ಕಾವು ತುಡರ್ ಭಜನಾ ಸಂಘದ 7ನೇ ವಾರ್ಷಿಕೋತ್ಸವ ಭಜನಾ ಕಾರ್ಯಕ್ರಮ-ಕುಣಿತ ಭಜನೆ-ಧಾರ್ಮಿಕ ಸಭೆ-ಸನ್ಮಾನ

0

ಎಲ್ಲರಿಗೂ ಒಳ್ಳೆಯದನ್ನು ಬಯಸುವುದು ಹಿಂದೂ ಸಂಸ್ಕೃತಿ-ಡಾ. ಪ್ರಭಾಕರ ಭಟ್ ಕಲ್ಲಡ್ಕ
ಭಗವಂತನ ನಾಮಸ್ಮರಣೆ ಮುಖ್ಯ-ರಾಮಕೃಷ್ಣ ಕಾಟುಕುಕ್ಕೆ
ಅರ್ಥಪೂರ್ಣ ಕಾರ್ಯಕ್ರಮ-ನನ್ಯ
ಭಜನಾ ಸಂಘದ ಹುಟ್ಟಿನಿಂದಾಗಿ ಸಾಮಾಜಿಕ ಪರಿವರ್ತನೆ ಆಗಿದೆ-ಭಾಸ್ಕರ ಬಲ್ಯಾಯ

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿರುವ ತುಡರ್ ಭಜನಾ ಸಂಘದ 7ನೇ ವಾರ್ಷಿಕೋತ್ಸವ ಸಮಾರಂಭವು ಅ.29ರಂದು ಸಂಜೆ ನನ್ಯ ಜನಮಂಗಲ ಸಭಾಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಭಜನಾ ಕಾರ್ಯಕ್ರಮ:
ಸಂಜೆ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ತುಡರ್ ಮಾತೃ ಭಜನಾ ಮಂಡಳಿಯ ಗೌರವಾಧ್ಯಕ್ಷೆ ಗೀತಾ ಮನಮೋಹನ ಬನಾರಿ, ಅಧ್ಯಕ್ಷೆ ಶ್ಯಾಮಲಾ ಪೆರ್ನಾಜೆಯವರು ದೀಪ ಪ್ರಜ್ವಲನೆ ಮಾಡಿದರು. ಬಳಿಕ ನಡೆದ ಭಜನಾ ಕಾರ್ಯಕ್ರಮದಲ್ಲಿ ಭಜನಾ ಗುರು ರಾಮಕೃಷ್ಣ ಕಾಟುಕುಕ್ಕೆಯವರು ಉಪಸ್ಥಿತಿ ವಹಿಸಿ ತುಡರ್ ಭಜನಾ ಸಂಘ ಮತ್ತು ಮಾತೃ ಮಂಡಳಿ ಸದಸ್ಯರು, ಹಿರಿಯ ಭಜನಾ ಪಟುಗಳಾದ ಅಮ್ಮು ಪೂಂಜ ಪಳನೀರು, ಸುಂದರ ಪೂಜಾರಿ ಕೆರೆಮಾರು ಸೇರಿದಂತೆ ಅನೇಕ ಭಜಕರು ಪಾಲ್ಗೊಂಡಿದ್ದರು.

ಕುಣಿತ ಭಜನೆ:
ಭಜನಾ ಕಾರ್ಯಕ್ರಮದಲ್ಲಿ ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರಿಂದ ಕುಣಿತ ಭಜನೆಯ ಮೊದಲ ಪ್ರದರ್ಶನ ನಡೆಯಿತು. ತರಬೇತುದಾರ ಧನಂಜಯ ಕುಮಾರ್ ಸಿ.ಟಿ ಮತ್ತು ಸಂಚಾಲಕ ಗಂಗಾಧರ ನಾಯ್ಕರವರು ಸಂಯೋಜನೆ ಮಾಡಿದರು.

ಧಾರ್ಮಿಕ ಸಭೆ:
ಭಜನಾ ಮಂಗಲೋತ್ಸವದ ಬಳಿಕ ಧಾರ್ಮಿಕ ಸಭೆ ನಡೆಯಿತು.

