ವಿಟ್ಲ ಪಟ್ಟಣ ಪಂಚಾಯತ್‌ನ ದುರವಸ್ಥೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ವಿಟ್ಲಕ್ಕೆ ಎಲ್ಲವನ್ನೂ ತಂದದ್ದು ಕಾಂಗ್ರೆಸ್-ಶಕುಂತಳಾ ಶೆಟ್ಟಿ

  • ವರ್ಷವಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯದಿರುವುದು
  • ಬಿಜೆಪಿ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ : ಡಾ.ರಾಜಾರಾಮ ಕೆ.ಬಿ.
  • ಮುಂದಿನ ಬಾರಿ ನಮ್ಮ ಸರಕಾರ: ಎಂ.ಎಸ್.ಮಹಮ್ಮದ್
  • ವಿಟ್ಲ ಪಟ್ಟಣ ಪಂಚಾಯತ್ ಅವ್ಯವಸ್ಥೆಯ ಕೂಪವಾಗಿದೆ : ಎಂ.ಬಿ. ವಿಶ್ವನಾಥ ರೈ
  • ಶಾಸಕರು ಸರಕಾರಿ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ: ಸುಭಾಶ್ಚಂದ್ರ ಶೆಟ್ಟಿ ಕುಳಾಲು
  • ಮುಖ್ಯಾಧಿಕಾರಿಗಳ ಎಡವಟ್ಟಿಗೆ ಬಡ ಜನರು ಬೆಲೆತೆರಬೇಕಾಗಿ ಬಂದಿದೆ: ರಮಾನಾಥ ವಿಟ್ಲ

ವಿಟ್ಲ: ಅಧಿಕಾರಿಗಳು ಸರಿ ಇದ್ದರೆ ಪಟ್ಟಣ ಪಂಚಾಯತ್ ದಾರಿ ತಪ್ಪಲು ಸಾಧ್ಯವಿಲ್ಲ. ಬಡವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಸಹಕಾರ ನೀಡಿ ಅಧಿಕಾರಿಗಳು ಕೆಲಸ ನಿರ್ವಹಿಸಿ. ವರ್ಕ್ ಆರ್ಡರ್ ಕೊಡದೆ ಯಾರೇ ಕೆಲಸ ಮಾಡಿಸಿದ್ದರೂ ಅದು ತಪ್ಪು. ರಾಜಕೀಯದವರ ಮಾತು ಕೇಳಿ ಅಧಿಕಾರಿಗಳು ಕೆಡಬೇಡಿ. ನೀವು ಬಡವರಿಗೆ ಮಾಡಿದ ಸಹಾಯಗಳು ನಿಮ್ಮನ್ನು ರಕ್ಷಿಸುತ್ತದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು. ವಿಟ್ಲ ಪಟ್ಟಣ ಪಂಚಾಯತ್‌ನ ದುರವಸ್ಥೆಯ ವಿರುದ್ಧ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ನಗರ ಕಾಂಗ್ರೆಸ್ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಮಸ್ಯೆಗಳ ಕೂಪವಾಗಿ ವಿಟ್ಲ ಪಟ್ಟಣ ಪಂಚಾಯತ್ ಮಾರ್ಪಾಡಾಗಿದೆ. ಸಮಸ್ಯೆ ಯಿಂದ ಕಂಗಾಲಾದ ಜನರು ಕಷ್ಟಗಳನ್ನು ನಮ್ಮಲ್ಲಿ ಹೇಳುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಆದ್ದರಿಂದ ಬಿಜೆಪಿಯ ಕಾರ್ಯವೈಖರಿ ಏನೆಂಬುದು ಜನರಿಗೆ ಮನದಟ್ಟಾಗಿದೆ. ಜನ ಏಳದಿದ್ದರೆ ಸರಕಾರ ಎಚ್ಚೆತ್ತುಕೊಳ್ಳುವುದಿಲ್ಲ. ವಿಟ್ಲದಲ್ಲಿ ಡಿಗ್ರಿ ಕಾಲೇಜು ಇದೆ, ಐಟಿಐ ಇದೆ, ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣವಿದೆ, ಪಟ್ಟಣ ಪಂಚಾಯತ್ ಇದೆ ಎಲ್ಲವನ್ನೂ ತಂದದ್ದು ಕಾಂಗ್ರೆಸ್. ಇವರು ಮಾಡಿದ್ದು ಯಾವುದೂ ಇಲ್ಲ. ಎಲ್ಲವೂ ಕಾಂಗ್ರೆಸ್ ಆಳ್ವಿಕೆಯಲ್ಲಿ ಬಂದಾಗಿದೆ. ಸಿಂಗಲ್ ಸೈಟ್‌ಗೆ ಬೇರೆ ಪಟ್ಟಣ ಪಂಚಾಯತ್ ನಲ್ಲಿ ಪರವಾನಿಗೆ ನೀಡಲಾಗುತ್ತಿದೆಯಾದರೂ ಇಲ್ಲಿನ ಅಧಿಕಾರಿಗಳು ನೀಡುತ್ತಿಲ್ಲ ಎಂದರು. ಸಾಮಾಜಿಕ ಜಾಲತಾಣದಲ್ಲಿ ಬರೆಯುವವರು ಸ್ವಲ್ಪ ಯೋಚನೆ ಮಾಡಿ. ಮೊನ್ನೆ ಒಬ್ಬರು ನಮ್ಮ ಮಹಿಳಾ ಕಾರ್ಯಕರ್ತೆಯ ಬಗ್ಗೆ ಬರೆದ್ರು ಅದರಲ್ಲಿ ಶೆಟ್ರು ಒಳಗೆ ಹೊದ್ರು ಬಟ್ರು ನಿರೀಕ್ಷಣಾ ಜಾಮೀನಿನಲ್ಲಿ ಹೊರಬಂದ್ರು. ಯಾರೇ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ರೂ ಠಾಣೆಗೆ ದೂರು ನೀಡಿ ಎಂದ ಶಕುಂತಳಾ ಶೆಟ್ಟಿ, ಮುಂದಿನ ಆರು ತಿಂಗಳಲ್ಲಿ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ.ರವರು ಮಾತನಾಡಿ ಪಟ್ಟಣ ಪಂಚಾಯತ್‌ಗೆ ಚುನಾವಣೆ ನಡೆದು ವರುಷವಾಗುತ್ತಾ ಬಂದರೂ ಪಟ್ಟಣ ಪಂಚಾಯತ್ ಗೆ ಒಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ ಎಂದಾದರೆ ಅದು ಬಿಜೆಪಿ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಟ್ಟಣ ಪಂಚಾಯತ್‌ನಲ್ಲಿ ಬಹುಮತ ಹೇಗೆ ಬಂದಿದೆ ಎಂದು ಬಿ.ಜೆ.ಪಿ.ಗರಿಗೆ ಗೊತ್ತಿದೆ. ನಮ್ಮಲ್ಲಿರುವ ಸದಸ್ಯರು ಪ್ರಾಮಾಣಿಕವಾಗಿ ಅವರವರ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉಪಟಳ ನೀಡಲು ಯಾರೂ ಹೋಗಬೇಡಿ. ಬಹುಮತವಿರುವ ಪಕ್ಷದವರಾದ ತಾವುಗಳು ರಾಜಧರ್ಮವನ್ನು ಪಾಲಿಸುವ ಮೂಲಕ ಸಮಾಜದ ಸೇವೆ ಮಾಡಿ. ಯಾರೇ ಕೆಲಸ ಮಾಡಿದರೂ ಅದು ಸರಕಾರದ ಹಣವಾಗಿದೆ. ಮನೆಯಿಂದ ಅಡಿಕೆ ಮಾರಿದ ಹಣವಲ್ಲ. ಜನ ಸೇವೆಗೆ ಸಿಗುವ ಅವಕಾಶವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಿ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಇದ್ದ ಅಶೋಕ್ ಕುಮಾರ್ ಶೆಟ್ಟಿಯವರು ಇದೀಗ ಬಿಜೆಪಿ ಪಕ್ಷಕ್ಕೆ ಸೇರಿ ಅಲ್ಲಿ ಚುನಾವಣೆಯಲ್ಲಿ ಗೆದ್ದಮೇಲೆ ನಮ್ಮ ಪಕ್ಷದ ಸದಸ್ಯೆಗೆ ಕಿರುಕುಳ ನೀಡುತ್ತಿದ್ದಾರೆ. ಇದು