ದ.12ರಂದು ಬೆಳಗಾವಿಯಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ: ದಯಾನಂದ ಪೆರುವಾಜೆ
ಆಲಂಕಾರು: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್ ಕಡಬ ತಾಲೂಕು ಸಮಿತಿಯ 5 ನೇ ಸಭೆ ಮತ್ತು ದಶಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯುವ ಗ್ರಾಮ ಪಂಚಾಯತ್ ನೌಕರರ ಸಿ ಮತ್ತು ಡಿ ದರ್ಜೆ ಸ್ಥಾನಮಾನದ ಬೃಹತ್ ಹೋರಾಟದ ಬಗ್ಗೆ ತಾಲೂಕು ಮಟ್ಟದ ಪೂರ್ವ ತಯಾರಿ ಸಭೆಯು ನ.12ರಂದು ಆಲಂಕಾರು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ದ.ಕ. ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ದಯಾನಂದ ಪೆರುವಾಜೆಯವರು ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಒಟ್ಟಾಗಿ ಒಗ್ಗಟ್ಟಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮತ್ತು ದಶಂಬರ್ 12 ಕ್ಕೆ ಬೆಳಗಾವಿಯಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ಗ್ರಾಮ ಪಂಚಾಯತ್‌ನ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ಸಂಘಕ್ಕೆ ಬೆಂಬಲವನ್ನು ಸೂಚಿಸಿ ಬೇಡಿಕೆ ಈಡೇರುವಲ್ಲಿ ಸಹಕರಿಸೋಣ ಎಂದರು.
ಕಡಬ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹರೀಶ್ ಪೆರಾಬೆಯವರು ಪ್ರಸ್ತಾವಿಕವಾಗಿ ಮಾತನಾಡಿ, ಸಂಘದ ಬೆಳವಣಿಗೆ ಮತ್ತು ರಾಜ್ಯಾಧ್ಯಕ್ಷರು ಈಗಾಗಲೇ ನೀಡಿರುವ ನಿರ್ದೇಶನ ಮತ್ತು ಗ್ರಾಮ ಪಂಚಾಯತ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಮುಂಬರುವ ದಶಂಬರ್ ತಿಂಗಳ 12 ನೆ ತಾರೀಕಿನಂದು ನಡೆಯುವ ಹೋರಾಟಕ್ಕೆ ಎಲ್ಲರ ಬೆಂಬಲ ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು. ಸುಳ್ಯ ತಾಲೂಕು ಸಮಿತಿ ಅಧ್ಯಕ್ಷೆ ನೇತ್ರಾವತಿ ಮರ್ಕಂಜ, ಕಾರ್ಯದರ್ಶಿ ಗಿರಿಧರ ಕಳಂಜ, ಸುಳ್ಯ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಪುಟ್ಟರಾಜು, ದ.ಕ.ಜಿಲ್ಲಾ ಸಮಿತಿ ಪದಾಧಿಕಾರಿ ಮತ್ತು ಕಡಬ ತಾಲೂಕು ಹೋರಾಟ ಸಮಿತಿ (ಮಹಿಳಾ)ಯ ಅಧ್ಯಕ್ಷೆ ಮಮತಾ ಬೆಳಂದೂರುರವರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಕಡಬ ತಾಲೂಕು ಸಮಿತಿಯ ಅಧ್ಯಕ್ಷೆ ಪುಷ್ಪಲತಾ ಗೋಳಿತೊಟ್ಟು ಅವರು, ನಮ್ಮ ಬೇಡಿಕೆ ಈಡೇರಿಕೆಗೆ ಬಹಳಷ್ಟು ಮನವಿಗಳನ್ನು ನೀಡಿದ್ದರೂ ನಮ್ಮ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ದಿನಾಂಕಕ್ಕೆ ಬೃಹತ್ ಹೋರಾಟಕ್ಕೆ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ನಮ್ಮೆಲ್ಲರ ಬೆಂಬಲವನ್ನು ನೀಡೋಣ. ನಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವಲ್ಲಿ ತಾಲೂಕು ಸಮಿತಿಯ ವತಿಯಿಂದ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ತಾಲೂಕು ಸಮಿತಿಯ ಇಂದಿನ ಸಭೆಯಲ್ಲಿ ಕೈಗೊಳ್ಳುವ ಎಲ್ಲಾ ತೀರ್ಮಾನಗಳಿಗೆ ಎಲ್ಲರ ಸಹಕರಾವನ್ನು ಕೋರಿದರು.
