ಕಾಣಿಯೂರಿನಲ್ಲಿ ವ್ಯಾಪಾರಿಗಳ ಮೇಲೆ ನಡೆದ ಗುಂಪು ಹಲ್ಲೆ ಖಂಡಿಸಿ ಪುತ್ತೂರಿನಲ್ಲಿ ಮುಸ್ಲಿಂ ಯುವಜನ ಪರಿಷತ್‌ನಿಂದ ಬೃಹತ್ ಪ್ರತಿಭಟನೆ- ಸಾವಿರಾರು ಮಂದಿ ಭಾಗಿ

0

ಪುತ್ತೂರು: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದ್ದು ಮುಖ್ಯಮಂತ್ರಿ ಸಹಿತ ಜವಾಬ್ದಾರಿಯುತ ಅಧಿಕಾರದಲ್ಲಿರುವವರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಗೆ ಕಿವಿಯೂ ಕೇಳುತ್ತಿಲ್ಲ, ಕಣ್ಣೂ ಕಾಣುತ್ತಿಲ್ಲ. ಒಟ್ಟಾರೆಯಾಗಿ ಸಂಘ ಪರಿವಾರವನ್ನು ತೃಪ್ತಿಪಡಿಸುವ ಕೆಲಸವನ್ನು ಮಾತ್ರ ಸರಕಾರ ಮಾಡುತ್ತಿದೆ ಎಂದು ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಹೇಳಿದರು.

ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಬ್ಬರ ಮೇಲೆ ಅಮಾನುಷ ಗುಂಪು ಹಲ್ಲೆ ನಡೆಸಿದರ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಆಶ್ರಯದಲ್ಲಿ ಅ.28ರಂದು ಕಿಲ್ಲೆ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಅನೈತಿಕ ಪೊಲೀಸ್‌ಗಿರಿ ಮೂಲಕ ಕಾಣಿಯೂರಿನಲ್ಲಿ ವ್ಯಾಪಾರಿಗಳಿಬ್ಬರನ್ನು ಕೋಮುವಾದಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು ಖಂಡನೀಯವಾಗಿದ್ದು ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಮನುಷ್ಯತ್ವ ಒಂದಂಶ ಇರುವವರಿಂದ ಇದು ಸಾಧ್ಯವಿಲ್ಲ. ಮನುಷ್ಯತ್ವ, ಮಾನವೀಯತೆ, ಸಂಸ್ಕಾರ ಇಲ್ಲದವರು ಕೃತ್ಯ ಎಸಗಿದ್ದಾರೆ ಅವರೆಲ್ಲರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಅವರು ಒತ್ತಾಯಿಸಿದರು.

ಫ್ಯಾಶಿಸಂ ಮಿತಿ ಮೀರಿದೆ-ರಫಿಯುದ್ದೀನ್

ಮುಸ್ಲಿಂ ಜಸ್ಟೀಸ್ ಫಾರಂನ ಸ್ಥಾಪಕಾಧ್ಯಕ್ಷ ರಫಿಯುದ್ದೀನ್ ಕುದ್ರೋಳಿ ಮಾತನಾಡಿ ಕಾಣಿಯೂರಿನಲ್ಲಿ ಇಬ್ಬರು ಅಮಾಯಕರ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ನಡೆದಿರುವುದನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಮುಸ್ಲಿಂ ವ್ಯಾಪಾರಿಗಳ ಬದಲು ಬೇರೆಯವರಿಗೆ ಈ ರೀತಿಯ ಹಲ್ಲೆ ನಡೆದಿದ್ದರೆ ಇದೀಗ ಜಿಲ್ಲೆಗೆ ಬೆಂಕಿ ಬೀಳುತ್ತಿತ್ತು. ಕಾಣಿಯೂರಿನ ಘಟನೆ ಗಂಭೀರ ಘಟನೆಯಾದರೂ ರಾಜ್ಯ ಮಟ್ಟದ ಮಾಧ್ಯಮಗಳು ಮೌನಕ್ಕೆ ಶರಣಾಗಿವೆ. ಸಣ್ಣ ಪುಟ್ಟ ಪ್ರಕರಣಗಳನ್ನೂ ಎನ್‌ಐಎ, ಸಿಬಿಐಗೆ ಒಪ್ಪಿಸುವ ಸರಕಾರ ಇದನ್ನೂ ಎನ್‌ಐಎಗೆ ಒಪ್ಪಿಸಿ ಎಂದು ಅವರು ಹೇಳಿದರು. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದ್ದು ಫ್ಯಾಶಿಸಂ ಮಿತಿ ಮೀರಿದೆ. ಎಲ್ಲದಕ್ಕೂ ಒಂದು ಕೊನೆ ಎಂಬುವುದು ಇದೆ ಎಂದು ಅವರು ಹೇಳಿದರು.

