ಸರಕಾರಿ ಮಹಿಳಾ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕಗಳ 2022-23ರ ಚಟುವಟಿಕೆಗಳಿಗೆ ಚಾಲನೆ ಹಾಗೂ ವಿಶೇಷ ಉಪನ್ಯಾಸ

0

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ‘ಎನ್.ಎಸ್.ಎಸ್’: ಲಕ್ಷ್ಮೀಕಾಂತ ರೈ ಅನಿಕೂಟೇಲ್

ಪುತ್ತೂರು: ಕಲಿಕೆ ಎನ್ನುವುದು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿರದೆ ವಿದ್ಯಾರ್ಥಿ ಮತ್ತು ಸಮುದಾಯದ ನಡುವಿನ ಆಹ್ಲಾದಕರ- ರಚನಾತ್ಮಕ ಸಂಬಂಧವಾಗಿ ಬೆಳೆಯಬೇಕು ಎಂಬ ಆಶಯದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು ಕಾಲೇಜುಗಳಲ್ಲಿ ಆರಂಭಿಸಲಾಯಿತು ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಹೇಳಿದರು.

ಅವರು ಪುತ್ತೂರಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2022-23ರ ಚಟುವಟಿಕೆಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ ಎನ್‌ಎಸ್‌ಎಸ್ ಮುಖ್ಯಪಾತ್ರ ವಹಿಸುತ್ತಿದ್ದು, ಜೊತೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ ಎಂದರು.

ಎನ್ ಎಸ್ ಎಸ್ ಘಟಕಗಳ 2022-23ರ ಚಟುವಟಿಕೆಗಳಿಗೆ ಚಾಲನೆ:

ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ್ ಗೌಡ ಪಿ. ರವರು ಕಾಲೇಜಿನ ಎನ್ ಎಸ್ ಎಸ್ ಘಟಕಗಳ 2022-23ರ ಚಟುವಟಿಕೆಗಳಿಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾಬದ್ಧತೆ ಮೂಡಿಸಲೆಂದು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ
ಉದ್ದೇಶದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಲಾಗಿದೆ. ಕಾಲೇಜಿನಲ್ಲಿ ಎರಡು ಘಟಕಗಳ ಸಂಪೂರ್ಣ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ. ಗೋಪಾಲಕೃಷ್ಣ ಕೆ ಪ್ರಸ್ತಾವಿಕವಾಗಿ ಮಾತಾನಾಡಿದರು. ವೇದಿಕೆಯಲ್ಲಿ ಎನ್ ಎಸ್ ಎಸ್ ಘಟಕದ ನಾಯಕಿಯರಾದ ಕು. ವೀಣಾಶ್ರೀ ಹಾಗೂ ಕು. ಗ್ರೀಷ್ಮಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ಸ್ವಯಂಸೇವಕರು ಉಪಸ್ಥಿತರಿದ್ದರು.

‘ನನಗಲ್ಲ ನಿನಗೆ’ ಎಂಬ ಎನ್‌.ಎಸ್‌.ಎಸ್‌.ನ ಘೋಷವಾಕ್ಯ

“ಎನ್‌.ಎಸ್‌.ಎಸ್‌.ನ ಘೋಷವಾಕ್ಯವಾದ ‘ನನಗಲ್ಲ ನಿನಗೆ’ ಎಂಬುದರಲ್ಲಿಯೇ ಪ್ರಜಾಪ್ರಭುತ್ವದಲ್ಲಿ ನಿಸ್ವಾರ್ಥ ಸೇವೆ, ಸಹಬಾಳ್ವೆ ಮತ್ತು ಸೋದರತ್ವಗಳಿಗೆ ಇರುವ ಮಹತ್ವವನ್ನು ಸಾರಿಹೇಳುತ್ತದೆ. ಮನುಷ್ಯ ಮನುಷ್ಯನಿಗೆ ಸಹಾಯಮಾಡಿ, ಪರಸ್ಪರ ನಂಬಿಕೆ-ವಿಶ್ವಾಸ- ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಬೇಕೆಂಬುದನ್ನು ಪ್ರತಿ ಪಾದಿಸುತ್ತದೆ. ‘ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ’ ಎಂಬ ಸಂದೇಶದೊಂದಿಗೆ ರಾಷ್ಟ್ರದ ಸರ್ವತೋಮುಖ
ಅಭಿವೃದ್ಧಿಯ ಸದುದ್ದೇಶವನ್ನು ಗಮನದಲ್ಲಿಟ್ಟುಕೊಂಡು ಎನ್‌.ಎಸ್‌.ಎಸ್ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.”

ಲಕ್ಷ್ಮೀಕಾಂತ ರೈ ಅನಿಕೂಟೇಲ್
ಸಹಾಯಕ ಪ್ರಾಧ್ಯಾಪಕ, ರಾಜ್ಯಶಾಸ್ತ್ರ ವಿಭಾಗ, ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪುತ್ತೂರು

LEAVE A REPLY

Please enter your comment!
Please enter your name here