ಪುತ್ತೂರು: ಮುಂಡೂರು ಗ್ರಾ.ಪಂ ವ್ಯಾಪ್ತಿಯ ಕಂಪ ಎಂಬಲ್ಲಿ ಒಂದೇ ಕುಟುಂಬಕ್ಕೆ ಈಗಾಗಲೇ ಎರಡು ಸೈಟ್ ಮಂಜೂರುಗೊಂಡಿದ್ದು ಇದೀಗ ಮೂರನೇ ಸೈಟ್‌ಗೆ ಕಬಳಿಕೆಗೆ ಹುನ್ನಾರ ನಡೆಯುತ್ತಿದ್ದು ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ಈಗಾಗಲೇ 94 ಸಿ ಮುಖಾಂತರ 2 ಜಾಗ ಪಡೆದುಕೊಂಡವರು 3ನೇಯದ್ದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ನಿಯಮ, ಕಾನೂನು ಯಾವುದೂ ಇಲ್ವಾ ಎಂದು ಪ್ರಶ್ನೆ ಮಾಡಿದರು. ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ೩ನೇ ಸೈಟ್ ಕಬಳಿಕೆಗೆ ಹುನ್ನಾರ ನಡೆಸುತ್ತಿದ್ದು ಪಿಡಿಓ ಸೂಚನೆ ನೀಡಿದ ಬಳಿಕವೂ ಅದನ್ನೇ ಮುಂದುವರಿಸುತ್ತಾರೆಂದಾರೆ ಇದರ ಹಿಂದೆ ಯಾರಿದ್ದಾರೆ, ಇದಕ್ಕೆ ಅರ್ಥವಿದೆಯೇ ಎಂದು ಕೇಳಿದರು. ಸದಸ್ಯ ಬಾಬು ಕಲ್ಲಗುಡ್ಡೆ ಮತ್ತಿತರರು ಧ್ವನಿಗೂಡಿಸಿದರು. ನಂತರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪಿಡಿಓ ಗೀತಾ ಬಿ.ಎಸ್ ತಿಳಿಸಿದರು.
ಅಮ್ಮುಂಜದಲ್ಲಿ ರಸ್ತೆಗೆ ಬೇಲಿ:
ಅಮ್ಮುಂಜ ಸಮೀಪದ ಕೋಡಿಜಾಲ್ ರಸ್ತೆಯನ್ನು ಮುಳಿಯ ಸಂಸ್ಥೆಯವರು ಬೇಲಿ ಹಾಕಿ ಅತಿಕ್ರಮಣ ಮಾಡಿದ್ದು ಇದು ಗ್ರಾ.ಪಂ.ಗೂ ಗೊತ್ತಿದೆ. ತಹಶೀಲ್ದಾರ್ ಗಮನಕ್ಕೂ ತರಲಾಗಿದೆ. ಆದರೂ ಬೇಲಿ ತೆರವು ಮಾಡುವ ಕಾರ್ಯ ಇನ್ನೂ ಆಗಿಲ್ಲ ಯಾಕೆ ಎಂದು ಸದಸ್ಯ ಬಾಬು ಕಲ್ಲಗುಡ್ಡೆ ಆಕ್ರೊಶ ವ್ಯಕ್ತಪಡಿಸಿದರು. ದೊಡ್ಡವರಿಗೊಂದು ಕಾನೂನು, ಬಡವರಿಗೊಂದು ಕಾನೂನು ಇದೆಯೇ ಪ್ರಶ್ನಿಸಿದ ಬಾಬು ಕಲ್ಲಗುಡ್ಡೆಯವರು ನ್ಯಾಯ ಎಲ್ಲರಿಗೂ ಒಂದೇ ರೀತಿ ಇರಬೇಕು. ರಸ್ತೆಗೆ ಬೇಲಿ ಹಾಕಿದ್ದನ್ನು ತೆರವುಗೊಳಿಸಬೇಕು. ತೆರವುಗೊಳಿಸದೇ ಇದ್ದಲ್ಲಿ ಹೋರಾಟಕ್ಕೆ ಇಳಿಯಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಪಿಡಿಓ ಗೀತಾ ಬಿ.ಎಸ್ ಉತ್ತರಿಸಿ ಸ್ಥಳಕ್ಕೆ ಶಿಘ್ರದಲ್ಲೇ ಗ್ರಾ.ಪಂ ನಿಯೋಗ ಭೇಟಿ ನೀಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕು-ವಿರೋಧ
ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗಳಾಗುತ್ತಿದ್ದು ಅದನ್ನು ಸರಕಾರ ಅನುಷ್ಠಾನಕ್ಕೆ ತರದೆ ಕೂಡಲೇ ಹಿಂಪಡೆಯಬೇಕು ಎಂದು ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಆಗ್ರಹಿಸಿದರು.