ಎಲ್ಲರಿಗೂ ಒಳ್ಳೆಯದನ್ನು ಬಯಸುವುದು ಹಿಂದೂ ಸಂಸ್ಕೃತಿ-ಡಾ. ಪ್ರಭಾಕರ ಭಟ್ ಕಲ್ಲಡ್ಕ
ಧಾರ್ಮಿಕ ಭಾಷಣ ಮಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಮಾತನಾಡಿ ನಮ್ಮ ದೇಶ ಅಭಿವೃದ್ಧಿ ಆದರೆ ಸಾಲದು ನಮ್ಮ ಪರಂಪರೆ ಉಳಿದರೆ ಮಾತ್ರ ದೇಶ ಪರಿಪೂರ್ಣತೆಯ ಅಭಿವೃದ್ಧಿ ಕಾಣಲು ಸಾಧ್ಯ, ಎಲ್ಲರಿಗೂ ಒಳ್ಳೆಯದನ್ನು ಬಯಸುವ ಹಿಂದೂ ಸಂಸ್ಕೃತಿ ಉಳಿದರೆ ಮಾತ್ರ ನಾವು ಬದುಕಿ ಬಾಳಬಹುದು, ಭಜನೆ ನಮ್ಮ ಹಿಂದೂ ಸಂಸ್ಕೃತಿಯ ಮೂಲ ಭಾಗವಾಗಿದೆ, ಭಗವಂತನ ಶಕ್ತಿ, ಅನುಗ್ರಹ ಇಲ್ಲದಿದ್ದರೆ ಯಾವುದು ಅಸಾಧ್ಯ, ಹಾಗಾಗಿ ಭಗವಂತನ ಅನುಗ್ರಹ, ಮೋಕ್ಷ ಪ್ರಾಪ್ತಿಗೆ ಭಜನೆ ಸುಲಭ ಮಾರ್ಗವಾಗಿದೆ, ಆ ನಿಟ್ಟಿನಲ್ಲಿ ತುಡರ್ ಯುವಕ ಮಂಡಲವು ಈ ಗ್ರಾಮದಲ್ಲಿ ಭಜನೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ, ವಿಶೇಷವಾಗಿ ಮಕ್ಕಳನ್ನು ಕೂಡ ಭಜನಾ ಸಂಘದಲ್ಲಿ ಸೇರಿಸಿಕೊಂಡು ಅವರಿಗು ಸುಜ್ಞಾನದ ಬೆಳಕನ್ನು ನೀಡುತ್ತಿದ್ದಾರೆ, ಪೋಷಕರು ಇಂತಹ ಕಾರ್ಯಕ್ಕೆ ಪೋಷಕರು ಸದಾ ಪ್ರೋತ್ಸಾಹ ನಿಡಬೇಕು ಎಂದು ಹೇಳಿದರು.