ನಿಮ್ಮ ಧರ್ಮವಾ ಸ್ವಾಮೀ. ಯಾರದೇ ಸೌಜನ್ಯವನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದವರು ಎಚ್ಚರಿಕೆ ನೀಡಿದರು. ನಮ್ಮ ಪಕ್ಷದ ಪಂಚಾಯತ್ ಸದಸ್ಯರುಗಳ ಕಾರ್ಯ ವೈಖರಿಯನ್ನು ಕಂಡು ಅವರಿಗೆ ಇದೀಗಾಗಲೇ ಬಿಜೆಪಿ ಪಕ್ಷದವರಿಂದ ಪತ್ರಗಳು ಬರಲಾರಂಭಿಸಿದೆ. ನಮ್ಮ ಪಕ್ಷದ ಸದಸ್ಯರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡವರು ಅವರು ಎಲ್ಲಿಗೂ ಬರಲಾರರು. ನಿಮ್ಮ ಹುಚ್ಚುಕನಸನ್ನು ಬಿಟ್ಟುಬಿಡಿ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್‌ರವರು ಮಾತನಾಡಿ ನಮ್ಮ ಪ್ರತಿಭಟನೆಯ ಕೂಗು ಸರಕಾರಕ್ಕೆ ಕೇಳಲು ಸಾಧ್ಯವಿಲ್ಲ. ಯಾಕೆಂದರೆ ಕಣ್ಣು, ಕಿವಿ, ಹೃದಯ ಶ್ರೀಮಂತಿಕೆಯೇ ಇಲ್ಲದ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಪಟ್ಟಣ ಪಂಚಾಯತ್ ಚುನಾವಣೆ ಆಗಿ ಹನ್ನೊಂದು ತಿಂಗಳಾಯಿತು. ಆದರೆ ಈವರೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಅದನ್ನು ನಿವಾರಿಸಿ ವಿಟ್ಲ ಪಟ್ಟಣ ಪಂಚಾಯತ್ ಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ತರುವಂತಹ ಇಚ್ಛಾಶಕ್ತಿ ರಾಜ್ಯ ಸರಕಾರಕ್ಕೆ ಇಲ್ಲದಾಯಿತೆ ಎಂದು ಪ್ರಶ್ನಿಸಿದರು. ಕಬಕ- ವಿಟ್ಲ ರಸ್ತೆ ಕಾಮಗಾರಿಯನ್ನು ಅದಷ್ಟು ಬೇಗ ಕೈಗೆತ್ತಿಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ವಿಟ್ಲ ಪಟ್ಟಣ ಪಂಚಾಯತ್ ಇಂದು ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿಯನ್ನು ಮಾಡಲಿದೆ. ಪಟ್ಟಣ ಪಂಚಾಯತ್ ನ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರರೀತಿಯಲ್ಲಿ ಪ್ರತಿಭಟನೆ ನಡೆಸಾಲಾಗುವುದು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲಿದೆ. ಜನರ ನೋವಿಗೆ ಸ್ಪಂದಿಸುವ ಕೆಲಸ ನಮ್ಮಿಂದ ಆಗಲಿದೆ. ಹಣವಿಲ್ಲದೆ ಯಾವುದೇ ಸರಕಾರಿ ಕಚೇರಿಯಲ್ಲಿ ಕೆಲಸವಾಗುವುದಿಲ್ಲ. ಇದಕ್ಕೆ ರಾಜ್ಯ ಸರಕಾರವೇ ನೇರ ಕಾರಣ ಎಂದು ಅವರು ಆರೋಪಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈರವರು ಮಾತನಾಡಿ ವಿಟ್ಲ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದು ಹನ್ನೊಂದು ತಿಂಗಳಾಯಿತು. ಈವರೆಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಆದ್ರಿಂದ ಇಲ್ಲಿ ನಡೆಯುತ್ತಿರುವ ಕೆಲಸಗಳೆಲ್ಲವೂ ಅಧಿಕಾರಿಗಳ ಕಾರುಬಾರಿನಿಂದ ಆಗಿದೆ. ತಾರತಮ್ಯ ಮಾಡುವ ಅಧಿಕಾರ ಅದು ಅಧಿಕಾರಿಗಳಿಗಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವಂತಹ ವ್ಯವಸ್ಥೆ ಅಧಿಕಾರಿಗಳಲ್ಲಿರಬೇಕು. ವಿಟ್ಲ ಪಟ್ಟಣ ಪಂಚಾಯತ್ ಅವ್ಯವಸ್ಥೆಯ ಕೂಪವಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯದಿರುವುದು ಸರಕಾರದ ನಿಷ್ಕ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರಲ್ಲದೆ ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿದೆ ಎಂದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲುರವರು ಮಾತನಾಡಿ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ಹಾಗೂ ಪಟ್ಟಣ ಪಂಚಾಯತ್ ವ್ಯವಸ್ಥೆಯಲ್ಲಿ ನಾವು ವ್ಯತ್ಯಾಸ ಕಂಡಿಲ್ಲ. ಪ್ರತಿಯೊಂದೂ ಸರಕಾರಿ ಕಚೇರಿಯ ಸಿಬ್ಬಂದಿಗಳಿಗೆ ಅವರದೇ ಆದ ಕರ್ತವ್ಯಗಳಿದೆ. ಆದರೆ ಶಾಸಕರು ಯಾರೂ ಅವರನ್ನು ಕೆಲಸ ಮಾಡಲು ಬಿಡುತ್ತಿಲ್ಲ. ಯಾಕೆಂದರೆ ಅವರಿಗೆ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ನಿರ್ಜೀವ ಮಾಡಿ ಅಭ್ಯಾಸ. ವಿಕೇಂದ್ರೀ ಕರಣ ವ್ಯವಸ್ಥೆಯಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಕೇಂದ್ರೀಕರಣ ವ್ಯವಸ್ಥೆಯಲ್ಲಿ ಅವರಿದ್ದಾರೆ. ಎಲ್ಲರನ್ನು ನಿರ್ಜೀವಗೊಳಿಸಿ ಎಲ್ಲಾ ಅಧಿಕಾರವನ್ನು ಶಾಸಕರಿಗೆ ಕೇಂದ್ರೀಕರಿಸುವ ವ್ಯವಸ್ಥೆಯತ್ತ ಅವರು ಹೋಗುತ್ತಿದ್ದಾರೆ. ಬಿಜೆಪಿಯ ನಾಯಕರ ಬೇಜವಬ್ದಾರಿ ನಿಲ್ಲಬೇಕು.ರಾಜ್ಯ ದಿಂದ ಪಟ್ಟಣದ ವರೆಗೆ ಮೋಸದಾಟ ನಡೆಯುತ್ತಿದೆ. 40 ಶೇಕಡಾ ಸರಕಾರ ಬದಲಾಗಬೇಕಾಗಿದೆ. ಜನರನ್ನು ಮೋಸದಿಂದ ಬಿಜೆಪಿಗೆ ಸೆಳೆಯುವ ಕೆಲಸವಾಗುತ್ತಿದೆ. ನಮ್ಮ ಕಾರ್ಯಕರ್ತರು ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡವರಾಗಿದ್ದಾರೆ ಎಂದರು.

ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲರವರು ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶಾಸಕರ ಮುಖಾಂತರ ಉತ್ತಮ ಅಧಿಕಾರಿಗಳನ್ನು ಪಟ್ಟಣ ಪಂಚಾಯತ್ ಗೆ ನಿಯೋಜನೆ ಮಾಡಿ ಕೆಲಸ ಕಾರ್ಯಗಳನ್ನು ಮಾಡಲಾಗಿತ್ತು. ಭಷ್ಟಾಚಾರ ವನ್ನು ಬೆಳೆಸಿಕೊಂಡು ಹೋಗುವ ಸರಕಾರ ನಮಗೆ ಬೇಕ ಎಂದರಲ್ಲದೆ ಮುಖ್ಯಾಧಿಕಾರಿಗಳ ಎಡವಟ್ಟಿಗೆ ಬಡ ಜನರು ಬೆಲೆತೆರಬೇಕಾಗಿ ಬಂದಿದೆ. ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವಾಗಬೇಕು ಎಂದರು.

ಆರಂಭದಲ್ಲಿ ಪಟ್ಟಣ ಪಂಚಾಯತ್ ಗೇಟ್‌ನ ಮಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾ ಕಾರರು ಆ ಬಳಿಕ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗಕ್ಕೆ ಬಂದು ದಿಕ್ಕಾರ ಕೂಗಿದರು. ಬಳಿಕ ವಿಟ್ಲ ನಾಡ ಕಚೇರಿಯ ಉಪತಹಶೀಲ್ದಾರ್ ವಿಕ್ರಮ್ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ರವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಕೊಲ್ಯ, ಡಿಸಿಸಿ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳಿಧರ್ ರೈ ಮಠಂತಬೆಟ್ಟು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಪಟ್ಟಣ ಪಂಚಾಯತ್ ಸದಸ್ಯರಾದ ವಿ ಕೆ ಎಂ ಅಶ್ರಫ್, ಲತಾ ವೇಣಿ, ಪದ್ಮಿನಿ, ಡಿಕಯ್ಯ ಸುರುಳಿಮುಲೆ, ಪಕ್ಷದ ಪ್ರಮುಖರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಅಬ್ದುಲ್ ಖಾದ್ರಿ, ಎಂ.ಕೆ. ಮುಸಾ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಪ್ರಭಾಕರ್ ಭಟ್, ಜಗನ್ನಾಥ ಶೆಟ್ಟಿ ನಡುಮನೆ, ಕರೀಂ ಕುದ್ದುಪದವು, ಅಶ್ರಫ್ ಬಸ್ತಿಕಾರ್, ಅಬ್ದುಲ್ ರಹಿಮಾನ್ ಯುನಿಕ್, ನಝೀರ್ ಮಠ, ಮೋಹನ್ ಗುರ್ಜಿನಡ್ಕ, ಎಲ್ಯಣ್ಣ ಪೂಜಾರಿ ಮೈರುಂಡ, ರಾಮಣ್ಣ ಪಿಲಿಂಜ, ಅಬ್ದುಲ್ ರಹಿಮಾನ್ ಕುರಂಬಳ, ಶೈಕ್ ಅಲಿ, ರಾಜೀವ್ ಬಂಗೇರ, ಜಯಪ್ರಕಾಶ್ ಬದಿನಾರು, ಕೇಶವ ರೈ, ಅಭಿಷೇಕ್ ಬೆಳ್ಳಿಪ್ಪಾಡಿ, ಹಂಝ ವಿ ಕೆ ಎಂ, ಅಬ್ಬು ನವಗ್ರಾಮ, ಸುನಿತಾ ಕೋಟ್ಯಾನ್, ಸರೋಜ ಅಲಂಗಾರ್, ಸಂತೋಷ್ ಭಂಡಾರಿ, ಅಶೋಕ್ ಪೂಜಾರಿ, ಅಶೋಕ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.