ಪುತ್ತೂರು: ಬಹುಕಾಲದ ಬೇಡಿಕೆಯಾಗಿರುವ ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿಯಿಂದ ರೈಲ್ವೇ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ 1.7 ಕೋಟಿ ರೂ., ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿದ್ದು ಕಾಮಗಾರಿಗೆ ನ.2ರಂದು ಹಾರಾಡಿ ಸಮೀಪ ಗುದ್ದಲಿ ಪೂಜೆ ನಡೆಯಲಿದೆ. ಪುತ್ತೂರು ನಗರಸಭೆ ಆಡಳಿತಕ್ಕೆ ಬಂದು 2 ವರ್ಷ ಪೂರೈಸಿದ ಸಂದರ್ಭ ಪುತ್ತೂರಿನ ಜನತೆಗೆ ಬಹುಕಾಲದ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಜೊತೆಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹೇಳಿದ್ದಾರೆ.
ನಗರಸಭೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಉಳಿದಂತೆ ನಗರಸಭೆ ಸ್ಥಳೀಯ ಸದಸ್ಯರು, ರೈಲ್ವೇ ಇಲಾಖೆಯ ಇಂಜಿನಿಯರ್ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿ ಬರುವ ಹಾರಾಡಿ ರೈಲ್ವೆ ಸೇತುವೆಯ ತಳಭಾಗದಿಂದ ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯ ಕಳೆದ 40 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿತ್ತು. ರಸ್ತೆಯು ರೈಲ್ವೆಯ ಸೊತ್ತಾಗಿರುವ ಕಾರಣ ನಗರಸಭೆ ಅಭಿವೃದ್ಧಿ ಮಾಡುವಂತಿರಲಿಲ್ಲ. ಇದೀಗ ರಸ್ತೆ ಅಭಿವೃದ್ಧಿಗೆ ರೈಲ್ವೆ ಇಲಾಖೆ ನಿರಾಕ್ಷೇಪಣಾ ಪತ್ರ ನೀಡಿದೆ. ಅದರಂತೆ 740 ಮೀಟರ್ ಉದ್ದದ ರಸ್ತೆಯನ್ನು 5.5 ಮೀಟರ್ ಅಗಲಕ್ಕೆ ಕಾಂಕ್ರಿಟೀಕರಣ ಮಾಡಲಾಗುವುದು. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಐವರು ಬಿಡ್ ದಾಖಲಿಸಿದ್ದಾರೆ. ನ.೪ಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಆರಂಭಗೊಳ್ಳಲಿದ್ದು, ಜನವರಿ ವೇಳೆ ನೂತನ ರಸ್ತೆ ಉದ್ಘಾಟನೆಗೊಳ್ಳಲಿದೆ ಎಂದರು.
ಫಲಾನುಭವಿಗಳಿಗೆ ಗುರುತಿನ ಚೀಟಿ, ಕಾರ್ಯಾದೇಶ ಪತ್ರ ವಿತರಣೆ: ಪಿ.ಎಂ ಸ್ವ ನಿಧಿ ಯೋಜನೆಯಡಿಯಲ್ಲಿ ಸಾಲ ಪಡೆದು ಬೀದಿ ಬದಿ ವ್ಯಾಪಾರ ನಡೆಸುತ್ತಿರುವ 192 ಫಲಾನುಭವಿಗಳಿಗೆ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ ಇರುವ ಗುರುತಿನ ಫಲಕ ಮತ್ತು ಪ್ರಧಾನಿಯವರ ಸಹಿ ಇರುವ ಪ್ರೋತ್ಸಾಹ ಪತ್ರ ವಿತರಣೆ ಮಾಡಲಾಗುವುದು. ಡಾ.ಬಿ. ಆರ್.ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ತಲಾ ರೂ. 2 ಲಕ್ಷದಂತೆ 10 ಫಲಾನುಭವಿಗಳಿಗೆ ರೂ. 20 ಲಕ್ಷ ಮತ್ತು ವಾಜಪೇಯಿ ವಸತಿ ಯೋಜನೆಯಲ್ಲಿ ತಲಾ ರೂ.1.20 ಲಕ್ಷದಂತೆ 16 ಫಲಾನುಭವಿಗಳಿಗೆ ರೂ.19.20 ಲಕ್ಷ ಮಂಜೂರಾಗಿದ್ದು, ಈ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ ಮಾಡಲಾಗುತ್ತದೆ. ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಸ್ವಚ್ಛ ಸರ್ವೇಕ್ಷಣಾ-2023ರ ಅಂಗವಾಗಿ ಟಾಯ್ಕಾಥಾನ್ ಕಾರ್ಯಕ್ರಮ ಅಡಿಯಲ್ಲಿ ನಿರುಪಯುಕ್ತ ವಸ್ತುಗಳಿಂದ ಆಟಿಕೆ ಅಥವಾ ಇನ್ನಿತರ ಪ್ರದರ್ಶಕ ಸಾಮಾಗ್ರಿಗಳನ್ನು ತಯಾರಿಸುವ ಸ್ಪರ್ಧೆಯನ್ನು ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿತ್ತು. ನಗರಸಭಾ ವ್ಯಾಪ್ತಿಯ ಅನೇಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದು, ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ನಗರಸಭೆ ಅಧ್ಯಕ್ಷರು ತಿಳಿಸಿದರು. ಈ ಸಂದರ್ಭ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್ ಮನೋಹರ್ ಉಪಸ್ಥಿತರಿದ್ದರು.
ಒಟ್ಟು 180 ಕೋಟಿ ರೂ ವಿವಿಧ ಕಾಮಗಾರಿಗಳು
ನಗರಸಭೆ ಆಡಳಿತಕ್ಕೆ ಬಂದು ನ.2ಕ್ಕೆ ಎರಡು ವರ್ಷ ಪೂರೈಸುತ್ತಿದೆ. ಶಾಸಕರ ವಿಶೇಷ ಅನುದಾನ, 15ನೇ ಹಣಕಾಸು, ಜಲಸಿರಿ ಯೋಜನೆ ಸೇರಿ ಒಟ್ಟು ರೂ.180 ಕೋಟಿಯ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಇನ್ನೂ ಹೊಸ ಹೊಸ ಯೋಜನೆ ನಮ್ಮ ಮುಂದಿದೆ. ಈಗಾಗಲೇ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ರೋಟರಿ ಈಸ್ಟ್ ಸಹಯೋಗದಲ್ಲಿ ಬಯೋಗ್ಯಾಸ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದೆ ಪುತ್ತೂರು ನಗರದಲ್ಲಿ ಯುಜಿಡಿ ಯೋಜನೆ ಮತ್ತು ಪುರಭವನವನ್ನು ಉಳಿಸಿಕೊಂಡು ಕಿಲ್ಲೆ ಮೈದಾನವನ್ನು ತಗ್ಗಿಸಿ, ಪೇಯಿಡ್ ಪಾರ್ಕಿಂಗ್, ಸಂತೆ ಮಾರುಕಟ್ಟೆ, ದಿನ ವ್ಯಾಪಾರಕ್ಕೆ ಅವಕಾಶ ಮಾಡುವ ಯೋಜನೆ ಇದೆ. ಪ್ರತಿ ವಾರ್ಡ್‌ಗಳಿಗೆ ಪ್ರತಿನಿತ್ಯ ಕಸ ಸಂಗ್ರಹ ವಾಹನ ತೆರಳಲಿದೆ.
ಕೆ.ಜೀವಂಧರ್ ಜೈನ್ ಅಧ್ಯಕ್ಷರು ನಗರಸಭೆ ಪುತ್ತೂರು