ಭಗವಂತನ ನಾಮಸ್ಮರಣೆ ಮುಖ್ಯ-ರಾಮಕೃಷ್ಣ ಕಾಟುಕುಕ್ಕೆ
ಮುಖ್ಯ ಅತಿಥಿಯಾಗಿದ್ದ ದಾಸ ಸಾಹಿತ್ಯ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆಯವರು ಮಾತನಾಡಿ ಸದಾ ಚಟುವಟಿಕೆಯಿಂದಿರುವ ತುಡರ್ ಯುವಕ ಮಂಡಲವು ಭಜನಾ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟು ಭಜನಾ ಸಂಘದ ಮೂಲಕ ನಡೆಸುತ್ತಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ, ಭಜನೆಯಿಂದಾಗಿ ಧರ್ಮ ಪ್ರಜ್ಞೆಯ ಹಸ್ತಾಂತರವಾಗುತ್ತದೆ, ಕಲಿಯುಗದಲ್ಲಿ ಭಗವಂತನನ್ನು ಒಲಿಸಲು ಭಜನೆಯೊಂದೇ ಸುಲಭ ಮಾರ್ಗ ಎಂದು ಹೇಳಿದರು.
ಅರ್ಥಪೂರ್ಣ ಕಾರ್ಯಕ್ರಮ-ನನ್ಯ
ಸಭಾಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ 2015ನೇ ಇಸವಿಯಲ್ಲಿ ತುಡರ್ ಯುವಕ ಮಂಡಲದಲ್ಲಿ ಭಜನಾ ಸಂಘ ಆರಂಭಿಸುವಂತೆ ಸಲಹೆ ನೀಡಿದ್ದೆ, ಈ ಸಲಹೆಯನ್ನು ಆದೇಶ ರೂಪದಲ್ಲಿ ಪಾಲಿಸಿಕೊಂಡ ಯುವಕ ಮಂಡಲವು ಭಜನಾ ಸಂಘವನ್ನು ಆರಂಭಿಸಿ ಆ ಬಳಿಕ ಗ್ರಾಮದ ಮನೆ ಮನೆಗಳಲ್ಲಿ ಭಜನೆಯ ಉದ್ದೀಪನಕ್ಕೆ ಕಾರಣಕರ್ತರಾಗಿದ್ದಾರೆ, ಕೇವಲ ಭಜನೆ ಮಾತ್ರವಲ್ಲದೇ ಪ್ರತಿ ವರ್ಷ ಭಜನೆಯ ವಾರ್ಷಿಕೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಆ ಮೂಲಕ ಧಾರ್ಮಿಕ ಜಾಗೃತಿಯನ್ನು ಮೂಡಿಸಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಭಜನಾ ಸಂಘದ ಹುಟ್ಟಿನಿಂದಾಗಿ ಸಾಮಾಜಿಕ ಪರಿವರ್ತನೆ ಆಗಿದೆ-ಭಾಸ್ಕರ ಬಲ್ಯಾಯ
ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಯುವಕ ಮಂಡಲದ ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯರವರು ಮಾತನಾಡಿ ಯುವಕ ಮಂಡಲವು ತನ್ನ 12 ವರ್ಷದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ, ಸಾಧನೆಗಳನ್ನು ಮಾಡಿದೆ, ಅದರಲ್ಲಿ ಮುಖ್ಯವಾಗಿ 7 ವರ್ಷದ ಹಿಂದೆ ನನ್ಯ ಅಚ್ಚುತ ಮೂಡೆತ್ತಾಯರವರ ಮಾರ್ಗದರ್ಶನದಲ್ಲಿ ಆರಂಭಗೊಂಡಂತಹ ಭಜನಾ ಸಂಘದಿಂದಾಗಿ ನಮ್ಮ ಗ್ರಾಮದಲ್ಲಿ ಸಾಕಷ್ಟು ಸಾಮಾಜಿಕ ಪರಿವರ್ತನೆ ಸಾಧ್ಯವಾಗಿದೆ, ಪ್ರತಿ ಮನೆಯಲ್ಲೂ ಭಜನೆ ನಡೆಯಬೇಕೆಂಬ ನಮ್ಮ ಉದ್ದೇಶಕ್ಕೆ ಪೂರಕವಾಗಿ ಭಜನಾ ಸಂಘ ಕಾರ್ಯನಿರ್ವಹಿಸುತ್ತಿದೆ, ಭಜನಾ ಸಂಘಕ್ಕೆ ರಾಮಕೃಷ್ಣ ಕಾಟುಕುಕ್ಕೆಯವರ ಸಂಪರ್ಕ ಆದ ಬಳಿಕ ನಮ್ಮ ಭಜನಾ ಸಂಘ ಸಾಕಷ್ಟು ಬದಲಾವಣೆಯೊಂದಿಗೆ ಗ್ರಾಮದಲ್ಲಿ ಮಾದರಿ ಭಜನಾ ಸಂಘವಾಗಿ ರೂಪುಗೊಳ್ಳುತ್ತಿದೆ, ಇದಕ್ಕೆ ಪೂರಕವಾಗಿ ಮಕ್ಕಳಲ್ಲೂ ಭಜನಾಸಕ್ತಿ ಮೂಡಿಸಲು ಸುಜ್ಞಾನ ಮಕ್ಕಳ ಭಜನಾ ಸಂಘದ ಮೂಲಕ ಕುಣಿತ ಭಜನಾ ತಂಡವನ್ನು ತರಬೇತುಗೊಳಿಸಿ ಇವತ್ತು ಪ್ರಥಮ ಪ್ರದರ್ಶನವನ್ನು ಆರಂಭಿಸಿದ್ದೇವೆ ನಮ್ಮೆಲ್ಲಾ ಕಾರ್ಯಕ್ರಮಕ್ಕೂ ಸದಸ್ಯರ ಅವಿರತ ಶ್ರಮ, ನಿಸ್ವಾರ್ಥ ಸೇವೆ, ಊರವರ ಸಹಕಾರವೇ ಪ್ರಮುಖವಾಗಿದೆ ಎಂದು ಹೇಳಿದರು.