ಸಭೆಯಲ್ಲಿ ತಾಲೂಕು ಸಮಿತಿಯ ಪದಾಧಿಕಾರಿಗಳು, ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ಭಾಗವಹಿಸಿದ್ದರು. ಕೊಂಬಾರು ಗ್ರಾಮ ಪಂಚಾಯತ್ ಸಿಬ್ಬಂದಿ ಲೋಕನಾಥ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಜಯಲಕ್ಷ್ಮಿ ವರದಿ ವಾಚಿಸಿದರು.
ಬೆಳಗಾವಿ ಹೋರಾಟಕ್ಕೆ ಬೆಂಬಲ:
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್ ರಾಜ್ಯ ಸಮಿತಿ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ. ದೇವಿಪ್ರಸಾದ್ ಬೋಲ್ಮರವರ ನೇತೃತ್ವದ ತಂಡದೊಂದಿಗೆ ಬೆಳಗಾವಿಯಲ್ಲಿ ಬೃಹತ್ ಹೋರಾಟಕ್ಕೆ ಕಡಬ ತಾಲೂಕಿನ ಗ್ರಾಮ ಪಂಚಾಯತದ ಎಲ್ಲಾ ನೌಕರರು ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಡಬ ತಾಲೂಕಿನ 21 ಗ್ರಾಮ ಪಂಚಾಯತ್‌ಗಳನ್ನು 4 ವಲಯಗಳನ್ನಾಗಿ ಮಾಡಿ ವಲಯ ಸಮಿತಿಯನ್ನು ರಚಿಸಲಾಯಿತು. ಕಡಬ ತಾಲೂಕಿನ ಗ್ರಾಮ ಪಂಚಾಯತ್ ಸಿಬ್ಬಂದಿಗಳಲ್ಲಿ ಶೇ. 95 ರಷ್ಟು ಮಂದಿ ಈಗಾಗಲೇ ಸಂಘದ ಸದಸ್ಯತ್ವ ನೋಂದಾವಣೆ ಮಾಡಿಕೊಂಡಿದ್ದಾರೆ. ಶೇ.೫ರಷ್ಟು ಮಾತ್ರ ಬಾಕಿ ಇದ್ದು ಈ ತಿಂಗಳ ಅಂತ್ಯಕ್ಕೆ ಶೇ.100 ಸಾಧಿಸಿ ಸಂಘಕ್ಕೆ ಸಂಪೂರ್ಣ ಸದಸ್ಯತ್ವವನ್ನು ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಒಗ್ಗಟ್ಟಾಗಿ ಶ್ರಮಿಸೋಣ-ರಾಜ್ಯಾಧ್ಯಕ್ಷರ ಕರೆ
ಅಂತರ್ ಜಿಲ್ಲೆಯ ಸಭೆಯಲ್ಲಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್ ರಾಜ್ಯ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಬೋಲ್ಮರವರು ದೂರವಾಣಿ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮ ಪಂಚಾಯತ್ ನೌಕರರ ಬೇಡಿಕೆ ಈಡೇರುವಲ್ಲಿ ಎಲ್ಲರು ಒಗ್ಗಟ್ಟಾಗಿ ಶ್ರಮಿಸೋಣ. ಇದರಿಂದ ಯಶಸ್ವಿಯನ್ನು ಖಂಡಿತಾ ಕಾಣುತ್ತೇವೆ ಎಂದು ತಿಳಿಸಿದರು.