ಕಾಣಿಯೂರು ಗುಂಪು ಹಲ್ಲೆ ಮಾನವೀಯತೆಯ ಕಗ್ಗೊಲೆ-ಅನೀಸ್ ಕೌಸರಿ

ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ ಜಿಲ್ಲೆಯ ಕೋಮುವಾದಿ ಶಕ್ತಿಗಳ ಮನುಷ್ಯತ್ವ ವಿರೋಧೀ ನಡೆಯಿಂದ ದೇಶವೇ ತಲೆ ತಗ್ಗಿಸುವಂತೆ ಆಗಿದ್ದು ಜಿಲ್ಲೆಗೆ ಮುಖ್ಯಮಂತ್ರಿಗಳು ಬಂದು ಹೋದ ಬಳಿಕ ಅಶಾಂತಿ ಹೆಚ್ಚುತ್ತಿದೆ. ಪರಸ್ಪರ ಧರ್ಮ ನೋಡಿ ಹಲ್ಲೆಗಳು ನಡೆಯುತ್ತಿದೆ ಇದಕ್ಕೆ ಮುಖ್ಯಮಂತ್ರಿಗಳ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯೇ ಕಾರಣವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಮುಸ್ಲಿಮರಿಗೊಂದು ನ್ಯಾಯ ಹಿಂದುಗಳಿಗೊಂದು ನ್ಯಾಯ ನೀಡುವ ಮೂಲಕ ಸಹೋದರರಂತೆ ಬಾಳುತ್ತಿದ್ದ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಸರಕಾರವೇ ಮಾಡುತ್ತಿದೆ. ಕಾಣಿಯೂರಿನಲ್ಲಿ ನಡೆದ ಗುಂಪು ಹಲ್ಲೆ ಕೃತ್ಯ ಮಾನವೀಯತೆಯ ಕಗ್ಗೊಲೆಯಾಗಿದೆ. ಈ ಪ್ರತಿಭಟನೆ ಆರಂಭಿಕ ಹಂತವಾಗಿದ್ದು ನ್ಯಾಯ ಸಿಗದಿದ್ದಲ್ಲಿ ಇನ್ನೊಂದು ಹಂತದಲ್ಲಿ ಯಾವ ರೀತಿಯ ಹೋರಾಟ ಮಾಡಬೇಕೆನ್ನುವುದು ನಮಗೆ ಗೊತ್ತಿದೆ ಎಂದು ಅವರು ಹೇಳಿದರು. ಕಾಣಿಯೂರಿನಂತಹ ಹಲ್ಲೆ ಘಟನೆ ವಿರುದ್ಧ ಹಿಂದೂ ಸಮಾಜದ ಧರ್ಮಗುರುಗಳು ಧ್ವನಿ ಎತ್ತಬೇಕಾಗಿದ್ದು ನಮ್ಮ ಸಮುದಾಯದವರು ಆ ರೀತಿಯ ಕೃತ್ಯ ಎಲ್ಲಿಯಾದರೂ ಮಾಡಿದ್ದಲ್ಲಿ ಸಾವಿರಾರು ಉಲಮಾಗಳು ಅದರ ವಿರುದ್ಧ ಮಾತನಾಡುತ್ತಿದ್ದರು ಎಂದ ಅನೀಸ್ ಕೌಸರಿಯವರು ರಾಜ್ಯದ ಪತ್ರಿಕಾ ಮಾಧ್ಯಮಗಳೂ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ. ಕೋಮು ವಿಷಬೀಜ ಬಿತ್ತುವವರ ಮೇಲೆ ಪೊಲೀಸರು ಯಾಕೆ ಕೇಸು ದಾಖಲಿಸುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.