ಕೆರೆಮಾರು ಸುಂದರ ಪೂಜಾರಿಯವರಿಗೆ ಸನ್ಮಾನ:
ಕಾವು ಕೆರೆಮಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಂಸ್ಥಾಪಕ, ಹಿರಿಯ ಭಜನಾಪಟು ಆಗಿರುವ ಕಾವು ಕೆರೆಮಾರು ನಿವಾಸಿ ಸುಂದರ ಪೂಜಾರಿಯವರಿಗೆ ತುಡರ್ ಭಜನಾ ಸಂಘದಿಂದ ಧಾರ್ಮಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಸನ್ಮಾನಿತರಿಗೆ ಶಾಲು ಹೊದಿಸಿ, ಏಲಕ್ಕಿ ಹಾರ ಹಾಕಿ, ಫಲಪುಷ್ಫ ಕಾಣಿಕೆ, ಸನ್ಮಾನ ಪತ್ರ ನೀಡಿ ಅಭಿನಂದಿಸಿದರು. ಪುತ್ತೂರು ಕೊಂಬೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅಶ್ವಿತಾ ಮದ್ಲರವರು ಸನ್ಮಾನಪತ್ರ ವಾಚಿಸಿದರು.
ಅಭಿನಂದನೆ:
ಸುಜ್ಞಾನ ಮಕ್ಕಳ ಭಜನಾ ಸಂಘಕ್ಕೆ ಕುಣಿತ ಭಜನೆಯ ತರಬೇತು ನೀಡಿದ ಧನಂಜಯ ಕುಮಾರ್ ಸಿ.ಟಿಯವರಿಗೆ ತುಡರ್ ಭಜನಾ ಸಂಘದ ವತಿಯಿಂದ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಿರ್ಣಯ ಪುಸ್ತಕ ಹಸ್ತಾಂತರ:
ತುಡರ್ ಭಜನಾ ಸಂಘದ ಮುಂದಿನ ಆಡಳಿತ ಅವಧಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಲಿಂಗಪ್ಪ ನಾಯ್ಕ ನನ್ಯರವರಿಗೆ ಕಾರ್ಯದರ್ಶಿ ಚಂದ್ರಶೇಖರ ಬಲ್ಯಾಯರವರು ನಿರ್ಣಯ ಪುಸ್ತಕ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿಗೆ ಶಾಲು ಹಾಕಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ಸುಜ್ಞಾನ ಮಕ್ಕಳ ಭಜನಾ ಸಂಘದ ಕುಣಿತ ಭಜನೆ ತರಬೇತಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕುಣಿತ ಭಜನೆ ತರಬೇತಿಯ ಪೂರ್ಣ ವರದಿ ಮತ್ತು ಬಹುಮಾನ ವಿಜೇತರ ಪಟ್ಟಿಯನ್ನು ಸಂಚಾಲಕ ಗಂಗಾಧರ ನಾಯ್ಕರವರು ವಾಚಿಸಿದರು.
ವೇದಿಕೆಯಲ್ಲಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆ, ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ಉಪಸ್ಥಿತರಿದ್ದರು.

ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯೆ ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿಯವರು ವಂದಿಸಿ, ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡರವರು ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಪದಾಧಿಕಾರಿಗಳಾದ ಶೇಷಪ್ಪ ಗೌಡ ಪರನೀರು, ಚಂದ್ರಶೇಖರ ಬಲ್ಯಾಯ, ರಾಮಣ್ಣ ನಾಯ್ಕ ಆಚಾರಿಮೂಲೆ, ಪುರುಷೋತ್ತಮ ಆಚಾರ್ಯ ನನ್ಯ, ಶ್ರೀಕುಮಾರ್ ಬಲ್ಯಾಯ, ಹರೀಶ್ ಕೆರೆಮೂಲೆರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಸದಸ್ಯರುಗಳು ಸಹಕರಿಸಿದರು. ಧಾರ್ಮಿಕ ಸಭೆಯ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here