‘ಮತದಾರರ ಪಟ್ಟಿ ಪರಿಷ್ಕರಣೆ-ರಾಜಕೀಯ ಪಕ್ಷಗಳ ಸಹಕಾರ ಅಗತ್ಯ’- ರಾಜಕೀಯ ಪಕ್ಷಗಳ ಪ್ರಮುಖರಿಗೆ ಮತದಾರರ ಕರಡು ಪ್ರತಿ ಮಾಹಿತಿ ನೀಡಿದ ಎಸಿ

ಪುತ್ತೂರು:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅಂಗವಾಗಿ 01-01-2023 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ನ.9ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಬಾಕಿ ಉಳಿದವರು ಮತ್ತು ವಲಸೆ ಹೋದವರು ಹಾಗು ಮೃತದಾರರ ಹೆಸರನ್ನು ತೆಗೆಯಲು ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿರುವ ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರು ಹೇಳಿದರು.

ನ.10ರಂದು ಎಸಿ ಕೋರ್ಟ್ ಹಾಲ್‌ನಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅಂಗವಾಗಿ ಕರೆಯಲಾದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪರಿಷ್ಕರಣೆ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸ್ವೀಕೃತವಾಗುವ ಅರ್ಜಿಗಳ ಮಾಹಿತಿ ಬೂತ್ ಲೇವೆಲ್ ಏಜೆಂಟ್ ಅವರಿಗೆ ನೀಡಲಾಗುತ್ತದೆ. ಇದನ್ನು ವೀಕ್ಷಿಸಿ ರಾಜಕೀಯ ಪಕ್ಷಗಳು ತಮ್ಮ ತಕರಾರುಗಳಿದಲ್ಲಿ ಸಲ್ಲಿಸಬಹುದು.ಒಟ್ಟಾರೆ ಪಾರದರ್ಶಕವಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಬೂತ್ ಲೆವೆಲ್ ಏಜೆಂಟ್‌ಗಳು ಸಕ್ರಿಯರಾಗಿರಬೇಕು.ಅದಕ್ಕಾಗಿ ತಮ್ಮ ತಮ್ಮ ರಾಜಕೀಯ ಪಕ್ಷಗಳ ಬೂತ್‌ಲೆವೆಲ್ ಬಿಎಲ್‌ಎಗಳ ಪಟ್ಟಿಯನ್ನು ನಮ್ಮ ಕಚೇರಿಗೆ ನೀಡುವಂತೆ ತಿಳಿಸಿದ ಅವರು, ಈ ಒಂದು ತಿಂಗಳ ಅವಽಯಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಬಾಕಿ ಉಳಿದವರು ಮತ್ತು ವಲಸೆ ಹೋದವರ ಅಥವಾ ಮೃತಪಟ್ಟವರ ಹೆಸರನ್ನು ತೆಗೆಯಲು ಡಿ.8ರ ತನಕ ಅವಕಾಶವಿದ್ದು, ಇದಕ್ಕೆ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದರು.

ಮನೆ ಮನೆ ಸರ್ವೆ: ಮತದಾರರ ಪಟ್ಟಿ ಪರಿಷ್ಕರಣೆಗೆ ನ.12 ಮತ್ತು 20, ಡಿ.3 ಮತ್ತು 4ರಂದು ವಿಶೇಷ ಅಭಿಯಾನ ಹಮ್ಮಿಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಜ.5, 2023 ರಂದು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ನಿಟ್ಟಿನಲ್ಲಿ ಮನೆ-ಮನೆಗೆ ಬಿ.ಎಲ್.ಎ ಗಳು ಬಂದಾಗ ಹೆಸರು ಸೇರ್ಪಡೆಗೆ ಅಗತ್ಯ ದಾಖಲಾತಿಗಳ ನೀಡಿದಲ್ಲಿ ಸ್ಥಳದಲ್ಲಿಯೇ ಗರುಡ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ.ಮತದಾರರ ಪಟ್ಟಿಯಿಂದ ಯಾರೂ ಅರ್ಹರು ಹೊರಗುಳಿಯದಂತೆ ಮನೆ-ಮನೆ ಸರ್ವೆ ಮಾಡಲಾಗುತ್ತದೆ ಎಂದು ಸಹಾಯಕ ಕಮಿಷನರ್ ಹೇಳಿದರು.