ಕೋಮು ಭಾಷಣಗಾರರ ಮೇಲೆ ಕಠಿಣ ಕೇಸ್ ದಾಖಲಿಸಿ-ಯಾಕೂಬ್ ಸಅದಿ

ಎಸ್ಸೆಸ್ಸೆಫ್ ಮುಖಂಡ ಯಾಕೂಬ್ ಸಅದಿ ನಾವೂರು ಮಾತನಾಡಿ ಕಾಣಿಯೂರಿನಲ್ಲಿ ನಡೆಸಿದ ಹಲ್ಲೆ ಘಟನೆ ಖಂಡನೀಯವಾಗಿದ್ದು ಅಲ್ಲಿನ ಗ್ರಾ.ಪಂ ಮುಖ್ಯಸ್ಥರೂ ಅದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವಿದೆ. ಪುಂಡ ಪೋಕರಿಗಳ ಅಂತಹ ಕೃತ್ಯವನ್ನು ಅವರ ಹಿಂಬಾಲಕರು ಸಪೋರ್ಟ್ ಮಾಡುತ್ತಾರೆ ಎಂದರೆ ಮುಂದೆ ಸಮಾಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಇಷ್ಟೆಲ್ಲಾ ಘಟನೆಗಳಾಗುತ್ತಿದ್ದರೂ ಸರಕಾರ ಮೌನಕ್ಕೆ ಶರಣಾಗಿದ್ದು ತಾರತಮ್ಯ ನೀತಿಯ ಮೂಲಕ ಒಂದು ಸಮುದಾಯಕ್ಕೆ ವಂಚಿಸುವ ಕೆಲಸ ಮಾಡುತ್ತಿದೆ. ಈ ಕೆಟ್ಟ ಸರಕಾರ ಬದಲಾಗುವುದು ಅನಿವಾರ್ಯವಾಗಿದ್ದು ಇಲ್ಲಿ ಶಾಂತಿ ನೆಲೆಸಬೇಕಾಗಿದೆ ಎಂದು ಅವರು ಹೇಳಿದರು. ಕಾಣಿಯೂರು ಹಲ್ಲೆ ಘಟನೆಯನ್ನು ಪೊಲಿಸ್ ಇಲಾಖೆ ಕೂಡಾ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ ಯಾಕೂಬ್ ಸಅದಿ ಅವರು ಇಲ್ಲಿ ಕೋಮು ಭಾಷಣ ಮಾಡುವವರ ವಿರುದ್ಧ ಕಠಿಣ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿ ಎಂದು ಡಿವೈಎಸ್‌ಪಿ ಅವರಲ್ಲಿ ಮನವಿ ಮಾಡಿದರು.

ಕಾಣಿಯೂರು ಘಟನೆ: ಪೊಲೀಸರಿಂದ ತಾರತಮ್ಯ-ಅಶ್ರಫ್

ಮಂಗಳೂರು ಮಾಜಿ ಮೇಯರ್ ಹಾಜಿ ಅಶ್ರಫ್ ಮಾತನಾಡಿ ಕಾಣಿಯೂರಿನಲ್ಲಿ ವ್ಯಾಪಾರಿಗಳಿಬ್ಬರ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ನಡೆದಿದ್ದರೂ ಪೊಲೀಸ್ ಇಲಾಖೆ ಸಣ್ಣ ಪುಟ್ಟ ಸೆಕ್ಷನ್ ಹಾಕಿದ್ದು ಕನಿಷ್ಠ 307 ಸೆಕ್ಷನ್ ಕೇಸ್ ದಾಖಲು ಮಾಡಲೂ ಸಾಧ್ಯವಿಲ್ಲ, ಹಾಗಾದರೆ ನ್ಯಾಯವನ್ನು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸಿದರು.

ನ್ಯಾಯ ಸಿಗದಿದ್ದಲ್ಲಿ ‘ಕಾಣಿಯೂರು ಚಲೋ’ ಹೋರಾಟ-ಸುಹೈಲ್ ಖಂದಕ್

ಸಾಮಾಜಿಕ ಮುಖಂಡ ಸುಹೈಲ್ ಖಂದಕ್ ಮಾತನಾಡಿ ಸಂಘ ಪರಿವಾರ ದೇಶದ ಶತ್ರುವಾಗಿದ್ದು ಅದನ್ನು ಪ್ರತಿಯೋರ್ವರೂ ಅರಿತುಕೊಳ್ಳಬೇಕು. ಕಾಣಿಯೂರು ಪ್ರಕರಣದಲ್ಲಿ ನ್ಯಾಯ ಸಿಗದೇ ಇದ್ದಲ್ಲಿ ಮುಂದಕ್ಕೆ ನಮ್ಮ ಹೋರಾಟ ಕಾಣಿಯೂರು ಚಲೋ ಆಗಿರುತ್ತದೆ ಎಂದು ಅವರು ಹೇಳಿದರು.

