ಬೆಡ್‍ಶೀಟ್ ಮಾರಾಟಕ್ಕೆಂದು ಬಂದವರಿಂದ ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಗೃಹ ಸಚಿವರಿಗೆ ಬರೆಯಲು ನಿರ್ಣಯ

0

ಘಟನೆ ಹಿಂದೆ ಗ್ರಾ.ಪಂ.ನ ಕೈವಾಡ ಇದೆ ಎಂದು ವಾದಿಸುವವರೂ ಸತ್ಯ ಜಾಗಕ್ಕೆ ಬನ್ನಿ- ಸದಸ್ಯರ ಸವಾಲ್

  • ಆರೋಪಿಗಳ ಪರ ವಾದ ಖಂಡನೀಯ
  • ಘಟನೆ ನಡೆದೇ ಇಲ್ಲವೆನ್ನುವವರು ಸತ್ಯಪ್ರಮಾಣಕ್ಕೆ ಬರಲಿ
  • ಗ್ರಾ.ಪಂ.ಉಪಾಧ್ಯಕ್ಷರ ಮೇಲಿನ ಆರೋಪ ಸತ್ಯಕ್ಕೆ ದೂರವಾದ ವಿಚಾರ

ಕಾಣಿಯೂರು:ಬೆಡ್‍ಶೀಟ್ ಮಾರಾಟಕ್ಕೆಂದು ಕಾರಲ್ಲಿ ಬಂದು ಮಹಿಳೆಯೋರ್ವರ ಮೇಲೆ ಮಾನಭಂಗಕ್ಕೆ ಯತ್ನ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಾಣಿಯೂರು ಗ್ರಾ.ಪಂ.ತುರ್ತು ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಗ್ರಹ ವ್ಯಕ್ತವಾಗಿ, ಈ ಕುರಿತು ಗೃಹ ಸಚಿವರಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಗಿದೆ. ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು ಅವರ ಅಧ್ಯಕ್ಷತೆಯಲ್ಲಿ ನ.2ರಂದು ಕಾಣಿಯೂರು ಗ್ರಾ.ಪಂ.ಸಭಾಂಗಣದಲ್ಲಿ ತುರ್ತು ಸಾಮಾನ್ಯ ಸಭೆ ನಡೆಯಿತು.
ಬೆಡ್ ಶೀಟ್ ಮಾರಾಟಕ್ಕೆಂದು ಕಾರಲ್ಲಿ ಬಂದಿದ್ದ ಇಬ್ಬರು ದೋಳ್ಪಾಡಿಯಲ್ಲಿ ಮನೆಯಲ್ಲಿದ್ದ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ ನಡೆಸಿದ್ದ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯರು,ಮಹಿಳೆಯ ಮಾನಭಂಗಕ್ಕೆ ಯತ್ನ ಘಟನೆಯನ್ನು ಮರೆಮಾಚಲು ಕೆಲ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ.ಮಾನಭಂಗಕ್ಕೆ ಯತ್ನಿಸಿದ ಆರೋಪಿಗಳ ಪರ ವಾದಿಸುತ್ತಿರುವುದು ಖಂಡನೀಯ.ದೋಳ್ಪಾಡಿಯಲ್ಲಿ ಅಂತಹ ಘಟನೆ ನಡೆದೇ ಇಲ್ಲ ಎಂದು ವಾದಿಸುತ್ತಿರುವವರು, ಆರೋಪಿಗಳ ಪರವಾಗಿ ನಿಲ್ಲುವವರು ಸತ್ಯ ಪ್ರಮಾಣಕ್ಕೆ ಬನ್ನಿ ಎಂದು ಸವಾಲು ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸುರವರು,ಘಟನೆ ಮಾಹಿತಿ ಹಿನ್ನಲೆಯಲ್ಲಿ ಉಪಾಧ್ಯಕ್ಷ ಗಣೇಶ್ ಉದನಡ್ಕರವರು ಘಟನಾ ಸ್ಥಳಕ್ಕೆ ಹೋಗಿದ್ದಾರೆ.ಅವರ ವಿರುದ್ಧವೇ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.ಯಾವುದೇ ಘಟನೆ ಸಂದರ್ಭದಲ್ಲಿ, ಕಷ್ಟದ ಸಮಯದಲ್ಲೂ ಗಣೇಶ್‍ರವರು ಅಲ್ಲಿಗೆ ಭೇಟಿ ನೀಡುತ್ತಾರೆ ಎಂದರು.ಇನ್ನು ಮುಂದೆ ಈ ರೀತಿಯ ಘಟನೆಗಳಾಗಬಾರದು.ಈ ನಿಟ್ಟಿನಲ್ಲಿ, ಮಹಿಳೆಯ ಮಾನಭಂಗಕ್ಕೆ ಯತ್ನ ನಡೆಸಿದ್ದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಂಬಂಧಪಟ್ಟವರಿಗೆ ಬರೆಯಲಾಗುವುದು ಎಂದ ಅಧ್ಯಕ್ಷರು, ಅಪರಿಚಿತರು ಗ್ರಾ.ಪಂ.ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಮೊದಲು ಗ್ರಾ.ಪಂ.ಗೆ ಮಾಹಿತಿ ನೀಡಬೇಕು ಎಂದರು.
