ಪುತ್ತೂರು: ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಮಾಡಾವು ಹೊಳೆಗೆ ತ್ಯಾಜ್ಯ ಹಾಕಿದ ವ್ಯಕ್ತಿಗೆ ಗ್ರಾಪಂ ಅಧಿಕಾರಿಯವರು 5 ಸಾವಿರ ರೂ.ದಂಡ ವಿಧಿಸಿದ್ದಾರೆ. ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿಯೋರ್ವರು ಕಟ್ಟತ್ತಾರುನಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದು ಅಲ್ಲಿಂದ ಮತ್ತೆ ಮಂಡೆಕೋಲಿಗೆ ತೆರಳುವ ದಾರಿ ಮಧ್ಯೆ ಮಾಡಾವು ಹೊಳೆಗೆ ತ್ಯಾಜ್ಯದ ಕಟ್ಟನ್ನು ಎಸೆದಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಗ್ರಾಪಂ ಸದಸ್ಯರುಗಳು ತ್ಯಾಜ್ಯವನ್ನು ಎಸೆದಿರುವ ಬಗ್ಗೆ ಖಚಿತಪಡಿಸಿಕೊಂಡು ಆರೋಪಿಗೆ ರೂ.5 ಸಾವಿರ ದಂಡ ವಿಧಿಸಿದ್ದಾರೆ. ತ್ಯಾಜ್ಯ ಹಾಕಿರುವ ಬಗ್ಗೆ ಬೈಕ್ ಸವಾರ ಮಂಡೆಕೋಲು ನಿವಾಸಿ ತಪ್ಪೊಪ್ಪಿಕೊಂಡಿದ್ದು ತಾನು ಮಾಡಿದ ತಪ್ಪಿಗೆ ವಿಷಾಧ ವ್ಯಕ್ತಪಡಿಸಿ ದಂಡ ಪಾವತಿಸಿ ತೆರಳಿದ್ದಾರೆ. ಕೆಯ್ಯೂರು ಗ್ರಾಮವನ್ನು ತ್ಯಾಜ್ಯಮುಕ್ತ ಗ್ರಾಮ ಮಾಡುವಲ್ಲಿ ಗ್ರಾಪಂ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಇಬ್ಬರು ವ್ಯಕ್ತಿಗಳಿಗೆ ದಂಡ ವಿಧಿಸಿದ್ದು ಒಟ್ಟು ಮೂರು ಮಂದಿಗೆ ದಂಡ ವಿಧಿಸಿದ್ದಾರೆ.