ಆರೋಪಿಗಳ ಮೇಲೆ ಜಾಮೀನು ರಹಿತ ಕೇಸ್ ದಾಖಲಿಸಿ-ಅಶ್ರಫ್ ಕಲ್ಲೇಗ

ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ ನಾವು ಕಾನೂನಿಗೆ ಗೌರವ ನೀಡುವವರಾಗಿದ್ದು ಪೊಲೀಸ್ ಇಲಾಖೆಯ ಮನವಿ ಮೇರೆಗೆ ಜಾಥಾವನ್ನು ಕೈಬಿಟ್ಟು ಪ್ರತಿಭಟನೆ ಮಾತ್ರ ಹಮ್ಮಿಕೊಂಡಿದ್ದೇವೆ. ಕಾಣಿಯೂರು ಘಟನೆಯಲ್ಲಿ ಘೋರ ಅನ್ಯಾಯವಾಗಿದ್ದು ಪೊಲೀಸ್ ಇಲಾಖೆ ಬಿಜೆಪಿ, ಸಂಘ ಪರಿವಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ಕಾಣಿಯೂರು ಹಲ್ಲೆ ಘಟನೆಯಲ್ಲಿ ಭಾಗಿಯಾದವರ ಮೇಲೆ ಜಾಮೀನು ರಹಿತ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಕಾಣಿಯೂರು ಘಟನೆ ಸರಕಾರಿ ಪ್ರೇರಿತ ಕೃತ್ಯ-ಇಬ್ರಾಹಿಂ ಸಾಗರ್

ಸ್ವಾಗತಿಸಿದ ಮುಸ್ಲಿಂ ಯುವಜನ ಪರಿಷತ್‌ನ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಕಾಣಿಯೂರಿನಲ್ಲಿ ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಗುಂಪು ಹಲ್ಲೆ ಸಮಾಜ ತಲೆ ತಗ್ಗಿಸುವ ಕೆಲಸವಾಗಿದ್ದು ಇದು ಸರಕಾರಿ ಪ್ರೇರಿತ ಕೃತ್ಯವಾಗಿದೆ. ಸುಮಾರು 2 ಗಂಟೆಗಳ ಕಾಲ ಯುವಕರಿಬ್ಬರಿಗೆ ಥಳಿಸಿದ ಕರುಣೆಯಿಲ್ಲದ ದುಷ್ಕರ್ಮಿಗಳ ಹೆಡೆಮುರಿಯನ್ನು ಸಂವಿಧಾನಾತ್ಮಕವಾಗಿ ಕಟ್ಟುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಪ್ರಾರ್ಥನೆಗೈದರು.

ಪ್ರಮುಖರಾದ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಮಹಮ್ಮದ್ ಕುಂಞಿ ವಿಟ್ಲ, ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಬಿ.ಎ ಶಕೂರ್ ಹಾಜಿ ಕಲ್ಲೇಗ, ಎಚ್ ಮಹಮ್ಮದಾಲಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಯೂಸುಫ್ ಡ್ರೀಮ್ಸ್, ಇಕ್ಬಾಲ್ ಎಲಿಮಲೆ, ಉಮ್ಮರ್ ಕೆ.ಎಸ್ ಸುಳ್ಯ, ಎಂ.ಪಿ ಅಬೂಬಕ್ಕರ್, ಅಶ್ರಫ್ ಬಾವು ಹಾಗೂ ಯುವಜನ ಪರಿಷತ್ ಪದಾಧಿಕಾರಿಗಳು, ಸದಸ್ಯರು ಮತ್ತು ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಶಾಕಿರ್ ಹಾಜಿ ಮನವಿ ಪತ್ರ ವಾಚಿಸಿದರು. ಸಂಚಾಲಕ ಅಡ್ವೊಕೇಟ್ ನೂರುದ್ದೀನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆ ರದ್ದು: ಪ್ರತಿಭಟನಾ ಸಭೆಗೆ ಮೊದಲು ಇದ್ದ ಮೆರವಣಿಗೆಯನ್ನು ಸುರಕ್ಷತೆಯ ದೃಷ್ಟಿಯಿಂದ ಕೊನೆಯ ಕ್ಷಣದಲ್ಲಿ ಕೈ ಬಿಡಲಾಯಿತು.

ಮನವಿ ಸಲ್ಲಿಕೆ: ಪ್ರತಿಭಟನೆ ಬಳಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here