ಮಕ್ಕಳ ಸಂಭ್ರಮ ಕವಿ ಸಂಗಮ – 50 ಮಂದಿಯಿಂದ ಕವಿಗೋಷ್ಠಿ

0

ಪುತ್ತೂರು: ದ.ಕ.ಜಿ. ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕ, ರೋಟರಿಕ್ಲಬ್ ಪುತ್ತೂರು ಯುವ, ಗುರುಕುಲ ಕಲಾ ಪ್ರತಿಷ್ಠಾನ ದ.ಕ ಮತ್ತು ಚಿಗುರೆಲೆ ಸಾಹಿತ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಂಭ್ರಮ ಕವಿ ಸಂಗಮ -2022 ಕಾರ್ಯಕ್ರಮ ನ.6 ರಂದು ಇಲ್ಲಿನ ಮನಿಷಾ ಸಭಾಂಗಣದಲ್ಲಿ ನಡೆಯಿತು.

ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಪೌರ ಸಮಾಜದಿಂದಾಗಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಅವರು ಮಾತನಾಡಿ ಕನ್ನಡ ಬೆಳೆಯಬೇಕು ಇದು ನಮ್ಮೆಲ್ಲರ ಹಕ್ಕು. ಇದಕ್ಕೆ ಸರಕಾರದಿಂದ ಒಂದಷ್ಟು ಪ್ರಯತ್ನ ನಡೆಯುತ್ತಿದೆ. ಆದರೆ ಇವತ್ತು ಸಾಕಷ್ಟು ಬದಲಾವಣೆ ಆಗಿದೆ. ಇದರಲ್ಲಿ ಹೊಂದಿಕೊಂಡು ಸಾಹಿತ್ಯ ಬೆಳೆಸುವ ಜವಾಬ್ದಾರಿ ಇದೆ. ಇದಕ್ಕೆ ಸರಕಾರವನ್ನೇ ಅವಲಂಭಿಸದೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ಕೆಲಸ ಪೌರ ಸಮಾಜದಿಂದ ನಡೆಯಬೇಕೆಂದು ಹೇಳಿದರು.

ಮಕ್ಕಳ ಕವಿ ಸಂಗಮಕ್ಕೆ ಉತ್ತಮ ಬೆಳವಣಿಗೆ:
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮಗಳಲ್ಲಿ ಕನ್ನಡದ ಕಂಪು ಹಬ್ಬಿಸುವ ಕಾರ್ಯಕ್ರಮ ಸಾಹಿತ್ಯ ಪರಿಷತ್‌ನಿಂದ ಆರಂಭಗೊಂಡಿದೆ. ಇದಕ್ಕೆ ಪೂರಕವಾಗಿ ಮಕ್ಕಳ ಕವಿ ಸಂಗಮ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸಮಾಜದ ಬದಲಾವಣೆಗೆ ಸಾಹಿತಿಗಳ ಕೊಡುಗೆ ಅಪಾರ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಸಂಸ್ಕೃತಿ ಉಳಿಯಲು ಕವಿ, ಸಾಹಿತ್ಯಗಳು ಬೇಕು. ಇದರಿಂದ ಸಮಾಜವನ್ನು ಬದಲಾವಣೆ ಮಾಡಲು ಅವಕಾಶವಿದೆ. ಸಾವಿರಾರು ಮಂದಿಯನ್ನು ಪರಿವರ್ತನೆ ಮಾಡಲು ಕವಿ, ಸಾಹಿತಿಗಳಿಂದ ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ಮಕ್ಕಳ ವಿಭಾಗದ ಕವಿಗೋಷ್ಠಿ ಅಧ್ಯಕ್ಷ ಮಕ್ಕಳ ಸಾಹಿತಿ ಭಾಸ್ಕರ ಅಡ್ವಳ, ದ.ಕ.ಜಿಲ್ಲಾ ಸ್ವಚ್ಛ ಭಾರತ ಮಿಷನ್ ಸಂಯೋಜಕ ಡೊಂಬಯ್ಯ ಇಡ್ಕಿದು, ಗುರುಕುಲ ಕಲಾ ಪ್ರತಿಷ್ಠಾನದ ಅಧ್ಯಕ್ಷೆ ಮಾನಸ ವಿಜಯ ಕೈಂತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿಗುರೆಳೆಯ ಸಾಹಿತ್ಯ ಬಳಗದ ಅಪೂರ್ವ ಸ್ವಾಗತಿಸಿದರು, ಸಾಹಿತಿ ನಾರಾಯಣ ಕುಂಬ್ರ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕವಿಗೋಷ್ಠಿ ನಡೆಯಿತು. ಮಕ್ಕಳು ಮತ್ತು ಯುವಕರು ಸೇರಿ ಸುಮಾರು 50ಮಂದಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here