ಬಾವಾ ರಸ್ತೆ ಮತ್ತೆ ಚರ್ಚೆ:
ಸರ್ವೆ ಗ್ರಾಮದ ಬಾವಾ ರಸ್ತೆ ವಿಚಾರದಲ್ಲಿ ಸಹಾಯಕ ಆಯುಕ್ತರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪ ಸದಸ್ಯರಿಂದ ವ್ಯಕ್ತವಾಯಿತು. ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಕರುಣಾಕರ ಗೌಡ ಎಲಿಯ, ಚಂದ್ರಶೇಖರ ಎನ್.ಎಸ್.ಡಿ ಮೊದಲಾದವರು ಬಾವಾ ರಸ್ತೆ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲ್ಪಣೆ, ಸೊರಕೆ, ಸರ್ವೆ ಭಾಗದಲ್ಲಿ ಬೀದಿ ದೀಪ ಇಲ್ಲ:
ಸದಸ್ಯ ಮಹಮ್ಮದ್ ಆಲಿ ಮಾತನಾಡಿ ಕಲ್ಪಣೆ ಸೊರಕೆ ಮಾರ್ಗದಲ್ಲಿ ಸರ್ವೆ ದೇವಸ್ಥಾನದ ವರೆಗೆ ಬೀದಿ ದೀಪದ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲಿಗೆ ಬೀದಿ ದೀಪ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಾ ಎಸ್, ಸದಸ್ಯರಾದ ಬಾಲಕೃಷ್ಣ ಪೂಜಾರಿ, ದುಗ್ಗಪ್ಪ ಕಡ್ಯ, ಉಮೇಶ್ ಗೌಡ ಅಂಬಟ, ಅರುಣಾ ಎ.ಕೆ, ಯಶೋಧ ಅಜಲಾಡಿ, ರಸಿಕಾ ರೈ ಮೇಗಿನಗುತ್ತು, ಕಮಲ, ವಿಜಯ ಕರ್ಮಿನಡ್ಕ, ದೀಪಿಕಾ ಸಿ.ಕೆ, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು. ಸಿಬ್ಬಂದಿ ಕೊರಗಪ್ಪ ನಾಯ್ಕ ವರದಿ, ಅರ್ಜಿ ವಾಚಿಸಿದರು. ಸಿಬ್ಬಂದಿಗಳಾದ ಶಶಿಧರ ಕೆ ಮಾವಿನಕಟ್ಟೆ, ಸತೀಶ, ಕವಿತಾ, ಮೋಕ್ಷಾ ಸಹಕರಿಸಿದರು.
ದೇವಪ್ಪ ನಾಯ್ಕರಿಗೆ ಬೀಳ್ಕೊಡುಗೆ:
ಮುಂಡೂರು ಗ್ರಾ.ಪಂ.ನಲ್ಲಿ ಸುಮಾರು 28 ವರ್ಷಗಳಿಂದ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಗಿ ಕರ್ತವ್ಯ ನಿರ್ವಹಿಸಿ ಪದೋನ್ನತಿ ಹೊಂದಿ 34-ನೆಕ್ಕಿಲಾಡಿ ಗ್ರಾ.ಪಂ.ಗೆ ಅಕೌಂಟೆಂಟ್ ಆಗಿ ವರ್ಗಾವಣೆಗೊಂಡಿರುವ ದೇವಪ್ಪ ನಾಯ್ಕ ಕೇದಗೆದಡಿಯವರನ್ನು ಗ್ರಾ.ಪಂ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಕರುಣಾಕರ ಗೌಡ ಎಲಿಯ, ಕಮಲೇಶ್ ಎಸ್.ವಿ, ಚಂದ್ರಶೇಖರ್ ಎನ್‌ಎಸ್‌ಡಿ, ಪಿಡಿಓ ಗೀತಾ ಬಿ.ಎಸ್, ಸಿಬ್ಬಂದಿ ಶಶಿಧರ ಕೆ ಮಾವಿನಕಟ್ಟೆ ಮೊದಲಾದವರು ಮಾತನಾಡಿ ದೇವಪ್ಪ ನಾಯ್ಕರ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿದ ದೇವಪ್ಪ ನಾಯ್ಕರವರು ತಮ್ಮ ಸೇವಾವಧಿಯ ಅನುಭವವನ್ನು ಮೆಲುಕು ಹಾಕಿ ಕೃತಜ್ಞತೆ ಸಲ್ಲಿಸಿದರು.