ಆರೋಪಿಗಳ ಪರ ವಾದ ನಡೆಸುವವರು ಸತ್ಯ ಜಾಗಕ್ಕೆ ಬನ್ನಿ – ಸದಸ್ಯರ ಸಮಾಲ್: ಗ್ರಾ.ಪಂ.ಸದಸ್ಯ ಲೋಕಯ್ಯ ಪರವ ದೋಳ್ಪಾಡಿ ಮಾತನಾಡಿ, ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ ಆರೋಪಿಗಳ ಪರವಾಗಿ ಕೆಲ ವ್ಯಕ್ತಿಗಳು ವಾದಿಸುತ್ತಿರುವುದು ಖಂಡನೀಯ.ಘಟನೆಯ ಸತ್ಯಾಂಶವನ್ನು ತಿಳಿಯದೇ, “ಮುಸಲ್ಮಾನರ ಮೇಲೆ ಹಲ್ಲೆ ನಡೆದಿದೆ” ಎಂದು ಹೇಳುತ್ತಾ ಕೆಲವರು ಆರೋಪಿಗಳ ಪರವಾಗಿ ನಿಂತಿರುವುದು ಸರಿಯಲ್ಲ.ದೋಳ್ಪಾಡಿಯಲ್ಲಿ ಏನು ಘಟನೆ ನಡೆದಿದೆ ಎನ್ನುವುದು ಇಲ್ಲಿ ಮುಖ್ಯವಾಗಿದೆ.ನಾವಿಲ್ಲಿ ಮುಸಲ್ಮಾನ ಬಾಂಧವರೊಂದಿಗೆ ಅನ್ಯೋನ್ಯತೆಯಿಂದ ಇದ್ದೇವೆ.ಇಲ್ಲಿನ ಮೀನು ಮಾರುಕಟ್ಟೆಯನ್ನು ಏಲಂನಲ್ಲಿ ಮುಸಲ್ಮಾನರೇ ಪಡೆದುಕೊಂಡಿದ್ದಾರೆ. ಆದರೆ ಮನೆಗೆ ನುಗ್ಗಿ ಒಂದು ಮಹಿಳೆಯ ಮೇಲೆ ಈ ರೀತಿಯ ಅಸಭ್ಯ ವರ್ತನೆ ಮಾಡಿರುವವರನ್ನು ಜಾತಿ, ಧರ್ಮ ನೋಡದೆ ಖಂಡಿಸುವುದು ನಮ್ಮ ಕರ್ತವ್ಯ ಎಂದರಲ್ಲದೆ, ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ.ಈ ರೀತಿಯ ಘಟನೆಗಳನ್ನು ನಾವು ಬೆಂಬಲಿಸುವುದಿಲ್ಲ ಎಂದರು.ಯಾರೂ ಆರೋಪಿಗಳ ಪರ ನಿಲ್ಲುವುದು ಸರಿಯಲ್ಲ. ದೋಳ್ಪಾಡಿಯಲ್ಲಿ ಈ ರೀತಿಯ ಘಟನೆ ನಡೆದೇ ಇಲ್ಲ ಮತ್ತು ಮುಸಲ್ಮಾನರಿಗೆ ಹಲ್ಲೆ ನಡೆದಿರುವುದರ ಹಿಂದೆ ಗ್ರಾ.ಪಂ.ನವರ ಕೈವಾಡವಿದೆ ಎಂದು ಕೆಲವೊಂದು ಮಾಧ್ಯಮಗಳಲ್ಲಿಯೂ ಬಿಂಬಿಸುತ್ತಿದ್ದಾರೆ.ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದ ಲೋಕಯ್ಯ ಪರವ ಅವರು ತಾಕತ್ತು ಇದ್ದರೆ, ಸತ್ಯ-ಧರ್ಮ-ನೀತಿ ಇದ್ದರೆ ದೋಳ್ಪಾಡಿಯಲ್ಲಿ ಈ ರೀತಿಯ ಘಟನೆ ನಡೆದೇ ಇಲ್ಲ ಎನ್ನುವವರು ಮತ್ತು ಇದರ ಹಿಂದೆ ಗ್ರಾ.ಪಂ.ನ ಕೈವಾಡ ಇದೆ ಎಂದು ವಾದಿಸುವವರು ಯಾವುದೇ ಸತ್ಯ ಜಾಗಕ್ಕೆ ಪ್ರಮಾಣಕ್ಕೆ ಬನ್ನಿ, ನಾವೂ ಬರಲು ಸಿದ್ದರಿದ್ದೇವೆ ಎಂದು ಸವಾಲೆಸೆದರು.
ಆರೋಪಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನಾನೇ ಹೇಳಿದ್ದು: ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಘಟನೆ ನಡೆದ ದಿನ ಮಧ್ಯಾಹ್ನ ಸುಮಾರು 12.30ಕ್ಕೆ ಸ್ಥಳೀಯರು ನನಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.ಆ ಸಂದರ್ಭದಲ್ಲಿ ಗ್ರಾ.ಪಂ.ಕಾರ್ಯಕ್ರಮದ ಬಗ್ಗೆ ಪೂರ್ವತಯಾರಿ ಸಭೆಯಲ್ಲಿ ನಾನು ಮತ್ತು ಪಿಡಿಒ ಒಟ್ಟಿಗೆ ಇದ್ದೆವು.ಅ ಬಳಿಕ ಮಧ್ಯಾಹ್ನ 1.30ಕ್ಕೆ ಸಾರ್ವಜನಿಕರಿಂದ ಮತ್ತೊಮ್ಮೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೆ.ಪ್ರಥಮವಾಗಿ ಬೆಳ್ಳಾರೆ ಪೊಲೀಸ್ ಠಾಣೆಯ ಕಾಣಿಯೂರು ಬೀಟ್ ಪೊಲೀಸರಿಗೆ, ಕಳ್ಳರು ಅಪಘಾತಕ್ಕೆ ಸಿಲುಕಿ ಸಾರ್ವಜನಿಕರು ಹಿಡಿಯುವಂತಹ ಕೆಲಸವಾಗಿದೆ ಎಂದು ಮಾಹಿತಿಯನ್ನು ನೀಡಿದ್ದೇನೆ.ನಂತರ ಸಂತ್ರಸ್ತ ಮಹಿಳೆಯೇ ಘಟನಾ ಸ್ಥಳಕ್ಕೆ ಬಂದು ಬೆಳ್ಳಾರೆ ಠಾಣಾಧಿಕಾರಿಯವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.ಬಳಿಕ ಮಹಿಳೆ ಕಡಬ ಠಾಣೆಗೆ ದೂರು ನೀಡಲು ತೆರಳಿದರು.ಆರೋಪಿಗಳನ್ನು ಚಿಕಿತ್ಸೆಗಾಗಿ ಆ್ಯಂಬುಲೆ‌ನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಾನೇ ಹೇಳಿದ್ದು.ಬಳಿಕ 3 ಗಂಟೆಗೆ ವರ್ತಕರ ಸಭೆಯಲ್ಲಿ ನಾನು ಭಾಗವಹಿಸಿದ್ದೇನೆ.ಈ ಬಗ್ಗೆ ಸಂಶಯಗಳಿದ್ದರೆ ದಾಖಲೆ ತೆಗೆಯಬಹುದು.ನಾನು ಮಧ್ಯಾಹ್ನ 1.30ರ ಸಮಯದಲ್ಲಿ ಕಾಣಿಯೂರಿನಲ್ಲಿ ಇದ್ದೆ ಎಂಬುದಕ್ಕೆ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸಬಹುದು ಎಂದರು.
