಿರುವುದು ಉತ್ತಮ ಸಂದೇಶಗಳನ್ನು ರವಾನಿಸಲು. ಯಾರು ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡುತ್ತಾರೋ ಅವರು ಸೈಬರ್ ಅಪರಾಧ(ಕ್ರೈಮ್)ದಡಿಯಲ್ಲಿ ಶಿಕ್ಷೆಗೆ ಗುರಿಯಾಗುವಿರಿ ಅಲ್ಲದೆ ತಮ್ಮ ಕುಟುಂಬ ಅಸಹಾಯಕ ಪರಿಸ್ಥಿತಿಯಿಂದ ಹೊರ ಬರಲು ಸಾಧ್ಯವಾಗದು ಎಂದು ಪುತ್ತೂರು ನಗರ ಠಾಣೆಯ ಪಿಎಸ್‌ಐ ಶಶಿಕಾಂತ್ ರಾಥೋಡ್‌ರವರು ಹೇಳಿದರು.‌

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ಸೈಬರ್ ಕ್ರೈಮ್’ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿ ಮಾತನಾಡಿದರು. ಕಾಲ-ಕಾಲಕ್ಕೆ ಅನುಗುಣವಾಗಿ ಹೊಸ-ಹೊಸ ಆವಿಷ್ಕಾರಗಳು ನಡೆಯುತ್ತಿರುತ್ತವೆ. ಆದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮಗಳು ಸಂಭವಿಸುವುದು ಸಹಜ. ಇತ್ತೀಚೆಗಿನ ದಿನಗಳಲ್ಲಿ ಯುವ ಸಮೂಹ ಊಟ, ನೀರು ಬಿಟ್ಟು ಬೇಕಾದರೂ ಬದುಕಬಲ್ಲರು, ಆದರೆ ಮೊಬೈಲ್, ಇಂಟರ‍್ನೆಟ್, ಫೇಸ್‌ಬುಕ್, ಟ್ವಿಟರ್ ಬಿಟ್ಟು ಇಂದಿನ ಯುವಸಮೂಹ ಬದುಕಲಾರರು ಎಂಬುದು ಅಂಕಿ ಅಂಶಗಳು ದೃಢಪಡಿಸಿವೆ. ಅಂತರ್ಜಾಲದ ಮುಖಾಂತರ ನಾವು ಮಾಡುವ ಪ್ರತಿಯೊಂದು ಕಾರ್ಯವೂ ನಮ್ಮ ಹೆಜ್ಜೆ ಗುರುತನ್ನು ಅಚ್ಚಳಿಯದೆ ಮೂಡಿಸುತ್ತದೆ. ಒಮ್ಮೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಮಾಹಿತಿಯನ್ನು ಮುಂದೆ ನಾವು ಬೇಡವೆಂದು ಅಳಿಸಿದರೂ ಅದು ಜಾಲತಾಣದ ಸರ್ವರ್‌ಗಳಲ್ಲಿ ಭದ್ರವಾಗಿ ಸಂಗ್ರಹಗೊಂಡಿರುತ್ತದೆ. ನಮ್ಮ ಬ್ಯಾಂಕ್ ಖಾತೆಯ ವಿವರ, ಆಧಾರ್ ನಂಬರ್ ಮುಂತಾದ ಮಾಹಿತಿಯ ಗೌಪ್ಯತೆಯನ್ನು ಹೇಗೆ ಕಾಪಾಡುವುದು? ಯಾವೆಲ್ಲ ರೀತಿಯಲ್ಲಿ ಜನರು ಸೈಬರ್ ಅಪರಾಧಿಗಳಿಗೆ ತಮಗರಿವಿಲ್ಲದೇ ಮಾಹಿತಿ ನೀಡುತ್ತಾರೆ. ನಮ್ಮ ಮಾಹಿತಿಯ ದುರ್ಬಳಕೆ ಹೇಗೆ ನಡೆಯುತ್ತದೆ? ಮುಂತಾದ ವಿಷಯಗಳನ್ನು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಗೆ ದಾಸರಾಗಿರುವುದು ವಿಷಾದನೀಯ. ದೇಶ ಬೆಳೆಯುತ್ತಿದ್ದಂತೆ ಹೊಸ ಹೊಸ ಅವಿಷ್ಕಾರಗಳು ಉದ್ಭವಗೊಳ್ಳುತ್ತಿದ್ದು ಇದರಲ್ಲಿ ಮೊಬೈಲ್ ಕ್ರಾಂತಿಯೂ ಕೂಡ ಹೌದು. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿನ ಒಳ್ಳೆಯ ವಿಷಯಗಳನ್ನು ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಪುತ್ತೂರು ನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಉದಯ ಕುಮಾರ್ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಸುಮ ಡಿ.ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಹೆತ್ತವರ ನಂಬಿಕೆಯನ್ನು ಉಳಿಸಿಕೊಳ್ಳಿ…

ಸಾಮಾಜಿಕ ಜಾಲತಾಣಗಳಿಂದ ಮನುಷ್ಯ-ಮನುಷ್ಯನ ಆತ್ಮೀಯ ಸಂಬಂಧ, ಕುಟುಂಬದ ಸಂಬಂಧ, ಭಾವನೆಗಳು, ಮೂಲ ಅಭಿವ್ಯಕ್ತಿ ಎಂಬುದು ಇತ್ತೀಚೆಗೆ ಮರೀಚಿಕೆಯಾಗಿವೆ. ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳಲ್ಲಿ ಸಾಮಾಜಿಕ ಜಾಲತಾಣಗಳ ದುರುಪಯೋಗವೇ ಅಧಿಕವಾಗಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಕೆಲವು ಘಟನೆಗಳೇ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟರೆ ತಮಗೂ, ಸಮಾಜಕ್ಕೂ ಒಳ್ಳೆಯದು. ವಿದ್ಯಾರ್ಥಿಗಳು ಪರ್ಸೆಟೇಂಜ್‌ಗೆ ಜೋತು ಬೀಳದೆ ಸಾಮಾನ್ಯ ಜ್ಞಾನವನ್ನು ಹೊಂದಿ, ಒಳ್ಳೆಯ ವಿಷಯಗಳನ್ನು ಅರ್ಥೈಸಿಕೊಳ್ಳಿ, ವಿಶ್ಲೇಷಣಾ ಶಕ್ತಿ ವೃದ್ಧಿಗೊಳಿಸಿ, ಹೆತ್ತವರ ನಂಬಿಕೆಯನ್ನು ಉಳಿಸಿಕೊಳ್ಳಿ.

-ಶಶಿಕಾಂತ್ ರಾಥೋಡ್, ಪಿಎಸ್‌ಐ, ಪುತ್ತೂರು ನಗರ ಪೊಲೀಸ್ ಠಾಣೆ

LEAVE A REPLY

Please enter your comment!
Please enter your name here