ಸಂಸ್ಕಾರ-ಸಂಸ್ಕೃತಿ ಉಳಿಸಿ ಬೆಳೆಸುವ ಹೊಣೆಗಾರಿಕೆ ಯವ ಸಮುದಾಯದ ಮೇಲಿದೆ: ಸಂಜೀವ ಮಠಂದೂರು
ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ ಇದರ ‘ಕ್ರೀಡಾ ಸಂಭ್ರಮ 2022’ ಒಕ್ಕಲಿಗ ಸೇವಾ ಸಂಘ ಕೊಯಿಲ ಇದರ ಆತಿಥ್ಯದಲ್ಲಿ ನ.13 ರಂದು ಕೊಯಿಲ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಕ್ರೀಡಾಕೂಟ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗೌಡ ಸಮುದಾಯದ ಹಿರಿಯರು ಹಾಕಿಕೊಟ್ಟ ಪರಂಪರೆ, ಆದರ್ಶವನ್ನು ಪಾಲಿಸಿಕೊಂಡು ನಮ್ಮಲ್ಲಿರುವ ವ್ಯತ್ಯಾಸಗಳನ್ನು ಬದಿಗಿಟ್ಟು, ನಮ್ಮ ಆಚಾರ, ವಿಚಾರ, ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ ಎಂದರು. ಗೌಡ ಸಮಾಜ ದುಶ್ಚಟಮುಕ್ತ ಸಮಾಜವಾಗಿ ಇತರ ಸಮಾಜಕ್ಕೆ ಮಾದರಿಯಾಗಬೇಕು. ಕ್ರೀಡೆ ಜೊತೆಯಲ್ಲಿ ಸಂಭ್ರಮ ಆಚರಣೆಯೊಂದಿಗೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಜೀವ ಮಠಂದೂರು ಹೇಳಿದರು. ಆತೂರು ಸದಾಶಿವ ದೇವಸ್ಥಾದ ವಠಾರದಲ್ಲಿ ನಿರ್ಮಾಣವಾಗುವ ಕಲ್ಯಾಣ ಮಂಟಪಕ್ಕೆ 10 ಲಕ್ಷ ರೂ., ಅನುದಾನ ನೀಡುವ ಭರವಸೆಯನ್ನು ಮಠಂದೂರು ನೀಡಿದರು.
ಪುತ್ತೂರು ಎಸ್‌ಆರ್‌ಕೆ ಲ್ಯಾಡರ್‍ಸ್‌ನ ಮಾಲಕ ಕೇಶವ ಅಮೈ ಕಲಾಯಿಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಗೌಡ ಬೈಲಾಡಿ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯಧುಶ್ರೀ ಆನೆಗುಂಡಿ ಮಾತನಾಡಿ ಶುಭ ಹಾರೈಸಿದರು. ಪುತ್ತೂರು ಯುವ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪುತ್ತೂರು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎ.ವಿ.ನಾರಾಯಣ, ಶ್ರೀ ಕ್ಷೇತ್ರ ಬುಡೇರಿಯಾದ ಧರ್ಮದರ್ಶಿ ಈಶ್ವರ ಗೌಡ ಪಜ್ಜಡ್ಕ, ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ, ಮಹಿಳಾ ಸಮಿತಿಯ ಅಧ್ಯಕ್ಷೆ ಜಯಶ್ರೀ, ಯುವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ದೋಳ, ಕಾರ್ಯದರ್ಶಿ ಪ್ರಕಾಶ್ ಬಾಕಿಲ, ಕೊಯಿಲ ಗ್ರಾಮ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿ ಸಬಳೂರು, ಯುವ ಘಟಕದ ಅಧ್ಯಕ್ಷ ತಿಮ್ಮಪ್ಪ ಗೌಡ ಸಂಕೇಶ, ಕ್ರೀಡಾ ಕಾರ್ಯದರ್ಶಿ ವಿನೋದರ ಮಾಳ ಮತ್ತಿತರರು ಉಪಸ್ಥಿತರಿದ್ದರು.
ಒಕ್ಕಲಿಗ ಗೌಡ ಸೇವಾ ಸಂಘದ ಕೊಯಿಲ ಗ್ರಾಮ ಸಮಿತಿಯ ಅಧ್ಯಕ್ಷ ಭವಾನಿಶಂಕರ ಗೌಡ ಪರಂಗಾಜೆ ಸ್ವಾಗತಿಸಿದರು. ಕ್ರೀಡಾ ಕೋಶಾಧಿಕಾರಿ ಗಣೇಶ್ ಎರ್ಮಡ್ಕ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಲಿಂಗಪ್ಪ ಗೌಡ ಧ್ವಜಾರೋಹಣ ನೆರವೇರಿಸಿದರು.
ಸನ್ಮಾನ:
ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಕಡೆಂಬ್ಯಾಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಲಂಕಾರು ವಲಯ ವ್ಯಾಪ್ತಿಯ ಕೊಯಿಲ, ರಾಮಕುಂಜ, ಹಳೆನೇರೆಂಕಿ, ಕುಂತೂರು, ಪೆರಾಬೆ, ಆಲಂಕಾರು ಗ್ರಾಮದ ಒಕ್ಕಲಿಗ ಗೌಡ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.