ಸತ್ಯಪ್ರಮಾಣಕ್ಕೆ ಬನ್ನಿ- ನಾವು ಬರಲು ಸಿದ್ಧ: ಮೂರು ವರ್ಷದ ಹಿಂದೆ ನಾನು ಗ್ರಾಮ ಪಂಚಾಯತ್ ಸದಸ್ಯನಾಗಿರುವ ಸಂದರ್ಭದಲ್ಲಿ ದೋಳ್ಪಾಡಿಯಲ್ಲಿ ಬಾಲಕಿ ಮೇಲೆ ನಡೆದ ಘಟನೆಯ ಸಂದರ್ಭದಲ್ಲಿಯೂ ನಾನು ಅಲ್ಲಿಗೆ ಹೋಗಿದ್ದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕೆಲಸವಾಗಿದೆ.ಅ ಬಳಿಕ ಅಪರಿಚಿತರು ಗ್ರಾ.ಪಂ.ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಬೇಕಾದರೆ ಸಂಬಂಧಪಟ್ಟ ಪಿಡಿಒ ಮತ್ತು ‌ಪೊಲೀಸರಿಗೆ ಮಾಹಿತಿ ಕೊಟ್ಟು ವ್ಯವಹಾರ ನಡೆಸಬೇಕು ಎಂಬ ನಿರ್ಣಯವನ್ನು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ.ಈ ಬಗ್ಗೆ ದಾಖಲೆ ನಮ್ಮಲ್ಲಿ ಇದೆ ಎಂದು ಹೇಳಿದ ಗಣೇಶ್ ಉದನಡ್ಕ, ಇಲ್ಲಿನ ಮುಸಲ್ಮಾನರಿಗೆ ಗ್ರಾ.ಪಂ.ವತಿಯಿಂದ ಯಾವುದೇ ರೀತಿಯ ತೊಂದರೆಗಳನ್ನು ಮಾಡಿಲ್ಲ.ಈ ಬಗ್ಗೆ ಕಾಣಿಯೂರಿನ ಮುಸಲ್ಮಾನ ವರ್ತಕರೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಠವಾಗಿ ತಿಳಿಸಿದ್ದಾರೆ. ಕಾಣಿಯೂರು ಗ್ರಾ.ಪಂ.ನಿಂದ ಮುಸಲ್ಮಾನರಿಗೆ ಅನ್ಯಾಯ ಆಗಿದ್ದೇ ಆದಲ್ಲಿ ಮತ್ತು ದೋಳ್ಪಾಡಿಯಲ್ಲಿ ಎಸ್‍ಸಿ ಮಹಿಳೆಗೆ ತೊಂದರೆ ಆಗಿಲ್ಲ.ಅದೊಂದು ಕಟ್ಟು ಕಥೆ,ಕೇಸಿಗೆ ಬೇಕಾಗಿ ಈ ರೀತಿ ಮಾಡಿದ್ದು,ಅದರ ಜೊತೆಗೆ ಗ್ರಾ.ಪಂ ಉಪಾಧ್ಯಕ್ಷರೇ ಮಾಡಿಸಿದ್ದು ಎಂದು ಹೇಳುವವರು ಸತ್ಯ ಪ್ರಮಾಣಕ್ಕೆ ಬರಬೇಕು.ನಾವು ಸತ್ಯ ಪ್ರಮಾಣಕ್ಕೆ ಬರಲು ಸಿದ್ದರಿದ್ದೇವೆ ಎಂದರು.
ಉಪಾಧ್ಯಕ್ಷರ ಮೇಲೆ ಸುಳ್ಳು ಆರೋಪ: ಗ್ರಾ.ಪಂ.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ತಾರಾನಾಥ ಇಡ್ಯಡ್ಕ, ದೇವಿಪ್ರಸಾದ್ ದೋಳ್ಪಾಡಿ, ತೇಜಕುಮಾರಿ ಉದ್ಲಡ್ಡ, ಗಂಗಮ್ಮ ಗುಜ್ಜರ್ಮೆ, ಮೀರಾ, ಅಂಬಾಕ್ಷಿ ಕೂರೇಲುರವರು ಮಾತನಾಡಿ, ದೋಳ್ಪಾಡಿಯಲ್ಲಿ ನಡೆದ ಘಟನೆಯನ್ನು ಮರೆಮಾಚುವ ಕೆಲಸ ನಡೆಯುತ್ತಿದೆ.ಆರೋಪಿಗಳ ಪರ ಕೆಲ ವ್ಯಕ್ತಿಗಳು ವಾದಿಸುತ್ತಿರುವುದು ಖಂಡನೀಯ.ಗ್ರಾ.ಪಂ.ಉಪಾಧ್ಯಕ್ಷರ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದರಲ್ಲದೆ, ಮಾನಭಂಗ ಯತ್ನ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಗ್ರಾ.ಪಂ.ಸದಸ್ಯರಾದ ಪ್ರವೀಣ್‍ಚಂದ್ರ ರೈ ಕುಮೇರು, ವಿಶ್ವನಾಥ ಕೊಪ್ಪ, ಕೀರ್ತಿಕುಮಾರಿ ಅಂಬುಲ, ಸುನಂದ ಅಬ್ಬಡ ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಬೀರುಕುಡಿಕೆ, ಕುಮಾರ್, ಕೀರ್ತಿ ಉಪಸ್ಥಿತರಿದ್ದರು.ಗ್ರಾ.ಪಂ.ಪಿಡಿಒ ದೇವರಾಜ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here