ಸೇರ್ಪಡೆ, ತಿದ್ದುಪಡಿಗೆ ಅವಕಾಶ: ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6, ಅನಿವಾಸಿ ಭಾರತೀಯರು ಹೆಸರು ಸೇರಿಸಲು ನಮೂನೆ-6ಎ, ಪಟ್ಟಿಯಲ್ಲಿ ಹೆಸರಿರುವ ಮತದಾರರು ಸ್ವಯಂಪ್ರೇರಿತರಾಗಿ ಆಧಾರ್ ಅಥವಾ ನಮೂನೆ 6ಬಿಯಲ್ಲಿ ನಮೂದಿಸಿದ ಇತರ 11 ದಾಖಲೆಗಳಲ್ಲಿ ಒಂದನ್ನು ಜೋಡಿಸಿ ದೃಢೀಕರಿಸಲು ನಮೂನೆ-6ಬಿ, ಆಕ್ಷೇಪಣೆ, ಹೆಸರು ತೆಗೆದು ಹಾಕಲು ನಮೂನೆ 7, ವಿಧಾನಸಭಾ ಕ್ಷೇತ್ರದ ಒಳಗೆ-ಹೊರಗೆ ನಿವಾಸ, ಮೊಬೈಲ್ ಸಂಖ್ಯೆ ಬದಲಿಸಲು, ತಿದ್ದುಪಡಿ, ಅಸ್ಪಷ್ಟ ಭಾವಚಿತ್ರ ಬದಲಾಯಿಸಲು, ಎಪಿಕ್ ಬದಲಾವಣೆ, ಪಟ್ಟಿಯಲ್ಲಿ ವ್ಯಕ್ತಿಯ ಗುರುತು ನಮೂದಿಸಲು ನಮೂನೆ- 8ನ್ನು ಮೊಬೈಲ್ ಆಪ್ ‘ವೋಟರ್ ಹೆಲ್ಪ್ ಲೈನ್’ನಲ್ಲಿ ಸಲ್ಲಿಸಬಹುದು ಎಂದು ಸಹಾಯಕ ಆಯುಕ್ತರು ಹೇಳಿದರು. ಮತದಾರರ ಸಹಾಯಕ ನೋಂದಣಾಧಿಕಾರಿ ತಹಶೀಲ್ದಾರ್ ನಿಸರ್ಗಪ್ರಿಯ, ಉಪತಹಸೀಲ್ದಾರ್ ಸುಲೋಚನಾ, ಪ್ರಥಮ ದರ್ಜೆ ಸಹಾಯಕ ನಾಗೇಶ್ ವಿವಿಧ ಮಾಹಿತಿ ನೀಡುವಲ್ಲಿ ಸಹಕರಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಜೆಡಿಎಸ್ ಒಬಿಸಿ ಘಟಕದ ಅಧ್ಯಕ್ಷ ಪ್ರಭಾಕರ ಸಾಲಿಯಾನ್ ಉಪಸ್ಥಿತರಿದ್ದರು.

ಪುತ್ತೂರು ಕ್ಷೇತ್ರದಲ್ಲಿ‌ 2.5 ಲಕ್ಷ ಮತದಾರರು

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕರಡುಪ್ರತಿ ಆಧಾರದಲ್ಲಿ ಒಟ್ಟು 2,05,200 ಮತದಾರರು ಇದ್ದಾರೆ.ಈ ಪೈಕಿ 1,01,495 ಮಂದಿ ಪುರುಷರು ಮತ್ತು 1,03,705 ಮಂದಿ ಮಹಿಳಾ ಮತದಾರರು ಇದ್ದಾರೆ. ಮುಂದೆ ಸೇರ್ಪಡೆ, ತಿದ್ದುಪಡಿಯ ಮೂಲಕ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಗಿರೀಶ್ ನಂದನ್, ಮತದಾರರ ನೋಂದಣಾಧಿಕಾರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.