ಸೀಮೆಯ ಮೊದಲ ಜಾತ್ರೋತ್ಸವ: ನ. 7 ರಿಂದ 10 ರವರೆಗೆ ಬೆಟ್ಟಂಪಾಡಿ ಜಾತ್ರೆ
ಬೆಟ್ಟಂಪಾಡಿ: ಸೀಮೆಯ ಮೊದಲ ಜಾತ್ರೋತ್ಸವ ಮತ್ತು ಕೊನೆಯ ಪತ್ತನಾಜೆ ಜಾತ್ರೆ ನಡೆಯುವ ಏಕೈಕ ದೇವಸ್ಥಾನವೆಂಬ ಪ್ರಸಿದ್ದಿ ಪಡೆದಿರುವ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ, ಪರಿವಾರ ಸಾನ್ನಿಧ್ಯಗಳ ವರ್ಷಾವಧಿ ಉತ್ಸವ ನ. 7 ರಿಂದ ಮೊದಲ್ಗೊಂಡು ನ. 10 ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಇದರ ಗೊನೆಮುಹೂರ್ತ ನ. 1 ರಂದು ಕ್ಷೇತ್ರದಲ್ಲಿ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ ದಿವಾಕರ ಭಟ್ ರವರು ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗೊನೆಮುಹೂರ್ತ ನೆರವೇರಿಸಲಾಯಿತು. ಅರ್ಚಕರ ಸಹಾಯಕರಾದ ಹರಿನಾರಾಯಣ ಭಟ್ ಗೊನೆಮುಹೂರ್ತ ನೆರವೇರಿಸಿದರು. ಕೃಷ್ಣಕುಮಾರ್, ವೆಂಕಟೇಶ್ ಸಹಕರಿಸಿದರು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಸಿಬಂದಿ ವಿನಯ ಕುಮಾರ್ ಉಪಸ್ಥಿತರಿದ್ದರು.
ಚಂದ್ರಗ್ರಹಣ ಸಲುವಾಗಿ ಉತ್ಸವದಲ್ಲಿ ಬದಲಾವಣೆ
ನ. 8 ರಂದು ಉತ್ಸವ ಆರಂಭಗೊಳ್ಳಲಿದ್ದು ಅದೇ ದಿನ ಖಗ್ರಾಸ ಚಂದ್ರಗ್ರಹಣ ನಡೆಯಲಿರುವ ಹಿನ್ನೆಲೆಯಲ್ಲಿ ಆ ದಿನದ ಉತ್ಸವದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ ನವಕಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆಯಾಗಿ ದೇವರ ಬಲಿ, ಪ್ರಸಾದ ವಿತರಣೆಯಾಗಲಿದೆ. ಪೂರ್ವಾಹ್ನ 11.00 ಗಂಟೆಯ ಮೊದಲಾಗಿ ಉತ್ಸವ ಕೊನೆಗೊಂಡು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದಿಲ್ಲ. ರಾತ್ರಿ ಚಂದ್ರಗ್ರಹಣದ ಬಳಿಕ ಎಂದಿನಂತೆ ಉತ್ಸವಾದಿಗಳು ನಡೆಯಲಿವೆ.